[Mission 2022] ದೈನಂದಿನ ಪ್ರಚಲಿತ ಘಟನೆಗಳು ದಿನಾಂಕ – 6ನೇ ಜನೇವರಿ 2022 – INSIGHTSIAS

[ad_1]

 

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ 1:

1. ಏನದು, ಆನ್‌ಲೈನ್ ಲೈಂಗಿಕ ಕಿರುಕುಳ ತನಿಖೆಯ ಕೇಂದ್ರದಲ್ಲಿರುವ GitHub?

 

ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ಅಣೆಕಟ್ಟು ಸುರಕ್ಷತಾ ಕಾಯಿದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಲಾಗಿದೆ.

2. ಮುಲ್ಲಪೆರಿಯಾರ್ ಅಣೆಕಟ್ಟು ಸಮಸ್ಯೆ.

3. ಗ್ರಾಹಕ ಸಂರಕ್ಷಣಾ ನಿಯಮಗಳು 2021.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ಈಗ ಶೆಡ್ಯೂಲ್ಡ್ ಬ್ಯಾಂಕ್ ಆದ ಏರ್‌ಟೆಲ್ ಪಾವತಿ ಬ್ಯಾಂಕ್.

2. ಮಲ್ಟಿ ಏಜೆನ್ಸಿ ಸೆಂಟರ್.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:

1. ರಿಯೋವೈರಸ್.

2. ನೀಟ್ 3.0.

 


ಸಾಮಾನ್ಯ ಅಧ್ಯಯನ ಪತ್ರಿಕೆ : 1


 

ವಿಷಯಗಳು: ಮಹಿಳೆಯರು ಮತ್ತು ಮಹಿಳಾ ಸಂಘಟನೆಯ ಪಾತ್ರ, ಜನಸಂಖ್ಯೆ ಮತ್ತು ಸಂಬಂಧಿತ ಸಮಸ್ಯೆಗಳು, ಬಡತನ ಮತ್ತು ಅಭಿವೃದ್ಧಿ ಸಮಸ್ಯೆಗಳು, ನಗರೀಕರಣ, ಅವುಗಳ ಸಮಸ್ಯೆಗಳು ಮತ್ತು ಪರಿಹಾರಗಳು.

ಏನದು, ಆನ್‌ಲೈನ್ ಲೈಂಗಿಕ ಕಿರುಕುಳ ತನಿಖೆಯ ಕೇಂದ್ರದಲ್ಲಿರುವ GitHub?


(What is GitHub, at the centre of online sexual harassment probe?)

ಸಂದರ್ಭ:

GitHub ಒಂದು, ವಿಶ್ವದ ಅತಿದೊಡ್ಡ ಓಪನ್ ಸೋರ್ಸ್ ಡೆವಲಪರ್ ಸಮುದಾಯ ವೇದಿಕೆಯಾಗಿದ್ದು, ಬಳಕೆದಾರರು ತಮ್ಮ ಪ್ರಾಜೆಕ್ಟ್‌ಗಳ ಕೋಡ್ ಅನ್ನು ಇತರರು ವೀಕ್ಷಿಸಲು, ಸಂಪಾದಿಸಲು ಮತ್ತು ಟ್ವೀಕ್ ಮಾಡಲು ಅಪ್‌ಲೋಡ್ ಮಾಡುತ್ತಾರೆ.

  1. ಭಾರತದಲ್ಲಿ ಮುಸ್ಲಿಂ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುವ ಉದ್ದೇಶದ ಆಕ್ಷೇಪಾರ್ಹ ಹೆಸರಿನ ಅಪ್ಲಿಕೇಶನ್ ಆದ (ಬುಲ್ಲಿ ಬಾಯಿ) ಅನ್ನು ರಚಿಸಲು ಮತ್ತು ಹಂಚಿಕೊಳ್ಳಲು GitHub ಅನ್ನು ಬಳಸಿದ ನಂತರ ಇದು ಸುದ್ದಿಯಲ್ಲಿದೆ.
  2. ಈ ಅಪ್ಲಿಕೇಶನ್ (ಬುಲ್ಲಿ ಬಾಯಿ) ಮಹಿಳೆಯರು ಸಕ್ರಿಯವಾಗಿರುವ ಸಾಮಾಜಿಕ ಮಾಧ್ಯಮ ವೇದಿಕೆಗಳಿಂದ ನಿರ್ಧಿಷ್ಟ ಮಹಿಳೆಯರ ಚಿತ್ರಗಳನ್ನು ಕದ್ದು ಬಳಸಿದೆ ಮತ್ತು ಅವರ ಮೇಲೆ ಬಿಡ್ ಮಾಡಲು “ಬಳಕೆದಾರರನ್ನು” ಆಹ್ವಾನಿಸಿದೆ.
  3. ಮುಸ್ಲಿಂ ಮಹಿಳೆಯರ ಭಾವಚಿತ್ರಗಳನ್ನು ‘ಬುಲ್ಲಿ ಬಾಯಿ’ ಹೆಸರಿನ ಆ್ಯಪ್‌ಗೆ ಅಪ್‌ಲೋಡ್‌ ಮಾಡಿ ಇವರನ್ನು ಹರಾಜಿಗಿಡಲಾಗಿದೆ ಎಂಬ ಒಕ್ಕಣೆಯೊಂದಿಗೆ ಅವಹೇಳನ ಮಾಡಲಾಗಿದೆ.

ಪ್ರಕರಣದ ತನಿಖಾ ವಿಧಾನ:

GitHub, ಬಳಕೆದಾರರನ್ನು ನಿರ್ಬಂಧಿಸಿದೆ ಮತ್ತು ಭಾರತದಲ್ಲಿ ಸೈಬರ್ ಭದ್ರತಾ ಘಟನೆಗಳನ್ನು ಮೇಲ್ವಿಚಾರಣೆ ಮಾಡುವ ನೋಡಲ್ ಏಜೆನ್ಸಿಯಾದ ಇಂಡಿಯನ್ ಕಂಪ್ಯೂಟರ್‌ ತುರ್ತು ಪ್ರತಿಸ್ಪಂದನಾ ತಂಡ (the Indian Computer Emergency Response System -Cert-In) ವನ್ನು ಈ ಪ್ರಕರಣದ ಕುರಿತು ತನಿಖೆ ಮಾಡಲು “ಉನ್ನತ ಮಟ್ಟದ ಸಮಿತಿಯನ್ನು” ರಚಿಸುವಂತೆ ಕೋರಿದೆ.

  1. ಶೋಷಣೆಗೆ ಗುರಿಯಾದ ಕೆಲವು ಮಹಿಳೆಯರ ದೂರಿನ ಮೇರೆಗೆ ದೆಹಲಿ ಮತ್ತು ಮುಂಬೈ ಪೊಲೀಸರು ಪ್ರಾಥಮಿಕ ತನಿಖಾ ವರದಿ (FIR) ಅನ್ನು ದಾಖಲಿಸಿದ್ದಾರೆ.

ಇಂತಹ ಘಟನೆ ನಡೆದಿರುವುದು ಇದೇ ಮೊದಲೇ?

  1. ಇಲ್ಲ. ಜೂನ್ 2021 ರಲ್ಲಿ, GitHub ವೇದಿಕೆಯಲ್ಲಿ ಹೋಸ್ಟ್ ಮಾಡಲಾದ ಇದೇ ರೀತಿಯ ಹೆಸರನ್ನು ಧ್ವನಿಸುವ ಮತ್ತೊಂದು ಅಪ್ಲಿಕೇಶನ್ (‘ಸುಲ್ಲಿ ಡೀಲ್ಸ್‌’ ಆ್ಯಪ್‌) ಅನ್ನು ಬಲ್ಲಿ ಬಾಯಿ ಆ್ಯಪ್ ಪ್ರಕರಣದಲ್ಲಿ ನಡೆದಿರುವ ರೀತಿಯಲ್ಲಿಯೇ ಮುಸ್ಲಿಂ ಮಹಿಳೆಯರಿಗೆ ಕಿರುಕುಳ ನೀಡಲು ಬಳಸಲಾಗಿದೆ.
  2. ದೆಹಲಿ ಮತ್ತು ನೋಯ್ಡಾ ಪೊಲೀಸರು ಎಫ್‌ಐಆರ್‌ಗಳನ್ನು ದಾಖಲಿಸಿದ್ದರು, ಆದರೆ ತನಿಖೆ ಪ್ರಗತಿ ಕಾಣಲ್ಲಿಲ್ಲ. ದೆಹಲಿ ಪೊಲೀಸರು, GitHub ವೇದಿಕೆಯು ಸಹಕರಿಸುತ್ತಿಲ್ಲ ಎಂದು ಹೇಳಿದ್ದಾರೆ.
  3. ‘ಬುಲ್ಲಿ ಬಾಯಿ’ ಕೂಡ ‘ಸುಲ್ಲಿ ಡೀಲ್ಸ್’ ನಂತೆ ಗಿಟ್‌ಹಬ್‌ ವೇದಿಕೆಯ ಆ್ಯಪ್‌ ಆಗಿದ್ದು, ಇವುಗಳಲ್ಲಿ ಸಾಮ್ಯತೆ ಇದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

ಸಂಬಂಧಿಸಿದ ಕಾಳಜಿಗಳು:

ಇತ್ತೀಚೆಗೆ, ರಾಷ್ಟ್ರೀಯ ಮಹಿಳಾ ಆಯೋಗ (NCW) ನೀಡಿದ ಮಾಹಿತಿಯ ಪ್ರಕಾರ, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 2021 ರ ಮೊದಲ ಎಂಟು ತಿಂಗಳಲ್ಲಿ ಮಹಿಳೆಯರ ಮೇಲಿನ ಅಪರಾಧಗಳ ದೂರುಗಳು 46% ರಷ್ಟು ಹೆಚ್ಚಾಗಿದೆ.

ಸಾಂವಿಧಾನಿಕ ಸುರಕ್ಷತೆಗಳು:

ಮೂಲಭೂತ ಹಕ್ಕುಗಳು:

ಸಂವಿಧಾನವು ಎಲ್ಲಾ ಭಾರತೀಯರಿಗೆ ನೀಡಿರುವ ‘ಮೂಲಭೂತ ಹಕ್ಕುಗಳಲ್ಲಿ’ ಅನುಚ್ಛೇದ 14 ‘ಸಮಾನತೆಯ ಹಕ್ಕನ್ನು’ಖಾತರಿಪಡಿಸುತ್ತದೆ, ಅನುಚ್ಛೇದ 15 (1) ‘ಲಿಂಗದ ಆಧಾರದ ಮೇಲೆ ರಾಜ್ಯದಿಂದ ತಾರತಮ್ಯವನ್ನು ನಿಷೇಧಿಸುವುದು’ ಮತ್ತು ಆರ್ಟಿಕಲ್ 15(3) ರಾಜ್ಯವು ಮಹಿಳೆಯರ ಪರವಾಗಿ, ತೆಗೆದುಕೊಳ್ಳಬೇಕಾದ ವಿಶೇಷ ನಿಬಂಧನೆಗಳನ್ನು ಖಾತರಿಪಡಿಸಲಾಗಿದೆ.

ಮೂಲಭೂತ ಕರ್ತವ್ಯಗಳು:

ಸಂವಿಧಾನದಲ್ಲಿ ಉಲ್ಲೇಖಿಸಲಾದ ‘ಮೂಲಭೂತ ಕರ್ತವ್ಯಗಳ’ ಅಡಿಯಲ್ಲಿ, ಮಹಿಳೆಯರ ಗೌರವ ಮತ್ತು ಘನತೆಗೆ ವಿರುದ್ಧವಾದ ಅವಹೇಳನಕಾರಿ ಆಚರಣೆಗಳನ್ನು ನಿಷೇಧಿಸುವ (ಆರ್ಟಿಕಲ್ 51 (A)) ನಿಬಂಧನೆಯನ್ನು ಮಾಡಲಾಗಿದೆ.

ಕಾನೂನು ಚೌಕಟ್ಟು:

  1. ಭಾರತೀಯ ದಂಡ ಸಂಹಿತೆ (Indian Penal Code – IPC) ಯಲ್ಲಿ, ಮಹಿಳೆಯರ ಗೌರವ, ಘನತೆಯನ್ನು ಅವಮಾನಿಸುವ ಮತ್ತು ಅವರ ಗೌಪ್ಯತೆಗೆ ಅಡ್ಡಿಪಡಿಸುವ ಅಶ್ಲೀಲ ಮತ್ತು ಮಾನಹಾನಿಕರ ಭಾಷಣವನ್ನು ಅಪರಾಧವೆಂದು ಘೋಷಿಸಲಾಗಿದೆ.
  2. ಮಾಹಿತಿ ತಂತ್ರಜ್ಞಾನ ಕಾಯಿದೆ’ 2000 ರ ಅಡಿಯಲ್ಲಿ, ಅಶ್ಲೀಲ ಭಾಷೆ ಅಥವಾ ಅಭಿವ್ಯಕ್ತಿಗಳನ್ನು ಬಳಸಿದ್ದಕ್ಕಾಗಿ ಶಿಕ್ಷಿಸಲು ಅವಕಾಶವನ್ನು ಮಾಡಲಾಗಿದೆ.
  3. ಮಹಿಳೆಯರ ಅಸಭ್ಯ ಪ್ರಾತಿನಿಧ್ಯ (ನಿಷೇಧ) ಕಾಯಿದೆ, (The Indecent Representation of Women (Prohibition) Act) 1986 ರ ಅಡಿಯಲ್ಲಿ, ಮಹಿಳೆಯರ ಅಶ್ಲೀಲ ಪ್ರಾತಿನಿಧ್ಯವನ್ನು ವ್ಯಕ್ತಪಡಿಸುವ ಯಾವುದೇ ಮುದ್ರಿತ ವಸ್ತುಗಳನ್ನು ಪ್ರಕಟಿಸುವುದನ್ನು ನಿಷೇಧಿಸುವ ಅವಕಾಶವಿದೆ.
  4. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ) (Protection of Children from Sexual Offences Act – POCSO) ಅಡಿಯಲ್ಲಿ ಲೈಂಗಿಕ ದೌರ್ಜನ್ಯದಿಂದ ಮಗುವನ್ನು ರಕ್ಷಿಸುವ ಮತ್ತು ಅಶ್ಲೀಲ ಉದ್ದೇಶಗಳಿಗಾಗಿ ಮಕ್ಕಳನ್ನು ಬಳಸುವುದನ್ನು ನಿಷೇಧಿಸುತ್ತದೆ.

She-Box:

ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಸಂಘಟಿತ ಅಥವಾ ಅಸಂಘಟಿತ, ಖಾಸಗಿ ಅಥವಾ ಸಾರ್ವಜನಿಕ ವಲಯದಲ್ಲಿ ಯಾವುದೇ ಹುದ್ದೆಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಮಹಿಳೆಗೆ ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳದ ಬಗ್ಗೆ ದೂರುಗಳನ್ನು ದಾಖಲಿಸಲು, ಸಿಂಗಲ್ ವಿಂಡೋ ಅಥವಾ ಏಕಗವಾಕ್ಷಿ ಪ್ರವೇಶವನ್ನು ಒದಗಿಸುವ ಪ್ರಯತ್ನದ ಭಾಗವಾಗಿ ‘ಲೈಂಗಿಕ ಕಿರುಕುಳ ಎಲೆಕ್ಟ್ರಾನಿಕ್ ಬಾಕ್ಸ್’ (Sexual Harassment electronic–Box – She-Box) ಎಂಬ ಹೆಸರಿನ ಆನ್ ಲೈನ್ ದೂರು ವ್ಯವಸ್ಥೆಯನ್ನು ಆರಂಭಿಸಿದೆ.

  1. ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳವನ್ನು ಎದುರಿಸುತ್ತಿರುವ ಯಾವುದೇ ಮಹಿಳೆ ಈ ಪೋರ್ಟಲ್ ಮೂಲಕ ತನ್ನ ದೂರನ್ನು ದಾಖಲಿಸಬಹುದು. ಒಮ್ಮೆ ‘She-Box’ನಲ್ಲಿ ದೂರು ದಾಖಲಿಸಿದರೆ, ಅದನ್ನು ನೇರವಾಗಿ ಈ ವಿಷಯದ ಕುರಿತು ಕ್ರಮ ತೆಗೆದುಕೊಳ್ಳಲು ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ಸಂಬಂಧಿಸಿದ ಸಚಿವಾಲಯ/ಇಲಾಖೆ/ಪಿಎಸ್‌ಯು/ಸ್ವಾಯತ್ತ ಸಂಸ್ಥೆಗಳಿಗೆ ಕಳುಹಿಸಲಾಗುವುದು.

 

ತೆಗೆದುಕೊಳ್ಳಬೇಕಿರುವ ಅವಶ್ಯಕ ಕ್ರಮಗಳು:

ರಾಷ್ಟ್ರೀಯ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್: ಎಲೆಕ್ಟ್ರಾನಿಕ್ ವಸ್ತುಗಳ ಸಂದರ್ಭದಲ್ಲಿ POCSO ಕಾಯಿದೆಯ ಅಡಿಯಲ್ಲಿ ಅವಶ್ಯಕತೆಗಳನ್ನು ವರದಿ ಮಾಡಲು ‘ರಾಷ್ಟ್ರೀಯ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್’ ಅನ್ನು ‘ರಾಷ್ಟ್ರೀಯ ಪೋರ್ಟಲ್’ ಎಂದು ಗೊತ್ತುಪಡಿಸಬೇಕು.

ಮಕ್ಕಳ ಲೈಂಗಿಕ ದೌರ್ಜನ್ಯದ ವಸ್ತುಗಳನ್ನು ಪ್ರದರ್ಶಿಸುವ ಎಲ್ಲಾ ವೆಬ್‌ಸೈಟ್‌ಗಳು/ ಮಧ್ಯವರ್ತಿಗಳನ್ನು ನಿರ್ಬಂಧಿಸಲು ಮತ್ತು/ಅಥವಾ ನಿಷೇಧಿಸಲು, ಕೇಂದ್ರ ಸರ್ಕಾರವು ತನ್ನ ಅಧಿಕಾರ ವ್ಯಾಪ್ತಿಯ ಮೂಲಕ ಸಮರ್ಥವಾಗಿರಬೇಕು.

ಪರಿಕರಗಳ ಅಭಿವೃದ್ಧಿ: ಪ್ರತಿ ಇಂಟರ್ನೆಟ್ ಬಳಕೆದಾರರ ನಡವಳಿಕೆಯನ್ನು ವಿಶ್ಲೇಷಿಸುವ ಸಾಮರ್ಥ್ಯವಿರುವ ಪರಿಕರಗಳನ್ನು ಅಭಿವೃದ್ಧಿಪಡಿಸಬಹುದು. ಬಳಕೆದಾರರು ಸೈಬರ್‌ಬುಲ್ಲಿಂಗ್‌ನ ವೆಬ್‌ಗೆ ಬೀಳದಂತೆ ತಡೆಯಲು ಇದು ಸಹಾಯ ಮಾಡುತ್ತದೆ.

ಕಾನೂನು ಜಾರಿ ಸಂಸ್ಥೆ:‘ಮಕ್ಕಳ ಅಶ್ಲೀಲತೆಯ’ ವಿತರಕರನ್ನು ಪತ್ತೆಹಚ್ಚಲು ‘ಎಂಡ್ ಟು ಎಂಡ್ ಎನ್‌ಕ್ರಿಪ್ಶನ್’ ಅನ್ನು ಮುರಿಯಲು ಕಾನೂನು ಜಾರಿ ಸಂಸ್ಥೆಗಳಿಗೆ ಅವಕಾಶ ನೀಡಬೇಕು.

ಸೈಬರ್ ಕ್ರೈಮ್ ಪೋರ್ಟಲ್: ಅಶ್ಲೀಲ ವಿಷಯವಸ್ತುಗಳನ್ನು ವರದಿ ಮಾಡಲು ನಾಗರಿಕರಿಗೆ ಅನುವು ಮಾಡಿಕೊಡಲು 2018 ರಲ್ಲಿ ‘ಸೈಬರ್ ಕ್ರೈಮ್ ಪೋರ್ಟಲ್’ ಅನ್ನು ಪ್ರಾರಂಭಿಸಲಾಯಿತು. ಸೈಬರ್ ಅಪರಾಧ ಪ್ರಕರಣಗಳ ವರದಿ ಮತ್ತು ತನಿಖೆಗಾಗಿ ಪ್ರತಿ ರಾಜ್ಯದಲ್ಲಿ ಸೈಬರ್ ಪೊಲೀಸ್ ಠಾಣೆಗಳು ಮತ್ತು ಸೈಬರ್ ಕ್ರೈಮ್ ಸೆಲ್‌ಗಳನ್ನು ಸಹ ಸ್ಥಾಪಿಸಲಾಗಿದೆ.

ದಯವಿಟ್ಟು ಗಮನಿಸಿ:

ಹೆಚ್ಚಿನ ಮಾಹಿತಿಗಾಗಿ:

ಮಹಿಳೆಯರ ಘನತೆಗೆ ಮಸಿ ಬಳಿಯಲು ‘ಬುಲ್ಲಿ ಬಾಯಿ’ ಹರಾಜು:

ಬುಲ್ಲಿ ಬಾಯಿ, ಮೈಕ್ರೊಸಾಫ್ಟ್‌ ಕಾರ್ಪೊರೇಷನ್‌ನ ಗಿಟ್‌ಹಬ್ ಪ್ಲಾಟ್‌ಫಾರ್ಮ್‌ನಲ್ಲಿ ಸೃಷ್ಟಿಸಲಾದ ಒಂದು ಅಪ್ಲಿಕೇಷನ್. ಇಲ್ಲಿ ಪ್ರತಿದಿನ ಒಬ್ಬ ಮಹಿಳೆಯ ಚಿತ್ರವನ್ನು ಬಳಸಿಕೊಂಡು ಅವರನ್ನು ಹರಾಜು ಹಾಕಲಾಗತ್ತದೆ. ಹರಾಜಿನಲ್ಲಿ ಆಯ್ಕೆಯಾದ ಮಹಿಳೆಯರ ತಿರುಚಲಾದ ಚಿತ್ರವನ್ನು ‘ಬುಲ್ಲಿ ಆಫ್‌ ದಿ ಡೇ’ ಎಂದು ಘೋಷಿಸಲಾಗುತ್ತದೆ. ಹಿಂದಿ ಮಿಶ್ರಿತ ಉರ್ದುವಿನಲ್ಲಿ ಮಹಿಳೆಯನ್ನು ತುಚ್ಛವಾಗಿ ಬೈಯುವ ಪದವಾಗಿ ‘ಬುಲ್ಲಿ’ ಎಂಬ ಪದ ಬಳಕೆಯಾಗುತ್ತದೆ. ಹೀಗೆ ಒಬ್ಬ ಮಹಿಳೆಯನ್ನು ‘ಬುಲ್ಲಿ ಆಫ್‌ ದಿ ಡೇ’ ಎಂದು ಆಯ್ಕೆ ಮಾಡುವ ಮೂಲಕ, ಅವರ ಘನತೆಗೆ ಕುಂದು ತರಲಾಗುತ್ತದೆ. ಮಹಿಳೆಯ ಘನತೆಗೆ ಕುಂದು ತರುವುದೇ ಈ ಚಟುವಟಿಕೆಯ ಹಿಂದಿನ ಪ್ರಧಾನ ಉದ್ದೇಶ.

ಇದೇ ಜನವರಿ 1ರಂದು ಈ ಆ್ಯಪ್‌ ಸಾರ್ವಜನಿಕರಿಗೆ ಲಭ್ಯವಾಗಿದೆ. ಅದು ಸ್ಥಗಿತವಾಗುವವರೆಗೆ ಸಾವಿರಾರು ಮಂದಿ ಅದನ್ನು ಡೌನ್‌ಲೋಡ್‌ ಮಾಡಿಕೊಂಡು, ಬಳಸಿದ್ದಾರೆ. ಕೆಲವೇ ದಿನಗಳಲ್ಲಿ ಈ ಅಪ್ಲಿಕೇಷನ್‌ ಮೂಲಕ ಸಾವಿರಾರು ಮಹಿಳೆಯರನ್ನು ಹರಾಜು ಹಾಕಲಾಗಿದೆ. ಹರಾಜಿನಲ್ಲಿ ಆಯ್ಕೆಯಾದ ಏಳೆಂಟು ಮಹಿಳೆಯರ ಚಿತ್ರಗಳನ್ನು ‘ಬುಲ್ಲಿ ಆಫ್‌ ದಿ ಡೇ’ ಎಂದು ಘೋಷಿಸಲಾಗಿದೆ. ಹೀಗೆ ಘೋಷಿಸಲಾದ ಮಹಿಳೆಯರ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ.

2020ರಲ್ಲಿ ಇದೇ ಗಿಟ್‌ಹಬ್‌ ಪ್ಲಾಟ್‌ಫಾರ್ಮ್‌ನಲ್ಲಿ ಸೃಷ್ಟಿಸಲಾಗಿದ್ದ ‘ಸುಲ್ಲಿ ಡೀಲ್ಸ್‌’ ಎಂಬ ಅಪ್ಲಿಕೇಷನ್‌ ಮೂಲಕ ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳ ಗಣ್ಯ ಮಹಿಳೆಯರನ್ನು ಹರಾಜು ಹಾಕಲಾಗುತ್ತಿತ್ತು. ಇದರಲ್ಲಿ ಮುಸ್ಲಿಂ ಮಹಿಳೆಯರನ್ನೇ ಗುರಿ ಮಾಡಿಕೊಳ್ಳಲಾಗಿತ್ತು. ‘ಸುಲ್ಲಿ’ ಎಂಬ ಪದವೂ, ‘ಬುಲ್ಲಿ’ ಎಂಬ ಪದದ ಅರ್ಥದಲ್ಲಿಯೇ ಬಳಕೆಯಾಗುತ್ತದೆ. ಈ ಆ್ಯಪ್‌ನ ಬಗ್ಗೆ ದೂರುಗಳು ದಾಖಲಾದ ನಂತರ, ಅದನ್ನು ಸ್ಥಗಿತಗೊಳಿಸುವಂತೆ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯವು ಮೈಕ್ರೊಸಾಫ್ಟ್‌ ಕಾರ್ಪೊರೇಷನ್‌ಗೆ ಪತ್ರ ಬರೆದಿತ್ತು. ಆನಂತರ ಆ ಅಪ್ಲಿಕೇಷನ್ ಸ್ಥಗಿತವಾಗಿತ್ತು. ಆದರೆ, ಅದರ ಬೆನ್ನಲ್ಲೇ ‘ಬುಲ್ಲಿ ಬಾಯಿ’ ಎಂಬ ಅಪ್ಲಿಕೇಷನ್‌ ಅನ್ನು ಸೃಷ್ಟಿಸಲಾಗಿದೆ. ಸುಲ್ಲಿ ಡೀಲ್ಸ್‌ನ ತದ್ರೂಪದಂತೆಯೇ ಬುಲ್ಲಿ ಆ್ಯಪ್‌ ಇದೆ.

ಗೊತ್ತಾಗಿದ್ದು ಹೇಗೆ?

ಮುಸ್ಲಿಂ ಮಹಿಳೆಯರನ್ನು ಗುರಿಯಾಗಿಸಿರುವ ‘ಬುಲ್ಲಿ ಬಾಯಿ’ ಆ್ಯಪ್ ಬಗ್ಗೆ ಪತ್ರಕರ್ತೆಯೊಬ್ಬರು ಹೊಸ ವರ್ಷದ ಆರಂಭದಲ್ಲಿ ಮೊದಲಿಗೆ ದನಿ ಎತ್ತಿದರು. ಟ್ವೀಟ್ ಮಾಡಿದ್ದ ಅವರು, ತಮ್ಮ ಚಿತ್ರವನ್ನು ಬಳಸಿಕೊಂಡು ಆ್ಯಪ್‌ನಲ್ಲಿ ತಮ್ಮನ್ನು ಮಾರಾಟಕ್ಕೆ ಇಡಲಾಗಿದೆ ಎಂದು ಆರೋಪಿಸಿದ್ದರು. ಕಳೆದ ವಾರ ಅವರು ದೆಹಲಿಯ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡುವುದರೊಂದಿಗೆ ಈ ಪ್ರಕರಣವು ಬೆಳಕಿಗೆ ಬಂದಿತ್ತು. ಅಪರಿಚಿತ ಜನರ ಗುಂಪು ಈ ಕೆಲಸದಲ್ಲಿ ತೊಡಗಿದ್ದು, ಇದು ಲೈಂಗಿಕ ಕಿರುಕುಳ ಮತ್ತು ಧರ್ಮದ ಆಧಾರದ ಮೇಲೆ ದ್ವೇಷವನ್ನು ಪ್ರಚೋದಿಸುವ ಕೃತ್ಯ ಎಂದು ಆರೋಪಿಸಿದ್ದರು.

ಇಂತಹ ದ್ವೇಷ ಪ್ರಚೋದಕ ವ್ಯಕ್ತಿಗಳು ಯಾವುದೇ ಶಿಕ್ಷೆಯ ಭಯವಿಲ್ಲದೆ, ಮುಸ್ಲಿಂ ಮಹಿಳೆಯರನ್ನು ಗುರಿಯಾಗಿಸಿಕೊಂಡ ನಿರ್ಭೀತ ನಡೆ ನಿಜಕ್ಕೂ ನಿರಾಶಾದಾಯಕ’ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಅವರು ಉಲ್ಲೇಖಿಸಿದ್ದರು. ಟ್ವೀಟ್‌ ಹಾಗೂ ದೂರು ಆಧರಿಸಿ ದೆಹಲಿ ಪೊಲೀಸರು ಭಾರತೀಯ ದಂಡ ಸಂಹಿತೆಯ 509 ಸೆಕ್ಷನ್‌ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿದ್ದರು.

ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಇದು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನಕ್ಕೆ ಕಾರಣವಾಯಿತು. ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು ಈ ಬಗ್ಗೆ ಪ್ರಬಲ ದನಿ ಎತ್ತಿದರು. ಇದೇ ಸ್ವರೂಪದ ‘ಸುಲ್ಲಿ ಡೀಲ್ಸ್’ ಎಂಬ ಆ್ಯಪ್ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಈ ಮೊದಲು ಪದೇ ಪದೇ ಒತ್ತಾಯಿಸಿದ್ದೆ ಎಂದು ತ್ರಿವೇದಿ ನೆನಪಿಸಿದರು. ಮಹಿಳೆಯರನ್ನು ಅತಿರೇಕವಾಗಿ ಚಿತ್ರಿಸುವ ಹಾಗೂ ಕೋಮುವಾದ ಪ್ರಚೋದಿಸುವುದನ್ನೇ ಗುರಿಯಾಗಿಸಿಕೊಂಡಿರುವ ಸುಲ್ಲಿ ಡೀಲ್ಸ್‌ನಂತಹ ವೇದಿಕೆಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಪ್ರಿಯಾಂಕಾ ಆಗ್ರಹಿಸಿದ್ದರು.

ಇಂತಹ ಅತಿರೇಕದ ವರ್ತನೆಗಳನ್ನು ಮುಂದುವರಿಯಲು ಬಿಟ್ಟಿದ್ದು ನಾಚಿಕೆಗೇಡು ಎಂದು ಅವರು ಟ್ವಿಟರ್‌ನಲ್ಲಿ ಖಾರವಾಗಿ ಪ್ರತಿಕ್ರಿಯಿಸಿದರು. ‘ಈ ಹಿಂದೆ ಐಟಿ ಸಚಿವರಿಗೆ ದೂರು ನೀಡಿದಾಗ ಆ್ಯಪ್‌ ಅನ್ನು ಸ್ಥಗಿತಗೊಳಿಸಲಾಗಿತ್ತು. ಆ್ಯಪ್ ಸ್ಥಗಿತಗೊಳಿಸುವುದು ಒಂದು ವಿಧಾನದ ನಿಯಂತ್ರಣ ಕ್ರಮ. ಆದರೆ ಆ್ಯಪ್ ಸೃಷ್ಟಿಕರ್ತರ ವಿರುದ್ಧ ಕಠಿಣ ಕ್ರಮಗಳನ್ನು ಜರುಗಿಸಿದ್ದಿದ್ದರೆ, ಈ ಬಾರಿ ಬುಲ್ಲಿ ಬಾಯಿ ತಲೆ ಎತ್ತುತ್ತಿರಲಿಲ್ಲ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ರಭಾವಿ’ ಮುಸ್ಲಿಂ ಮಹಿಳೆಯರೇ ಗುರಿ:

2022ರ ಹೊಸ ವರ್ಷವು ಮುಸ್ಲಿಂ ಮಹಿಳೆಯರಿಗೆ ಕಹಿ ಆರಂಭ ನೀಡಿದೆ. ಅನುಮತಿ ಪಡೆಯದೇ, ಕೆಲವು ಮಹಿಳೆಯರನ್ನು ಜನವರಿ 1ರಂದು ಆ್ಯಪ್‌ನಲ್ಲಿ ಹರಾಜಿಗೆ ಇಡಲಾಗಿತ್ತು. 2021ರ ಜುಲೈನಲ್ಲಿ ಇಂತಹದ್ದೇ ಸ್ವರೂಪದ ಕಾರ್ಯಾಚರಣೆಯನ್ನು ಸುಲ್ಲಿ ಡೀಲ್ಸ್‌ ಎಂಬ ಆ್ಯಪ್ ನಡೆಸಿ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬಾರಿಯೂ ಬುಲ್ಲಿ ಬಾಯಿ‌ನಲ್ಲಿ ಮಹಿಳೆಯರು, ಅದರಲ್ಲೂ ವಿಶೇಷವಾಗಿ ಮುಸ್ಲಿಂ ಮಹಿಳೆಯರನ್ನು ಗುರಿಯಾಗಿಸಲಾಗಿದೆ.

ಸುಮಾರು 100 ಮಸ್ಲಿಂ ಮಹಿಳೆಯರು ಈ ಆ್ಯಪ್‌ನಲ್ಲಿ ಹರಾಜಿಗೆ ಇದ್ದು, ಬಹುತೇಕರು ಭಾರತೀಯರು ಎನ್ನಲಾಗಿದೆ. ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು, ವಿದ್ಯಾರ್ಥಿಗಳು, ಖ್ಯಾತ ವ್ಯಕ್ತಿಗಳು ಹಾಗೂ ಸರ್ಕಾರದ ವಿರುದ್ಧ ದನಿ ಎತ್ತಿದವರನ್ನೇ ಗುರಿಯಾಗಿಸಿ, ಅವರಿಗೆ ಅಪಮಾನ ಮಾಡುವ ಉದ್ದೇಶದಿಂದ ಹೀಗೆ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.

ಬುಲ್ಲಿ ಬಾಯಿ‌ನಲ್ಲಿ ಸಮಾಜದಲ್ಲಿ ‘ಪ್ರಭಾವಿ’ ಎನಿಸಿಕೊಂಡಿರುವ ಮುಸ್ಲಿಂ ಮಹಿಳೆಯರನ್ನು ಆಯ್ಕೆ ಮಾಡಲಾಗಿದೆ. ಆನ್‌ಲೈನ್ ವೇದಿಕೆಗಳಲ್ಲಿ ಸಕ್ರಿಯವಾಗಿರುವ ಹಾಗೂ ಬಹಿರಂಗವಾಗಿ ದನಿ ಎತ್ತುತ್ತಿರುವ ಮಹಿಳೆಯರೇ ಈ ಆ್ಯಪ್‌ನ ಗುರಿ. ಸಾಮಾಜಿಕ ಜಾಲತಾಣಗಳಲ್ಲಿ ಸಿಗುವ ಅವರ ಚಿತ್ರಗಳನ್ನು, ಅವರ ಅನುಮತಿ ಪಡೆಯದೇ ಈ ಆ್ಯಪ್‌ನಲ್ಲಿ ಅಶ್ಲೀಲವಾಗಿ ತಿರುಚಿ ಬಳಸಲಾಗುತ್ತಿದೆ ಎಂಬ ಆರೋಪವಿದೆ.

ಕಳೆದ ಭಾನುವಾರ ಆ್ಯಪ್‌ನಲ್ಲಿ ಹರಾಜು ಹಾಕಲಾಗಿದ್ದ ಮಹಿಳೆಯರಲ್ಲಿ ಖ್ಯಾತ ನಟಿ, ವಿರೋಧ ಪಕ್ಷದ ನಾಯಕಿ ಸೇರಿದಂತೆ ಬಹುತೇಕ ಭಾರತೀಯರೇ ಇದ್ದರು. ಕಳೆದ ಬಾರಿ ಸುಲ್ಲಿ ಡೀಲ್ಸ್‌ ಆ್ಯಪ್‌ನಲ್ಲಿ ಪೈಲಟ್ ವೃತ್ತಿಯಲ್ಲಿರುವ ಮಹಿಳೆಯೊಬ್ಬರ ಚಿತ್ರವನ್ನು ಅನಧಿಕೃತವಾಗಿ ಸಂಗ್ರಹಿಸಿ ಆ್ಯಪ್‌ನಲ್ಲಿ ಹರಾಜಿಗೆ ಇಡಲಾಗಿತ್ತು. ಸ್ನೇಹಿತೆಯೊಬ್ಬರು ಈ ಬಗ್ಗೆ ಮಾಹಿತಿ ನೀಡಿದ ಬಳಿಕವಷ್ಟೇ ಅವರಿಗೆ ಗಮನಕ್ಕೆ ಬಂದಿತ್ತು.

ಮುಸ್ಲಿಂ ಮಹಿಳೆಯರನ್ನು ಅಪಮಾನಿಸಲು ‘ಸುಲ್ಲಿ’ ಎಂಬ ಅಶ್ಲೀಲ ಪದವನ್ನು ಬಲಪಂಥೀಯ ಸಂಘಟನೆಗಳು ಬಳಸುತ್ತವೆ. ಇಲ್ಲಿ ನೈಜ ಖರೀದಿ ಇರುವುದಿಲ್ಲ. ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಮಹಿಳೆಯರನ್ನು, ಅದರಲ್ಲೂ ಪ್ರಭಾವಿ ಎನಿಸಿರುವ ಮಹಿಳೆಯರನ್ನು ಅಪಮಾನ ಮಾಡುವುದು ಈ ಆ್ಯಪ್‌ನ ಏಕೈಕ ಉದ್ದೇಶ ಎಂಬ ಆರೋಪಗಳಿವೆ.

ಈ ಆ್ಯಪ್‌ ಅನ್ನು ಸ್ಮಾರ್ಟ್‌ಫೋನ್‌ಗಳಲ್ಲಿ ಬಳಸಬಹುದಾಗಿದೆ. ಅಪ್ಲಿಕೇಷನ್‌ ಅನ್ನು ಡೌನ್‌ಲೋಡ್ ಮಾಡಿಕೊಂಡವರು, ತಮ್ಮನ್ನು ಅದರಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಹೀಗೆ ನೋಂದಣಿ ಮಾಡಿಕೊಂಡ ಬಳಕೆದಾರರ ಫೋನ್‌ನಲ್ಲಿ ಪ್ರತಿದಿನ ಬೆಳಿಗ್ಗೆ ಮಹಿಳೆಯರು ಹರಾಜಿಗೆ ಇರುವ ಬಗ್ಗೆ ನೋಟಿಫಿಕೇಷನ್ ಬರುತ್ತದೆ. ನೋಟಿಫಿಕೇಷನ್‌ ಆಧಾರದಲ್ಲಿ ಬಳಕೆದಾರರು ಹರಾಜಿನಲ್ಲಿ ಭಾಗಿಯಾಗಬಹುದು.

ದಿನವೊಂದರಲ್ಲಿ ಕನಿಷ್ಠ ನೂರು ಮಹಿಳೆಯರನ್ನು ಹರಾಜಿಗೆ ಇಡಲಾಗುತ್ತದೆ. ಬೇರೊಬ್ಬರ ಅರೆನಗ್ನ ಮತ್ತು ಮಾದಕ ಭಂಗಿಯ ಚಿತ್ರಗಳಿಗೆ ಗಣ್ಯ/ಖ್ಯಾತ ಮಹಿಳೆಯರ ಮುಖವನ್ನು ಸೇರಿಸಿ, ಅವರನ್ನು ಹರಾಜು ಹಾಕಲಾಗುತ್ತದೆ. ಹರಾಜಿನಲ್ಲಿ ಭಾಗಿಯಾಗುವವರು ತಮ್ಮಿಷ್ಟದ ಒಬ್ಬ ಮಹಿಳೆಯನ್ನು ಆಯ್ಕೆ ಮಾಡಬೇಕು. ಹೀಗೆ ಹೆಚ್ಚು ಜನರಿಂದ ಆಯ್ಕೆಯಾದ ಮಹಿಳೆಯನ್ನು, ಅಂದಿನ ‘ಬುಲ್ಲಿ ಆಫ್‌ ದಿ ಡೇ’ ಎಂದು ಆಯ್ಕೆ ಮಾಡಲಾಗುತ್ತದೆ. ದಿನವಿಡೀ ಈ ಶೀರ್ಷಿಕೆಯಡಿ ಆ ಚಿತ್ರವು ಅಪ್ಲಿಕೇಷನ್‌ನ ಹೋಂಪೇಜ್‌ನಲ್ಲಿ ಬಿತ್ತರವಾಗುತ್ತದೆ. ಈ ಚಿತ್ರಗಳ ಅಡಿಯಲ್ಲಿ ಕಾಮೆಂಟ್ ಮಾಡಲು ಅವಕಾಶವಿದೆ. ಹೀಗೆ ಮಾಡಲಾದ ಕಾಮೆಂಟ್‌ಗಳಲ್ಲಿ ಬಹುತೇಕವು ಅತ್ಯಂತ ತುಚ್ಛವಾಗಿವೆ ಮತ್ತು ಆ ಮಹಿಳೆಯ ಘನತೆಗೆ ಧಕ್ಕೆ ತರುವ ರೀತಿಯಲ್ಲಿರುತ್ತವೆ.

ಹೋಂಪೇಜ್‌ನಲ್ಲಿ ಬಿತ್ತರವಾಗುವ ಈ ಚಿತ್ರ ಮತ್ತು ಅದಕ್ಕೆ ನೀಡಲಾದ ಕಾಮೆಂಟ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಫೇಸ್‌ಬುಕ್‌, ಟ್ವಿಟರ್‌ ಮತ್ತು ವಾಟ್ಸ್‌ಆ್ಯಪ್‌ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲು ಅವಕಾಶವಿದೆ. ತುಚ್ಛ ಕಾಮೆಂಟ್‌ನ ಸರಣಿ ಅಲ್ಲಿಯೂ ಮುಂದುವರಿಯುತ್ತದೆ. ಹೀಗೆ ಇಡೀ ದಿನ ಆ ಮಹಿಳೆಯ ಘನತೆಗೆ ಧಕ್ಕೆ ತರಲಾಗುತ್ತದೆ. ಮರುದಿನ ಮತ್ತೆ ಮಹಿಳೆಯರ ಹರಾಜು ನಡೆಯುತ್ತದೆ. ಆಯ್ಕೆಯಾದ ಮಹಿಳೆಯ ಘನತೆಗೆ ಧಕ್ಕೆ ತರುವ ಸರಣಿ ಮುಂದುವರಿಯುತ್ತದೆ.

(ಕೃಪೆ;ಪ್ರಜಾವಾಣಿ).

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ಅಣೆಕಟ್ಟು ಸುರಕ್ಷತಾ ಕಾಯಿದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಲಾಗಿದೆ:


(Constitutional Validity of Dam Safety Act challenged)

ಸಂದರ್ಭ:

ಅಣೆಕಟ್ಟು ಸುರಕ್ಷತಾ ಕಾಯಿದೆ, 2021 (Dam Safety Act, 2021) ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಲೋಕಸಭೆಯ ಡಿಎಂಕೆ ಎಂಒ ಅವರು ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ, ಇದು ಒಕ್ಕೂಟ ತತ್ವಕ್ಕೆ ವಿರುದ್ಧವಾಗಿದೆ ಮತ್ತು ಕೇಂದ್ರದ ಶಾಸಕಾಂಗ ಅಧಿಕಾರ ವ್ಯಾಪ್ತಿಯನ್ನು ಮೀರಿದೆ ಎಂಬ ಆಧಾರದ ಮೇಲೆ.

  1. ಅಣೆಕಟ್ಟು ಸುರಕ್ಷತಾ ಮಸೂದೆಯನ್ನು ಇತ್ತೀಚೆಗೆ ರಾಜ್ಯಸಭೆಯಲ್ಲಿ ಅಂಗೀಕರಿಸಲಾಯಿತು.

ಸಂಬಂಧಿತ ಕಾಳಜಿಗಳು:

  1. ಮಸೂದೆಯು ಅಣೆಕಟ್ಟುಗಳ ‘ಕಾರ್ಯಾಚರಣೆ ಸುರಕ್ಷತೆ’ಗಿಂತ ‘ರಚನಾತ್ಮಕ ಸುರಕ್ಷತೆ’ಗೆ ಹೆಚ್ಚಿನ ಗಮನವನ್ನು ನೀಡಿದೆ.
  2. ಅಣೆಕಟ್ಟುಗಳಿಂದ ಸಂತ್ರಸ್ತರಾದ ಜನರಿಗೆ ಅಸಮರ್ಪಕ ಪರಿಹಾರವನ್ನು ನೀಡಲಾಗುತ್ತದೆ.
  3. ಈ ಮಸೂದೆಯಲ್ಲಿ ಮಧ್ಯಸ್ಥಗಾರರ ನಿಖರವಾದ ವ್ಯಾಖ್ಯಾನಗಳೊಂದಿಗೆ ‘ಸ್ವತಂತ್ರ ನಿಯಂತ್ರಕ’ವನ್ನು ಒದಗಿಸುವ ಅಗತ್ಯವಿದೆ.

ಭಾರತದ ಒಕ್ಕೂಟ ತತ್ವಕ್ಕೆ ಈ ಕಾನೂನು ಹೇಗೆ ವಿರುದ್ಧವಾಗಿದೆ?

  1. ಅನೇಕ ರಾಜ್ಯಗಳು ಇದು ತಮ್ಮ ಅಣೆಕಟ್ಟುಗಳ ನಿರ್ವಹಣೆಗೆ ಸಂಬಂಧಿಸಿದಂತೆ ರಾಜ್ಯಗಳ ಸಾರ್ವಭೌಮತ್ವವನ್ನು ಉಲ್ಲಂಘಿಸುತ್ತದೆ ಮತ್ತು ಸಂವಿಧಾನದಲ್ಲಿ ಪ್ರತಿಪಾದಿಸಲಾದ ಫೆಡರಲಿಸಂನ ಅಥವಾ ಸಂಯುಕ್ತ ವ್ಯವಸ್ಥೆಯ ತತ್ವಗಳನ್ನು ಉಲ್ಲಂಘಿಸುತ್ತದೆ ಎಂದು ಹೇಳುತ್ತವೆ.ಈ ರಾಜ್ಯಗಳು ಇದನ್ನು ಭದ್ರತೆಗೆ ಸಂಬಂಧಿಸಿದ ಕಾಳಜಿಗಳ ನೆಪದಲ್ಲಿ ಅಧಿಕಾರವನ್ನು ಕ್ರೋಢೀಕರಿಸುವ ಕೇಂದ್ರದ ಪ್ರಯತ್ನವಾಗಿ ನೋಡುತ್ತವೆ.
  2. ಸಂವಿಧಾನದ ಅಡಿಯಲ್ಲಿ, ಅಣೆಕಟ್ಟುಗಳು ರಾಜ್ಯ ಸರ್ಕಾರಗಳ ಶಾಸನದ ಪರಿಧಿಯೊಳಗೆ ಬರುತ್ತವೆ. ಪಟ್ಟಿ I (ಕೇಂದ್ರ ಪಟ್ಟಿ) ರ ನಮೂದು 56 ರ ಅಡಿಯಲ್ಲಿ ಕೇಂದ್ರದ ಅಧಿಕಾರವು ಅಂತರ-ರಾಜ್ಯ ನದಿಗಳು ಅಥವಾ ನದಿ ಕಣಿವೆಗಳಿಗೆ ಸಂಬಂಧಿಸಿದಂತೆ ಮಾತ್ರವೇ ಹೊರತು ಇನ್ನೇನೂ ಇಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

ಕೇಂದ್ರ ಸರ್ಕಾರವು ಈ ಮಸೂದೆಯನ್ನು ಮಂಡಿಸಲು ಕಾರಣಗಳು:

ಈ ವಿಷಯವು ಸಂಸತ್ತಿನ ವ್ಯಾಪ್ತಿಗೆ ಬರುವುದಿಲ್ಲವಾದರೂ, ಕೇಂದ್ರ ಸರ್ಕಾರವು ಈ ಮಸೂದೆಯನ್ನು ಮಂಡಿಸಲು ನಿರ್ಧರಿಸಿದೆ ಏಕೆಂದರೆ ಮುಖ್ಯವಾಗಿ ‘ಅಣೆಕಟ್ಟು-ಸುರಕ್ಷತೆ’ ದೇಶದಲ್ಲಿ ಕಾಳಜಿಯ ವಿಷಯವಾಗಿದೆ. ಮತ್ತು, ಈ ವಿಷಯದಲ್ಲಿ ಯಾವುದೇ ಕಾನೂನು ಮತ್ತು ಸಾಂಸ್ಥಿಕ ಸುರಕ್ಷತೆಗಳು ಲಭ್ಯವಿಲ್ಲ.

ಅಣೆಕಟ್ಟು ಸುರಕ್ಷತಾ ಮಸೂದೆ 2019ರ ಪ್ರಮುಖ ಅಂಶಗಳು:

  1. ‘ಅಣೆಕಟ್ಟು ಸುರಕ್ಷತಾ ಮಸೂದೆ’ಯು ದೇಶದ ಎಲ್ಲಾ ಪ್ರಮುಖ ಅಣೆಕಟ್ಟುಗಳ ಮೇಲ್ವಿಚಾರಣೆ, ತಪಾಸಣೆ, ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಸಾಕಷ್ಟು ಸೌಲಭ್ಯಗಳನ್ನು ಒದಗಿಸುತ್ತದೆ, ಇದರಿಂದಾಗಿ ಅಣೆಕಟ್ಟು ವೈಫಲ್ಯದ ಸಂದರ್ಭದಲ್ಲಿ ಉಂಟಾಗುವ ಅನಾಹುತವನ್ನು ತಡೆಯುತ್ತದೆ.
  2. ಅಣೆಕಟ್ಟುಗಳ ಸುರಕ್ಷಿತ ಕಾರ್ಯಾಚರಣೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯವಾದ ರಚನಾತ್ಮಕ ಮತ್ತು ರಚನಾತ್ಮಕವಲ್ಲದ ಕ್ರಮಗಳ ಕಡೆಗೆ ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಸಾಂಸ್ಥಿಕ ಕಾರ್ಯವಿಧಾನವನ್ನು ಈ ಮಸೂದೆಯು ಒದಗಿಸುತ್ತದೆ.
  3. ಮಸೂದೆಯ ನಿಬಂಧನೆಯ ಪ್ರಕಾರ, ಏಕರೂಪದ ಅಣೆಕಟ್ಟು ಸುರಕ್ಷತೆ ನೀತಿಗಳು, ಪ್ರೋಟೋಕಾಲ್‌ / ಮಾರ್ಗಸೂಚಿಗಳು ಮತ್ತು ಕಾರ್ಯವಿಧಾನಗಳನ್ನು ಹಾಗೂ ಮಾನದಂಡಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಲು ‘ಅಣೆಕಟ್ಟು ಸುರಕ್ಷತೆಯ ರಾಷ್ಟ್ರೀಯ ಸಮಿತಿ’ (NCDS) ಯನ್ನು ರಚಿಸಲಾಗುತ್ತದೆ.
  4. ಅಣೆಕಟ್ಟು ಸುರಕ್ಷತಾ ನೀತಿಗಳು ಮತ್ತು ಮಾನದಂಡಗಳ ರಾಷ್ಟ್ರವ್ಯಾಪಿ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ನಿಯಂತ್ರಕ ಸಂಸ್ಥೆಯಾಗಿ ‘ರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಪ್ರಾಧಿಕಾರ’ (NDSA) ಅನ್ನು ಸ್ಥಾಪಿಸಲು ಮಸೂದೆಯು ಒದಗಿಸುತ್ತದೆ.
  5. ಈ ಮಸೂದೆಯು ರಾಜ್ಯ ಮಟ್ಟದಲ್ಲಿ ‘ರಾಜ್ಯ ಅಣೆಕಟ್ಟು ಸುರಕ್ಷತೆಯ ಸಮಿತಿ’ (SCDS) ಮತ್ತು ರಾಜ್ಯ ಅಣೆಕಟ್ಟು ಸುರಕ್ಷತಾ ಸಂಸ್ಥೆಗಳನ್ನು ಸ್ಥಾಪಿಸಲು ಅವಕಾಶವನ್ನು ಒದಗಿಸುತ್ತದೆ.

ಪ್ರಾಮುಖ್ಯತೆ:

  1. ಅಣೆಕಟ್ಟು ಸುರಕ್ಷತಾ ಮಸೂದೆಯು ಭಾರತದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಏಕರೂಪದ ಅಣೆಕಟ್ಟು ಸುರಕ್ಷತಾ ಕಾರ್ಯವಿಧಾನಗಳನ್ನು ಅಳವಡಿಸಿಕೊಳ್ಳಲು ಸಹಾಯ ಮಾಡುತ್ತದೆ, ಇದು ಅಣೆಕಟ್ಟುಗಳ ಸುರಕ್ಷತೆ ಮತ್ತು ಅಂತಹ ಅಣೆಕಟ್ಟುಗಳ ಪ್ರಯೋಜನಗಳನ್ನು ಖಚಿತಪಡಿಸುತ್ತದೆ. ಇದರಿಂದ ಮಾನವ ಜೀವ, ಜಾನುವಾರು, ಆಸ್ತಿ ರಕ್ಷಣೆಗೂ ಸಹ ಸಹಕಾರಿಯಾಗಲಿದೆ.
  2. ಅಣೆಕಟ್ಟುಗಳ ನಿಯಮಿತ ತಪಾಸಣೆ, ತುರ್ತು ಕ್ರಿಯಾ ಯೋಜನೆ, ಸಮಗ್ರ ಅಣೆಕಟ್ಟು ಸುರಕ್ಷತೆ ಪರಿಶೀಲನೆ, ಅಣೆಕಟ್ಟು ಸುರಕ್ಷತೆ, ಉಪಕರಣಗಳು ಮತ್ತು ಸಾಕಷ್ಟು ದುರಸ್ತಿ ಮತ್ತು ನಿರ್ವಹಣೆ ನಿಧಿಗಳು, ಉಪಕರಣಗಳು ಮತ್ತು ಸುರಕ್ಷತಾ ಕೈಪಿಡಿಗಳು ಸೇರಿದಂತೆ ಅಣೆಕಟ್ಟು ಸುರಕ್ಷತೆಗೆ ಸಂಬಂಧಿಸಿದ ಎಲ್ಲಾ ವಿಷಯಗಳ ಮೇಲೆ ಅಣೆಕಟ್ಟು ಸುರಕ್ಷತೆಗಾಗಿ ಮಸೂದೆಯಲ್ಲಿ ನಿಬಂಧನೆಗಳನ್ನು ಮಾಡಲಾಗಿದೆ.
  3. ಮಸೂದೆಯು ಅಣೆಕಟ್ಟಿನ ಮಾಲೀಕರ ಮೇಲೆ ‘ಅಣೆಕಟ್ಟು ಸುರಕ್ಷತೆ’ಯ ಜವಾಬ್ದಾರಿಯನ್ನು ಹೊರಿಸುತ್ತದೆ ಮತ್ತು ಕೆಲವು ಕಾರ್ಯಗಳನ್ನು ಮಾಡಲು ಮತ್ತು ಮಾಡಲಾದ ಯಾವುದೇ ಲೋಪಕ್ಕಾಗಿ ದಂಡದ ನಿಬಂಧನೆಗಳನ್ನು ಸಹ ಒದಗಿಸುತ್ತದೆ.

ಅವಶ್ಯಕತೆ:

  1. ಕಳೆದ ಐವತ್ತು ವರ್ಷಗಳಲ್ಲಿ, ಭಾರತದಲ್ಲಿ ಅಣೆಕಟ್ಟುಗಳು ಮತ್ತು ಸಂಬಂಧಿತ ಮೂಲಸೌಕರ್ಯಗಳಲ್ಲಿ ಗಣನೀಯ ಹೂಡಿಕೆಯನ್ನು ಮಾಡಲಾಗಿದೆ ಮತ್ತು ಭಾರತವು ಪ್ರಸ್ತುತ ಯುನೈಟೆಡ್ ಸ್ಟೇಟ್ಸ್ ಮತ್ತು ಚೀನಾದ ನಂತರ ದೊಡ್ಡ ಅಣೆಕಟ್ಟುಗಳ ಸಂಖ್ಯೆಯಲ್ಲಿ ಮೂರನೇ ಸ್ಥಾನದಲ್ಲಿದೆ. ಪ್ರಸ್ತುತ, ದೇಶದಲ್ಲಿ 5254 ಪ್ರಮುಖ ಅಣೆಕಟ್ಟುಗಳು ಕಾರ್ಯನಿರ್ವಹಿಸುತ್ತಿವೆ ಮತ್ತು 447 ಇತರ ಪ್ರಮುಖ ಅಣೆಕಟ್ಟುಗಳು ನಿರ್ಮಾಣ ಹಂತದಲ್ಲಿವೆ.
  2. ಇದಲ್ಲದೆ, ದೇಶದಲ್ಲಿ ಸಾವಿರಾರು ಮಧ್ಯಮ ಮತ್ತು ಸಣ್ಣ ಅಣೆಕಟ್ಟುಗಳಿವೆ.
  3. ಭಾರತದಲ್ಲಿ ಕ್ಷಿಪ್ರ ಮತ್ತು ಸುಸ್ಥಿರ ಕೃಷಿ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ಅಣೆಕಟ್ಟುಗಳು ಪ್ರಮುಖ ಪಾತ್ರವನ್ನುವಹಿಸಿವೆಯಾದರೂ, ಅಣೆಕಟ್ಟು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಏಕರೂಪದ ಶಾಸನ ಮತ್ತು ಆಡಳಿತಾತ್ಮಕ ಚೌಕಟ್ಟಿನ ಅಗತ್ಯವು ಬಹಳ ಹಿಂದಿನಿಂದಲೂ ಇದೆ.
  4. ಕೇಂದ್ರ ಜಲ ಆಯೋಗವು ‘ರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮಿತಿ’ (NCDS), ಕೇಂದ್ರ ಅಣೆಕಟ್ಟು ಸುರಕ್ಷತಾ ಸಂಸ್ಥೆ (CDSO) ಮತ್ತು ರಾಜ್ಯ ಅಣೆಕಟ್ಟು ಸುರಕ್ಷತಾ ಸಂಸ್ಥೆ (SDSO)ಗಳ ಮೂಲಕ ಈ ನಿಟ್ಟಿನಲ್ಲಿ ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ, ಆದರೆ ಈ ಸಂಸ್ಥೆಗಳಿಗೆ ಯಾವುದೇ ಶಾಸನಬದ್ಧ ಅಧಿಕಾರವಿಲ್ಲ ಮತ್ತು ಕೇವಲ ಸಲಹಾತ್ಮಕ ಸ್ವರೂಪದಲ್ಲಿವೆ.
  5. ಭಾರತದಲ್ಲಿ, ಸುಮಾರು 75 ಪ್ರತಿಶತದಷ್ಟು ಪ್ರಮುಖ ಅಣೆಕಟ್ಟುಗಳು 25 ವರ್ಷಗಳಿಗಿಂತ ಹೆಚ್ಚು ಹಳೆಯವು ಮತ್ತು ಸುಮಾರು 164 ಅಣೆಕಟ್ಟುಗಳು 100 ವರ್ಷಗಳಿಗಿಂತ ಹಳೆಯವು, ಆದ್ದರಿಂದ ಇದು ಕಳವಳಕಾರಿ ವಿಷಯವಾಗಿದೆ.
  6. ಕಳಪೆ ನಿರ್ವಹಣೆ, ಅಸುರಕ್ಷಿತ ಅಣೆಕಟ್ಟುಗಳು ಮಾನವ ಜೀವನ, ಸಸ್ಯ ಮತ್ತು ಪ್ರಾಣಿ, ಸಾರ್ವಜನಿಕ ಮತ್ತು ಖಾಸಗಿ ಆಸ್ತಿ ಮತ್ತು ಪರಿಸರಕ್ಕೆ ಅಪಾಯವನ್ನುಂಟುಮಾಡುತ್ತವೆ.
  7. ಈ ಹಿಂದೆ ಭಾರತದ 42 ಆಣೆಕಟ್ಟುಗಳು ವೈಫಲ್ಯತೆಯನ್ನು ಅನುಭವಿಸಿವೆ.

 

ವಿಷಯಗಳು: ಸರ್ಕಾರದ ವಿವಿಧ ಅಂಗಗಳ ನಡುವೆ ಅಧಿಕಾರ ವಿಭಜನೆ ವಿವಾದ ಪರಿಹಾರ ಕಾರ್ಯವಿಧಾನಗಳು ಮತ್ತು ಸಂಸ್ಥೆಗಳು.

ಮುಲ್ಲಪೆರಿಯಾರ್ ಆಣೆಕಟ್ಟು ವಿವಾದ:


(Mullaperiyar Dam Issue)

ಸಂದರ್ಭ:

ಇತ್ತೀಚಿಗೆ ಸುಪ್ರೀಂಕೋರ್ಟ್ನಲ್ಲಿ, ತಮಿಳುನಾಡು ಸರ್ಕಾರಕ್ಕೆ ಹೊಸ ಅಣೆಕಟ್ಟು ನಿರ್ಮಿಸಲು ಹಾಗೆಯೇ ವೈಗೈ ಅಣೆಕಟ್ಟಿನ ಕೆಳಭಾಗದ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಲು ಅಥವಾ ಪರ್ಯಾಯ ಅಣೆಕಟ್ಟು ನಿರ್ಮಿಸುವವರೆಗೆ ಮುಲ್ಲಪೆರಿಯಾರ್ ಅಣೆಕಟ್ಟನ್ನು (Mullaperiyar Dam) ಬಲಪಡಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಕ್ತ ನಿರ್ದೇಶನವನ್ನು ನೀಡುವಂತೆ ಕೋರಿ ಅರ್ಜಿ ಸಲ್ಲಿಸಲಾಗಿದೆ.

ಅವಶ್ಯಕತೆ:

ಮುಲ್ಲಪೆರಿಯಾರ್ ಅಣೆಕಟ್ಟೆಯ ಕುಸಿತದ ಸಂದರ್ಭದಲ್ಲಿ ಜೀವಕ್ಕೆ ಅಪಾಯವನ್ನುಂಟುಮಾಡುವ ಲಕ್ಷಾಂತರ ಜನರ ಭಯವನ್ನು ಹೋಗಲಾಡಿಸಲು ಇದು ಅವಶ್ಯಕವಾಗಿದೆ ಎಂದು ಅರ್ಜಿದಾರರು ಹೇಳಿದ್ದಾರೆ ಮತ್ತು ಇಡುಕ್ಕಿ ಅಣೆಕಟ್ಟನ್ನು ಬಿಟ್ಟುಕೊಡುವುದರಿಂದ ಇಡುಕ್ಕಿ, ತ್ರಿಶೂರ್, ಎರ್ನಾಕುಲಂ, ಕೊಟ್ಟಾಯಂ ಮತ್ತು ಅಲಪ್ಪುಳ ಈ ಐದು ಜಿಲ್ಲೆಗಳ 35-40 ಲಕ್ಷ ನಾಗರಿಕರ ಜೀವಹಾನಿಗೆ ಕಾರಣವಾಗುವುದು ಖಚಿತವಾಗಿದೆ, ಇದು ಕೊಚ್ಚಿನ್ ನಗರದ ನಾಶಕ್ಕೂ ಕಾರಣವಾಗಬಹುದು.

Current Affairs

 

ಪ್ರಸ್ತುತ ವಿವಾದ:

 

ದಯವಿಟ್ಟು ಗಮನಿಸಿ, ಅಣೆಕಟ್ಟು ರಚನೆಯ ಸ್ಥಿರತೆಯ ಕುರಿತು ಕೇರಳ ಮತ್ತು ತಮಿಳುನಾಡು ಎರಡೂ ರಾಜ್ಯಗಳ ನಡುವೆ ವಿವಾದವಿದೆ. ಹೊಸ ಅಣೆಕಟ್ಟು ನಿರ್ಮಾಣಕ್ಕೆ ಕೇರಳ ಒತ್ತಾಯಿಸುತ್ತಿದ್ದು, ಹೊಸ ಅಣೆಕಟ್ಟು ಅಗತ್ಯವಿಲ್ಲ ಎಂದು ತಮಿಳುನಾಡು ಹೇಳುತ್ತಿದೆ. ಜತೆಗೆ, ಅಣೆಕಟ್ಟಿನ ಸ್ಥಿರತೆಯನ್ನು ಮುಂದಿಟ್ಟುಕೊಂಡು ನೀರಿನ ಮಟ್ಟ ಹೆಚ್ಚಿಸುವುದನ್ನು ವಿರೋಧಿಸಿ ಕೇರಳ ಪ್ರತಿಭಟನೆ ನಡೆಸುತ್ತಿದೆ.

ವರಿಷ್ಠ ನ್ಯಾಯಾಲಯವು ಹೇಳಿರುವುದೇನು?

ಕಳೆದ ತಿಂಗಳು ಕೇರಳದಲ್ಲಿ ನಿರಂತರವಾಗಿ ಸುರಿಯುತ್ತಿದ್ದ ಧಾರಾಕಾರ ಮಳೆಯನ್ನು ಗಮನದಲ್ಲಿಟ್ಟುಕೊಂಡು, ಮುಲ್ಲಪೆರಿಯಾರ್ ಅಣೆಕಟ್ಟಿನಲ್ಲಿ ಕಾಯ್ದುಕೊಳ್ಳಬಹುದಾದ  ಗರಿಷ್ಠ ನೀರಿನ ಮಟ್ಟದ ವಿಷಯದ ಬಗ್ಗೆ ತಕ್ಷಣದ ಮತ್ತು ದೃಢವಾದ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಸುಪ್ರೀಂ ಕೋರ್ಟ್ ‘ಮೇಲ್ವಿಚಾರಣಾ ಸಮಿತಿ’ (Supervisory Committee) ಗೆ ನಿರ್ದೇಶನ ನೀಡಿದೆ.

  1. 2014 ರಲ್ಲಿ, ಮುಲ್ಲಪೆರಿಯಾರ್ ಅಣೆಕಟ್ಟೆಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಮೇಲ್ವಿಚಾರಣೆ ಮಾಡಲು ಸುಪ್ರೀಂ ಕೋರ್ಟ್ ಶಾಶ್ವತ ‘ಮೇಲ್ವಿಚಾರಣಾ ಸಮಿತಿ’ಯನ್ನು ರಚಿಸಿತ್ತು. ಈ ಅಣೆಕಟ್ಟು ತಮಿಳುನಾಡು ಮತ್ತು ಕೇರಳ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ.

Current Affairs

ಜಲಾಶಯದಲ್ಲಿ ನೀರಿನ ಗರಿಷ್ಠ ಸಂಗ್ರಹ ಮಟ್ಟದ ಕುರಿತ ವಿವಾದ:

  1. ಅಣೆಕಟ್ಟಿನ ನೀರಿನ ಮಟ್ಟ 139 ಅಡಿಗಿಂತ ಮೇಲಕ್ಕೆ ಹೋಗಬಾರದು ಎಂದು ಕೇರಳ ಹೇಳುತ್ತದೆ. ಕಾರಣ 2018 ರಲ್ಲಿ ರಾಜ್ಯವು ಪ್ರವಾಹದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾಗ, 2018ರ ಆಗಸ್ಟ್ 24ರಂದು ನೀರಿನ ಗರಿಷ್ಠ ಸಂಗ್ರಹ ಮಟ್ಟ 139 ಅಡಿ ಗಿಂತ ಹೆಚ್ಚಿಗೆ ಇರಬಾರದು ಎಂದು ನ್ಯಾಯಾಲಯವು ಆದೇಶವನ್ನು ಸಹ ನೀಡಿತ್ತು. ಇದಕ್ಕೆ ಕಾರಣ, ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಮಟ್ಟವನ್ನು ಇದಕ್ಕಿಂತ ಹೆಚ್ಚು ಮಾಡಿದರೆ, ಅದು 5 ಮಿಲಿಯನ್ ಜನರ ಜೀವಕ್ಕೆ ಅಪಾಯವನ್ನುಂಟುಮಾಡುತ್ತದೆ ಎಂದು ಹೇಳಿತ್ತು.
  2. ಆದರೆ, ಸುಪ್ರೀಂ ಕೋರ್ಟ್ ನೀಡಿದ ಹಿಂದಿನ ತೀರ್ಪುಗಳನ್ನು ಉಲ್ಲೇಖಿಸುವ ಮೂಲಕ, ಕೇರಳದ ಈ ನಿರ್ಧಾರಕ್ಕೆ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸಿದೆ. 2006 ಮತ್ತು 2014ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಲ್ಲಿ ನೀರಿನ ಗರಿಷ್ಠ ಸಂಗ್ರಹ ಮಟ್ಟವನ್ನು 142 ಅಡಿಗಳಿಗೆ ನಿಗದಿಪಡಿಸಲಾಗಿತ್ತು.

‘ರೂಲ್ ಕರ್ವ್’ ಎಂದರೇನು?

ಅಣೆಕಟ್ಟೆಯ / ಜಲಾಶಯದಲ್ಲಿನ ನೀರಿನ ಏರಿಳಿತದ ಶೇಖರಣಾ ಮಟ್ಟವನ್ನು ನಿಯಮ ಕರ್ವ್ (rule curve) ನಿರ್ಧರಿಸುತ್ತದೆ. ಅಣೆಕಟ್ಟೆಯ ಗೇಟ್ ತೆರೆಯುವ ವೇಳಾಪಟ್ಟಿಯು ‘ರೂಲ್ ಕರ್ವ್’ ಅನ್ನು ಆಧರಿಸಿದೆ. ಇದು ಅಣೆಕಟ್ಟೆಯ ‘ಮುಖ್ಯ ರಕ್ಷಣೆ’ ಕಾರ್ಯವಿಧಾನದ ಭಾಗವಾಗಿದೆ.

ಮುಲ್ಲಪೆರಿಯಾರ್ ಆಣೆಕಟ್ಟೆಯ ಕುರಿತು ತಿಳಿದುಕೊಳ್ಳಬೇಕಾದ ಸಂಗತಿಗಳೇನು?

  1. ಮುಲ್ಲಾಪೇರಿಯಾರ್ ಅಣೆಕಟ್ಟು ಕೇರಳದಲ್ಲಿದ್ದರೂ, 1886 ರ ಗುತ್ತಿಗೆ ಒಪ್ಪಂದದ ನಂತರ ಪೆರಿಯಾರ್ ನೀರಾವರಿ ಕಾರ್ಯಗಳಿಗಾಗಿ 999 ವರ್ಷಗಳ ಗುತ್ತಿಗೆ ಅವಧಿಗೆ (lease indenture), ಇದನ್ನು ತಮಿಳುನಾಡು ನಿರ್ವಹಿಸುತ್ತದೆ. ಇದನ್ನು “ಪೆರಿಯಾರ್ ಸರೋವರ ಗುತ್ತಿಗೆ ಒಪ್ಪಂದ” ಎಂದೂ ಕರೆಯುತ್ತಾರೆ, ಇದು 1886 ರಲ್ಲಿ  ತಿರುವಾಂಕೂರಿನ ಮಹಾರಾಜ ಮತ್ತು ಭಾರತದ ರಾಜ್ಯ ಕಾರ್ಯದರ್ಶಿ ನಡುವೆ ಆದ ಒಪ್ಪಂದವಾಗಿದೆ.
  2. ಈ ಅಣೆಕಟ್ಟೆಯನ್ನು 1887 ಮತ್ತು 1895 ರ ನಡುವೆ ನಿರ್ಮಿಸಲಾಗಿದ್ದು ಅರೇಬಿಯನ್ ಸಮುದ್ರದ ಕಡೆಗೆ ಹರಿಯುವ ಹೊಳೆಯನ್ನು ಬಂಗಾಳಕೊಲ್ಲಿಯ ಕಡೆಗೆ ತಿರುಗಿಸಲಾಯಿತು. ಆ ಮೂಲಕ ಮದ್ರಾಸ್ ಪ್ರೆಸಿಡೆನ್ಸಿಯ ಮಧುರೈನ ಒಣ ಮಳೆ ಪ್ರದೇಶಕ್ಕೆ ಅಥವಾ ಮಳೆಯಾಶ್ರಿತ ಪ್ರದೇಶಕ್ಕೆ ನೀರಾವರಿ ಸೌಲಭ್ಯವನ್ನು ಒದಗಿಸುವ ಉದ್ದೇಶವನ್ನು ಹೊಂದಿತ್ತು.
  3. ಈ ಅಣೆಕಟ್ಟು ಕೇರಳದ ಇಡುಕ್ಕಿ ಜಿಲ್ಲೆಯ ಮುಲ್ಲಯಾರ್ ಮತ್ತು ಪೆರಿಯಾರ್ ನದಿಗಳ ಸಂಗಮ ಸ್ಥಳದಲ್ಲಿದೆ.

ತಮಿಳುನಾಡು ಹೇಳುವುದೇನು?

ಅಣೆಕಟ್ಟೆಯನ್ನು ಬಲಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಮಿಳುನಾಡು ಹೇಳುತ್ತದೆ, ಆದರೆ ಕೇರಳ ಸರ್ಕಾರವು ಜಲಾಶಯದ ನೀರಿನ ಮಟ್ಟವನ್ನು ಹೆಚ್ಚಿಸುವ ತನ್ನ ಪ್ರಯತ್ನಗಳಿಗೆ ನಿರ್ಬಂಧ ಉಂಟುಮಾಡುತ್ತಿದೆ ಆ ಮೂಲಕ, ಮಧುರೈನ ರೈತರಿಗೆ ನಷ್ಟ ಉಂಟಾಗುತ್ತಿದೆ ಎಂದು ಬಲವಾಗಿ ಹೇಳುತ್ತಿದೆ.

ಕೇರಳದ ವಾದವೇನು?

  1. ಅಣೆಕಟ್ಟೆಯ ಕೆಳಪಾತ್ರದಲ್ಲಿನ ಭೂಕಂಪ ಪೀಡಿತ ಜಿಲ್ಲೆಯಾದ ಇಡುಕ್ಕಿ ಜಿಲ್ಲೆಯ ನಿವಾಸಿಗಳ ವಿನಾಶದ ಅಥವಾ ಪ್ರಾಣಹಾನಿಯ ಸಾಧ್ಯತೆಯ ಬಗ್ಗೆ ಕೇರಳ ಚಿಂತಿಸುತ್ತಿದೆ.
  2. ಭೂಕಂಪನವು ಈ ಪ್ರದೇಶದಲ್ಲಿ ರಿಕ್ಟರ್ ಮಾಪಕದಲ್ಲಿ ಆರು ಅಳತೆಗಳನ್ನು ಮೀರಿದರೆ, ಮೂರು ದಶಲಕ್ಷಕ್ಕೂ ಹೆಚ್ಚು ಜನರ ಜೀವವು ಗಂಭೀರ ಅಪಾಯಕ್ಕೆ ಸಿಲುಕುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ವಾದಿಸುತ್ತಾರೆ.

Current Affairs

 

 

ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಗೆ ಸಂಬಂಧಿಸಿದ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ಗ್ರಾಹಕ ಸಂರಕ್ಷಣಾ ನಿಯಮಗಳು 2021:


(Consumer Protection Rules, 2021)

ಸಂದರ್ಭ:

ಗ್ರಾಹಕ ಸಂರಕ್ಷಣಾ ಕಾಯಿದೆ, 2019 (Consumer Protection Act, 2019)ರ ನಿಬಂಧನೆಗಳ ಅಡಿಯಲ್ಲಿ ತನ್ನ ಅಧಿಕಾರವನ್ನು ಚಲಾಯಿಸುವ ಮೂಲಕ, ಕೇಂದ್ರ ಸರ್ಕಾರವು ಗ್ರಾಹಕರ ಸಂರಕ್ಷಣಾ (ಜಿಲ್ಲಾ ಆಯೋಗ, ರಾಜ್ಯ ಆಯೋಗ ಮತ್ತು ರಾಷ್ಟ್ರೀಯ ಆಯೋಗದ ಅಧಿಕಾರ) ನಿಯಮಗಳು, 2021 ಅನ್ನು ಅಧಿಸೂಚಿಸಿದೆ.

  1. ಹೊಸ ನಿಯಮಗಳು ಗ್ರಾಹಕರ ದೂರುಗಳನ್ನು ಪರಿಹರಿಸಲು ವಿತ್ತೀಯ ನ್ಯಾಯವ್ಯಾಪ್ತಿಯನ್ನು ಪರಿಷ್ಕರಿಸಿವೆ.

ಹೊಸ ನಿಯಮಗಳ ಅವಲೋಕನ:

  1. ಆಹಾರ ಮತ್ತು ಸಾರ್ವಜನಿಕ ವಿತರಣೆ, ಜಿಲ್ಲಾ ಆಯೋಗಗಳು ಪಾವತಿಸಿದ ಸರಕು ಅಥವಾ ಸೇವೆಗಳ ಮೌಲ್ಯವು ₹ 50 ಲಕ್ಷಕ್ಕಿಂತ ಹೆಚ್ಚಿಲ್ಲದ ದೂರುಗಳನ್ನು ಪರಿಗಣಿಸುವ ಅಧಿಕಾರವನ್ನು ಹೊಂದಿರುತ್ತದೆ.
  2. ರಾಜ್ಯ ಆಯೋಗಗಳು ₹50 ಲಕ್ಷದಿಂದ ₹2 ಕೋಟಿವರೆಗಿನ ದೂರುಗಳನ್ನು ಪರಿಶೀಲಿಸಬಹುದು.
  3. ಪರಿಗಣನೆಗೆ ಪಾವತಿಸಿದ ಸರಕು ಅಥವಾ ಸೇವೆಗಳ ಮೌಲ್ಯವು 50 ಲಕ್ಷ ರೂಪಾಯಿಗಳನ್ನು ಮೀರದಿರುವಲ್ಲಿ ದೂರುಗಳನ್ನು ಪರಿಗಣಿಸಲು ಜಿಲ್ಲಾ ಆಯೋಗಗಳಿಗೆ ಅಧಿಕಾರವಿರುತ್ತದೆ.
  4. ಪರಿಗಣನೆಗೆ ಪಾವತಿಸಿದ ಸರಕು ಅಥವಾ ಸೇವೆಗಳ ಮೌಲ್ಯವು 50 ಲಕ್ಷ ರೂ.ಗಿಂತ ಹೆಚ್ಚಿರುವ ಆದರೆ ಎರಡು ಕೋಟಿ ರೂ.ಗಳನ್ನು ಮೀರದಿರುವ ದೂರುಗಳನ್ನು ಪರಿಗಣಿಸಲು ರಾಜ್ಯ ಆಯೋಗಗಳಿಗೆ ಅಧಿಕಾರವಿದೆ ಎಂದು ಅದು ಅಧಿಸೂಚನೆಯಲ್ಲಿ ತಿಳಿಸಿದೆ.
  5. ಪರಿಗಣನೆಯ ಮೂಲಕ ಪಾವತಿಸಿದ ಸರಕು ಅಥವಾ ಸೇವೆಗಳ ಮೌಲ್ಯವು ಎರಡು ಕೋಟಿ ರೂಪಾಯಿಗಳನ್ನು ಮೀರಿದರೆ ದೂರುಗಳನ್ನು ಪರಿಗಣಿಸಲು ರಾಷ್ಟ್ರೀಯ ಆಯೋಗವು ಅಧಿಕಾರವನ್ನು ಹೊಂದಿರುತ್ತದೆ.

ಗ್ರಾಹಕರ ಹಕ್ಕುಗಳ ರಕ್ಷಣೆಗಾಗಿ ಕಾರ್ಯವಿಧಾನ:

ಪ್ರಸ್ತುತ, ಗ್ರಾಹಕ ಸಂರಕ್ಷಣಾ ಕಾಯಿದೆ, 2019 ಗ್ರಾಹಕ ವಿವಾದಗಳ ಪರಿಹಾರಕ್ಕಾಗಿ ಮೂರು-ಹಂತದ ಅರೆ-ನ್ಯಾಯಾಂಗ ಕಾರ್ಯವಿಧಾನವನ್ನು ಒಳಗೊಂಡಿದೆ, ಅಂದರೆ, ಜಿಲ್ಲಾ ಆಯೋಗ, ರಾಜ್ಯ ಆಯೋಗ ಮತ್ತು ರಾಷ್ಟ್ರೀಯ ಆಯೋಗ.

  1. ಈ ಕಾಯಿದೆಯು ಗ್ರಾಹಕ ಆಯೋಗದ ಪ್ರತಿ ಹಂತದ ಆರ್ಥಿಕ ನ್ಯಾಯವ್ಯಾಪ್ತಿಯನ್ನು ಕೂಡ ನೀಡುತ್ತದೆ.
  2. ಗ್ರಾಹಕ ಸಂರಕ್ಷಣಾ ಕಾಯಿದೆ, 2019 ಗ್ರಾಹಕರು ವಿದ್ಯುನ್ಮಾನ ಮಾಧ್ಯಮದ ಮೂಲಕ ದೂರುಗಳನ್ನು ಸಲ್ಲಿಸಲು ಒಂದು ಆಯ್ಕೆಯನ್ನು ಒದಗಿಸುತ್ತದೆ. ಗ್ರಾಹಕರು ತಮ್ಮ ದೂರುಗಳನ್ನು ಆನ್‌ಲೈನ್‌ನಲ್ಲಿ ನೋಂದಾಯಿಸಲು ಅನುಕೂಲವಾಗುವಂತೆ, ಕೇಂದ್ರ ಸರ್ಕಾರವು ಇ-ದಾಖಿಲ್ ಪೋರ್ಟಲ್ ಅನ್ನು ಸ್ಥಾಪಿಸಿದೆ.
  3. ಗ್ರಾಹಕರ ವಿವಾದಗಳನ್ನು ಇತ್ಯರ್ಥಪಡಿಸಲು ತ್ವರಿತ ಮತ್ತು ಸೌಹಾರ್ದಯುತ ಮಾರ್ಗವನ್ನು ಒದಗಿಸುವ ಸಲುವಾಗಿ, ಎರಡೂ ಪಕ್ಷಗಳ ಒಪ್ಪಿಗೆಯೊಂದಿಗೆ ಗ್ರಾಹಕ ವಿವಾದಗಳ ಮಧ್ಯಸ್ಥಿಕೆಯನ್ನು ಸಹ ಕಾಯಿದೆಯು ಒಳಗೊಂಡಿದೆ.

ದೂರುಗಳ ವಿಲೇವಾರಿಗೆ ಸಮಯಮಿತಿ:

ಗ್ರಾಹಕ ಸಂರಕ್ಷಣಾ ಕಾಯಿದೆ, 2019 ರ ಪ್ರಕಾರ, “ಪ್ರತಿ ದೂರನ್ನು ಸಾಧ್ಯವಾದಷ್ಟು ತ್ವರಿತವಾಗಿ ವಿಲೇವಾರಿ ಮಾಡಬೇಕು ಮತ್ತು ವಿರುದ್ಧ ಪಕ್ಷದಿಂದ ನೋಟಿಸ್ ಸ್ವೀಕರಿಸಿದ ದಿನಾಂಕದಿಂದ ಮೂರು ತಿಂಗಳ ಅವಧಿಯೊಳಗೆ ದೂರಿನ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳಲು ಪ್ರಯತ್ನಿಸಲಾಗುತ್ತದೆ.” ಪರೀಕ್ಷೆಯ ಅಗತ್ಯವಿದ್ದರೆ 5 ತಿಂಗಳೊಳಗೆ ಸರಕುಗಳ ವಿಶ್ಲೇಷಣೆ ಅಥವಾ ಪರೀಕ್ಷೆ ಮಾಡಲಾಗುತ್ತದೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು: ಭಾರತೀಯ ಆರ್ಥಿಕತೆ ಮತ್ತು ಯೋಜನೆ, ಸಂಪನ್ಮೂಲಗಳ ಕ್ರೋಡೀಕರಣ , ಪ್ರಗತಿ, ಅಭಿವೃದ್ಧಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಸಮಸ್ಯೆಗಳು.

ಈಗ ಶೆಡ್ಯೂಲ್ಡ್ ಬ್ಯಾಂಕ್ ಆದ ಏರ್‌ಟೆಲ್ ಪಾವತಿ ಬ್ಯಾಂಕ್:


(Airtel payments bank is now a scheduled bank)

ಸಂದರ್ಭ:

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ ಅನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆಕ್ಟ್, 1934 ರ ಎರಡನೇ ಶೆಡ್ಯೂಲ್‌ನಲ್ಲಿ ಸೇರಿಸುವುದಾಗಿ ಘೋಷಿಸಿದೆ.

ಪರಿಣಾಮಗಳು:

ಇದರೊಂದಿಗೆ, ಬ್ಯಾಂಕ್ ಈಗ ಸರ್ಕಾರದಿಂದ ನೀಡಲಾದ ಪ್ರಸ್ತಾವನೆಗಳಿಗೆ ವಿನಂತಿ (Requests for Proposals -RFP) ಮತ್ತು ಪ್ರಾಥಮಿಕ ಹರಾಜಿಗಾಗಿ ಪಿಚ್ ಮಾಡಬಹುದು ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರದ ವ್ಯವಹಾರವನ್ನು ಕೈಗೊಳ್ಳಬಹುದು.

ಶೆಡ್ಯೂಲ್ ಬ್ಯಾಂಕ್ ಎಂದರೇನು?

ಭಾರತದಲ್ಲಿನ ಶೆಡ್ಯೂಲ್ಡ್ ಬ್ಯಾಂಕ್‌ಗಳು ಭಾರತೀಯ ರಿಸರ್ವ್ ಬ್ಯಾಂಕ್ ಆಕ್ಟ್, 1934 ರ ಎರಡನೇ ಶೆಡ್ಯೂಲ್‌ನಲ್ಲಿ ಸೇರಿಸಲಾದ ಬ್ಯಾಂಕ್‌ಗಳನ್ನು ಉಲ್ಲೇಖಿಸುತ್ತವೆ.

ಪ್ರತಿ ನಿಗದಿತ ಬ್ಯಾಂಕ್ ಎರಡು ರೀತಿಯ ಮೂಲಭೂತ ಸೌಲಭ್ಯಗಳನ್ನು ಹೊಂದಿದೆ: ಇದು ಬ್ಯಾಂಕ್ ದರದಲ್ಲಿ RBI ನಿಂದ ಸಾಲ ಪಡೆಯಲು ಅರ್ಹವಾಗುತ್ತದೆ; ಮತ್ತು, ಇದು ಸ್ವಯಂಚಾಲಿತವಾಗಿ ಕ್ಲಿಯರಿಂಗ್ ಹೌಸ್ ಸದಸ್ಯತ್ವವನ್ನು ಪಡೆದುಕೊಳ್ಳುತ್ತದೆ.

ಏರ್ಟೆಲ್ ಪಾವತಿ ಬ್ಯಾಂಕ್ ಕುರಿತು:

  1. ಇದು 115 ಮಿಲಿಯನ್ ಬಳಕೆದಾರರನ್ನು ಹೊಂದಿರುವ ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಬ್ಯಾಂಕ್‌ಗಳಲ್ಲಿ ಒಂದಾಗಿದೆ.
  2. ಇದು ಏರ್‌ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಮೂಲಕ ಡಿಜಿಟಲ್ ಪರಿಹಾರಗಳ ಸೂಟ್ ಅನ್ನು ನೀಡುತ್ತದೆ ಮತ್ತು 500,000 ನೆರೆಹೊರೆಯ ಬ್ಯಾಂಕಿಂಗ್ ಪಾಯಿಂಟ್‌ಗಳ ಚಿಲ್ಲರೆ ನೆಟ್‌ವರ್ಕ್ ಅನ್ನು ನೀಡುತ್ತದೆ.
  3. ಸೆಪ್ಟೆಂಬರ್ 2021ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಬ್ಯಾಂಕ್ ಲಾಭದಾಯಕವಾಗಿ ಮುಂದುವರೆದಿದೆ.

 

ಪಾವತಿ ಬ್ಯಾಂಕುಗಳ (Payments Banks) ಕುರಿತು:

ಪಾವತಿ ಬ್ಯಾಂಕ್‌ಗಳನ್ನು, ವಲಸಿಗ ಕಾರ್ಮಿಕರು, ಕಡಿಮೆ ಆದಾಯದ ಕುಟುಂಬಗಳು, ಸಣ್ಣ ಉದ್ಯಮಗಳು, ಇತರ ಅಸಂಘಟಿತ ವಲಯದ ಘಟಕಗಳು ಮತ್ತು ಇತರ ಬಳಕೆದಾರರಿಗೆ ಸಣ್ಣ ಉಳಿತಾಯ ಖಾತೆಗಳು ಮತ್ತು ಪಾವತಿ/ರವಾನೆ ಸೇವೆಗಳನ್ನು ಒದಗಿಸುವ ಮೂಲಕ ಹಣಕಾಸಿನ ಸೇರ್ಪಡೆಯನ್ನು ಉತ್ತೇಜಿಸಲು ಸ್ಥಾಪಿಸಲಾಗಿದೆ.

  1. ಪಾವತಿ ಬ್ಯಾಂಕ್‌ಗಳು ನಿರ್ದಿಷ್ಟ ಮಿತಿಯವರೆಗೆ ಠೇವಣಿಗಳನ್ನು ಸ್ವೀಕರಿಸಬಹುದು. ಪ್ರಸ್ತುತ, ಠೇವಣಿಗಳನ್ನು ಸ್ವೀಕರಿಸಲು ಗರಿಷ್ಠ ಮಿತಿಯು ಪ್ರತಿ ವ್ಯಕ್ತಿಗೆ ರೂ 200,000 ಆಗಿದೆ, ಆದರೆ ಭವಿಷ್ಯದಲ್ಲಿ ಇದನ್ನು ಹೆಚ್ಚಿಸಬಹುದು.
  2. ಈ ಬ್ಯಾಂಕ್‌ಗಳು ಸಾಲ ಅಥವಾ ಕ್ರೆಡಿಟ್ ಕಾರ್ಡ್‌ಗಳನ್ನು ನೀಡಲು ಸಾಧ್ಯವಿಲ್ಲ. ಆದಾಗ್ಯೂ, ಅಂತಹ ಬ್ಯಾಂಕುಗಳು ‘ಚಾಲ್ತಿ’ ಮತ್ತು ‘ಉಳಿತಾಯ’ ಖಾತೆಗಳನ್ನು ನಿರ್ವಹಿಸಬಹುದು.
  3. ಪಾವತಿ ಬ್ಯಾಂಕ್‌ಗಳು ATM ಮತ್ತು ಡೆಬಿಟ್ ಕಾರ್ಡ್‌ಗಳು ಹಾಗೂ ಆನ್‌ಲೈನ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೌಲಭ್ಯಗಳನ್ನು ನೀಡಬಹುದು.

ದಯವಿಟ್ಟು ಗಮನಿಸಿ:

ಪೇಮೆಂಟ್ಸ್‌ ಬ್ಯಾಂಕ್‌:

ನಮ್ಮಲ್ಲಿ ಬ್ಯಾಂಕುಗಳಿಗೇನೂ ಕೊರತೆಯಿಲ್ಲ. ಆದರೂ ದೇಶದ ಎಲ್ಲ ಸ್ತರದ ಜನರಿಗೂ ಬ್ಯಾಂಕಿಂಗ್ ಸೌಲಭ್ಯ ಇನ್ನೂ ಕೈಗೆಟುಕಿಲ್ಲ. ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಬ್ಯಾಂಕುಗಳು ಮಹತ್ವದ ಪಾತ್ರ ನಿರ್ವಹಿಸುತ್ತವೆ.

ಬ್ಯಾಂಕುಗಳ ರಾಷ್ಟ್ರೀಕರಣ,  ಗ್ರಾಮೀಣ ಬ್ಯಾಂಕುಗಳ ಸ್ಥಾಪನೆ,  ಹೊಸ ಪೀಳಿಗೆಯ ಖಾಸಗಿ ಬ್ಯಾಂಕುಗಳ ಸ್ಥಾಪನೆಗೆ ಮನ್ನಣೆ, ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಉತ್ತೇಜನ, ಸಹಕಾರಿ ಬ್ಯಾಂಕುಗಳ ಕಾರ್ಯಕ್ಷಮತೆಯ ಹೆಚ್ಚಳಕ್ಕೆ ನೆರವು, ‘ಗರೀಬಿ ಹಟಾವೊ’ ಘೋಷಣೆಯೊಂದಿಗೆ ಆರ್ಥಿಕವಾಗಿ ಹಿಂದುಳಿದವರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಯೋಜನೆಯ ಅನುಷ್ಠಾನ, ಜನರಲ್ಲಿ ಬ್ಯಾಂಕಿಂಗ್ ಮತ್ತು ಹಣಕಾಸು ವ್ಯವಹಾರದ ಬಗ್ಗೆ ಅರಿವು ಮೂಡಿಸಲು ‘ಹಣಕಾಸು ಸಾಕ್ಷರತೆ’ ಗೆ ಚಾಲನೆ, ‘ಜನಧನ ಖಾತೆ’ ತೆರೆಯುವ ಆಂದೋಲನ, ನೇರ ನಗದು ಜಮಾ ಮತ್ತಿತರ ಬೆಳವಣಿಗೆಗಳು ಈ ಕ್ಷೇತ್ರದಲ್ಲಿ ನಡೆದಿವೆ.

ಸುಧಾರಣೆಯ ಪ್ರತಿಯೊಂದು ಹಂತದಲ್ಲಿಯೂ  ಬ್ಯಾಂಕಿಂಗ್ ಉದ್ಯಮವು ಅನೇಕರಿಗೆ ಉಳಿತಾಯ, ಹೂಡಿಕೆ ಮತ್ತು ಆರ್ಥಿಕ ನೆಮ್ಮದಿ ನೀಡಲು ನೆರವಾಗಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸುಧಾರಣೆ ಎಂದರೆ ನಿಂತ ನೀರಲ್ಲ, ಅದೊಂದು ಹರಿಯುವ ನದಿ ಇದ್ದಂತೆ.

ಬೃಹತ್‌ ಪ್ರಮಾಣದಲ್ಲಿ ವಹಿವಾಟು ವಿಸ್ತರಿಸಿರುವ ದೊಡ್ಡ ಬ್ಯಾಂಕುಗಳಿಗೆ ಸಣ್ಣ ಸಣ್ಣ ಠೇವಣಿದಾರರೆಂದರೆ ಅಷ್ಟಕ್ಕಷ್ಟೆ ಎಂಬಂತಾಗಿದೆ. ಈ ಸಮಸ್ಯೆಯನ್ನು ನೀಗಿಸಲು ಇದೀಗ ಬಂದಿವೆ ‘ಪಾವತಿ ಬ್ಯಾಂಕುಗಳು’ ಅಂದರೆ ‘ಪೇಮೆಂಟ್ ಬ್ಯಾಂಕ್ಸ್’. ಇದುವರೆಗೂ ಬರೀ ಕಾಗದ ಹೊತ್ತು ಮನೆ ಬಾಗಿಲಿಗೆ ಬರುತ್ತಿದ್ದ ‘ಅಂಚೆಯ ಅಣ್ಣ’ ಇನ್ನು ಮೇಲೆ ನಿಮ್ಮ ಮನೆಯಲ್ಲೇ ಬ್ಯಾಂಕ್ ಖಾತೆ ತೆರೆಯುತ್ತಾನೆ, ಖಾತೆಗೆ ಹಣ ಜಮಾ ಮಾಡುತ್ತಾನೆ, ನೀವು ಹಿಂದೆ ಪಡೆಯುವ ನಗದು ಹಣ ನೀಡುತ್ತಾನೆ. ನೀವು ಬ್ಯಾಂಕ್ ಶಾಖೆ ಹಾಗಿರಲಿ, ಎಟಿಎಂವರೆಗೂ ಹೋಗಿ ಹಣವಿಲ್ಲ ಎಂದು ಪೆಚ್ಚು ಮೋರೆ ಹಾಕಿಕೊಂಡು ಹಿಂತಿರುಗಬೇಕಿಲ್ಲ.

ಏನಿದು ‘ಪಾವತಿ ಬ್ಯಾಂಕು’?

‘ಪಾವತಿ ಬ್ಯಾಂಕುಗಳ ಪರಿಕಲ್ಪನೆ’ಯ ಗರಿಮೂಡಿದ್ದು ತೀರಾ ಇತ್ತೀಚೆಗೆ. ಭಾರತೀಯ ರಿಸರ್ವ್ ಬ್ಯಾಂಕು, ಸಣ್ಣ ವ್ಯಾಪಾರಿಗಳು ಮತ್ತು ಕಡಿಮೆ ಆದಾಯದ ಕುಟುಂಬಗಳಿಗೆ ಸಮಗ್ರ ಹಣಕಾಸು ಸೇವಾ ಸೌಲಭ್ಯ ಒದಗಿಸುವ ಬಗ್ಗೆ ಅಧ್ಯಯನ ನಡೆಸಲು ನೇಮಿಸಿದ ನಚಿಕೇತ್ ಕೌರ್ ಸಮಿತಿಯು ಮಾಡಿದ ಶಿಫಾರಸುಗಳ ಫಲಶೃತಿಯೇ ಇವುಗಳ ಸ್ಥಾಪನೆಗೆ ಬುನಾದಿಯಾಗಿದೆ. ವಲಸೆ ಕಾರ್ಮಿಕರು, ಕಡಿಮೆ ಆದಾಯದ ಕುಟುಂಬಗಳು, ಸಣ್ಣ ವ್ಯಾಪಾರಸ್ಥರು, ಇತರ ಅಸಂಘಟಿತ ವಲಯದವರು ಮುಂತಾದವರಿಗೆ ಸಣ್ಣ ಉಳಿತಾಯ ಖಾತೆ ಹಾಗೂ ಪಾವತಿ ಮತ್ತು ಹಣ ವರ್ಗಾವಣೆ ಸೌಲಭ್ಯವನ್ನು ಒದಗಿಸುವುದೇ ಪಾವತಿ ಬ್ಯಾಂಕುಗಳ ಪ್ರಮುಖ ಧ್ಯೇಯ. ಇದು ಕೇಂದ್ರ ಸರ್ಕಾರದ ಜನಪ್ರಿಯ ‘ಆರ್ಥಿಕ ಸೇರ್ಪಡೆ’ ಕಾರ್ಯಕ್ರಮದ ಒಂದು ಭಾಗವಾಗಿದೆ.

ಇವುಗಳ ವಿಶೇಷತೆ ಏನೆಂದರೆ ಅವು ಠೇವಣಿಗಳನ್ನು ಸ್ವೀಕರಿಸುತ್ತವೆಯೇ ಹೊರತು ಸಾಲವನ್ನು ನೀಡುವುದಿಲ್ಲ. ಆರ್‌ಬಿಐ ಮಾರ್ಗಸೂಚಿಯ ಅನ್ವಯ ಪಾವತಿ ಬ್ಯಾಂಕುಗಳು ಪ್ರಾರಂಭಿಕ ಹಂತದಲ್ಲಿ ತನ್ನ ಪ್ರತಿ ಗ್ರಾಹಕರಿಂದ ಗರಿಷ್ಠ ₹1 ಲಕ್ಷದವರೆಗೆ ಮಾತ್ರ ಠೇವಣಿ ಸ್ವೀಕರಿಸಲು(ಪ್ರಸ್ತುತ ಎರಡು ಲಕ್ಷದವರೆಗೆ) ಅವಕಾಶವಿದೆ. ಎಟಿಎಂ, ಪಾಯಿಂಟ್ ಆಫ್ ಸೇಲ್ ಯಂತ್ರ, ಮೊಬೈಲ್ ಬ್ಯಾಂಕಿಂಗ್ ಮೂಲಕ ಪಾವತಿ ಮತ್ತು ಹಣ ವರ್ಗಾವಣೆ ಸೇವೆ ಒದಗಿಸುವಿಕೆ, ನಷ್ಟ ಸಂಭಾವ್ಯತೆಯಲ್ಲಿ ಭಾಗಿಯಾಗಲು ಎಡೆಮಾಡಿಕೊಡದಂತಹ ಸರಳ ಹಣಕಾಸು ಉತ್ಪನ್ನಗಳಾದ ಮ್ಯೂಚುವಲ್ ಫಂಡ್‍ ಮತ್ತು ವಿಮಾ ಉತ್ಪನ್ನಗಳ ವಿತರಣೆ ಹಾಗೂ ಬೇರೊಂದು ಬ್ಯಾಂಕಿನ ವ್ಯವಹಾರ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುವಿಕೆ – ಇವು ಪಾವತಿ ಬ್ಯಾಂಕುಗಳ ಕಾರ್ಯವ್ಯಾಪ್ತಿಗೆ ಒಳಪಡುತ್ತವೆ.

ಇವುಗಳು ಗ್ರಾಹಕರಿಗೆ ಎಟಿಎಂ ಕಾರ್ಡು ಅಥವಾ ಡೆಬಿಟ್ ಕಾರ್ಡುಗಳನ್ನು ನೀಡಬಹುದೇ ಹೊರತು ಕ್ರೆಡಿಟ್ ಕಾರ್ಡುಗಳನ್ನು ನೀಡುವಂತಿಲ್ಲ. ಏಕೆಂದರೆ ಸಾಲ ನೀಡುವುದು ಇವುಗಳ ಕಕ್ಷೆಗೇ ಬರುವುದಿಲ್ಲ.

ಇವುಗಳು ಕೆಲವು ಇತಿಮಿತಿಗಳಿಗೆ ಒಳಪಟ್ಟಿದ್ದರೂ, ಇತರ ಬ್ಯಾಂಕುಗಳಂತೆ ಶಾಖಾ ಜಾಲದ ವಿಸ್ತರಣೆ, ಎಟಿಎಂಗಳ ಸ್ಥಾಪನೆ, ವ್ಯವಹಾರ ಪ್ರತಿನಿಧಿಗಳ ನೇಮಕಾತಿ, ಅಂತರ್ಜಾಲ ಬ್ಯಾಂಕಿಂಗ್ ವ್ಯವಸ್ಥೆ, ಬಿಲ್ ಪಾವತಿ ಸೇವೆ ಮತ್ತು ಮೊಬೈಲ್ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸಲು ಯಾವುದೇ ಅಭ್ಯಂತರವಿರುವುದಿಲ್ಲ. ಇಂತಹ ಬಹುತೇಕ ಬ್ಯಾಂಕುಗಳು ಭೌತಿಕ ಶಾಖೆಗಳನ್ನು ತೆರೆಯುವುದಕ್ಕಿಂತ ಡಿಜಿಟಲ್ ಬ್ಯಾಂಕಿಂಗ್‌ಗೆ ಹೆಚ್ಚು ಒತ್ತು ಕೊಟ್ಟು, ಚಿಲ್ಲರೆ ವ್ಯಾಪಾರ ಮಳಿಗೆಗಳು, ಪೆಟ್ರೋಲ್ ಬಂಕುಗಳು ಮುಂತಾದ ವ್ಯವಹಾರ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತವೆ. ಗ್ರಾಹಕರು ಬಯಸಿದರೆ ಕೇವಲ ಒಂದು ಫೋನ್ ಮಾಡಿದರೆ ಸಾಕು, ಬ್ಯಾಂಕಿನ ಪ್ರತಿನಿಧಿಗಳು ಮನೆ ಬಾಗಿಲಿಗೇ ಬಂದು ಸೇವೆ ನೀಡುತ್ತಾರೆ. ಇವುಗಳ ಗ್ರಾಹಕರಿಗೆ ವ್ಯವಹಾರದ ವೇಳೆ, ರಜಾ ದಿನ ಮುಂತಾದ ಸಮಸ್ಯೆಗಳಿರುವುದಿಲ್ಲ.

 

ವಿಷಯಗಳುವಿವಿಧ ಭದ್ರತಾ ಪಡೆಗಳು ಮತ್ತು ಏಜೆನ್ಸಿಗಳು ಮತ್ತು ಅವುಗಳ ಆದೇಶಗಳು.

ಮಲ್ಟಿ ಏಜೆನ್ಸಿ ಸೆಂಟರ್:


(Multi Agency Centre (MAC)

ಸಂದರ್ಭ:

ಇತ್ತೀಚೆಗೆ, ಕೇಂದ್ರ ಸರ್ಕಾರವು ಮಲ್ಟಿ ಏಜೆನ್ಸಿ ಸೆಂಟರ್ (MAC) ಮೂಲಕ ಹೆಚ್ಚಿನ ಗುಪ್ತಚರ ಇನ್‌ಪುಟ್‌ಗಳನ್ನು ಹಂಚಿಕೊಳ್ಳುವಂತೆ ರಾಜ್ಯಗಳನ್ನು ಕೇಳಿದೆ.

ಅವಶ್ಯಕತೆ:

  1. ಮಲ್ಟಿ ಏಜೆನ್ಸಿ ಸೆಂಟರ್ ವೇದಿಕೆಯಲ್ಲಿ ಮಾಹಿತಿಯನ್ನು ಹಂಚಿಕೊಳ್ಳಲು ರಾಜ್ಯಗಳು ಸಾಮಾನ್ಯವಾಗಿ ಹಿಂಜರಿಯುತ್ತವೆ.
  2. ಸರಿಯಾದ ಸಮಯದಲ್ಲಿ ನಿರ್ಣಾಯಕ ಮಾಹಿತಿಯನ್ನು ಹಂಚಿಕೊಳ್ಳುವಲ್ಲಿ ಹಲವಾರು ನ್ಯೂನತೆಗಳಿವೆ.
  3. ವ್ಯವಸ್ಥೆಯನ್ನು ಜಿಲ್ಲಾ ಮಟ್ಟಕ್ಕೆ ಜೋಡಿಸಲು ಒಂದು ದಶಕಕ್ಕೂ ಹೆಚ್ಚು ಸಮಯದಿಂದ ಯೋಜನೆಗಳು ಚಾಲನೆಯಲ್ಲಿವೆ.

ಮಲ್ಟಿ ಏಜೆನ್ಸಿ ಸೆಂಟರ್ (MAC) ಕುರಿತು:

  1. ಇದು ಇಂಟೆಲಿಜೆನ್ಸ್ ಬ್ಯೂರೋ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಒಂದು ಸಾಮಾನ್ಯ ಭಯೋತ್ಪಾದನಾ ಗ್ರಿಡ್ ಆಗಿದ್ದು, ಕಾರ್ಗಿಲ್ ಯುದ್ಧದ ನಂತರ 2001 ರಲ್ಲಿ ಕಾರ್ಯಾರಂಭ ಮಾಡಿದೆ.
  2. ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (R&AW), ಸಶಸ್ತ್ರ ಪಡೆಗಳು ಮತ್ತು ರಾಜ್ಯ ಪೊಲೀಸ್ ಸೇರಿದಂತೆ 28 ಸಂಸ್ಥೆಗಳು ಮಲ್ಟಿ ಏಜೆನ್ಸಿ ಸೆಂಟರ್ ನ ಭಾಗವಾಗಿವೆ.
  3. ವಿವಿಧ ಭದ್ರತಾ ಏಜೆನ್ಸಿಗಳು MAC ಯಲ್ಲಿ ನೈಜ-ಸಮಯದ ಗುಪ್ತಚರ ಮಾಹಿತಿಗಳನ್ನು ಹಂಚಿಕೊಳ್ಳುತ್ತವೆ.
  4. ಮಲ್ಟಿ ಏಜೆನ್ಸಿ ಸೆಂಟರ್ ಈಗ ಗುಪ್ತಚರ ಮಾಹಿತಿಗಳನ್ನು ಹಂಚಿಕೊಳ್ಳಲು ನೋಡಲ್ ಸಂಸ್ಥೆಯಾಗಿ 24/7 ಕಾರ್ಯನಿರ್ವಹಿಸುತ್ತಿದೆ, MAC ಯು ಹಲವಾರು ಏಜೆನ್ಸಿಗಳು, ವಿವಿಧ ಸಚಿವಾಲಯಗಳು, ಕೇಂದ್ರ ಮತ್ತು ರಾಜ್ಯಗಳ ಪ್ರತಿನಿಧಿಗಳೊಂದಿಗೆ ಸಮನ್ವಯ ಸಾಧಿಸುತ್ತದೆ.

ರಾಷ್ಟ್ರೀಯ ಗುಪ್ತಚರ ಜಾಲ / ನ್ಯಾಷನಲ್ ಇಂಟೆಲಿಜೆನ್ಸ್ ಗ್ರಿಡ್ (NATGRID) ಎಂದರೇನು?

NATGRID ಅನ್ನು 2009 ರಲ್ಲಿ ಕಲ್ಪಿಸಲಾಯಿತು.ಇದು ಭದ್ರತೆ ಮತ್ತು ಗುಪ್ತಚರ ಏಜೆನ್ಸಿಗಳಿಗೆ ವಲಸೆ ಸಂಬಂಧಿತ ನಮೂದುಗಳನ್ನು ಪ್ರವೇಶಿಸಲು ಒಂದು ‘ಸುರಕ್ಷಿತ ವೇದಿಕೆ’ ಯನ್ನು ಒದಗಿಸುವ ಗುರಿಯನ್ನು ಹೊಂದಿದೆ, ಅಂದರೆ ವಲಸಿಗರ ಆಗಮನ ಮತ್ತು ನಿರ್ಗಮನಕ್ಕೆ ಸಂಬಂಧಿಸಿದ ಮಾಹಿತಿ,ಶಂಕಿತ ವ್ಯಕ್ತಿಯ ದೂರವಾಣಿ ವಿವರಗಳು ಮತ್ತು ಬ್ಯಾಂಕಿಂಗ್ ಮಾಹಿತಿಯನ್ನು ಪಡೆಯಲು ‘ಒನ್-ಸ್ಟಾಪ್ ಸೆಂಟರ್’ ಅನ್ನು ರಚಿಸಲಾಗುವುದು.

  1. 2010 ರಲ್ಲಿ, ರೂ. 3,400 ಕೋಟಿ ರೂಪಾಯಿಗಳ ನ್ಯಾಟ್‌ಗ್ರಿಡ್ ಯೋಜನೆಗೆ ಭದ್ರತಾ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು (CCS) ಅನುಮೋದನೆ ನೀಡಿತ್ತು.

NATGRID ಡೇಟಾವನ್ನು ಬಳಸುವ ಹಕ್ಕು:

ಇಂಟೆಲಿಜೆನ್ಸ್ ಬ್ಯೂರೋ (IB) ಮತ್ತು ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (R&W) ಸೇರಿದಂತೆ ಕನಿಷ್ಠ 10 ಕೇಂದ್ರ ಏಜೆನ್ಸಿಗಳಿಗೆ ಸುರಕ್ಷಿತ ವೇದಿಕೆಯಲ್ಲಿ ಡೇಟಾವನ್ನು ಪ್ರವೇಶಿಸಲು ಇದು ಒಂದು ಮಾಧ್ಯಮವಾಗಿದೆ. NATGRID ಟೆಲಿಕಾಂ, ತೆರಿಗೆ-ದಾಖಲೆ, ಬ್ಯಾಂಕ್, ವಲಸೆ ಮುಂತಾದ 21 ಸಂಸ್ಥೆಗಳಿಂದ ಡೇಟಾವನ್ನು ಸಂಗ್ರಹಿಸುತ್ತದೆ.

ಟೀಕೆಗಳು:

  1. NATGRID ಅನ್ನು ಗೌಪ್ಯತೆಯ ಉಲ್ಲಂಘನೆ ಮತ್ತು ಖಾಸಗಿ ಗೌಪ್ಯ ಮಾಹಿತಿಯ ಸೋರಿಕೆಯ ಸಾಧ್ಯತೆಯ ಆಧಾರದ ಮೇಲೆ ವಿರೋಧಿಸಲಾಗುತ್ತಿದೆ.
  2. ಭಯೋತ್ಪಾದನೆಯನ್ನು ತಡೆಗಟ್ಟುವಲ್ಲಿ ಅದರ ಪರಿಣಾಮಕಾರಿತ್ವವನ್ನು ಸಹ ಪ್ರಶ್ನಿಸಲಾಗಿದೆ, ಏಕೆಂದರೆ ಯಾವುದೇ ರಾಜ್ಯ ಸಂಸ್ಥೆ ಅಥವಾ ಪೊಲೀಸ್ ಪಡೆಗೆ NATGRID ಡೇಟಾಬೇಸ್ ಅನ್ನು ಪ್ರವೇಶಿಸಲು ಅನುಮತಿಸಲಾಗುವುದಿಲ್ಲ, ಇದು ತಕ್ಷಣದ ಪರಿಣಾಮಕಾರಿ ಕ್ರಮ ಕೈಗೊಳ್ಳುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ.
  3. ಕೆಲವು ತಜ್ಞರ ಪ್ರಕಾರ, NATGRID ನಂತಹ ಡಿಜಿಟಲ್ ಡೇಟಾಬೇಸ್‌ಗಳನ್ನು ದುರ್ಬಳಕೆ ಮಾಡಬಹುದು. ಕಳೆದ ಎರಡು ದಶಕಗಳಲ್ಲಿ, ಡಿಜಿಟಲ್ ಸಾಧನಗಳನ್ನು ಭಯೋತ್ಪಾದಕರು ಹಿಂಸಾತ್ಮಕ ಚಟುವಟಿಕೆಗಳನ್ನು ನಡೆಸಲು ಬಳಸುತ್ತಿದ್ದರು.
  4. NATGRID ಗೆ ಸಂಬಂಧಿಸಿದಂತೆ ಗುಪ್ತಚರ ಸಂಸ್ಥೆಗಳು ಆತಂಕ ವ್ಯಕ್ತಪಡಿಸಿವೆ, ಇದು ಅವರ ಕೆಲಸದ ವ್ಯಾಪ್ತಿಯ ಮೇಲೆ ಪರಿಣಾಮ ಬೀರಬಹುದು ಮತ್ತು ಅವರ ಕೆಲಸದ ಬಗ್ಗೆ ಇತರ ಏಜೆನ್ಸಿಗಳಿಗೆ ಮಾಹಿತಿ ಸೋರಿಕೆಯಾಗಬಹುದು ಎಂದು ಹೇಳಿವೆ.

NATGRID ನ ಅವಶ್ಯಕತೆ:

  1. NATGRID ನಂತಹ ಅತ್ಯಾಧುನಿಕ ಮಾಧ್ಯಮಗಳನ್ನು ಹೊಂದಿರದ ಅಪಾಯವೆಂದರೆ,ಯಾವುದೇ ಮಾಹಿತಿಯನ್ನು ಪಡೆಯಲು ಪೊಲೀಸರನ್ನು ಕಠಿಣ ಮತ್ತು ಕೀಳುಮಟ್ಟದ ವಿಧಾನಗಳನ್ನು ಅಳವಡಿಸಿಕೊಳ್ಳುವಂತೆ ಒತ್ತಾಯಿಸಲಾಗುತ್ತದೆ.
  2. ಪ್ರತಿ ಭಯೋತ್ಪಾದಕ ಘಟನೆಯ ನಂತರ, ಪೊಲೀಸರು ಹಲವಾರು ಶಂಕಿತರನ್ನು ಬಂಧಿಸುತ್ತಾರೆ, ಅವರಲ್ಲಿ ಹೆಚ್ಚಿನವರು ನಿರಪರಾಧಿಗಳಾಗಿರುತ್ತಾರೆ. ಬದಲಾಗಿ, ತನಿಖೆ ಮತ್ತು ಪತ್ತೆಹಚ್ಚುವ ಕಾರ್ಯವಿಧಾನವು ಜಾರಿಯಲ್ಲಿದ್ದರೆ, ಮಾನವ ಹಕ್ಕುಗಳ ಉಲ್ಲಂಘನೆಯ ಪ್ರಕರಣಗಳು ಕಡಿಮೆಯಾಗುತ್ತವೆ.
  3. NATGRID,ಗುಪ್ತಚರ ಬ್ಯೂರೋಗೆ ಸಂಶಯಾಸ್ಪದ ಹಿನ್ನೆಲೆ ಹೊಂದಿರುವ ವ್ಯಕ್ತಿಗಳ ಮೇಲೆ ಕಣ್ಣಿಡಲು ಸಹಾಯ ಮಾಡುತ್ತದೆ.
  4. ಪೊಲೀಸರು ಶಂಕಿತರ ಎಲ್ಲಾ ಡೇಟಾವನ್ನು ಪ್ರವೇಶಿಸಬಹುದು ಮತ್ತು ಅವರ ಚಟುವಟಿಕೆಗಳನ್ನು ಡೇಟಾಬೇಸ್ ಸಹಾಯದಿಂದ ಟ್ರ್ಯಾಕ್ ಮಾಡಬಹುದು.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


 ರಿಯೋವೈರಸ್:

ಇತ್ತೀಚೆಗೆ ಕಾಡು ಏಡಿಗಳ (Scylla serrata) ಸಾಮೂಹಿಕ ಸಾವಿಗೆ ‘ಮಡ್ ಕ್ರ್ಯಾಬ್ ರಿಯೊವೈರಸ್ (Mud Crab Reovirus-MCRV)’ ಎಂಬ ವೈರಸ್ ಕಾರಣವಾಗಿದೆ ಎಂದು ಆಂಧ್ರಪ್ರದೇಶವು ಕಂಡುಹಿಡಿದಿದೆ.

  1. ಮಡ್ ಕ್ರ್ಯಾಬ್ ರಿಯೊವೈರಸ್, “ರಿಯೊವಿರಿಡೆ” (Reoviridae) ಕುಟುಂಬಕ್ಕೆ ಸೇರಿದೆ. ಕಾಡು ಏಡಿಗಳ ಸಾಮೂಹಿಕ ಸಾವಿಗೆ ಇದು ಕಾರಣವಾಗಿದೆ. ವೈರಸ್ ಮುಖ್ಯವಾಗಿ ಹೆಪಟೊಪ್ಯಾಂಕ್ರಿಯಾಸ್ (hepatopancreas), ಕರುಳು ಮತ್ತು ಕಿವಿರುಗಳ ಸಂಯೋಜಕ ಅಂಗಾಂಶದ ಮೇಲೆ ಪರಿಣಾಮ ಬೀರುತ್ತದೆ.
  2. ಇದನ್ನು ಸ್ಲೀಪಿಂಗ್ ಡಿಸೀಸ್ ಎಂದೂ ಸಹ ಕರೆಯುತ್ತಾರೆ.
  3. ಇದು ಮುಖ್ಯವಾಗಿ ಹೆಪಟೊಪಾಂಕ್ರಿಯಾಸ್, ಕಿವಿರುಗಳು ಮತ್ತು ಕರುಳಿನ ಸಂಯೋಜಕ ಅಂಗಾಂಶದ ಮೇಲೆ ಪರಿಣಾಮ ಬೀರುತ್ತದೆ.

 

NEAT 3.0:

ಇತ್ತೀಚೆಗೆ, ಕೇಂದ್ರ ಶಿಕ್ಷಣ ಸಚಿವರು ತಂತ್ರಜ್ಞಾನಕ್ಕಾಗಿ ರಾಷ್ಟ್ರೀಯ ಶೈಕ್ಷಣಿಕ ಒಕ್ಕೂಟ (National Educational Alliance for Technology -NEAT) 3.0 ಅನ್ನು ಪ್ರಾರಂಭಿಸಿದರು.

  1. ಶಿಕ್ಷಣ ಸಚಿವಾಲಯವು NEAT ಅನ್ನು ಸರ್ಕಾರ (ಅದರ ಅನುಷ್ಠಾನ ಸಂಸ್ಥೆಯಾದ AICTE ಮೂಲಕ) ಮತ್ತು ಭಾರತದಾದ್ಯಂತ ಇರುವ ಶಿಕ್ಷಣ ತಂತ್ರಜ್ಞಾನ ಕಂಪನಿಗಳ ನಡುವಣ ಸಾರ್ವಜನಿಕ-ಖಾಸಗಿ ಪಾಲುದಾರಿಕೆಯ ಮಾದರಿಯಾಗಿ ಘೋಷಿಸಿತು.
  2. ಇದು ಕಲಿಕಾರ್ಥಿಗಳ ಅನುಕೂಲಕ್ಕಾಗಿ ಒಂದೇ ವೇದಿಕೆಯಲ್ಲಿ ಯುವಕರ ಉದ್ಯೋಗಾವಕಾಶವನ್ನು ಹೆಚ್ಚಿಸಲು ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮವಾಗಿ-ಅಭಿವೃದ್ಧಿಪಡಿಸಿದ ತಾಂತ್ರಿಕ ಪರಿಹಾರಗಳ ಬಳಕೆಯನ್ನು ಒದಗಿಸುವ ಒಂದು ಉಪಕ್ರಮವಾಗಿದೆ.
  3. ಈ ಪರಿಹಾರಗಳು ಉತ್ತಮ ಕಲಿಕೆಯ ಫಲಿತಾಂಶಗಳು ಮತ್ತು ಸ್ಥಾಪಿತ ಪ್ರದೇಶಗಳಲ್ಲಿ ಕೌಶಲ್ಯ ಅಭಿವೃದ್ಧಿಗಾಗಿ ವೈಯಕ್ತಿಕಗೊಳಿಸಿದ ಮತ್ತು ಕಸ್ಟಮೈಸ್ ಮಾಡಿದ ಕಲಿಕೆಯ ಅನುಭವಕ್ಕಾಗಿ ಕೃತಕ ಬುದ್ಧಿಮತ್ತೆಯನ್ನು ಬಳಸುತ್ತವೆ.

 


  • Join our Official Telegram Channel HERE for Motivation and Fast Updates
  • Subscribe to our YouTube Channel HERE to watch Motivational and New analysis videos

[ad_2]

Leave a Comment