[Mission 2022] ದೈನಂದಿನ ಪ್ರಚಲಿತ ಘಟನೆಗಳು ದಿನಾಂಕ – 15ನೇ ಡಿಸೆಂಬರ್ 2021 – INSIGHTSIAS

[ad_1]

 

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ 1:

1. ಚಾರ್ ಧಾಮ್.

2. ಮಹಿಳಾ ನ್ಯಾಯಾಧೀಶರು.

3. ಪೆಸಿಫಿಕ್ ರಿಂಗ್ ಆಫ್ ಫೈರ್.

 

ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ಸಾರ್ವಜನಿಕ ಲೆಕ್ಕಪತ್ರ ಸಮಿತಿ.

2. ಇಂಡೋ-ಪೆಸಿಫಿಕ್.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ಸಹ-ಸಾಲ ನೀಡುವ ಮಾದರಿ- ಬ್ಯಾಂಕ್ ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳ (NBFC) ಮೂಲಕ ಸಹ-ಸಾಲ ನೀಡುವಿಕೆ.

2. ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (UAPA).

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:

1. ಕೊನ್ಯಾಕ್ ನಾಗಾಸ್.

2. ಭುವನ ಸುಂದರಿ-2021.

 


ಸಾಮಾನ್ಯ ಅಧ್ಯಯನ ಪತ್ರಿಕೆ : 1


 

ವಿಷಯಗಳು: ಭಾರತೀಯ ಸಂಸ್ಕೃತಿಯು ಪ್ರಾಚೀನ ಕಾಲದಿಂದ ಆಧುನಿಕ ಕಾಲದವರೆಗೆ ಕಲಾ ಪ್ರಕಾರಗಳು, ಸಾಹಿತ್ಯ ಮತ್ತು ವಾಸ್ತುಶಿಲ್ಪದ ಪ್ರಮುಖ ಅಂಶಗಳನ್ನು ಒಳಗೊಂಡಿದೆ.

ಚಾರ್ ಧಾಮ್:


(Char Dham)

ಸಂದರ್ಭ:

ಇತ್ತೀಚೆಗೆ,ತನ್ನ ಹಿಂದಿನ ಆದೇಶವನ್ನು ಮಾರ್ಪಡಿಸಿದ ಸುಪ್ರೀಂ ಕೋರ್ಟ್ ಚಾರ್ ಧಾಮ್ ರಸ್ತೆ ಯೋಜನೆಯ ಭಾಗವಾಗಿ, ಮೂರು ಹೆದ್ದಾರಿಗಳಲ್ಲಿ ನಾಲ್ಕು ಚಕ್ರದ ವಾಹನಗಳ ಮಾರ್ಗವನ್ನು 10 ಮೀಟರ್‌ವರೆಗೆ ವಿಸ್ತರಿಸಲು ಅನುಮತಿ ನೀಡಿದೆ. ಈ ಹಿಂದೆ, ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಈ ಅಗಲವನ್ನು 5.5 ಮೀಟರ್‌ಗೆ ಸೀಮಿತಗೊಳಿಸುವಂತೆ ಸೂಚಿಸಿತ್ತು.

ಸುಪ್ರೀಂ ಕೋರ್ಟ್ ಹೇಳಿದ್ದೇನು?

  1. ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠವು 2020 ರ ಸೆಪ್ಟೆಂಬರ್‌ನಲ್ಲಿ ಮತ್ತೊಂದು ತ್ರಿಸದಸ್ಯ ಪೀಠ ಹೊರಡಿಸಿದ ಆದೇಶವನ್ನು ತಿದ್ದುಪಡಿ ಮಾಡಿದೆ. ಇದರಲ್ಲಿ ಉತ್ತರಾಖಂಡದ 899 ಕಿ.ಮೀ ರಸ್ತೆ ಜಾಲದ ಭಾಗವಾಗಿ ನಿರ್ಮಿಸಲಾಗುತ್ತಿರುವ ಮೂರು ಹೆದ್ದಾರಿಗಳಲ್ಲಿ ನಾಲ್ಕು ಚಕ್ರದ ವಾಹನಗಳ ಮಾರ್ಗದ ಅಗಲ 5.5 ಮೀಟರ್ ಆಗಿರಬೇಕು ಎಂದು ನಿರ್ದೇಶನ ನೀಡಿತ್ತು.
  2. ನ್ಯಾಯಾಲಯದ ಈ ತೀರ್ಪನ್ನು ರಕ್ಷಣಾ ಸಚಿವಾಲಯವು ಪರಿಶೀಲಿಸುವಂತೆ ಕೋರಿತ್ತು, ನಂತರ ಸುಪ್ರೀಂ ಕೋರ್ಟ್ ಈಗ ಕೇಂದ್ರ ಸರ್ಕಾರದ ಬೇಡಿಕೆಯಂತೆ ರಸ್ತೆಗಳ ಅಗಲವನ್ನು 10 ಮೀಟರ್‌ಗೆ ಹೆಚ್ಚಿಸಲು ತೀರ್ಪು ನೀಡಿದೆ ಇದರಿಂದಾಗಿ ಈ ಹೆದ್ದಾರಿಗಳನ್ನು ‘ಡಬಲ್ ಲೇನ್’ / ದ್ವಿಪಥ ಮಾಡಲು ದಾರಿ ಮಾಡಿಕೊಡಲಾಗಿದೆ.
  3. ಚೀನಾ ಗಡಿಗೆ ಫೀಡರ್ ರಸ್ತೆಗಳಾಗಿ ಕಾರ್ಯನಿರ್ವಹಿಸುವ ಈ ಮೂರು ಹೆದ್ದಾರಿಗಳ ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ಒಪ್ಪಿಕೊಳ್ಳುವ ಸಂದರ್ಭದಲ್ಲಿ, ಪರಿಸರ ಕಾಳಜಿಯೊಂದಿಗೆ ಅಂತಹ ಆದ್ಯತೆಗಳನ್ನು ಸಮತೋಲನಗೊಳಿಸುವ ಅಗತ್ಯವನ್ನು ಸುಪ್ರೀಂ ಕೋರ್ಟ್ ಗಮನಿಸಿದೆ.
  4. ಸರ್ವೋಚ್ಚ ನ್ಯಾಯಾಲಯವು, ಈ ನಿಟ್ಟಿನಲ್ಲಿ ‘ಉನ್ನತ ಅಧಿಕಾರ ಸಮಿತಿ’ಯ ಶಿಫಾರಸುಗಳನ್ನು ಒಳಗೊಂಡಂತೆ ಪರಿಸರ ಪ್ರಜ್ಞೆಯ ರೀತಿಯಲ್ಲಿ ಕಾಮಗಾರಿಗಳನ್ನು ಕಾರ್ಯಗತಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಕೆ ಸಿಕ್ರಿ ನೇತೃತ್ವದಲ್ಲಿ ಮೇಲ್ವಿಚಾರಣಾ ಸಮಿತಿಯನ್ನು ರಚಿಸುವಂತೆಯೂ ಆದೇಶಿಸಿದೆ.

ಚಾರ್‌ಧಾಮ್ ಯೋಜನೆಯಲ್ಲಿ ಇದುವರೆಗಿನ ಘಟನಾ ಕ್ರಮಗಳು:

  1. ಚಾರ್ ಧಾಮ್ ರಸ್ತೆ ಯೋಜನೆಯ ಶಂಕುಸ್ಥಾಪನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 2016 ರಲ್ಲಿ ನೆರವೇರಿಸಿದರು.
  2. ಆದರೆ, ಈ ಯೋಜನೆಯನ್ನು ಪರಿಸರದ ಆಧಾರದ ಮೇಲೆ ನ್ಯಾಯಾಲಯದಲ್ಲಿ ಪ್ರಶ್ನಿಸಲಾಯಿತು, ಅರ್ಜಿದಾರರು ಯೋಜನೆಗೆ ಪರಿಸರ ಅನುಮತಿ ನೀಡುವಲ್ಲಿ ಅವ್ಯವಹಾರ ನಡೆದಿದೆ ಮತ್ತು ಅಸ್ತಿತ್ವದಲ್ಲಿರುವ ನಿಯಮಗಳನ್ನು ಉಲ್ಲಂಘಿಸಿ ಯೋಜನೆಯಲ್ಲಿ ಕಾಮಗಾರಿಗಳನ್ನು ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
  3. ಯೋಜನೆಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಯು ಸೆಪ್ಟೆಂಬರ್ 2018 ರಲ್ಲಿ ಅನುಮೋದನೆ ನೀಡಿತು. ಆದರೆ, ಪ್ರಕರಣದ ವಿಚಾರಣೆ ನಡೆಸುತ್ತಿರುವ ಪೀಠದ ಹೊರತಾಗಿ ಬೇರೆ ಪೀಠ ಈ ಆದೇಶವನ್ನು ಹೊರಡಿಸಿದ ಹಿನ್ನೆಲೆಯಲ್ಲಿ ಅದರ ಆದೇಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು. ಅದರ ಮೇಲೆ ಸುಪ್ರೀಂ ಕೋರ್ಟ್ 2018 ರ ಅಕ್ಟೋಬರ್‌ನಲ್ಲಿ NGT ಆದೇಶಕ್ಕೆ ತಡೆ ನೀಡಿತು.
  4. ಸೆಪ್ಟೆಂಬರ್ 2020 ರಲ್ಲಿ, ಸುಪ್ರೀಂ ಕೋರ್ಟ್ ರಿಟ್ ಅರ್ಜಿಯ ವಿಚಾರಣೆ ನಡೆಸಿತು, ಕೇಂದ್ರ ರಸ್ತೆ ಸಾರಿಗೆ ಸಚಿವಾಲಯದ 2018 ರ ಸುತ್ತೋಲೆಯಲ್ಲಿ ಸೂಚಿಸಿದಂತೆ ಚಾರ್ ಧಾಮ್ ಯೋಜನೆಗೆ ಹೆದ್ದಾರಿಗಳ ಅಗಲವು 5.5 ಮೀಟರ್ ಮೀರಬಾರದು ಎಂದು ಆದೇಶವನ್ನು ನೀಡಿತು. ಆದರೆ ರಕ್ಷಣಾ ಸಚಿವಾಲಯ, ಅದೇ ವರ್ಷದ ಡಿಸೆಂಬರ್‌ನಲ್ಲಿ, ಹೆದ್ದಾರಿಗಳ ಅಗಲವನ್ನು 10 ಮೀಟರ್‌ಗೆ ಅನುಮತಿಸಲು ಆದೇಶವನ್ನು ತಿದ್ದುಪಡಿ ಮಾಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿತು.
  5. ಅದರ ನಂತರ, ಹೆದ್ದಾರಿಗಳ ಅಗಲದ ಕುರಿತು ಕೇಂದ್ರ ಸರ್ಕಾರ ಮಂಡಿಸಿದ ವಾದಗಳನ್ನು ಪರಿಶೀಲಿಸಲು ಸರ್ವೋಚ್ಚ ನ್ಯಾಯಾಲಯವು ಉನ್ನತ ಅಧಿಕಾರ ಸಮಿತಿ (HPC) ಗೆ ಸೂಚಿಸಿದೆ.

ಉನ್ನತ ಅಧಿಕಾರ ಸಮಿತಿ (HPC) ಯು ಮಂಡಿಸಿದ ಸಂಶೋಧನೆಗಳು:

  1. ಈ ಹೆದ್ದಾರಿಗಳ ಆಯಕಟ್ಟಿನ ಪ್ರಾಮುಖ್ಯತೆಯನ್ನು ಪರಿಗಣಿಸಿ, ಅಗಲವನ್ನು 10 ಮೀಟರ್‌ಗೆ ವಿಸ್ತರಿಸಲು ಅನುಮತಿಸಬೇಕು.
  2. ಈಗಾಗಲೇ ಹೆದ್ದಾರಿಗಳ ಯಾವ ಭಾಗಗಳಲ್ಲಿ 10ಮೀಟರ್‌ ಅಗಲದಲ್ಲಿ ಕಾಮಗಾರಿ ಆರಂಭಿಸಲಾಗಿದೆಯೋ, ಅಲ್ಲೆಲ್ಲ ಪುನಃ ಅದರ ಅಗಲವನ್ನು 5.5 ಮೀಟರ್‌ಗೆ ಇಳಿಸಲು ಕೆಲಸ ಮಾಡುವುದು “ಪ್ರಾಯೋಗಿಕ” ಆಗುವುದಿಲ್ಲ.
  3. ರಸ್ತೆ ನಿರ್ಮಾಣಕ್ಕೆ ದಾರಿ ಮಾಡಿಕೊಡಲು ಮರಗಳನ್ನು ಕಡಿದ ಜಾಗಗಳಲ್ಲಿ ಮರಗಳನ್ನು ಮರು ನೆಡಲು ಸಾಧ್ಯವಾಗುವುದಿಲ್ಲ.

 

ಹೆದ್ದಾರಿಗಳ ಅಗಲವನ್ನು 10 ಮೀಟರ್‌ಗಳ ವರೆಗೆ ವಿಸ್ತರಿಸಬೇಕು ಎಂಬ ಬೇಡಿಕೆಗೆ ನೀಡಿದ ವಾದಗಳು:

ಭಾರೀ ವಾಹನಗಳು, ಯಂತ್ರೋಪಕರಣಗಳು, ಶಸ್ತ್ರಾಸ್ತ್ರಗಳು, ಕ್ಷಿಪಣಿಗಳು, ಟ್ಯಾಂಕ್‌ಗಳು, ಸಶಸ್ತ್ರ ಪಡೆಗಳು ಮತ್ತು ಆಹಾರ ಸರಬರಾಜುಗಳನ್ನು ತರಲು ಮತ್ತು ಸಾಗಿಸಲು ಮಿಲಿಟರಿ ಅಗತ್ಯವಿರುವ ಪ್ರದೇಶದಲ್ಲಿ ಅನೇಕ ಪ್ರವೇಶಿಸಲಾಗದ ದುರ್ಗಮ ಪ್ರದೇಶಗಳಿವೆ.

 

ಸಂಬಂಧಿತ ಪರಿಸರ ಕಾಳಜಿಗಳು:

  1. ಪರ್ವತ ಪ್ರದೇಶಗಳಲ್ಲಿ ದೊಡ್ಡ ಪ್ರಮಾಣದ ನಿರ್ಮಾಣ ಕಾರ್ಯವು ದುರಂತಕ್ಕೆ ಆಹ್ವಾನ ನೀಡಿದಂತಾಗುತ್ತದೆ ಮರಗಳನ್ನು ಕಡಿಯುವುದರಿಂದ ಮತ್ತು ಬಂಡೆಗಳನ್ನು ಸಡಿಲಗೊಳಿಸುವುದರಿಂದ, ಭೂಕುಸಿತದ ಅಪಾಯವು ಹೆಚ್ಚಾಗುತ್ತದೆ.
  2. ಕಡ್ಡಾಯ ಪರಿಸರ ಅನುಮತಿ’ ಮತ್ತು ‘ಪರಿಸರ ಪ್ರಭಾವ ಮೌಲ್ಯಮಾಪನ (Environment Impact Assessment – EIA)’ ಕಾರ್ಯವಿಧಾನಗಳನ್ನು ಬೈಪಾಸ್ ಮಾಡಿ ಅಥವಾ ಉಲ್ಲಂಘನೆ ಮಾಡಿ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತಿದೆ.
  3. ಯೋಜನೆಯಡಿಯಲ್ಲಿ, ರಸ್ತೆಗಳನ್ನು ನಿರ್ಮಿಸಲು 25,000 ಮರಗಳನ್ನು ಕಡಿಯಲಾಗಿದೆ ಎಂದು ವರದಿಯಾಗಿದೆ ಇದು ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಗಂಭೀರ ಆತಂಕದ ವಿಷಯವಾಗಿದೆ.
  4. ನಾಲ್ಕು ಚಕ್ರದ ವಾಹನಗಳಿಗೆ ವಿಶಾಲವಾದ ಮಾರ್ಗಗಳನ್ನು ರಚಿಸಲು ಹೆಚ್ಚಿನ ಉತ್ಖನನ ಮತ್ತು ಸ್ಫೋಟಗಳನ್ನು ಮಾಡಬೇಕಾಗಿರುವುದರಿಂದ, ಈ ಪ್ರದೇಶದ ಸ್ಥಳಾಕೃತಿ / ಭೂ ರಚನೆಯು ಜಾರುವಿಕೆ ಮತ್ತು ಭೂಕುಸಿತಗಳಿಗೆ ಹೆಚ್ಚು ದುರ್ಬಲವಾಗಿರುತ್ತದೆ, ಪರಿಣಾಮವಾಗಿ ಸರ್ವಋತು ಹೆದ್ದಾರಿ ನಿರ್ಮಿಸುವ ಉದ್ದೇಶಕ್ಕೆ ಧಕ್ಕೆಯಾಗಬಹುದು.

‘ಚಾರ್ಧಾಮ್ ಪ್ರಾಜೆಕ್ಟ್’ ಕುರಿತು:

  1. 889 ಕಿಮೀ ಉದ್ದದ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಮತ್ತು ಸುಧಾರಣೆಯನ್ನು ‘ಚಾರ್ಧಾಮ್ ಯೋಜನೆ’ ಒಳಗೊಂಡಿದೆ. ಈ ಯೋಜನೆಯ ಮೂಲಕ ಬದರಿನಾಥ ಧಾಮ, ಕೇದಾರನಾಥ ಧಾಮ, ಗಂಗೋತ್ರಿ, ಯಮುನೋತ್ರಿ ಮತ್ತು ಕೈಲಾಸ ಮಾನಸ ಸರೋವರ ಯಾತ್ರೆಗೆ ಹೋಗುವ ಮಾರ್ಗವನ್ನು ಸಂಪರ್ಕಿಸಲಾಗುವುದು.
  2. ಈ ಹೆದ್ದಾರಿಯನ್ನು ‘ಚಾರ್ ಧಾಮ್ ಮಹಾಮಾರ್ಗ’ (ಚಾರ್ ಧಾಮ್ ಹೆದ್ದಾರಿ) ಮತ್ತು ಈ ‘ಹೆದ್ದಾರಿ ನಿರ್ಮಾಣ ಯೋಜನೆ’ಯನ್ನು ‘ಚಾರ್ ಧಾಮ್ ಮಹಾಮಾರ್ಗ ವಿಕಾಸ ಯೋಜನೆ’ ಎಂದು ಕರೆಯಲಾಗುವುದು.

Current Affairs

 

 

ವಿಷಯಗಳು: ಮಹಿಳೆಯರು ಮತ್ತು ಮಹಿಳಾ ಸಂಘಟನೆಯ ಪಾತ್ರ, ಜನಸಂಖ್ಯೆ ಮತ್ತು ಸಂಬಂಧಿತ ಸಮಸ್ಯೆಗಳು, ಬಡತನ ಮತ್ತು ಅಭಿವೃದ್ಧಿ ಸಮಸ್ಯೆಗಳು, ನಗರೀಕರಣ, ಅವುಗಳ ಸಮಸ್ಯೆಗಳು ಮತ್ತು ಪರಿಹಾರಗಳು.

ಮಹಿಳಾ ನ್ಯಾಯಾಧೀಶರು:


(Women Judges)

ಸಂದರ್ಭ:

ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಅವರು ಹೆಚ್ಚಿನ ಮಹಿಳಾ ನ್ಯಾಯಾಧೀಶರ ಸೇರ್ಪಡೆ ಬೇಡಿಕೆಯನ್ನು ಸುಪ್ರೀಂ ಕೋರ್ಟ್ ಕೊಲಿಜಿಯಂನಲ್ಲಿ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ.

ಭಾರತೀಯ ನ್ಯಾಯಾಂಗದಲ್ಲಿ ಮಹಿಳೆಯರ ಸ್ಥಿತಿ:

  1. ಸರ್ವೋಚ್ಚ ನ್ಯಾಯಾಲಯದ 71 ವರ್ಷಗಳ ಇತಿಹಾಸದಲ್ಲಿ, ಕೇವಲ ಎಂಟು ಮಹಿಳಾ ನ್ಯಾಯಾಧೀಶರು ವರಿಷ್ಠ ನ್ಯಾಯಾಲಯದ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿದ್ದಾರೆ – ಮೊದಲನೆಯವರು ನ್ಯಾಯಮೂರ್ತಿ ಫಾತಿಮಾ ಬೀವಿ, ಇವರು ವರಿಷ್ಠ ನ್ಯಾಯಾಲಯವು ಸ್ಥಾಪನೆಯಾದ ದಿನಾಂಕದಿಂದ 39 ವರ್ಷಗಳ ಸುದೀರ್ಘ ಅಂತರದ ನಂತರ ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಂಡರು.
  2. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಮಂಜೂರಾಗಿರುವ 1,113 ನ್ಯಾಯಾಧೀಶರ ಪೈಕಿ ಕೇವಲ 80 ಮಹಿಳಾ ನ್ಯಾಯಾಧೀಶರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
  3. ಮಣಿಪುರ, ಮೇಘಾಲಯ, ಪಾಟ್ನಾ, ತ್ರಿಪುರಾ, ತೆಲಂಗಾಣ ಮತ್ತು ಉತ್ತರಾಖಂಡ ಈ ಆರು ಹೈಕೋರ್ಟ್‌ಗಳಲ್ಲಿ ಹಾಲಿ ಮಹಿಳಾ ನ್ಯಾಯಾಧೀಶರು ಇಲ್ಲ.

ಸುಪ್ರೀಂ ಕೋರ್ಟ್‌ನಲ್ಲಿ ವೈವಿಧ್ಯತೆ ಮತ್ತು ಲಿಂಗ ಪ್ರಾತಿನಿಧ್ಯದ ಪ್ರಯೋಜನಗಳು:

  1. ಐತಿಹಾಸಿಕವಾಗಿ ಹೊರಗಿಡಲ್ಪಟ್ಟ ಸ್ಥಳಗಳಲ್ಲಿ ಮಹಿಳಾ ನ್ಯಾಯಾಧೀಶರನ್ನು ಸೇರಿಸುವುದು ನ್ಯಾಯಾಂಗವನ್ನು ಹೆಚ್ಚು ಪಾರದರ್ಶಕ, ಅಂತರ್ಗತ ಮತ್ತು ಪ್ರಾತಿನಿಧಿಕವಾಗಿ ಗ್ರಹಿಸುವ ನಿಟ್ಟಿನಲ್ಲಿ ಸಕಾರಾತ್ಮಕ ಹೆಜ್ಜೆಯಾಗಿದೆ.
  2. ಕೇವಲ ತಮ್ಮ ಉಪಸ್ಥಿತಿಯಿಂದ, ಮಹಿಳಾ ನ್ಯಾಯಾಧೀಶರು ನ್ಯಾಯಾಲಯಗಳ ನ್ಯಾಯಸಮ್ಮತತೆಯನ್ನು ಹೆಚ್ಚಿಸುತ್ತಾರೆ, ನ್ಯಾಯಾಲಯಗಳು ಮುಕ್ತವಾಗಿವೆ ಮತ್ತು ನ್ಯಾಯವನ್ನು ಆಶ್ರಯಿಸಿ ಬರುವವರಿಗೆ ನ್ಯಾಯಾಲಯಗಳು ಸದಾ ತೆರೆದಿರುತ್ತವೆ ಎಂಬ ಪ್ರಬಲ ಸಂಕೇತವನ್ನು ಕಳುಹಿಸುತ್ತಾರೆ.
  3. ಮಹಿಳಾ ನ್ಯಾಯಾಧೀಶರು ಕೇವಲ ನ್ಯಾಯದ ನಿರೀಕ್ಷೆಯನ್ನು ಸುಧಾರಿಸುವುದಕ್ಕಿಂತ ಹೆಚ್ಚಿನ ಕೊಡುಗೆ ನೀಡಬಹುದು: ಅವರು ನಿರ್ಣಯ ಮಾಡುವ ಗುಣಮಟ್ಟಕ್ಕೆ ಮಹತ್ವದ ಕೊಡುಗೆ ನೀಡುವ ಮೂಲಕ ನ್ಯಾಯದ ಗುಣಮಟ್ಟಕ್ಕೆ ಗಣನೀಯ ಕೊಡುಗೆ ನೀಡುತ್ತಾರೆ.
  4. ಕಾನೂನುಗಳು ಮತ್ತು ತೀರ್ಪುಗಳು ಲಿಂಗ ಸ್ಟೀರಿಯೊಟೈಪ್‌ಗಳನ್ನು ಹೇಗೆ ಆಧರಿಸಿರಬಹುದು ಅಥವಾ ಮಹಿಳೆಯರು ಮತ್ತು ಪುರುಷರ ಮೇಲೆ ಹೇಗೆ ವಿಭಿನ್ನ ಪ್ರಭಾವ ಬೀರಬಹುದು ಎಂಬುದನ್ನು ವಿವರಿಸುವ ಮೂಲಕ,ಲಿಂಗ ದೃಷ್ಟಿಕೋನವು ತೀರ್ಪಿನ ನ್ಯಾಯೋಚಿತತೆಯನ್ನು ಹೆಚ್ಚಿಸುತ್ತದೆ.
  5. ಮಹಿಳಾ ನ್ಯಾಯಾಧೀಶರು ತಮ್ಮ ಹಿಂದಿನ ಅನುಭವಗಳನ್ನು ತಮ್ಮ ನ್ಯಾಯಾಂಗ ಕೆಲಸದಲ್ಲಿ ಬಳಸುತ್ತಾರೆ,ಅಂತಹ ಅನುಭವಗಳು ಹೆಚ್ಚು ಸಮಗ್ರ ಮತ್ತು ಸಹಾನುಭೂತಿಯ ವಿಧಾನಕ್ಕೆ ಕಾರಣವಾಗುತ್ತವೆ.
  6. ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ನ್ಯಾಯಾಂಗ ಪ್ರಕ್ರಿಯೆಯಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ಸುಧಾರಿಸುವುದು, ಹೆಚ್ಚು ಸಮತೋಲಿತ ಮತ್ತು ಸಹಾನುಭೂತಿಯ ವಿಧಾನದ ಕಡೆಗೆ ಬಹಳ ಮುಖ್ಯವೆಂದು ಸಾಬೀತುಪಡಿಸಬಹುದು.

ನ್ಯಾಯಾಂಗ ಕ್ಷೇತ್ರವನ್ನು ಪ್ರವೇಶಿಸಲು ಮಹಿಳೆಯರು ಎದುರಿಸುವ ಸವಾಲುಗಳು:

  1. ಜಿಲ್ಲಾ ನ್ಯಾಯಾಧೀಶರಾಗಿ ಮಹಿಳಾ ನೇಮಕಾತಿಗೆ ಪ್ರಮುಖ ತಡೆಗೋಡೆ ಎಂದರೆ ಪ್ರವೇಶ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಅರ್ಹತೆಯ ಮಾನದಂಡವಾಗಿದೆ.
  2. ನ್ಯಾಯಾಧೀಶರಾಗಲು,ವಕೀಲರು ಏಳು ವರ್ಷಗಳ ನಿರಂತರ ಕಾನೂನು ಅಭ್ಯಾಸವನ್ನು ಹೊಂದಿರಬೇಕು ಮತ್ತು 35-45 ವಯಸ್ಸಿನ ವ್ಯಾಪ್ತಿಯಲ್ಲಿರಬೇಕು.
  3. ಅನೇಕರು ಈ ವಯಸ್ಸಿನ ವೇಳೆಗೆ ಮದುವೆಯಾಗಿರುವುದರಿಂದ ಮಹಿಳೆಯರಿಗೆ ಈ ಷರತ್ತು ಅನನುಕೂಲವಾಗಿದೆ.
  4. ಇದಲ್ಲದೆ, ಕಾನೂನು ಕ್ಷೇತ್ರದಲ್ಲಿ ದೀರ್ಘ ಮತ್ತು ಕಟ್ಟುನಿಟ್ಟಾದ ಕೆಲಸದ ಸಮಯಗಳು, ಕುಟುಂಬದ ಜವಾಬ್ದಾರಿಗಳೊಂದಿಗೆ ಸೇರಿಕೊಂಡು, ಅನೇಕ ಮಹಿಳೆಯರನ್ನು ವಕೀಲಿ ವೃತ್ತಿಯ ಅಭ್ಯಾಸದಿಂದ ಹೊರಗುಳಿಯುವಂತೆ ಒತ್ತಾಯಿಸುತ್ತದೆ ಮತ್ತು ಅವರು ನಿರಂತರ ಕಾನೂನು ಅಭ್ಯಾಸದ ಅಗತ್ಯವನ್ನು ಪೂರೈಸಲು ವಿಫಲರಾಗುತ್ತಾರೆ.

 

ವಿಷಯಗಳು: ಭೂಕಂಪಗಳು, ಸುನಾಮಿ, ಜ್ವಾಲಾಮುಖಿ ಚಟುವಟಿಕೆಗಳು ಚಂಡಮಾರುತ ಮುಂತಾದ ಪ್ರಮುಖ ಭೌಗೋಳಿಕ ವಿದ್ಯಮಾನಗಳು, ಭೌಗೋಳಿಕ ಲಕ್ಷಣಗಳು ಮತ್ತು ಅವುಗಳ ಸ್ಥಳ- ನಿರ್ಣಾಯಕ ಭೌಗೋಳಿಕ ವೈಶಿಷ್ಟ್ಯಗಳಲ್ಲಿನ ಬದಲಾವಣೆಗಳು (ಸಾಗರಗಳು ಮತ್ತು ಐಸ್-ಕ್ಯಾಪ್ಗಳು ಸೇರಿದಂತೆ) ಮತ್ತು ಸಸ್ಯ ಮತ್ತು ಪ್ರಾಣಿ ಮತ್ತು ಅಂತಹ ಬದಲಾವಣೆಗಳ ಪರಿಣಾಮಗಳು.

ಪೆಸಿಫಿಕ್ ರಿಂಗ್ ಆಫ್ ಫೈರ್:


(Pacific ring of fire)

ಸಂದರ್ಭ:

ಪೂರ್ವ ಇಂಡೋನೇಷ್ಯಾದಲ್ಲಿ 7.3 ತೀವ್ರತೆಯ ಭೂಕಂಪ ಸಂಭವಿಸಿದೆ.

  1. ಪೂರ್ವ ನುಸಾ ತೆಂಗರಾ ಪ್ರಾಂತ್ಯದ (East Nusa Tenggara province) ಉತ್ತರದಲ್ಲಿರುವ ಫ್ಲೋರ್ಸ್ ಸಮುದ್ರ (Flores Sea)ದಲ್ಲಿ ಭೂಕಂಪನದ ಕೇಂದ್ರಬಿಂದುವಿದೆ.

ಇಂಡೋನೇಷ್ಯಾ ಏಕೆ ಭೂಕಂಪಗಳಿಗೆ ಗುರಿಯಾಗುತ್ತದೆ?

ಇಂಡೋನೇಷ್ಯಾವು ರಿಂಗ್ ಆಫ್ ಫೈರ್ ಪ್ರದೇಶದಲ್ಲಿ ಸ್ಥಾಪಿತವಾಗಿದೆ, ಇದು ಪ್ರಪಂಚದ ಹೆಚ್ಚಿನ ಜ್ವಾಲಾಮುಖಿ ಸ್ಫೋಟಗಳು ಸಂಭವಿಸುವ ಪ್ರದೇಶವಾಗಿದೆ. ರಿಂಗ್ ಆಫ್ ಫೈರ್ ಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದ ಚಟುವಟಿಕೆಯನ್ನು ಗಮನಿಸಲಾಗಿದೆ, ಆದರೆ ಟೆಕ್ಟೋನಿಕ್ ಪ್ಲೇಟ್‌ಗಳ ದೊಡ್ಡ ಗ್ರಿಡ್‌ನಲ್ಲಿ ಅದರ ಸ್ಥಾನದಿಂದಾಗಿ ಇಂಡೋನೇಷ್ಯಾವು ತೀವ್ರವಾಗಿ ಬಾಧಿತವಾಗಿದೆ.

ಇಂಡೋನೇಷ್ಯಾ ಮೂರು ಪ್ರಮುಖ ಕಾಂಟಿನೆಂಟಲ್ ಪ್ಲೇಟ್‌ಗಳಾದ (ಭೂಖಂಡದ ಫಲಕಗಳು) ಪೆಸಿಫಿಕ್, ಯುರೇಷಿಯನ್ ಮತ್ತು ಇಂಡೋ-ಆಸ್ಟ್ರೇಲಿಯನ್ ಪ್ಲೇಟ್‌ಗಳು ಮತ್ತು ಹೆಚ್ಚು ಚಿಕ್ಕದಾದ ಫಿಲಿಪೈನ್ ಪ್ಲೇಟ್‌ಗಳು ಸಂಧಿಸುವ ಸ್ಥಳದಲ್ಲಿದೆ. ಪರಿಣಾಮವಾಗಿ, ಇಂಡೋನೇಷಿಯಾದ ದ್ವೀಪಗಳಲ್ಲಿನ ಹಲವಾರು ಜ್ವಾಲಾಮುಖಿಗಳು ಸ್ಫೋಟಗೊಳ್ಳುವ ಸಾಧ್ಯತೆಯಿದೆ. ಇಂಡೋನೇಷ್ಯಾ ಸರಿಸುಮಾರು 400 ಜ್ವಾಲಾಮುಖಿಗಳಿಗೆ ನೆಲೆಯಾಗಿದೆ, ಅವುಗಳಲ್ಲಿ 127 ಪ್ರಸ್ತುತವಾಗಿ ಸಕ್ರಿಯವಾಗಿವೆ, ಇದು ವಿಶ್ವದ ಸಕ್ರಿಯ ಜ್ವಾಲಾಮುಖಿಗಳಲ್ಲಿ ಮೂರನೇ ಒಂದು ಭಾಗದಷ್ಟಾಗಿದೆ.

ರಿಂಗ್ ಆಫ್ ಫೈರ್ ಎಂದರೇನು?

ರಿಂಗ್ ಆಫ್ ಫೈರ್ ಪೆಸಿಫಿಕ್ ಪ್ರದೇಶವಾಗಿದ್ದು, ವಿಶ್ವದ ನಾಲ್ಕು ಅತ್ಯಂತ ಸಕ್ರಿಯ ಜ್ವಾಲಾಮುಖಿಗಳಲ್ಲಿ ಮೂರು ಪ್ರಮುಖ ಜ್ವಾಲಾಮುಖಿಗಳಾದ USA ನಲ್ಲಿರುವ ಮೌಂಟ್ ಸೇಂಟ್ ಹೆಲೆನ್ಸ್, ಜಪಾನ್‌ನ ಮೌಂಟ್ ಫ್ಯೂಜಿ ಮತ್ತು ಫಿಲಿಪೈನ್ಸ್‌ನ ಮೌಂಟ್ ಪಿನಾಟುಬೊ ಸೇರಿದಂತೆ 450 ಕ್ಕೂ ಹೆಚ್ಚು ಜ್ವಾಲಾಮುಖಿಗಳಿಗೆ ನೆಲೆಯಾಗಿದೆ. ಇದನ್ನು ಕೆಲವೊಮ್ಮೆ ಸರ್ಕಮ್-ಪೆಸಿಫಿಕ್ ಬೆಲ್ಟ್ ಎಂದೂ ಕರೆಯಲಾಗುತ್ತದೆ.

  1. ವಿಶ್ವದ ಅತಿದೊಡ್ಡ ಭೂಕಂಪಗಳಲ್ಲಿ 80% ಭೂಕಂಪಗಳು ಸೇರಿದಂತೆ ಪ್ರಪಂಚದ ಸುಮಾರು 90% ಭೂಕಂಪಗಳು ರಿಂಗ್ ಆಫ್ ಫೈರ್‌ ಪ್ರದೇಶದಲ್ಲಿ ಸಂಭವಿಸುತ್ತವೆ.

ಸ್ಥಳ:

ರಿಂಗ್ ಆಫ್ ಫೈರ್‌,ಇದು ಪೆಸಿಫಿಕ್ ಮಹಾಸಾಗರದ ಕರಾವಳಿಯ ಉದ್ದಕ್ಕೂ ವ್ಯಾಪಿಸಿದೆ, ಅಲ್ಲಿ ಪೆಸಿಫಿಕ್ ಪ್ಲೇಟ್ ಭೂಮಿಯ ಹೊರಪದರವನ್ನು ರೂಪಿಸುವ ಇತರ ಸಣ್ಣ ಟೆಕ್ಟೋನಿಕ್ ಪ್ಲೇಟ್‌ಗಳ ವಿರುದ್ಧ ಘರ್ಷಿಸುತ್ತದೆ – ಉದಾಹರಣೆಗೆ ಫಿಲಿಪೈನ್ ಸಮುದ್ರದ ಪ್ಲೇಟ್ ಮತ್ತು ಪೆಸಿಫಿಕ್ ಮಹಾಸಾಗರದ ಅಂಚಿನಲ್ಲಿರುವ ಕೋಕೋಸ್ ಮತ್ತು ನಾಜ್ಕಾ ಪ್ಲೇಟ್‌ಗಳ ಘರ್ಷಣೆ.

40,000 ಕಿಲೋಮೀಟರ್ ಹಾರ್ಸ್-ಶೂ-ಆಕಾರದ/ ಕುದುರೆ ಲಾಳಾಕಾರದ ರಿಂಗ್ ಆಫ್ ಫೈರ್‌ ನ್ಯೂಜಿಲೆಂಡ್‌ನಿಂದ ಆರಂಭಿಸಿ,ಏಷ್ಯಾ ಮತ್ತು ಅಮೆರಿಕದ ಕರಾವಳಿಯ ಮೂಲಕ ಹಾದು ಚಿಲಿವರೆಗೆ ವಿಸ್ತರಿಸಿದೆ.

ಅಪಾಯ:

ರಿಂಗ್ ಆಫ್ ಫೈರ್‌ನಲ್ಲಿನ ಚಟುವಟಿಕೆಯಿಂದ ಹೆಚ್ಚು ಅಪಾಯದಲ್ಲಿರುವ ಜನರು US ನ ಪಶ್ಚಿಮ ಕರಾವಳಿ, ಚಿಲಿ, ಜಪಾನ್ ಮತ್ತು ಸೊಲೊಮನ್ ದ್ವೀಪಗಳು ಸೇರಿದಂತೆ ದ್ವೀಪ ರಾಷ್ಟ್ರಗಳಲ್ಲಿದ್ದಾರೆ. ಈ ಪ್ರದೇಶಗಳು ಹೆಚ್ಚು ಅಪಾಯದಲ್ಲಿವೆ ಏಕೆಂದರೆ ಅವುಗಳು ಸಬ್ಡಕ್ಷನ್ ವಲಯಗಳೆಂದು ಕರೆಯಲ್ಪಡುತ್ತವೆ, ಅವುಗಳು ಗ್ರಹದ ಎರಡು ಟೆಕ್ಟೋನಿಕ್ ಪ್ಲೇಟ್ಗಳ ನಡುವಿನ ಘರ್ಷಣೆಯನ್ನು ಗುರುತಿಸುವ ಗಡಿಗಳಾಗಿವೆ.

ರಿಂಗ್ ಆಫ್ ಫೈರ್ ಹೇಗೆ ರೂಪುಗೊಂಡಿತು?

ರಿಂಗ್ ಆಫ್ ಫೈರ್ ಹಗುರವಾದ ಭೂಖಂಡದ ಫಲಕಗಳ ಕೆಳಗೆ ಸಾಗರದ ಟೆಕ್ಟೋನಿಕ್ ಪ್ಲೇಟ್‌ಗಳ ಸಬ್‌ಡಕ್ಷನ್‌ನ ಫಲಿತಾಂಶವಾಗಿದೆ. ಈ ಟೆಕ್ಟೋನಿಕ್ ಪ್ಲೇಟ್‌ಗಳು ಸಂಧಿಸುವ ಪ್ರದೇಶವನ್ನು ಸಬ್ಡಕ್ಷನ್ ವಲಯ ಎಂದು ಕರೆಯಲಾಗುತ್ತದೆ. ಅಥವಾ

ಸಾಗರದ ಟೆಕ್ಟೋನಿಕ್ ಪ್ಲೇಟ್‌ಗಳು ಕಡಿಮೆ-ಸಾಂದ್ರತೆಯ ಅಡಿಯಲ್ಲಿ ಅಂದರೆ ಹಗುರವಾದ ಭೂಖಂಡದ ಫಲಕಗಳ ಅಡಿಯಲ್ಲಿ ಒಳಪಟ್ಟಾಗ ‘ರಿಂಗ್ ಆಫ್ ಫೈರ್’ ರೂಪುಗೊಳ್ಳುತ್ತದೆ. ಈ ಟೆಕ್ಟೋನಿಕ್ ಪ್ಲೇಟ್‌ಗಳು ಸಂಧಿಸುವ ಪ್ರದೇಶವನ್ನು ಸಬ್ಡಕ್ಷನ್ ವಲಯಗಳು (subduction zones) ಎಂದು ಕರೆಯಲಾಗುತ್ತದೆ.

ರಿಂಗ್ ಆಫ್ ಫೈರ್ ಭೂಕಂಪಗಳನ್ನು ಏಕೆ ಪ್ರಚೋದಿಸುತ್ತದೆ?

  1. ವಿಶ್ವದ ಆಳವಾದ ಭೂಕಂಪಗಳು ಸಬ್ಡಕ್ಷನ್ ವಲಯದ ಪ್ರದೇಶಗಳಲ್ಲಿ ಸಂಭವಿಸುತ್ತವೆ ಏಕೆಂದರೆ ಟೆಕ್ಟೋನಿಕ್ ಪ್ಲೇಟ್‌ಗಳು ಪರಸ್ಪರ ಡಿಕ್ಕಿ ಹೊಡೆಯುತ್ತವೆ – ಮತ್ತು ರಿಂಗ್ ಆಫ್ ಫೈರ್ ವಿಶ್ವದ ಅತಿದೊಡ್ಡ ಸಬ್ಡಕ್ಷನ್ ವಲಯಗಳನ್ನು ಹೊಂದಿದೆ.
  2. ಭೂಮಿಯ ಕರಗಿದ ಕೋರ್‌ನಿಂದ ಶಕ್ತಿಯು ಬಿಡುಗಡೆಯಾಗುತ್ತಿದ್ದಂತೆ, ಇದು ಟೆಕ್ಟೋನಿಕ್ ಪ್ಲೇಟ್‌ಗಳನ್ನು ಚಲಿಸುವಂತೆ ಒತ್ತಾಯಿಸುತ್ತದೆ ಮತ್ತು ಅವುಗಳು ಒಂದಕ್ಕೊಂದು ಅಪ್ಪಳಿಸಿ, ಘರ್ಷಣೆಗೆ ಕಾರಣವಾಗುತ್ತವೆ. ಈ ಘರ್ಷಣೆಯ ಪರಿಣಾಮವಾಗಿ ಹೆಚ್ಚಿನ ಶಕ್ತಿಯು ಉತ್ಪತ್ತಿಯಾಗುತ್ತದೆ ಮತ್ತು ಅಂತಿಮವಾಗಿ ಈ ಶಕ್ತಿಯನ್ನು ಮೇಲ್ಮೈಗೆ ಬಿಡುಗಡೆ ಮಾಡಿದಾಗ ಅದು ಭೂಕಂಪಗಳನ್ನು ಉಂಟುಮಾಡುತ್ತದೆ. ಇದು ಸಮುದ್ರದಲ್ಲಿ ಸಂಭವಿಸಿದರೆ ಅದು ವಿನಾಶಕಾರಿ ಸುನಾಮಿಗೆ ಕಾರಣವಾಗಬಹುದು.
  3. ಟೆಕ್ಟೋನಿಕ್ ಪ್ಲೇಟ್‌ಗಳು ಸಾಮಾನ್ಯವಾಗಿ ಪ್ರತಿ ವರ್ಷ ಸರಾಸರಿ ಕೆಲವು ಸೆಂಟಿಮೀಟರ್‌ಗಳಷ್ಟು ಮಾತ್ರ ಚಲಿಸುತ್ತವೆ, ಆದರೆ ಭೂಕಂಪ ಸಂಭವಿಸಿದಾಗ, ಅವು ಭಾರಿ ವೇಗದಲ್ಲಿ ಚಲಿಸುತ್ತವೆ ಮತ್ತು ಪ್ರತಿ ಸೆಕೆಂಡಿಗೆ ಹಲವಾರು ಮೀಟರ್‌ಗಳ ವರೆಗೆ ಚಲಿಸಬಹುದು.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳು – ರಚನೆ, ಕಾರ್ಯವೈಖರಿ, ವ್ಯವಹಾರದ ನಡಾವಳಿಗಳು, ಅಧಿಕಾರಗಳು ಮತ್ತು ಸವಲತ್ತುಗಳು ಮತ್ತು ಇವುಗಳಿಂದ ಉಂಟಾಗುವ ಸಮಸ್ಯೆಗಳು.

ಸಾರ್ವಜನಿಕ ಲೆಕ್ಕಪತ್ರ ಸಮಿತಿ (PAC):


(Public Accounts Committee)

 ಸಂದರ್ಭ:

ಇತ್ತೀಚೆಗೆ, ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ (Public Accounts Committee – PAC) ಯ ಶತಮಾನೋತ್ಸವ ಸಮಾರಂಭವನ್ನು ಆಯೋಜಿಸಲಾಗಿತ್ತು.

ಸಾರ್ವಜನಿಕ ಲೆಕ್ಕಪತ್ರ ಸಮಿತಿ ಕುರಿತು:

  1. ಸಾರ್ವಜನಿಕ ಲೆಕ್ಕಪತ್ರ ಸಮಿತಿಯನ್ನು ವಾರ್ಷಿಕವಾಗಿ ರಚಿಸಲಾಗುತ್ತದೆ. ಇದರಲ್ಲಿ ಗರಿಷ್ಠ ಸದಸ್ಯರ ಸಂಖ್ಯೆ 22 ಆಗಿದ್ದು, ಈ ಪೈಕಿ 15 ಸದಸ್ಯರನ್ನು ಲೋಕಸಭೆಯಿಂದ ಮತ್ತು 7 ಸದಸ್ಯರನ್ನು ರಾಜ್ಯಸಭೆಯಿಂದ ಆಯ್ಕೆ ಮಾಡಲಾಗುತ್ತದೆ.
  2. ಸಮಿತಿಯ ಸದಸ್ಯರ ಅಧಿಕಾರ ಅವಧಿ ಒಂದು ವರ್ಷ.
  3. ಸಮಿತಿಯ ಅಧ್ಯಕ್ಷರನ್ನು ಲೋಕಸಭೆಯ ಸ್ಪೀಕರ್ ನೇಮಕ ಮಾಡುತ್ತಾರೆ. 1967 ರಿಂದ, ಪ್ರತಿಪಕ್ಷದ ಸದಸ್ಯರನ್ನು ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುತ್ತದೆ.
  4. ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (CAG) ಯ ಲೆಕ್ಕಪರಿಶೋಧನಾ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಿದ ನಂತರ ಅದನ್ನು ಪರಿಶೀಲಿಸುವುದು ಇದರ ಮುಖ್ಯ ಕಾರ್ಯವಾಗಿದೆ.

ಐತಿಹಾಸಿಕ ಹಿನ್ನೆಲೆ:

ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಸದನದ ಸಮಿತಿಗಳಲ್ಲಿ ಅತ್ಯಂತ ಹಳೆಯದು. ಮೊಂಟಾಗು-ಚೆಲ್ಮ್ಸ್ಫೋರ್ಡ್ ಸುಧಾರಣೆಗಳ ಹಿನ್ನೆಲೆಯಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಯನ್ನು ಮೊದಲು 1921 ರಲ್ಲಿ ರಚಿಸಲಾಯಿತು.

ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಮಿತಿಗಳು:

  1. ವಿಶಾಲವಾಗಿ ಹೇಳುವುದಾದರೆ, ಇದು ನೀತಿ ನಿರೂಪಣೆ ಪ್ರಶ್ನೆಗಳಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ.
  2. ಖರ್ಚು ಮಾಡಿದ ನಂತರವೇ ಇದು ಇವುಗಳನ್ನು ಮೇಲ್ವಿಚಾರಣೆ ಮಾಡಬಹುದು. ಖರ್ಚನ್ನು ಮಿತಿಗೊಳಿಸುವ ಅಧಿಕಾರ ಇದಕ್ಕೆ ಇಲ್ಲ.
  3. ಇದು ದಿನನಿತ್ಯದ ಆಡಳಿತದ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ.
  4. ಸಮಿತಿ ಮಾಡಿದ ಶಿಫಾರಸುಗಳು ಕೇವಲ ಸಲಹಾತ್ಮಕ ರೂಪದಲ್ಲಿರುತ್ತವೆ. ಈ ಶಿಫಾರಸುಗಳನ್ನು ಸಚಿವಾಲಯಗಳು ಸಹ ನಿರ್ಲಕ್ಷಿಸಬಹುದು.
  5. ಇದಕ್ಕೆ ಇಲಾಖೆಗಳ ವೆಚ್ಚವನ್ನು ನಿರ್ಬಂಧಿಸುವ ಅಧಿಕಾರವಿಲ್ಲ.
  6. ಇದು ಕೇವಲ ಕಾರ್ಯಕಾರಿ ಸಂಸ್ಥೆಯಾಗಿದ್ದು ಯಾವುದೇ ಆದೇಶಗಳನ್ನು ಹೊರಡಿಸುವ ಅಧಿಕಾರವನ್ನು ಹೊಂದಿಲ್ಲ. ಸಂಸತ್ತು ಮಾತ್ರ ಅದರ ಸಂಶೋಧನೆಗಳ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಬಹುದು.

 

ವಿಷಯಗಳು: ಭಾರತ ಮತ್ತು ನೆರೆಹೊರೆಯ ದೇಶಗಳೊಂದಿಗಿನ ಅದರ ಸಂಬಂಧಗಳು:

ಇಂಡೋ-ಪೆಸಿಫಿಕ್ ವಲಯ:


(Indo-Pacific)

ಸಂದರ್ಭ:

ಇತ್ತೀಚಿಗೆ, ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರು ಇಂಡೋ-ಪೆಸಿಫಿಕ್ (Indo-Pacific) ಪ್ರದೇಶದಲ್ಲಿ ಬೆಳೆಯುತ್ತಿರುವ ಚೀನಾದ ಹಠಮಾರಿ ಧೋರಣೆಯ ವಿರುದ್ಧ ಏಷ್ಯಾದಲ್ಲಿನ ಪಾಲುದಾರರೊಂದಿಗೆ ಅಮೆರಿಕ ಸಂಯುಕ್ತ ಸಂಸ್ಥಾನವು ತನ್ನ ಮಿಲಿಟರಿ ಮತ್ತು ಆರ್ಥಿಕ ಸಂಬಂಧಗಳನ್ನು ವಿಸ್ತರಿಸಲಿದೆ ಎಂದು   ಹೇಳಿದ್ದಾರೆ.

‘ಇಂಡೋ-ಪೆಸಿಫಿಕ್’ ಎಂದರೇನು?

ಒಂದೇ ಆಯಕಟ್ಟಿನ ಪ್ರದೇಶವಾಗಿ ಇಂಡೋ-ಪೆಸಿಫಿಕ್’ (Indo- Pacific) ಪ್ರದೇಶದ ಪರಿಕಲ್ಪನೆಯು, ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನಾದ ಹೆಚ್ಚುತ್ತಿರುವ ಪ್ರಭಾವದ ಫಲಿತಾಂಶವಾಗಿದೆ. ಆ ಮೂಲಕ  ಹಿಂದೂ ಮಹಾಸಾಗರ ಮತ್ತು ಪೆಸಿಫಿಕ್ ಮಹಾಸಾಗರದ ನಡುವಿನ ಸಂವಹನ ಮತ್ತು ಭದ್ರತೆ ಮತ್ತು ವ್ಯಾಪಾರ ವಹಿವಾಟಿಗಾಗಿ ಸಾಗರಗಳ ಮಹತ್ವವನ್ನು ಸಂಕೇತಿಸುವುದಾಗಿದೆ.

‘ಇಂಡೋ-ಪೆಸಿಫಿಕ್ ವಲಯ’ದ ಮಹತ್ವ:

  1. ಪ್ರಾದೇಶಿಕ ಸಮತೋಲನವನ್ನು ಕಾಪಾಡಿಕೊಳ್ಳಲು.
  2. ಭಾರತದ ಕಾರ್ಯತಂತ್ರದ ಭಾಗವಾಗಿ, ಯುಎಸ್ ಜೊತೆ ಬಲವಾದ ಸಂಬಂಧಗಳನ್ನು ಒಂದು ಪ್ರಮುಖ ಸಾಧನವಾಗಿ ನೋಡಲಾಗುತ್ತದೆ.
  3. ರಾಷ್ಟ್ರೀಯ ಹಿತಾಸಕ್ತಿಗಳಿಗಾಗಿ ದೀರ್ಘಕಾಲೀನ ದೃಷ್ಟಿ-ಕೋನ.
  4. ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನಾದ ಸಕ್ರಿಯ ಉಪಸ್ಥಿತಿ, ವ್ಯಾಪಾರ ಮತ್ತು ಮಿಲಿಟರಿ ಬಳಕೆಯ ಮೂಲಕ ಏಷ್ಯಾ ಮತ್ತು ಅದರಾಚೆ ಭೌಗೋಳಿಕ ರಾಜಕೀಯ (geo -politics) ವ್ಯಾಪ್ತಿಯನ್ನು ವಿಸ್ತರಿಸಲು ಪ್ರಯತ್ನಿಸುತ್ತಿರುವ ಚೀನಾದ ಪ್ರಯತ್ನಗಳನ್ನು ತಡೆಯಲು.
  5. ಮುಕ್ತ ಸಾರಿಗೆಯ ಸ್ವಾತಂತ್ರ್ಯಕ್ಕೆ ಬದ್ಧವಾಗಿರಲು, ಕಾನೂನು ಆಧಾರಿತ ವ್ಯವಸ್ಥೆಯನ್ನು ಅನುಸರಿಸಲು ಮತ್ತು ವ್ಯವಹಾರಕ್ಕಾಗಿ ಸುಸಂಘಟಿತ ವಾತಾವರಣವನ್ನು ಸೃಷ್ಟಿಸುವುದು.
  6. ಉಚಿತ ಸಮುದ್ರ ಮತ್ತು ವಾಯುಮಾರ್ಗಗಳ ಸಂಪರ್ಕಕ್ಕಾಗಿ; ಅಂತರರಾಷ್ಟ್ರೀಯ ನಿಯಮಗಳು ಮತ್ತು ಮಾನದಂಡಗಳನ್ನು ಕಾಪಾಡಿಕೊಳ್ಳುವುದು.

‘ಇಂಡೋ-ಪೆಸಿಫಿಕ್ ಪ್ರದೇಶ’ದಲ್ಲಿ ಭಾರತದ ಪಾತ್ರ ಮತ್ತು ಪರಿಣಾಮಗಳು:

  1. ಇಂಡೋ-ಪೆಸಿಫಿಕ್ ಪ್ರದೇಶವು ರಾಷ್ಟ್ರೀಯ ಭದ್ರತಾ ಕಾರ್ಯತಂತ್ರದಲ್ಲಿ ವಿವರಿಸಿದಂತೆ, ವಿಶ್ವದ ಅತ್ಯಂತ ಜನನಿಬಿಡ ಮತ್ತು ಆರ್ಥಿಕವಾಗಿ ಕ್ರಿಯಾತ್ಮಕ ಭಾಗವನ್ನು ಪ್ರತಿನಿಧಿಸುತ್ತದೆ. ಇದು ಭಾರತದ ಪಶ್ಚಿಮ ಕರಾವಳಿಯಿಂದ ಅಮೆರಿಕ ಸಂಯುಕ್ತ ಸಂಸ್ಥಾನದ ಪಶ್ಚಿಮ ಕರಾವಳಿಯ ತೀರದವರೆಗೆ ವ್ಯಾಪಿಸಿದೆ.
  2. ಭಾರತ ಯಾವಾಗಲೂ ಮಹಾನ್ ರಾಷ್ಟ್ರೀಯ ಮಹತ್ವಾಕಾಂಕ್ಷೆಗಳನ್ನು ಹೊಂದಿರುವ ದೇಶವಾಗಿದೆ ಮತ್ತು “ಇಂಡೋ-ಪೆಸಿಫಿಕ್ ಸ್ಟ್ರಾಟಜಿ” ಪರಿಕಲ್ಪನೆಯ ಪ್ರಮುಖ ವಕ್ತಾರರಲ್ಲಿ ಒಂದಾಗಿದೆ.
  3. ಮುಕ್ತ ಆರ್ಥಿಕತೆಯ ಪ್ರಾರಂಭದೊಂದಿಗೆ , ಭಾರತವು ತನ್ನ ಹಿಂದೂ ಮಹಾಸಾಗರದಲ್ಲಿನ ನೆರೆಯ ದೇಶಗಳೊಂದಿಗೆ ಮತ್ತು ವಿಶ್ವದ ಪ್ರಮುಖ ಕಡಲ ಶಕ್ತಿಗಳೊಂದಿಗೆ ಸಂಬಂಧವನ್ನು ಸ್ಥಾಪಿಸುತ್ತಿದೆ.

Current Affairs

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು: ಭಾರತೀಯ ಆರ್ಥಿಕತೆ ಮತ್ತು ಯೋಜನೆ, ಸಂಪನ್ಮೂಲಗಳ ಕ್ರೋಡೀಕರಣ , ಪ್ರಗತಿ, ಅಭಿವೃದ್ಧಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಸಮಸ್ಯೆಗಳು.

ಸಹ-ಸಾಲ ನೀಡುವ ಮಾದರಿ- ಬ್ಯಾಂಕ್ ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳ (NBFC) ಮೂಲಕ ಸಹ-ಸಾಲ ನೀಡುವಿಕೆ:


(ಕೊ–ಲೆಂಡಿಂಗ್ ಮಾಡೆಲ್ ಬ್ಯಾಂಕ್ NBFC ಕೊ–ಲೆಂಡಿಂಗ್/ Co-Lending Model- Bank-NBFC co-lending)

ಸಂದರ್ಭ:

ಸೆಪ್ಟೆಂಬರ್ 2018 ರಲ್ಲಿ, ಆರ್‌ಬಿಐ ಪೂರ್ವ ಒಪ್ಪಂದದ ಆಧಾರದ ಮೇಲೆ ಬ್ಯಾಂಕ್‌ಗಳಿಗೆ, ಆದ್ಯತಾ ವಲಯಕ್ಕೆ ಸಾಲವನ್ನು ನೀಡುವುದಕ್ಕಾಗಿ, HFCಗಳನ್ನು ಒಳಗೊಂಡಂತೆ ಎಲ್ಲಾ ನೋಂದಾಯಿತ ನಾನ್-ಬ್ಯಾಂಕಿಂಗ್ ಹಣಕಾಸು ಕಂಪನಿಗಳೊಂದಿಗೆ (NBFCs) ಸಹ-ಸಾಲ (Co-Lending) ವನ್ನು ನೀಡಲು ಅನುಮತಿ ನೀಡಿತ್ತು.

  1. ಇದರ ನಂತರ, ಹಲವಾರು ಬ್ಯಾಂಕುಗಳು ‘ಬ್ಯಾಂಕೇತರ ಹಣಕಾಸು ಕಂಪನಿಗಳೊಂದಿಗೆ’ ಸಹ-ಸಾಲ ನೀಡುವ ‘ಮಾಸ್ಟರ್ ಒಪ್ಪಂದಗಳನ್ನು’ ಮಾಡಿಕೊಂಡಿವೆ ಮತ್ತು ಅಂತಹ ಹಲವಾರು ಒಪ್ಪಂದಗಳು ಪ್ರಕ್ರಿಯೆಯಲ್ಲಿವೆ.

ಸಂಬಂಧಿತ ಕಾಳಜಿಗಳು:

ಈ ರೀತಿಯ ಒಪ್ಪಂದಗಳು ಬ್ಯಾಂಕ್‌ಗಳು ಮತ್ತು ಎನ್‌ಬಿಎಫ್‌ಸಿಗಳ ನಡುವೆ ಅಸಾಮಾನ್ಯ ಸಂಬಂಧಗಳಿಗೆ ಕಾರಣವಾಗಿವೆ. ಉದಾಹರಣೆಗೆ, ರೈತರಿಗೆ ಟ್ರ್ಯಾಕ್ಟರ್‌ಗಳು ಮತ್ತು ಕೃಷಿ ಉಪಕರಣಗಳನ್ನು ಖರೀದಿಸಲು ಸಹಾಯ ಮಾಡಲು ಸಹ-ಸಾಲಗಳನ್ನು ನೀಡಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅದಾನಿ ಕ್ಯಾಪಿಟಲ್, ಎಂಬ ಸಣ್ಣ NBFC ಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.

ಸಹ-ಸಾಲ ನೀಡುವಿಕೆಯಲ್ಲಿ ಹೆಚ್ಚಿನ ಅಪಾಯದ ಸಂಭಾವ್ಯತೆ: ಎನ್‌ಬಿಎಫ್‌ಸಿಗಳು ತಮ್ಮ ದಾಖಲೆಯ ರಿಜಿಸ್ಟರ್‌ನಲ್ಲಿ ಕನಿಷ್ಠ 20 ಪ್ರತಿಶತ ವೈಯಕ್ತಿಕ ಸಾಲಗಳನ್ನು ನಿರ್ವಹಿಸಬೇಕಾಗುತ್ತದೆ.ಅಂದರೆ ಶೇಕಡ 80ರಷ್ಟು ಅಪಾಯ ಬ್ಯಾಂಕ್ ಗಳೊಂದಿಗೆ ಇರುತ್ತದೆ. ಈ ಕಾರಣದಿಂದಾಗಿ, ಸಾಲವನ್ನು ಪಾವತಿಸದ (ಡೀಫಾಲ್ಟ್) ಸಂದರ್ಭದಲ್ಲಿ ಬ್ಯಾಂಕುಗಳು ಭಾರಿ ನಷ್ಟವನ್ನು ಅನುಭವಿಸಬೇಕಾಗುತ್ತದೆ.

ಬ್ಯಾಂಕಿಂಗ್‌ನಲ್ಲಿ ಕಾರ್ಪೊರೇಟ್ ಗಳು: ಆರ್‌ಬಿಐ ಅಧಿಕೃತವಾಗಿ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳನ್ನು ಬ್ಯಾಂಕಿಂಗ್ ವಲಯಕ್ಕೆ ಪ್ರವೇಶಿಸಲು ಅನುಮತಿಸಿಲ್ಲ, ಆದರೂ ಬ್ಯಾಂಕೇತರ ಹಣಕಾಸು ಕಂಪನಿಗಳು (ಎನ್‌ಬಿಎಫ್‌ಸಿ) ಹೆಚ್ಚಾಗಿ ಕಾರ್ಪೊರೇಟ್ ಸಂಸ್ಥೆಗಳಿಂದ ಪ್ರಾರಂಭಿಸಲ್ಪಟ್ಟಿವೆ, ಹಾಗೂ ಈಗಾಗಲೇ ಸಾರ್ವಜನಿಕ ಠೇವಣಿಗಳನ್ನು ಸ್ವೀಕರಿಸುತ್ತಿವೆ. ನೇರ ಸಹ-ಸಾಲ ವ್ಯವಸ್ಥೆಯ ಮೂಲಕ ಸಾಲ ನೀಡಲು ಅವರಿಗೆ ಈಗ ಹೆಚ್ಚಿನ ಅವಕಾಶಗಳಿವೆ.

ಸಹ-ಸಾಲ ನೀಡುವ ಮಾದರಿ (ಕೊ–ಲೆಂಡಿಂಗ್ ಮಾಡೆಲ್) ಎಂದರೇನು?

ಸಹ-ಸಾಲ ನೀಡುವ ಮಾದರಿಯ ಅಡಿಯಲ್ಲಿ, ಪಾಲುದಾರ ಸಾಲದಾತರಿಬ್ಬರಿಗೂ ಸೌಲಭ್ಯ ಮಟ್ಟದಲ್ಲಿ ಜಂಟಿ ಸಾಲವನ್ನು ನೀಡಲು ಅನುಮತಿಸಲಾಗುತ್ತದೆ, ಜೊತೆಗೆ ಇದರಲ್ಲಿ ಅಪಾಯ ಮತ್ತು ಲಾಭವೂ ಹಂಚಿಕೆಯಾಗಿರುತ್ತದೆ.

ಗುರಿ: ಆರ್ಥಿಕತೆಯಿಂದ ವಂಚಿತ ಮತ್ತು ಸ್ವಲ್ಪ ಹಿಂದುಳಿದ ವಲಯಗಳಿಗೆ ಸಾಲದ ಹರಿವನ್ನು ಸುಧಾರಿಸಲು.

ಮಾದರಿಯ ಮಹತ್ವ:

  1. ಬ್ಯಾಂಕ್‌ಗಳಿಂದ ಕಡಿಮೆ ವೆಚ್ಚದಲ್ಲಿ ನಿಧಿಗಳು ಮತ್ತು ‘ಬ್ಯಾಂಕೇತರ ಹಣಕಾಸು ಕಂಪನಿಗಳ’ ಹೆಚ್ಚಿನ ಪ್ರವೇಶವು ಫಲಾನುಭವಿಗೆ ಕೈಗೆಟುಕುವ ವೆಚ್ಚದಲ್ಲಿ ಕ್ರೆಡಿಟ್ ಲಭ್ಯವಾಗುವಂತೆ ಮಾಡುತ್ತದೆ.
  2. ಇದು ಬ್ಯಾಂಕ್‌ಗಳಿಗೆ ಗ್ರಾಹಕರ ನೆಲೆಯನ್ನು ವಿಸ್ತರಿಸಲು ಸಹಾಯ ಮಾಡುತ್ತದೆ ಮತ್ತು ಬ್ಯಾಂಕ್‌ಗಳು ಕೊನೆಯ ಮೈಲಿ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸಲು ಅನುವು ಮಾಡಿಕೊಡುತ್ತದೆ.

 

ವಿಷಯಗಳು: ಆಂತರಿಕ ಭದ್ರತೆಗೆ ಸವಾಲನ್ನು ಒಡ್ಡುವ ಆಡಳಿತ ವಿರೋಧಿ ಅಂಶಗಳ ಪಾತ್ರ.

ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (UAPA)


(Unlawful Activities (Prevention) Act (UAPA):

ಸಂದರ್ಭ:

ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವಾಲಯ ನೀಡಿದ ಮಾಹಿತಿಯ ಪ್ರಕಾರ:

2018 ಮತ್ತು 2020 ರ ನಡುವೆ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ (Unlawful Activities (Prevention) Act – UAPA) ಅಡಿಯಲ್ಲಿ ದೇಶದಲ್ಲಿ ಬಂಧಿಸಲಾದ ಸುಮಾರು 57 ಪ್ರತಿಶತ ವ್ಯಕ್ತಿಗಳು 30 ವರ್ಷದೊಳಗಿನವರಾಗಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ‘ಭಯೋತ್ಪಾದನಾ ವಿರೋಧಿ ಕಾಯ್ದೆ’ಯ ಅಡಿಯಲ್ಲಿ 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರ ಬಂಧಿಸುವ ಪ್ರಕ್ರಿಯೆಯಲ್ಲಿ ಅತಿ ಹೆಚ್ಚು (931) ಬಂಧನಗಳಿಗೆ ಉತ್ತರ ಪ್ರದೇಶ ಸಾಕ್ಷಿಯಾಗಿದೆ. ಅಲ್ಲದೆ, ಈ ಅವಧಿಯಲ್ಲಿ ಯುಎಪಿಎ ಅಡಿಯಲ್ಲಿ ರಾಜ್ಯದಲ್ಲಿ ನಡೆದ ಒಟ್ಟು ಬಂಧನಗಳಲ್ಲಿ 70% ರಷ್ಟು 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರು.

ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ ಕುರಿತು:

1967 ರಲ್ಲಿ ಅಂಗೀಕರಿಸಲ್ಪಟ್ಟ ಈ ಕಾನೂನು (the Unlawful Activities (Prevention) Act) ಭಾರತದಲ್ಲಿ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುವ ಗುಂಪುಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ಗುರಿಯನ್ನು ಹೊಂದಿದೆ.

ಈ ಕಾಯಿದೆಯು ಕೇಂದ್ರ ಸರ್ಕಾರಕ್ಕೆ ಸಂಪೂರ್ಣ ಅಧಿಕಾರವನ್ನು ನೀಡುತ್ತಿದ್ದು ಅದರ ಮೂಲಕ ಕೇಂದ್ರವು ಒಂದು ಚಟುವಟಿಕೆಯನ್ನು ಕಾನೂನುಬಾಹಿರವೆಂದು ಭಾವಿಸಿದರೆ ಸರ್ಕಾರವು ಅಧಿಕೃತ ಗೆಜೆಟ್ ಮೂಲಕ ಅದನ್ನು ಘೋಷಿಸಬಹುದು.

  1. ಮರಣದಂಡನೆ ಮತ್ತು ಜೀವಾವಧಿ ಶಿಕ್ಷೆಯನ್ನು ಗರಿಷ್ಠ ಶಿಕ್ಷೆಯಾಗಿ ನೀಡಬಹುದಾಗಿದೆ.

ಮುಖ್ಯ ಅಂಶಗಳು:

UAPA ಅಡಿಯಲ್ಲಿ, ಭಾರತೀಯ ಮತ್ತು ವಿದೇಶಿ ಪ್ರಜೆಗಳು, ಇಬ್ಬರನ್ನು ಬಂಧಿಸಿ ವಿಚಾರಣೆಗೊಳಪಡಿಸಬಹುದು.

ಭಾರತದ ಹೊರಗಿನ ವಿದೇಶಿ ನೆಲದಲ್ಲಿ ಅಪರಾಧ ನಡೆದರೂ ಅಪರಾಧಿಗಳಿಗೆ ಈ ಕಾಯ್ದೆಯು ಭಾರತೀಯ ಮತ್ತು ವಿದೇಶಿ ಅಪರಾಧಿಗಳಿಗೆ ಸಮಾನವಾಗಿ ಅನ್ವಯಿಸುತ್ತದೆ.

ಯುಎಪಿಎ ಅಡಿಯಲ್ಲಿ, ತನಿಖಾ ಸಂಸ್ಥೆಯು ಬಂಧನದ ನಂತರ ಗರಿಷ್ಠ 180 ದಿನಗಳಲ್ಲಿ ಚಾರ್ಜ್‌ಶೀಟ್ ಸಲ್ಲಿಸಬಹುದು ಮತ್ತು ನ್ಯಾಯಾಲಯಕ್ಕೆ ಮಾಹಿತಿ ನೀಡಿದ ನಂತರ ಅವಧಿಯನ್ನು ಇನ್ನಷ್ಟು ವಿಸ್ತರಿಸಬಹುದು.

2019 ರ ತಿದ್ದುಪಡಿಗಳ ಪ್ರಕಾರ:

  1. NIA ಯಿಂದ ಪ್ರಕರಣದ ತನಿಖೆ ನಡೆದಾಗ ಆಸ್ತಿಯನ್ನು ವಶಪಡಿಸಿಕೊಳ್ಳಲು ಅಥವಾ ಲಗತ್ತಿಸಲು ಅನುಮತಿ ನೀಡಲು ರಾಷ್ಟ್ರೀಯ ತನಿಖಾ ಸಂಸ್ಥೆಯ (NIA) ಮಹಾನಿರ್ದೇಶಕರಿಗೆ ಈ ಕಾಯಿದೆ ಅಧಿಕಾರ ನೀಡುತ್ತದೆ.
  2. DSP ಅಥವಾ ACP ಅಥವಾ ರಾಜ್ಯದ ಉನ್ನತ ಶ್ರೇಣಿಯ ಅಧಿಕಾರಿಯೊಬ್ಬರು ತನಿಖೆ ನಡೆಸಿದ ಪ್ರಕರಣಗಳಿಗೆ ಹೆಚ್ಚುವರಿಯಾಗಿ ಭಯೋತ್ಪಾದನೆ ಪ್ರಕರಣಗಳ ತನಿಖೆ ನಡೆಸಲು ಇನ್ಸ್‌ಪೆಕ್ಟರ್ ಅಥವಾ ಹೆಚ್ಚಿನ ಹುದ್ದೆಯ NIA ಅಧಿಕಾರಿಗಳಿಗೆ ಈ ಕಾಯ್ದೆ ಅಧಿಕಾರ ನೀಡುತ್ತದೆ.
  3. ಒಬ್ಬ ವ್ಯಕ್ತಿಯನ್ನು ಭಯೋತ್ಪಾದಕನೆಂದು ಘೋಷಿಸುವ ಅವಕಾಶವೂ ಇದರಲ್ಲಿ ಸೇರಿದೆ. ಈ ತಿದ್ದುಪಡಿಗೆ ಮುಂಚಿತವಾಗಿ ಕೇವಲ ಸಂಘಟನೆಗಳನ್ನು ಮಾತ್ರ ಭಯೋತ್ಪಾದಕ ಸಂಘಟನೆಗಳು ಎಂದು ಗುರುತಿಸಬಹುದಾಗಿತ್ತು.

UAPA ಕುರಿತು ದೆಹಲಿ ಉಚ್ಚ ನ್ಯಾಯಾಲಯದ ವ್ಯಾಖ್ಯಾನ:

ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ, 1967, (UAPA) ಯ “ಅಸ್ಪಷ್ಟ” ಸೆಕ್ಷನ್ 15 ರ ಬಾಹ್ಯರೇಖೆಗಳನ್ನು ( Section 15 of the Unlawful Activities (Prevention) Act, 1967) ವ್ಯಾಖ್ಯಾನಿಸುವ ತೀರ್ಪನ್ನು ನೀಡುವ ಸಂದರ್ಭದಲ್ಲಿ,ದೆಹಲಿ ಹೈಕೋರ್ಟ್‌ನ ವಿಭಾಗೀಯ ಪೀಠವು ಕಾಯಿದೆಯ ಸೆಕ್ಷನ್ 15, 17 ಮತ್ತು 18 ರ ಮೇಲೆ ಕೆಲವು ಪ್ರಮುಖ ತತ್ವಗಳನ್ನು ವಿಧಿಸಿದೆ.

ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯ 15, 17 ಮತ್ತು 18ನೇ ವಿಭಾಗಗಳು(ಸೆಕ್ಷನ್ ಗಳು):

  1. ಕಾಯ್ದೆಯ ಸೆಕ್ಷನ್.15 ‘ಭಯೋತ್ಪಾದಕ ಕೃತ್ಯ’ ಕ್ಕೆ ಸಂಬಂಧಿಸಿದ ಆರೋಪವನ್ನು ಹೋರಿಸಲಾಗುತ್ತದೆ.
  2. ಸೆಕ್ಷನ್.17 ಭಯೋತ್ಪಾದಕ ಕೃತ್ಯ ಎಸಗಲು ಹಣವನ್ನು ಸಂಗ್ರಹಿಸಿದ್ದಕ್ಕಾಗಿ ಶಿಕ್ಷೆಯನ್ನು ವಿಧಿಸುತ್ತದೆ.
  3. ಸೆಕ್ಷನ್.18 ರ ಅಡಿಯಲ್ಲಿ, ‘ಭಯೋತ್ಪಾದಕ ಕೃತ್ಯ ಎಸಗಲು ಸಂಚು ಅಥವಾ ಭಯೋತ್ಪಾದಕ ಕೃತ್ಯ ಎಸಗಲು ಯಾವುದೇ ಪೂರ್ವಸಿದ್ಧತೆಯಲ್ಲಿನ’ ಕೃತ್ಯ ಎಂಬ ಆರೋಪವನ್ನು ಹೊರಿಸಲಾಗುತ್ತದೆ.

ನ್ಯಾಯಾಲಯ ಮಾಡಿದ ಪ್ರಮುಖ ಅವಲೋಕನಗಳು:

  1. “ಭಯೋತ್ಪಾದಕ ಕಾಯ್ದೆ”ಗಳನ್ನು ಕ್ಷುಲ್ಲಕಗೊಳಿಸಲು ಲಘುವಾಗಿ ಪರಿಗಣಿಸಬಾರದು.
  2. ಭಯೋತ್ಪಾದಕ ಚಟುವಟಿಕೆಯೆಂದರೆ ಸಾಮಾನ್ಯ ದಂಡನೆ ಕಾನೂನಿನಡಿಯಲ್ಲಿ ವ್ಯವಹರಿಸಲು ಕಾನೂನು ಜಾರಿ ಸಂಸ್ಥೆಗಳ ಸಾಮರ್ಥ್ಯವನ್ನು ಮೀರಿ ವ್ಯವಹರಿಸುತ್ತದೆ. ಹಿತೇಂದ್ರ ವಿಷ್ಣು ಠಾಕೂರ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ಈ ನ್ಯಾಯಾಲಯವು ಆಧಾರವಾಗಿ ಉಲ್ಲೇಖಿಸಿದೆ.
  3. ಹಿತೇಂದ್ರ ವಿಷ್ಣು ಠಾಕೂರ್ ತೀರ್ಪಿನಲ್ಲಿ ಸರ್ವೋಚ್ಚ ನ್ಯಾಯಾಲಯವು ಪ್ರತಿಯೊಬ್ಬ ಭಯೋತ್ಪಾದಕನು ಅಪರಾಧಿಯಾಗಬಹುದು ಆದರೆ ಪ್ರತಿಯೊಬ್ಬ ಅಪರಾಧಿಯನ್ನು ಭಯೋತ್ಪಾದಕ ಎಂದು ಹಣೆಪಟ್ಟಿ ಕಟ್ಟಲಾಗುವುದಿಲ್ಲ ಎಂದು ತೀರ್ಪು ನೀಡಿದೆ.
  4. ಭಯೋತ್ಪಾದಕ ಕೃತ್ಯಗಳನ್ನು ರಾಜ್ಯದ ಸಾಮಾನ್ಯ ಕಾನೂನು ಸುವ್ಯವಸ್ಥೆಯ ಸಮಸ್ಯೆಯೊಂದಿಗೆ ಸಮೀಕರಿಸಬಾರದು.
  5. “ಭಯೋತ್ಪಾದಕ ಕಾಯ್ದೆ”ಯನ್ನು, ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಸಾಂಪ್ರದಾಯಿಕ ಅಪರಾಧಗಳ ಅಡಿಯಲ್ಲಿ ಬರುವ ಪ್ರಕರಣಗಳಿಗೆ ಸಾಮಾನ್ಯವಾಗಿ ಅನ್ವಯಿಸಲು ಬರುವುದಿಲ್ಲ.
  6. ಸರ್ಕಾರ ಅಥವಾ ಸಂಸತ್ತಿನ ನಡೆಗಳ ಬಗ್ಗೆ ವ್ಯಾಪಕ ವಿರೋಧ ಇದ್ದಾಗ ಆಕ್ರೋಶಭರಿತ ಭಾಷಣಗಳು, ರಸ್ತೆ ತಡೆಯಂತಹ ಕೃತ್ಯಗಳು ಅಸಾಮಾನ್ಯ ಏನಲ್ಲ. ಸರ್ಕಾರ ಅಥವಾ ಸಂಸತ್ತಿನ ನಡವಳಿಕೆಯ ವಿರುದ್ಧ ಪ್ರತಿಭಟನೆ ನಡೆಸುವುದು ಕಾನೂನುಬಾಹಿರವೂ ಅಲ್ಲ. ಇಂತಹ ಪ್ರತಿಭಟನೆಗಳು ಶಾಂತಿಯುತವಾಗಿ, ಅಹಿಂಸಾತ್ಮಕವಾಗಿ ಇರಬೇಕು. ಆದರೆ, ಪ್ರತಿಭಟನಕಾರರು ಕಾನೂನಿನ ಮಿತಿಯನ್ನು ಮೀರುವುದೂ ಅಸಾಮಾನ್ಯ ಅಲ್ಲ ಎಂದು ನ್ಯಾಯಾಲಯವು ಹೇಳಿದೆ.
  7. ಈಗಿನ ಪ್ರಕರಣದಲ್ಲಿ, ಆಕ್ರೋಶಭರಿತ ಭಾಷಣ ಮಾಡಲಾಗಿದೆ, ಮಹಿಳಾ ಪಪ್ರತಿಭಟನಕಾರರಿಗ ಕುಮ್ಮಕ್ಕು ನೀಡಲಾಗಿದೆ ಎಂದು ವಾದಕ್ಕೆ ಒಪ್ಪಿಕೊಂಡು, ಸಂವಿಧಾನವು ನೀಡಿದ ಪ್ರತಿಭಟನೆಯ ಮಿತಿಯನ್ನು ಇದು ಮೀರಿದೆ ಎಂದು ಭಾವಿಸಿದರೂ ಇದನ್ನು ಕಾನೂನುಬಾಹಿರ ಕೃತ್ಯಗಳ ತಡೆ ಕಾಯ್ದೆಯಲ್ಲಿ ವಿವರಿಸಿರುವ ಭಯೋತ್ಪಾದನಾ ಕೃತ್ಯ ಅಥವಾ ಷಡ್ಯಂತ್ರ ಎಂದು ಪರಿಗಣಿಸಲು ಸಾಧ್ಯವಿಲ್ಲ’ ಎಂದು ಪೀಠವು ವಿವರಿಸಿದೆ.
  8. ಆರೋಪಿಗಳ ಮೇಲೆ ಹೊರಿಸಲಾಗಿರುವ ಆರೋಪಗಳಿಗೂ ಆರೋಪಪಟ್ಟಿ ಮತ್ತು ಅದರ ಜತೆಗೆ ಇರಿಸಿದ್ದ ದಾಖಲೆಗಳಿಗೂ ಯಾವುದೇ ಸಂಬಂಧ ಇರುವುದು ಮೇಲ್ನೋಟಕ್ಕೆ ಕಾಣಿಸುತ್ತಿಲ್ಲ ಎಂದೂ ಪೀಠವು ಹೇಳಿದೆ.
  9. ಭಿನ್ನಮತವನ್ನು ದಮನಿಸುವ ಕಾತರ ಮತ್ತು ಪರಿಸ್ಥಿತಿಯು ಕೈಮೀರಿ ಹೋಗಬಹುದು ಎಂಬ ಅನಾರೋಗ್ಯಕರ ಭೀತಿಯಿಂದಾಗಿ, ಸಂವಿಧಾನವು ಖಾತರಿಪಡಿಸಿರುವ ಪ್ರತಿಭಟನೆಯ ಹಕ್ಕು ಮತ್ತು ಭಯೋತ್ಪಾದನೆಯ ನಡುವಣ ರೇಖೆಯನ್ನು ಸರ್ಕಾರವು ಮಸುಕಾಗಿಸಿದೆ. ಈ ಮನಸ್ಥಿತಿಯೇ ಗಟ್ಟಿಗೊಂಡರೆ ಅದು ಪ್ರಜಾಪ್ರಭುತ್ವಕ್ಕೆ ವಿಷಾದದ ದಿನ ಎಂದು ಹೇಳದೆ ವಿಧಿಯಿಲ್ಲ ಎಂದು ಪೀಠವು ಹೇಳಿದೆ.

ಈ ತೀರ್ಪಿನ ಪರಿಣಾಮಗಳು:

  1. ಈ ತೀರ್ಪಿನೊಂದಿಗೆ, UAPA ಅಡಿಯಲ್ಲಿ ಭಯೋತ್ಪಾದನೆ ಕೃತ್ಯದ ಆರೋಪದ ಮೇಲೆ ವ್ಯಕ್ತಿಯನ್ನು ಬಂಧಿಸಲು ನಿರ್ಬಂಧವನ್ನು ನ್ಯಾಯಾಲಯವು ಹೆಚ್ಚಿಸಿದೆ.
  2. “ಭಯೋತ್ಪಾದನೆ” ಪ್ರಕರಣಗಳ ವಿಭಾಗದಲ್ಲಿ ಅಗತ್ಯವಾಗಿ ಬರದ ಪ್ರಕರಣಗಳಲ್ಲಿ ಸಹ ವ್ಯಕ್ತಿಗಳ ವಿರುದ್ಧ UAPA ಅನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ನ್ಯಾಯಾಲಯವು ಗಮನಸೆಳೆದಿದೆ.
  3. ಛತ್ತೀಸಗಡದ ಬುಡಕಟ್ಟು ಜನಾಂಗದವರ ವಿರುದ್ಧ, ಜಮ್ಮು ಮತ್ತು ಕಾಶ್ಮೀರದ ಪ್ರಾಕ್ಸಿ ಸರ್ವರ್‌ಗಳ ಮೂಲಕ ಸಾಮಾಜಿಕ ಮಾಧ್ಯಮವನ್ನು ಬಳಸುತ್ತಿರುವವರ ವಿರುದ್ಧ ಮತ್ತು ಮಣಿಪುರದ ಪತ್ರಕರ್ತರ ವಿರುದ್ಧ ರಾಜ್ಯವು ಈ ನಿಬಂಧನೆಯನ್ನು ವ್ಯಾಪಕ ಶ್ರೇಣಿಯ ಅಪರಾಧಗಳಲ್ಲಿ ಬಳಸಿರುವುದರಿಂದ ಈ ಎಚ್ಚರಿಕೆಯು ಗಮನಾರ್ಹವಾಗಿದೆ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಕೊನ್ಯಾಕ್ ನಾಗಾಸ್:

(Konyak Nagas)

ನಾಗಾಲ್ಯಾಂಡ್‌ನ ‘ಮೊನ್’ ಜಿಲ್ಲೆಯಲ್ಲಿ ನೆಲೆಸಿರುವ ಕೊನ್ಯಾಕ್ ನಾಗಾ ಬುಡಕಟ್ಟಿನ ಅತ್ಯುನ್ನತ ಸಂಸ್ಥೆಯಾದ ಕೊನ್ಯಾಕ್ ಯೂನಿಯನ್ (Konyak Union – KU), ಕೊನ್ಯಾಕ್ ನೆಲದಲ್ಲಿ ಸಶಸ್ತ್ರ ಪಡೆಗಳೊಂದಿಗೆ ತನ್ನ “ಅಸಹಕಾರ”ವನ್ನು ಮುಂದುವರಿಸಲು ಸೋಮವಾರ ಹೊಸ ನಿಯಮಾವಳಿಗಳನ್ನು ಘೋಷಿಸಿದೆ.ಇತ್ತೀಚೆಗೆ ಓಟಿಂಗ್ ಗ್ರಾಮದಲ್ಲಿ ಭದ್ರತಾ ಎನ್‌ಕೌಂಟರ್‌ನಲ್ಲಿ 14 ನಾಗರಿಕರು ಸಾವನ್ನಪ್ಪಿದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಕೊನ್ಯಾಕ್ ನಾಗಾ ಸಮುದಾಯದ ಬಗ್ಗೆ:

  1. ಎಲ್ಲಾ ನಾಗಾ ಬುಡಕಟ್ಟುಗಳಲ್ಲಿ ಕೊನ್ಯಾಕ್ ನಾಗಾ ಸಮುದಾಯವು ಅತಿ ದೊಡ್ಡ ಸಮುದಾಯವಾಗಿದೆ.
  2. ಅವರು ನಾಗಾಲ್ಯಾಂಡ್‌ನ ಮೋನ್ ಜಿಲ್ಲೆಯಲ್ಲಿ ವಾಸಿಸುತ್ತಿದ್ದಾರೆ – ಇದನ್ನು ‘ದಿ ಲ್ಯಾಂಡ್ ಆಫ್ ದಿ ಆಂಗ್ಸ್’ (The Land of The Anghs) ಎಂದೂ ಕರೆಯುತ್ತಾರೆ.
  3. ಆಂಗ್ಸ್/ವಾಂಗ್‌ (Anghs/Wangs) ಗಳು ಅವರ ಸಾಂಪ್ರದಾಯಿಕ ಮುಖ್ಯಸ್ಥರಾಗಿದ್ದು, ಅವರನ್ನು ಕೊನ್ಯಾಕ್ ನಾಗಾ ಸಮುದಾಯದವರು ಅತಿ ಹೆಚ್ಚು ಗೌರವಿಸುತ್ತಾರೆ.
  4. ಈ ಬುಡಕಟ್ಟಿನ ಜನರು, ಶತ್ರುಗಳ ಶಿರಚ್ಛೇದ ಮಾಡಿದ ನಂತರ, ತಮ್ಮ ಮುಖದ ಮೇಲೆ ಹಚ್ಚೆಗಳನ್ನು (ಟ್ಯಾಟೂ) ಹಾಕಿಸಿಕೊಳ್ಳುತ್ತಾರೆ.
  5. ಬಂದೂಕು ತಯಾರಿಕೆ, ಕಬ್ಬಿಣ ಕರಗಿಸುವುದು, ಹಿತ್ತಾಳೆ ಕೆಲಸ ಮತ್ತು ಗನ್ ಪೌಡರ್ ತಯಾರಿಕೆ ಇವರನ್ನು ಇತರ ಸಮುದಾಯಗಳಿಂದ ಪ್ರತ್ಯೇಕಿಸುತ್ತದೆ. ಈ ಜನರು ‘ಜಂಗ್ಲಾವ್’ (Machetes) ಮತ್ತು ಮರದ ಮೂರ್ತಿಗಳನ್ನು ತಯಾರಿಸುವಲ್ಲಿ ಪರಿಣತಿ ಹೊಂದಿದ್ದಾರೆ.
  6. ಹಬ್ಬಗಳು: ಕೊನ್ಯಾಕ್ ಸಮುದಾಯದ ಅತಿದೊಡ್ಡ ಹಬ್ಬವಾದ ಆಒಲೆಂಗ್ (Aoleng), ವಸಂತವನ್ನು ಸ್ವಾಗತಿಸಲು ಮತ್ತು ಬೀಜಗಳನ್ನು ಬಿತ್ತುವ ಮೊದಲು ಭೂಮಿಯ ಮೇಲೆ ಸರ್ವಶಕ್ತನ (ಕಹ್ವಾಂಗ್) ಆಶೀರ್ವಾದವನ್ನು ಕೋರಲು ಏಪ್ರಿಲ್ (1-6) ಮೊದಲ ವಾರದಲ್ಲಿ ಆಚರಿಸಲಾಗುತ್ತದೆ.
  7. ಮತ್ತೊಂದು ಹಬ್ಬವೆಂದರೆ ಲಾವೊ ಒಂಗ್ ಮೋ, ಇದು ಆಗಸ್ಟ್/ಸೆಪ್ಟೆಂಬರ್ ತಿಂಗಳುಗಳಲ್ಲಿ ಆಚರಿಸಲಾಗುವ ಸಾಂಪ್ರದಾಯಿಕ ಸುಗ್ಗಿಯ ಹಬ್ಬವಾಗಿದೆ.

current affairs

ಭುವನ ಸುಂದರಿ-2021:

ಡಿಸೆಂಬರ್ 13, 2021 ರಂದು ಇಸ್ರೇಲ್‌ನಲ್ಲಿ ನಡೆದ ಸಮಾರಂಭದಲ್ಲಿ ಚಂಡೀಗಢದ ಹರ್ನಾಜ್ ಸಂಧು 70 ನೇ ಭುವನ ಸುಂದರಿ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ಭಾರತಕ್ಕೆ 21 ವರ್ಷಗಳ ನಂತರ ವಿಶ್ವ ಸುಂದರಿ ಪಟ್ಟ ಸಿಕ್ಕಿದೆ. ಇದಕ್ಕೂ ಮೊದಲು ಈ ಗೌರವವನ್ನು ನಟಿ ಸುಶ್ಮಿತಾ ಸೇನ್ ಅವರು 1994 ರಲ್ಲಿ ಮತ್ತು ನಟಿ ಲಾರಾ ದತ್ತಾ ಅವರು 2000 ರಲ್ಲಿ ಭಾರತಕ್ಕೆ ದೊರಕಿಸಿದ್ದರು.

current affairs


  • Join our Official Telegram Channel HERE for Motivation and Fast Updates
  • Subscribe to our YouTube Channel HERE to watch Motivational and New analysis videos

[ad_2]

Leave a Comment