[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 10ನೇ ಆಗಸ್ಟ್ 2021 – INSIGHTSIAS

[ad_1]

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ 1:

1. ಅರಬ್ಬಿ ಸಮುದ್ರದಲ್ಲಿ ಚಂಡಮಾರುತಗಳ ಆವರ್ತನ ಮತ್ತು ತೀವ್ರತೆಯ ಏರಿಕೆ.

 

ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ಕಡಲ ಸಹಕಾರವನ್ನು ಹೆಚ್ಚಿಸಲು ಭಾರತದ 5 ಅಂಶಗಳ ಕಾರ್ಯಸೂಚಿ.

2. ಸಮುದ್ರ ಕಾನೂನಿನ ಮೇಲೆ ವಿಶ್ವಸಂಸ್ಥೆಯ ಸಮಾವೇಶ (UNCLOS).

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ಖಾದ್ಯ ತೈಲ-ಪಾಮ್ ತೈಲದ ಕುರಿತ ರಾಷ್ಟ್ರೀಯ ಮಿಷನ್ (NMEO-OP).

2. ನಾಸಾದ ಪರ್ಸೇವೆರನ್ಸ್ ರೋವರ್.

3. ಪರಾರಿಯಾದ ಆರ್ಥಿಕ ಅಪರಾಧಿ ಯಾರು?

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ಅಂತರಾಷ್ಟ್ರೀಯ ಸೇನಾ ಆಟಗಳು.

2. ರಾಷ್ಟ್ರೀಯ ನಾಟಕ ಶಾಲೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 1


 

ವಿಷಯಗಳು: ಭೂಕಂಪಗಳು, ಸುನಾಮಿ, ಜ್ವಾಲಾಮುಖಿ ಚಟುವಟಿಕೆಗಳು ಚಂಡಮಾರುತ ಮುಂತಾದ ಪ್ರಮುಖ ಭೌಗೋಳಿಕ ವಿದ್ಯಮಾನಗಳು, ಭೌಗೋಳಿಕ ಲಕ್ಷಣಗಳು ಮತ್ತು ಅವುಗಳ ಸ್ಥಳ- ನಿರ್ಣಾಯಕ ಭೌಗೋಳಿಕ ವೈಶಿಷ್ಟ್ಯಗಳಲ್ಲಿನ ಬದಲಾವಣೆಗಳು (ಸಾಗರಗಳು ಮತ್ತು ಐಸ್-ಕ್ಯಾಪ್ಗಳು ಸೇರಿದಂತೆ) ಮತ್ತು ಸಸ್ಯ ಮತ್ತು ಪ್ರಾಣಿ ಮತ್ತು ಅಂತಹ ಬದಲಾವಣೆಗಳ ಪರಿಣಾಮಗಳು.

ಅರಬ್ಬಿ ಸಮುದ್ರದಲ್ಲಿ ಚಂಡಮಾರುತಗಳ ಆವರ್ತನ ಮತ್ತು ತೀವ್ರತೆಯ ಏರಿಕೆ:


(Rise in frequency and intensity of cyclones in Arabian Sea)

ಸಂದರ್ಭ:

ಕಳೆದ ಎರಡು ದಶಕಗಳಲ್ಲಿ ಅರೇಬಿಯನ್ ಸಮುದ್ರದ ಮೇಲೆ ಬೆಳೆಯುತ್ತಿರುವ ಚಂಡಮಾರುತಗಳ ಆವರ್ತನ ಮತ್ತು ತೀವ್ರತೆಯಲ್ಲಿ ಗಮನಾರ್ಹ ಹೆಚ್ಚಳ ಕಂಡುಬಂದಿದೆ, ಆದರೆ ತುಲನಾತ್ಮಕವಾಗಿ ಅದೇ ಅವಧಿಯಲ್ಲಿ ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಆವರ್ತನಗಳು / ಬಿರುಗಾಳಿಗಳು ಕಂಡುಬಂದಿವೆ.

 

ಪ್ರಮುಖ ಬದಲಾವಣೆಗಳು:

  1. 2001 ಮತ್ತು 2019 ರ ನಡುವೆ, ಅರಬ್ಬಿ ಸಮುದ್ರದ ಮೇಲೆ ಬೆಳೆಯುತ್ತಿರುವ ಚಂಡಮಾರುತಗಳ ಆವರ್ತನದಲ್ಲಿ 52% ಹೆಚ್ಚಳ ಮತ್ತು ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತಗಳ ಆವರ್ತನದಲ್ಲಿ 8% ಇಳಿಕೆ ಕಂಡುಬಂದಿದೆ.
  2. ಕಳೆದ ಎರಡು ದಶಕಗಳಲ್ಲಿ, ಅರೇಬಿಯನ್ ಸಮುದ್ರದಲ್ಲಿ ಅತ್ಯಂತ ತೀವ್ರವಾದ ಚಂಡಮಾರುತಗಳ ಸಂಖ್ಯೆ 150% ರಷ್ಟು ಹೆಚ್ಚಾಗಿದೆ.

 

ಇದಕ್ಕೆ ಕಾರಣವಾಗಿರುವ ಅಂಶಗಳು:

ಕಳೆದ ಶತಮಾನದಲ್ಲಿ, ಜಾಗತಿಕ ತಾಪಮಾನ ಏರಿಕೆಯಿಂದಾಗಿ, ಅರಬ್ಬಿ ಸಮುದ್ರದ ಮೇಲ್ಮೈ ತಾಪಮಾನವು ವೇಗವಾಗಿ ಹೆಚ್ಚಾಗಿದೆ. ಪ್ರಸ್ತುತ, ಅರೇಬಿಯನ್ ಸಮುದ್ರದ ಮೇಲ್ಮೈ ತಾಪಮಾನವು ನಾಲ್ಕು ದಶಕಗಳ ಹಿಂದಿನ ತಾಪಮಾನಕ್ಕಿಂತ 1.2-1.4 ° C ಹೆಚ್ಚಾಗಿದೆ. ಹೀಗೆ ಈ ಬೆಚ್ಚಗಿನ ತಾಪಮಾನವು,ಸಂವಹನ ಪ್ರಕ್ರಿಯೆಯಲ್ಲಿ’ ತೀವ್ರತೆ, ಭಾರೀ ಮಳೆ ಮತ್ತು ತೀವ್ರ ಚಂಡಮಾರುತಗಳ ರಚನೆಗೆ ಕೊಡುಗೆ ನೀಡುತ್ತದೆ.

ಏರುತ್ತಿರುವ ತಾಪಮಾನವು, ಅರೇಬಿಯನ್ ಸಮುದ್ರದಲ್ಲಿ ಚಂಡಮಾರುತಗಳ ತೀವ್ರತೆಯು ಬೆಳೆಯಲು, ಸಾಕಷ್ಟು ಶಕ್ತಿಯನ್ನು ಪೂರೈಸಲು ಅನುವುಮಾಡಿಕೊಡುತ್ತದೆ.

ಅರೇಬಿಯನ್ ಸಮುದ್ರವು ಚಂಡಮಾರುತಗಳಿಗೆ ಅನುಕೂಲಕರವಾದ ಗಾಳಿಯ ಕತ್ತರಿಯನ್ನು (wind shear) ಒದಗಿಸುತ್ತದೆ. ಉದಾಹರಣೆಗೆ, ಉನ್ನತ ಮಟ್ಟದ ಪೂರ್ವ ಮಾರುತಗಳಿಂದ ಕೂಡಿದ, ಓಖಿ ಚಂಡಮಾರುತವು ಬಂಗಾಳ ಕೊಲ್ಲಿಯಿಂದ ಕಡಿಮೆ ಒತ್ತಡದ ಪ್ರದೇಶವಾದ ಅರಬ್ಬಿ ಸಮುದ್ರದ ಕಡೆಗೆ ಚಲಿಸಿತು.

 

ಪ್ರಸ್ತುತ ಕಳವಳಗಳು:

ಒಂದು ವೇಳೆ ಈ ಪ್ರವೃತ್ತಿಯು ವರ್ಷಗಳ ಕಾಲ ಹೀಗೆ ಮುಂದುವರಿದರೆ, ಇದು ಭಾರತದ ಪಶ್ಚಿಮ ಕರಾವಳಿಯಲ್ಲಿ ವಿಪತ್ತುಗಳು ಹೆಚ್ಚಾಗುವ ಅಪಾಯವನ್ನು ಒತ್ತಿಹೇಳುತ್ತದೆ.

 

ಚಂಡಮಾರುತಗಳು ಹೇಗೆ ರೂಪುಗೊಳ್ಳುತ್ತವೆ?

ಉಷ್ಣವಲಯದ ಪ್ರದೇಶಗಳಲ್ಲಿನ, ಸಮುದ್ರದ ನೀರಿನ ಮೇಲೆ ಚಂಡಮಾರುತಗಳು ರೂಪುಗೊಳ್ಳುತ್ತವೆ.

ಈ ಪ್ರದೇಶಗಳು ಹೆಚ್ಚಿನ ಪ್ರಮಾಣದ ಸೌರ ಬೆಳಕನ್ನು ಹೊಂದಿವೆ, ಇದು ಭೂಮಿಯ ಮತ್ತು ಜಲಭಾಗಗಳ   ಮೇಲ್ಮೈಯನ್ನು ಬಿಸಿಮಾಡುತ್ತದೆ ಅಥವಾ ಬೆಚ್ಚಗಾಗಿಸುತ್ತದೆ. ಮೇಲ್ಮೈ ಬಿಸಿಯಾಗುತ್ತಿದ್ದಂತೆ, ಸಮುದ್ರದ ಮೇಲಿರುವ ಬೆಚ್ಚಗಿನ ಆರ್ದ್ರ ಗಾಳಿಯು ಮೇಲಕ್ಕೆ ಏರಲು ಪ್ರಾರಂಭಿಸುತ್ತದೆ, ಅದರ ನಂತರ ತಂಪಾದ ಗಾಳಿಯು ಖಾಲಿ ಜಾಗಗಳನ್ನು ಅಥವಾ ನಿರ್ವಾತವನ್ನು ತುಂಬಲು ವೇಗವಾಗಿ ಧಾವಿಸುತ್ತದೆ, ನಂತರ ಅದುಕೂಡ ಬಿಸಿಯಾಗುವುದರ ಮೂಲಕ ಮೇಲಕ್ಕೆ ಏರುತ್ತದೆ ಮತ್ತು ಈ ಚಕ್ರವು ನಿರಂತರವಾಗಿ ಹೀಗೆಯೇ ಮುಂದುವರಿಯುತ್ತದೆ.

 

ಈ ಗಾಳಿಯ ಚಕ್ರವು ನಿರ್ಮಾಣಗೊಳ್ಳಲು ಕಾರಣ?

ಗಾಳಿ ಯಾವಾಗಲೂ ಅಧಿಕ ಒತ್ತಡದ ಪ್ರದೇಶದಿಂದ ಕಡಿಮೆ ಒತ್ತಡದ ಪ್ರದೇಶಗಳಿಗೆ ಬೀಸುತ್ತದೆ. ಶೀತ ಪ್ರದೇಶಗಳಲ್ಲಿ ಅಧಿಕ ಒತ್ತಡದ ಪ್ರದೇಶಗಳು ರೂಪುಗೊಳ್ಳುತ್ತವೆ, ಆದರೆ ಕಡಿಮೆ ಒತ್ತಡದ ಪರಿಸ್ಥಿತಿಗಳು ಬೆಚ್ಚಗಿನ ಅಥವಾ ಬಿಸಿ ಪ್ರದೇಶಗಳಲ್ಲಿ ರೂಪುಗೊಳ್ಳುತ್ತವೆ. ಧ್ರುವ ಪ್ರದೇಶಗಳಲ್ಲಿನ ಸೌರ ಬೆಳಕಿನ ಪ್ರಮಾಣವು ಉಷ್ಣವಲಯದ ಪ್ರದೇಶಗಳಿಗಿಂತ ತೀರಾ ಕಡಿಮೆ, ಆದ್ದರಿಂದ ಇವು ಸಾಮಾನ್ಯವಾಗಿ ಅಧಿಕ ಒತ್ತಡದ ಪ್ರದೇಶಗಳಾಗಿವೆ. ಆದ್ದರಿಂದಲೇ ಗಾಳಿಯು ಧ್ರುವ ಪ್ರದೇಶಗಳಿಂದ ಉಷ್ಣವಲಯದ ಪ್ರದೇಶಗಳಿಗೆ ಹೆಚ್ಚಾಗಿ ಬೀಸುತ್ತದೆ.

  1. ಇದರ ನಂತರ, ಭೂಮಿಯ ಚಲನೆಯು ಮಹತ್ವದ ಪಾತ್ರವನ್ನು ವಹಿಸುತ್ತದೆ, ಅದು ಪಶ್ಚಿಮದಿಂದ ಪೂರ್ವಕ್ಕೆ. ಭೂಮಿಯು ತನ್ನದೇ ಆದ ಅಕ್ಷದಲ್ಲಿ ಪರಿಭ್ರಮಿಸುತ್ತಿರುವುದರಿಂದ, ಎರಡೂ ಧ್ರುವಗಳಿಂದ ಬೀಸುವ ಗಾಳಿಯು ಉಷ್ಣವಲಯದಲ್ಲಿ ವಿಚಲಣೆ ಗೊಳ್ಳುತ್ತದೆ, ಏಕೆಂದರೆ ಭೂಮಿಯು ಗೋಳಾಕಾರ ವಾಗಿರುವುದರಿಂದ, ಧ್ರುವಗಳಿಗಿಂತ ಉಷ್ಣವಲಯದಲ್ಲಿ ಭೂಮಿಯ ತಿರುಗುವಿಕೆಯ ವೇಗ ಹೆಚ್ಚಿರುತ್ತದೆ. ಆರ್ಕ್ಟಿಕ್ ಪ್ರದೇಶದಿಂದ ಬರುವ ಗಾಳಿಯು ಬಲಕ್ಕೆ ತಿರುಗುತ್ತದೆ ಮತ್ತು ಅಂಟಾರ್ಕ್ಟಿಕ್ ಪ್ರದೇಶದಿಂದ ಬರುವ ಗಾಳಿಯು ಎಡಕ್ಕೆ ತಿರುಗುತ್ತದೆ.
  2. ಹೀಗಾಗಿ, ಈಗಾಗಲೇ ನಿರ್ದಿಷ್ಟ ದಿಕ್ಕುಗಳಲ್ಲಿ ಬೀಸುತ್ತಿರುವ ಗಾಳಿಯು, ಬೆಚ್ಚಗಿನ ಸ್ಥಳವನ್ನು ತಲುಪಿದ ನಂತರ,ಖಾಲಿ ಜಾಗವನ್ನು ತುಂಬಲು ತಂಪಾದ ಗಾಳಿಯು ಕೇಂದ್ರದ ಕಡೆಗೆ ಆಕರ್ಷಿತವಾಗಲು ಪ್ರಾರಂಭಿಸುತ್ತದೆ. ಕೇಂದ್ರದ ಕಡೆಗೆ ಚಲಿಸುವಾಗ, ತಂಪಾದ ಗಾಳಿಯು ಗಾಳಿಯ ಚಲನೆಯ ಪ್ರಸರಣದ ಪರಿಣಾಮವಾಗಿ ತಿರುಗುತ್ತಲೇ ಇರುತ್ತದೆ ಮತ್ತು ಇದು ಚಂಡಮಾರುತದ ತಾಣವನ್ನು ಮುಟ್ಟುವವರೆಗೂ ಅಂದರೆ ಹೀಗೆ ರೂಪುಗೊಳ್ಳುವ ಚಂಡಮಾರುತವು ಭೂಮಿಗೆ ಅಪ್ಪಳಿಸುವ ವರೆಗೆ ಈ ಪ್ರಕ್ರಿಯೆಯು ಮುಂದುವರಿಯುತ್ತದೆ.

 

ಚಂಡಮಾರುತವು ಭೂಮಿಗೆ ಅಪ್ಪಳಿಸಿದಾಗ ಆಗುವ ಪರಿಣಾಮಗಳು?

ಭೂಮಿಯನ್ನು ತಲುಪಿದ ನಂತರ ಅಥವಾ ಭೂಮಿಗೆ ಅಪ್ಪಳಿಸಿದ ನಂತರ ಚಂಡಮಾರುತವು ವಿಭಜನೆಗೊಂಡು ಕೊನೆಗೊಳ್ಳುತ್ತದೆ, ಏಕೆಂದರೆ ಬಿಸಿಯಾದನೀರು ಮೇಲಕ್ಕೇರುವ ಮೂಲಕ ತಂಪಾದ ನೀರಿಗೆ ಸ್ಥಳಾವಕಾಶವನ್ನು ಸೃಷ್ಟಿಸುತ್ತದೆ, ಆದರೆ  ಭೂಮಿಯ ಮೇಲೆ ಸಾಕಷ್ಟು ಪ್ರಮಾಣದಲ್ಲಿ ತಂಪು ನೀರು ಲಭ್ಯವಿರುವುದಿಲ್ಲ, ಇದರ ಜೊತೆಗೆ ಎತ್ತರದ ಆರ್ದ್ರ(ತೇವಾಂಶಭರಿತ) ಗಾಳಿಯು ಮೋಡಗಳು ರೂಪುಗೊಳ್ಳಲು ಕಾರಣೀಭೂತವಾಗುತ್ತದೆ, ಇದು ಚಂಡಮಾರುತಗಳ ಸಮಯದಲ್ಲಿ ಬಲವಾದ ಗಾಳಿಯೊಂದಿಗೆ ತೀವ್ರವಾದ ಮಳೆಯಾಗಲು ಕಾರಣವಾಗುತ್ತದೆ.

 

ಚಂಡಮಾರುತಗಳು ಹೆಚ್ಚಲು ಕಾರಣಗಳೇನು?

  1. ಮುಂಗಾರು ಋತುವಿಗೆ ಮೊದಲು ಮತ್ತು ಮುಂಗಾರು ಋತುವಿನ ನಂತರ ಸಮುದ್ರದಲ್ಲಿ ಉಂಟಾಗುವ ಚಂಡಮಾರುತಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಹವಾಮಾನ ಬದಲಾವಣೆಯಿಂದಾಗಿ ಸಾಗರದ ಮೇಲ್ಮೈಯ ತಾಪದಲ್ಲಿ ಏರಿಕೆ ಇದಕ್ಕೆ ಮುಖ್ಯ ಕಾರಣ ಎಂದು ವಿಜ್ಞಾನಿಗಳು ಗುರುತಿಸಿದ್ದಾರೆ. 2014ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ಹಿಂದೂ ಮಹಾಸಾಗರದ ಮೇಲ್ಮೈಯ ಸರಾಸರಿ ತಾಪವು 0.7 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿದೆ. ಇತರ ಸಾಗರಗಳಿಗೆ ಹೋಲಿಸಿದರೆ ಹಿಂದೂ ಮಹಾಸಾಗರವು ಹೆಚ್ಚು ತಂಪು. ಹಾಗಿದ್ದರೂ ಬೇಸಿಗೆಯ ಅವಧಿಯಲ್ಲಿ ಸಾಗರದ ಮೇಲ್ಮೈ ತಾಪವು 1.2 ಡಿಗ್ರಿ ಸೆಲ್ಸಿಯಸ್‌ ಏರಿಕೆಯಾಗಿತ್ತು.
  2. ಹಸಿರುಮನೆ ಅನಿಲಗಳು ಹೊರಸೂಸುವ ತಾಪದ ಶೇ 90ರಷ್ಟನ್ನು ಸಮುದ್ರವು ಹೀರಿಕೊಳ್ಳುತ್ತದೆ. ಮಾರುತಗಳಿಗೆ ಶಕ್ತಿ ನೀಡುವುದೇ ನೀರಿನ ತಾಪ. ಇತರ ಸಮುದ್ರಗಳಿಗೆ ಹೋಲಿಸಿದರೆ ಅರಬ್ಬಿಸಮುದ್ರದ ತಾಪವು ಅತ್ಯಂತ ವೇಗವಾಗಿ ಏರಿಕೆಯಾಗುತ್ತಿದೆ ಎಂದು ಗುರುತಿಸಲಾಗಿದೆ.
  3. ಹವಾಮಾನ ಬದಲಾವಣೆಯಿಂದಾಗಿ ಸಮುದ್ರ ಮಟ್ಟ ಏರಿಕೆಯಾಗುತ್ತದೆ ಮತ್ತು ಚಂಡಮಾರುತದ ವೇಗ ಹೆಚ್ಚಳವಾಗುತ್ತದೆ. ಇದು ಮಾರುತವು ಕರಾವಳಿಯನ್ನು ಪ್ರವೇಶಿಸಿದ ನಂತರ ಪರಿಣಾಮ ಬೀರುವ ಭೂ ಪ್ರದೇಶದ ವ್ಯಾಪ್ತಿಯನ್ನೂ ಹೆಚ್ಚಿಸುತ್ತದೆ. ಚಂಡಮಾರುತದ ಅವಧಿಯಲ್ಲಿ ಬೀಳುವ ಮಳೆಯ ಪ್ರಮಾಣ ಹೆಚ್ಚಳವಾಗಿ, ಜಲಾವೃತಗೊಳ್ಳುವ ಪ್ರದೇಶವೂ ಹೆಚ್ಚುತ್ತದೆ. ಯೋಜಿತವಲ್ಲದ ನಗರಾಭಿವೃದ್ಧಿ, ಕಾಂಡ್ಲಾವನಗಳ ನಾಶ ಚಂಡಮಾರುತಗಳ ಪರಿಣಾಮವನ್ನು ತೀವ್ರವಾಗಿಸುತ್ತವೆ ಎಂಬುದು ತಜ್ಞರ ವಿಶ್ಲೇಷಣೆ.
  4. ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರಗಳೆರಡಲ್ಲೂ ಚಂಡಮಾರುತಗಳು ಸೃಷ್ಟಿಯಾಗುತ್ತಿವೆ. ಬಂಗಾಳ ಕೊಲ್ಲಿಗೆ ಹೋಲಿಸಿದರೆ ಅರಬ್ಬಿ ಸಮುದ್ರದಲ್ಲಿ ಚಂಡಮಾರುತಗಳ ಸಂಖ್ಯೆ ಕಡಿಮೆ. 1891ರಿಂದ 2,000ದವರೆಗೆ ಬಂಗಾಳ ಕೊಲ್ಲಿಯಲ್ಲಿ 308 ಚಂಡಮಾರುತಗಳು ಸೃಷ್ಟಿ ಯಾಗಿವೆ. ಅವುಗಳ ಪೈಕಿ 103 ತೀವ್ರವಾಗಿದ್ದವು. ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾದ 48 ಬಿರುಗಾಳಿಗಳಲ್ಲಿ 24 ತೀವ್ರ ಪರಿಣಾಮ ಉಂಟು ಮಾಡಿದ್ದವು.

 

ನಾಮಕರಣ ಹೇಗೆ?

  1. ಚಂಡಮಾರುತಗಳು ಒಂದು ವಾರ ಅಥವಾ ಅದಕ್ಕಿಂತ ಹೆಚ್ಚು ಸಮಯ ಇರಬಹುದು. ಹಾಗಾಗಿ, ಒಂದೇ ಸಮಯದಲ್ಲಿ ಒಂದಕ್ಕಿಂತ ಹೆಚ್ಚು ಚಂಡಮಾರುತ ಬೀಸುವ ಸಾಧ್ಯತೆ ಇದೆ. ಹಾಗಾದಾಗ ಗೊಂದಲ ಸಹಜ. ಈ ಗೊಂದಲ ನಿವಾರಣೆಗಾಗಿ ಚಂಡಮಾರುತಗಳಿಗೆ ಹೆಸರು ಇರಿಸುವ ಪರಿಪಾಟ ಶುರುವಾಯಿತು. ಪ್ರಾದೇಶಿಕವಾಗಿ ಒಪ್ಪಿತವಾದ ನಿಯಮಾನುಸಾರ ಹೆಸರು ಇರಿಸಲಾಗುತ್ತದೆ.
  2. ಚಂಡಮಾರುತಗಳ ಮೇಲೆ ನಿಗಾ ಇರಿಸುವ ಆರು ಪ್ರಾದೇಶಿಕ ವಿಶೇಷ ಹವಾಮಾನ ಕೇಂದ್ರಗಳು (RSMC) ಮತ್ತು ಐದು ಪ್ರಾದೇಶಿಕ ಚಂಡಮಾರುತ ಎಚ್ಚರಿಕೆ ಕೇಂದ್ರಗಳು (TCWC) ಇವೆ. ಚಂಡಮಾರುತದ ಮುನ್ನೆಚ್ಚರಿಕೆ ನೀಡುವುದು ಮತ್ತು ಹೆಸರು ಇರಿಸುವುದು ಈ ಕೇಂದ್ರಗಳ ಹೊಣೆಯಾಗಿದೆ. ಹಿಂದೂ ಮಹಾಸಾಗರ ಪ್ರದೇಶದ 13 ದೇಶಗಳಿಗೆ ಚಂಡಮಾರುತ ಎಚ್ಚರಿಕೆ ನೀಡುವುದು ದೆಹಲಿಯಲ್ಲಿರುವ ಆರ್‌ಎಸ್‌ಎಂಸಿಯ ಜವಾಬ್ದಾರಿ. ಈ 13 ದೇಶಗಳೆಂದರೆ, ಬಾಂಗ್ಲಾದೇಶ, ಭಾರತ, ಇರಾನ್‌, ಮಾಲ್ಡೀವ್ಸ್‌, ಮ್ಯಾನ್ಮಾರ್‌, ಒಮಾನ್‌, ಪಾಕಿಸ್ತಾನ, ಕತಾರ್‌, ಸೌದಿ ಅರೇಬಿಯಾ, ಶ್ರೀಲಂಕಾ, ಥಾಯ್ಲೆಂಡ್‌, ಅರಬ್‌ ಸಂಯುಕ್ತ ಸಂಸ್ಥಾನ ಮತ್ತು ಯೆಮನ್‌.
  3. ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗುವ ಚಂಡಮಾರುತಳಿಗೆ ಹೆಸರು ಇರಿಸುವುದು ಕೂಡ ದೆಹಲಿಯ ಆರ್‌ಎಸ್‌ಎಂಸಿಯ ಹೊಣೆ. ಈ ಪ್ರದೇಶದ ದೇಶಗಳು ಸೂಚಿಸಿದ ಹೆಸರುಗಳನ್ನು ಪಟ್ಟಿ ಮಾಡಿ ಇರಿಸಲಾಗುತ್ತದೆ. ಈ ಪಟ್ಟಿಯಲ್ಲಿರುವ ಹೆಸರುಗಳನ್ನು ಸರದಿಯಂತೆ ಇರಿಸಬೇಕಾಗುತ್ತದೆ. ಚಂಡಮಾರುತ ಸೃಷ್ಟಿಯಾಗುವುದಕ್ಕೆ ಎಷ್ಟೋ ವರ್ಷ ಮೊದಲೇ ಹೆಸರು ನಿರ್ಧಾರ ಆಗಿರುತ್ತದೆ.
  4. 2004ರಲ್ಲಿ ರೂಪಿಸಿದ್ದ 64 ಹೆಸರುಗಳ ಪಟ್ಟಿಯಲ್ಲಿದ್ದ ಕೊನೆಯ ಹೆಸರನ್ನು ಕಳೆದ ವರ್ಷ ಬೀಸಿದ ಆಂಫನ್‌ ಚಂಡಮಾರುತಕ್ಕೆ ಇರಿಸಲಾಗಿದೆ.
  5. ಭಾರತೀಯ ಹವಾಮಾನ ಇಲಾಖೆಯು 2020ರಲ್ಲಿ ಹೊಸ ಪಟ್ಟಿ ರೂಪಿಸಿದೆ. 13 ದೇಶಗಳು ಸೂಚಿಸಿದ ತಲಾ 13 ಹೆಸರುಗಳು ಹೊಸ ಪಟ್ಟಿಯಲ್ಲಿ ಸೇರಿವೆ. ಒಟ್ಟು 169 ಹೆಸರುಗಳಿವೆ. ಈಗ ಹೊಸ ಪಟ್ಟಿಯಲ್ಲಿರುವ ಹೆಸರುಗಳನ್ನು ಬಳಸಲಾಗುತ್ತಿದೆ. ಈ ವಾರ ಅಪ್ಪಳಿಸಲಿರುವ ಚಂಡಮಾರುತ ‘ಯಸ್‌’ ಹೆಸರನ್ನು ಒಮಾನ್‌ ಸೂಚಿಸಿದೆ. ಮುಂದಿನ ಚಂಡಮಾರುತದ ಹೆಸರು ‘ಗುಲಾಬ್‌’, ಇದನ್ನು ‍ಪಾಕಿಸ್ತಾನ ಸೂಚಿಸಿದೆ.

 

ಇತ್ತೀಚಿನ ಕೆಲವು ಚಂಡಮಾರುತಗಳು:

  1. ಕಳೆದ ವರ್ಷ ಬಂಗಾಳ ಕೊಲ್ಲಿಗೆ ಅಪ್ಪಳಿಸಿ ಅತಿಹೆಚ್ಚು ಹಾನಿ ಮಾಡಿದ ಆಂಪನ್ ಚಂಡಮಾರುತವು ‘ಸೂಪರ್ ಸೈಕ್ಲೋನ್’ ಎಂದು ಕರೆಸಿಕೊಂಡಿತು. ಬಂಗಾಳದಲ್ಲಿ 72 ಜನರು, ಬಾಂಗ್ಲಾದೇಶದಲ್ಲಿ 12 ಜನರು ಇದಕ್ಕೆ ಬಲಿಯಾಗಿದ್ದರು. ಬಂಗಾಳದಲ್ಲಿ 1.40 ಕೋಟಿ ಜನರು ವಿದ್ಯುತ್‌ ಸಂಪರ್ಕ ಕಳೆದುಕೊಂಡಿದ್ದರು. ಗಂಟೆಗೆ 160 ಕಿಲೋಮೀಟರ್ ವೇಗದಲ್ಲಿ ಬೀಸಿದ ಇದು, ಒಟ್ಟು ₹95,000 ಕೋಟಿ ನಷ್ಟ ಉಂಟು ಮಾಡಿತ್ತು ಎಂದು ಅಂದಾಜಿಸಲಾಗಿದೆ.
  2. ಕಳೆದ ವರ್ಷ ಅರಬ್ಬೀ ಸಮುದ್ರದ ಮೂಲಕ ‘ನಿಸರ್ಗ’ ಚಂಡಮಾರುತವು ಮುಂಬೈ ಕರಾವಳಿಗೆ ಅಪ್ಪಳಿಸಿತ್ತು. ಆಗ ಮುಂಬೈನಲ್ಲಿ ಕೋವಿಡ್‌ನ ಮೊದಲ ಅಲೆ ಭಾರಿ ಜೋರಾಗಿತ್ತು. ಆದರೆ ಚಂಡಮಾರುತ ಒಮಾನ್ ಕಡೆಗೆ ದಿಕ್ಕು ಬದಲಿಸಿದ್ದರಿಂದ, ಭಾರಿ ಪ್ರಮಾಣದ ಹಾನಿ ತಪ್ಪಿತು.
  3. ‘ಫನಿ’ ಚಂಡಮಾರುತವು 1998ರ ಒಡಿಶಾ ಚಂಡಮಾರುತದ ನಂತರ ಒಡಿಶಾಗೆ ಅಪ್ಪಳಿಸಿದ ಪ್ರಬಲ ಉಷ್ಣವಲಯದ ಚಂಡಮಾರುತವಾಗಿದೆ. 2019ರಲ್ಲಿ ಒಡಿಶಾ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ ಮತ್ತು ಪೂರ್ವ ಭಾರತದಲ್ಲಿ ಭಾರಿ ಪ್ರಮಾಣದ ಜೀವ ಮತ್ತು ಆಸ್ತಿ ನಷ್ಟ ಉಂಟುಮಾಡಿತು. ಬಾಂಗ್ಲಾದೇಶ, ಭೂತಾನ್ ಮತ್ತು ಶ್ರೀಲಂಕಾಗೂ ಅಪ್ಪಳಿಸಿತ್ತು.
  4. ‘ನಿವಾರ್’ ಚಂಡಮಾರುತವು 2020ರಲ್ಲಿ ತಮಿಳುನಾಡು, ಪುದುಚೇರಿಗೆ ಅಪ್ಪಳಿಸಿ ರೌದ್ರಾವತಾರ ತೋರಿತ್ತು. ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದರಿಂದ ಹೆಚ್ಚಿನ ಸಾವುನೋವು ಉಂಟಾಗದಿದ್ದರೂ, ರೈತಾಪಿ ವರ್ಗ ಕಷ್ಟ ಅನುಭವಿಸಿತು.
  5. 2019ರಲ್ಲಿ ‘ಬುಲ್‌ಬುಲ್’ ಚಂಡಮಾರುತವು ಭಾರತದ ಪಶ್ಚಿಮ ಬಂಗಾಳವನ್ನು ಅಪ್ಪಳಿಸಿದ ತೀವ್ರ ಸ್ವರೂಪದ ಚಂಡಮಾರುತವಾಗಿತ್ತು. ಇದು ಭಾರಿ ಮಳೆ, ಪ್ರವಾಹ ಇತ್ಯಾದಿಗಳಿಗೆ ಕಾರಣವಾಯಿತು. ಇದರಿಂದಾಗಿ ಜೀವ ಮತ್ತು ಆಸ್ತಿ ನಾಶವಾಯಿತು. ಭಾರತದ ಹೊರಗೆ ಅದು ಬಾಂಗ್ಲಾದೇಶಕ್ಕೂ ತೊಂದರೆ ಕೊಟ್ಟಿತ್ತು.
  6. ‘ವಾಯು’ ಚಂಡಮಾರುತವು ಅರಬ್ಬೀ ಸಮುದ್ರದ ಮೂಲಕ ಅಪ್ಪಳಿಸಿ ಗುಜರಾತ್ ರಾಜ್ಯದಲ್ಲಿ ಜೀವ ಮತ್ತು ಆಸ್ತಿಗೆ ಒಂದಿಷ್ಟು ಹಾನಿಯನ್ನುಂಟುಮಾಡಿತು. ಇದು 1998ರ ಗುಜರಾತ್ ಚಂಡಮಾರುತದ ನಂತರ ರಾಜ್ಯಕ್ಕೆ ಅಪ್ಪಳಿಸಿದ ಪ್ರಬಲ ಚಂಡಮಾರುತವಾಗಿತ್ತು. ಇದು ಮಾಲ್ಡೀವ್ಸ್, ಪಾಕಿಸ್ತಾನ ಮತ್ತು ಒಮಾನ್‌ಗಳ ಮೇಲೂ ಪರಿಣಾಮ ಬೀರಿತು.

 


ಸಾಮಾನ್ಯ ಅಧ್ಯಯನ ಪತ್ರಿಕೆ : 1


 

ವಿಷಯಗಳು: ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ಗುಂಪುಗಳು ಮತ್ತು ಭಾರತಕ್ಕೆ ಸಂಬಂಧಿಸಿದ ಒಪ್ಪಂದಗಳು ಮತ್ತು / ಅಥವಾ ಭಾರತದ ಹಿತಾಸಕ್ತಿಗಳ ಮೇಲೆ ಪರಿಣಾಮ ಬೀರುವ ಅಂಶಗಳು.

ಕಡಲ ಸಹಕಾರವನ್ನು ಹೆಚ್ಚಿಸಲು ಭಾರತದ 5 ಅಂಶಗಳ ಕಾರ್ಯಸೂಚಿ:


(India’s 5-point agenda to enhance maritime cooperation)

ಸಂದರ್ಭ:

ಇತ್ತೀಚೆಗೆ, ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (UNSC) ‘ಕಡಲ ಭದ್ರತೆಯನ್ನು ಹೆಚ್ಚಿಸುವುದು’ (Enhancing Maritime Security) ಎಂಬ ವಿಷಯದ ಕುರಿತು ಮುಕ್ತ ಚರ್ಚೆಯ ಅಧ್ಯಕ್ಷತೆ ವಹಿಸಿದ್ದರು.

  1. ತರುವಾಯ, ‘ಕಡಲ ಭದ್ರತೆ’ ಕುರಿತು ಭಾರತದ ರಾಷ್ಟ್ರಪತಿಗಳ ಹೇಳಿಕೆಯನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಅಂಗೀಕರಿಸಿತು.

 

ಕಡಲ ವಲಯದಲ್ಲಿನ ಪ್ರಸ್ತುತ ಸವಾಲುಗಳು:

ಸಮುದ್ರ ಮಾರ್ಗಗಳು ಅಂತರಾಷ್ಟ್ರೀಯ ವ್ಯಾಪಾರದ ಜೀವನಾಡಿಯಾಗಿವೆ. ಆದರೆ:

  1. ಕಡಲ್ಗಳ್ಳತನ ಮತ್ತು ಭಯೋತ್ಪಾದನೆಗಾಗಿ ಸಮುದ್ರ ಮಾರ್ಗಗಳನ್ನು ದುರ್ಬಳಕೆ ಮಾಡಲಾಗುತ್ತಿದೆ.
  2. ಅನೇಕ ದೇಶಗಳ ನಡುವೆ ಕಡಲ ವಿವಾದಗಳು ಮುಂದುವರೆಯುತ್ತವೆ ಮತ್ತು ಹವಾಮಾನ ಬದಲಾವಣೆಯು ಸಮುದ್ರ/ಕಡಲ ವಲಯಕ್ಕೆ ಸಂಬಂಧಿಸಿದೆ.

ಕಡಲ ಸಹಕಾರವನ್ನು ಹೆಚ್ಚಿಸಲು ಪ್ರಧಾನಮಂತ್ರಿಯವರು ನಿಗದಿಪಡಿಸಿದ ಐದು ಅಂಶಗಳ ಕಾರ್ಯಸೂಚಿ:

  1. ಕಾನೂನುಬದ್ಧ ಕಡಲ ವ್ಯಾಪಾರಕ್ಕೆ ಅಡೆತಡೆಗಳನ್ನು ತೆಗೆಯುವುದು.
  2. ಅಂತರಾಷ್ಟ್ರೀಯ ಕಾನೂನಿಗೆ ಅನುಸಾರವಾಗಿ ಕಡಲ ವಿವಾದಗಳ ಶಾಂತಿಯುತ ಇತ್ಯರ್ಥ.
  3. ನೈಸರ್ಗಿಕ ವಿಪತ್ತುಗಳು ಮತ್ತು ರಾಷ್ಟ್ರವಿರೋಧಿ ವ್ಯಕ್ತಿಗಳಿಂದ (Non State Actors – NSA) ಉಂಟಾಗುವ ಬೆದರಿಕೆಯನ್ನು ಎದುರಿಸುವುದು.
  4. ಸಮುದ್ರ ಸಂಪನ್ಮೂಲಗಳ ಸಂರಕ್ಷಣೆ.
  5. ಜವಾಬ್ದಾರಿಯುತ ಕಡಲ ಸಂಪರ್ಕವನ್ನು ಉತ್ತೇಜಿಸುವುದು.

 

ಕಡಲ ಸಹಕಾರವನ್ನು ಹೆಚ್ಚಿಸಲು ಭಾರತದ ಪ್ರಯತ್ನಗಳು:

  1. ಈ ಪ್ರದೇಶದಲ್ಲಿ ಎಲ್ಲರಿಗೂ ಭದ್ರತೆ ಮತ್ತು ಅಭಿವೃದ್ಧಿ ಅಂದರೆ ‘ಸಾಗರ್’(Security and Growth for All in the Region- SAGAR).
  2. 2008 ರಿಂದ, ಭಾರತೀಯ ನೌಕಾಪಡೆಯು ಕಡಲ್ಗಳ್ಳತನವನ್ನು ಎದುರಿಸಲು ಹಿಂದೂ ಮಹಾಸಾಗರದಲ್ಲಿ ಗಸ್ತು ತಿರುಗುತ್ತಿದೆ.
  3. ವೈಟ್ ಶಿಪ್ಪಿಂಗ್ ಮಾಹಿತಿ ಸಮ್ಮಿಳನ ಕೇಂದ್ರ (White Shipping Information Fusion Centre).
  4. ಹಲವಾರು ದೇಶಗಳಲ್ಲಿ ಹೈಡ್ರೋಗ್ರಾಫಿಕ್ ಸಮೀಕ್ಷೆ ಮತ್ತು ಕಡಲ ಭದ್ರತಾ ಸಿಬ್ಬಂದಿಯ ತರಬೇತಿಗೆ ಬೆಂಬಲ.
  5. ಭಾರತದ ‘ಆಳ ಸಾಗರ ಮಿಷನ್’ (Deep Ocean Mission).

 

ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಮತ್ತು ಆದೇಶ.

ಸಮುದ್ರ ಕಾನೂನಿನ ಮೇಲೆ ವಿಶ್ವಸಂಸ್ಥೆಯ ಸಮಾವೇಶ (UNCLOS)


(UNCLOS (United Nations Convention on the Law of the Sea)

ಸಂದರ್ಭ:

ಚೀನಾ ಒಡ್ಡಿದ ಅಡೆತಡೆಗಳನ್ನು ತೊಡೆದು ಹಾಕುವ ಮೂಲಕ, ಇತ್ತೀಚೆಗೆ, ಭಾರತದ ಅಧ್ಯಕ್ಷತೆಯಲ್ಲಿ ನಡೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಭೂತಪೂರ್ವ ಅಧಿವೇಶನದಲ್ಲಿ ‘ಸಮುದ್ರದ ಕಾನೂನಿನ ಕುರಿತ ವಿಶ್ವಸಂಸ್ಥೆಯ ಸಮಾವೇಶ’ವು(United Nations Convention on Law of Seas – UNCLOS)  ಗಮನಸೆಳೆಯಿತು. ಚೌಕಟ್ಟನ್ನು ಒಳಗೊಂಡಿರುವ ‘ಕಾನ್ಸೆಪ್ಟ್ ನೋಟ್’ ಅಥವಾ ಪರಿಕಲ್ಪನೆಯ ಟಿಪ್ಪಣಿಯನ್ನು ಈ ನಿಟ್ಟಿನಲ್ಲಿ ವಿತರಿಸಲಾಗಿದೆ.

 

ಈ ನಡೆಯ ಮಹತ್ವ ಮತ್ತು ಪರಿಣಾಮಗಳು:

  1. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷೀಯ ಹೇಳಿಕೆಯ ಪ್ರಕಾರ, “ಸಮುದ್ರದ ಕಾನೂನಿನ ಮೇಲೆ ವಿಶ್ವಸಂಸ್ಥೆಯ ಸಮಾವೇಶವು (UNCLOS) ಕಡಲ ವ್ಯಾಪ್ತಿಯಲ್ಲಿ ಕಾನೂನುಬಾಹಿರ ಚಟುವಟಿಕೆಗಳನ್ನು ಎದುರಿಸುವುದು ಸೇರಿದಂತೆ ಸಾಗರಗಳಲ್ಲಿನ ಚಟುವಟಿಕೆಗಳಿಗೆ ಅನ್ವಯವಾಗುವ ಕಾನೂನು ಚೌಕಟ್ಟಾಗಿದೆ,.”
  2. ಸಮುದ್ರ ಭದ್ರತೆಗೆ ಬೆದರಿಕೆಗಳನ್ನು ಎದುರಿಸಲು ‘ಅಂತರರಾಷ್ಟ್ರೀಯ ಮತ್ತು ಪ್ರಾದೇಶಿಕ ಸಹಕಾರ’ ವನ್ನು ಹೆಚ್ಚಿಸುವ ಮಹತ್ವವನ್ನು ಚೌಕಟ್ಟು ಎತ್ತಿ ತೋರಿಸುತ್ತದೆ. ಇದರ ಅಡಿಯಲ್ಲಿ, ಈ ನಿಟ್ಟಿನಲ್ಲಿ ಪ್ರಾದೇಶಿಕ ಮತ್ತು ಉಪ-ಪ್ರಾದೇಶಿಕ ಸಂಸ್ಥೆಗಳು ಮತ್ತು ವಿವಿಧ ದೇಶಗಳ ಪ್ರಯತ್ನಗಳ ಅಗತ್ಯವನ್ನು ಇಲ್ಲಿ ಒತ್ತಿ ಹೇಳಲಾಗಿದೆ.
  3. ಅಲ್ಲದೆ, ಇದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (UNSC) “ಕಡಲ ಭದ್ರತೆ” ಕುರಿತ ಪ್ರಪ್ರಥಮ ಸ್ವತಂತ್ರ ಚರ್ಚೆಯಾಗಿದೆ.

ಚೀನಾದ ಪ್ರತಿಕ್ರಿಯೆ:

  1. ತೀವ್ರ ಅಂತಾರಾಷ್ಟ್ರೀಯ ಒತ್ತಡದಲ್ಲಿ UNCLOS ನ ಪ್ರಾಮುಖ್ಯತೆಯನ್ನು ಒಪ್ಪಿಕೊಳ್ಳಲು ಚೀನಾ ರಾಜತಾಂತ್ರಿಕವಾಗಿ ಒಪ್ಪಿಕೊಂಡಿದೆ.
  2. ದಕ್ಷಿಣ ಚೀನಾ ಸಮುದ್ರ ಮತ್ತು ಪೂರ್ವ ಚೀನಾ ಸಮುದ್ರದಲ್ಲಿ ಚೀನಾದ ಆಕ್ರಮಣಕಾರಿ ಕ್ರಮಗಳು, ದ್ವೀಪ ನಿರ್ಮಾಣ ಮತ್ತು ಅದರ ಮೀನುಗಾರಿಕಾ ಸೇನೆಗಳಿಂದ ದೇಶಗಳನ್ನು ಬೆದರಿಸುವ ಕ್ರಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಳವಳಕಾರಿ ವಿದ್ಯಮಾನವಾಗಿದೆ.
  3. ದಕ್ಷಿಣ ಚೀನಾ ಸಮುದ್ರದಲ್ಲಿನ ಚೀನಾದ ಚಟುವಟಿಕೆಗಳನ್ನು ಕಾನೂನುಬಾಹಿರವೆಂದು UNCLOS ಅಡಿಯಲ್ಲಿ 2016 ರ ಪರ್ಮನೆಂಟ್ ಕೋರ್ಟ್ ಆಫ್ ಆರ್ಬಿಟ್ರೇಷನ್ (PCA) ತೀರ್ಪಿನಲ್ಲಿ ಘೋಷಿಸಲಾಗಿದ್ದರೂ, ಬೀಜಿಂಗ್ ಇನ್ನೂ ತನ್ನ ಕ್ರಮಗಳನ್ನು ಭಯವಿಲ್ಲದೆ ತಡೆರಹಿತವಾಗಿ ತೆಗೆದುಕೊಳ್ಳುತ್ತಿದೆ, ಇದರ ಪರಿಣಾಮವಾಗಿ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚುತ್ತಿದೆ.

 

ಸಮುದ್ರದ ಕಾನೂನಿನ ಕುರಿತು ವಿಶ್ವಸಂಸ್ಥೆಯ ಸಮಾವೇಶದ ಬಗ್ಗೆ (UNCLOS):

ಈ ಕಾನೂನನ್ನು ವಿಶ್ವಸಂಸ್ಥೆಯು 1982 ರಲ್ಲಿ ಅಂಗೀಕರಿಸಿತು, ಆದರೆ ಇದು 1994 ರ ನವೆಂಬರ್ ನಲ್ಲಿ ಜಾರಿಗೆ ಬಂದಿತು.

ಸಮುದ್ರದ ಕಾನೂನಿನ ಕುರಿತು ವಿಶ್ವಸಂಸ್ಥೆಯ ಸಮಾವೇಶ ವು (UNCLOS), ಪ್ರಾದೇಶಿಕ ಸಮುದ್ರ (Territorial Sea) ಮತ್ತು ಪಕ್ಕದ ವಲಯ (Contiguous Zone), ಕಾಂಟಿನೆಂಟಲ್ ಶೆಲ್ಫ್ / ಖಂಡಾವರಣ ಪ್ರದೇಶ, ಉನ್ನತ ಸಮುದ್ರಗಳು (High Seas), ‘ತೆರೆದ ಸಮುದ್ರದಲ್ಲಿ ಮೀನುಗಾರಿಕೆ ಮತ್ತು ಜೀವ ಸಂಪನ್ಮೂಲಗಳ ಸಂರಕ್ಷಣೆ’ ಗೆ ಸಂಬಂಧಿಸಿದ  ಏಪ್ರಿಲ್ 1958 ರಲ್ಲಿ ಸಹಿ ಮಾಡಿದ ಜಿನೀವಾ ಒಪ್ಪಂದಗಳನ್ನು ಬದಲಿಸಿತು.

  1. ಪ್ರಸ್ತುತ, ಈ ಒಪ್ಪಂದವು ಹಡಗು ಮತ್ತು ಕಡಲ ಚಟುವಟಿಕೆಗಳಿಗೆ ಕಾನೂನು ಚೌಕಟ್ಟಾಗಿದೆ.
  2. ಇದನ್ನು ‘ಸಮುದ್ರದ ಕಾನೂನೂ’ (Law of the Sea) ಎಂದೂ ಕರೆಯಲಾಗುತ್ತದೆ, ಮತ್ತು ಇದು ಸಮುದ್ರ ವಲಯವನ್ನು ಐದು ಮುಖ್ಯ ವಲಯಗಳಾಗಿ ವಿಭಜಿಸುತ್ತದೆ, ಅವುಗಳೆಂದರೆ – ಆಂತರಿಕ ನೀರು, ಪ್ರಾದೇಶಿಕ ಸಮುದ್ರಗಳು, ಪಕ್ಕದ ವಲಯಗಳು, ವಿಶೇಷ ಆರ್ಥಿಕ ವಲಯಗಳು (EEZ ಗಳು) ಮತ್ತು ಉನ್ನತ ಸಾಗರಗಳು.
  3. ಕಡಲ ಪ್ರದೇಶಗಳಲ್ಲಿ ದೇಶದ ನ್ಯಾಯವ್ಯಾಪ್ತಿಗೆ ಒಂದು ಚೌಕಟ್ಟನ್ನು ನಿಗದಿಪಡಿಸುವ UNCLOS ಏಕೈಕ ಅಂತರರಾಷ್ಟ್ರೀಯ ಒಪ್ಪಂದವಾಗಿದೆ. ಇದರ ಅಡಿಯಲ್ಲಿ, ವಿವಿಧ ಕಡಲ ವಲಯಗಳಿಗೆ ವಿವಿಧ ಕಾನೂನು-ಸ್ಥಾನಮಾನಗಳನ್ನು ಒದಗಿಸಲಾಗಿದೆ.

 

ಸಮುದ್ರದ ಕಾನೂನಿನ ಕುರಿತು ವಿಶ್ವಸಂಸ್ಥೆಯ ಸಮಾವೇಶವು ಅಂತರಾಷ್ಟ್ರೀಯ ವ್ಯವಹಾರಗಳ ಕುರಿತು ಮೂರು ಹೊಸ ಸಂಸ್ಥೆಗಳನ್ನು ರಚಿಸಿದೆ:

  1. ಸಮುದ್ರದ ಕಾನೂನುಗಾಗಿ ಅಂತರಾಷ್ಟ್ರೀಯ ನ್ಯಾಯಮಂಡಳಿ (International Tribunal for the Law of the Sea).
  2. ಅಂತರಾಷ್ಟ್ರೀಯ ಕಡಲ ತಳ ಪ್ರಾಧಿಕಾರ (The International Seabed Authority).
  3. ಖಂಡಾವರಣ ಪ್ರದೇಶದ ಮಿತಿಗಳ ಆಯೋಗ (The Commission on the Limits of the Continental Shelf)

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು: ನೇರ ಮತ್ತು ಪರೋಕ್ಷ ಕೃಷಿ ಸಬ್ಸಿಡಿಗಳು ಮತ್ತು ಕನಿಷ್ಠ ಬೆಂಬಲ ಬೆಲೆಗೆ ಸಂಬಂಧಿಸಿದ ವಿಷಯಗಳು; ಸಾರ್ವಜನಿಕ ವಿತರಣಾ ವ್ಯವಸ್ಥೆ – ಉದ್ದೇಶಗಳು, ಕಾರ್ಯಗಳು, ಮಿತಿಗಳು, ಸುಧಾರಣೆಗಳು; ಬಫರ್ ಸ್ಟಾಕ್ ಮತ್ತು ಆಹಾರ ಭದ್ರತೆಗೆ ಸಂಬಂಧಿಸಿದ ವಿಷಯಗಳು; ತಂತ್ರಜ್ಞಾನ ಮಿಷನ್; ಪಶುಸಂಗೋಪನೆಗೆ ಸಂಬಂಧಿಸಿದ ಅರ್ಥಶಾಸ್ತ್ರ.

ಖಾದ್ಯ ತೈಲ-ಪಾಮ್ ತೈಲದ ಕುರಿತ ರಾಷ್ಟ್ರೀಯ ಮಿಷನ್ (NMEO-OP):


(National Mission on Edible Oil-Oil Palm (NMEO-OP)

ಸಂದರ್ಭ:

ಇತ್ತೀಚೆಗೆ, ಪ್ರಧಾನಮಂತ್ರಿಯವರು ಕೃಷಿ ಆದಾಯವನ್ನು ಹೆಚ್ಚಿಸುವಲ್ಲಿ ಸಹಾಯ ಮಾಡಲು ತಾಳೆ ಎಣ್ಣೆ ಉತ್ಪಾದನೆಯ ಕುರಿತು ಈ ಹೊಸ ರಾಷ್ಟ್ರೀಯ ಉಪಕ್ರಮವನ್ನು ಘೋಷಿಸಿದ್ದಾರೆ.

  1. ಈ ಯೋಜನೆಯಡಿ 11,000 ಕೋಟಿ ರೂ.ಗಿಂತ ಹೆಚ್ಚು ಹೂಡಿಕೆ ಮಾಡಲಾಗುವುದು.

 

ಯೋಜನೆಯ ಗುರಿ ಮತ್ತು ಉದ್ದೇಶಗಳು:

  1. ಖಾದ್ಯ ತೈಲದ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು.
  2. ದುಬಾರಿ ತಾಳೆ ಎಣ್ಣೆ ಆಮದುಗಳಿಂದ ಪ್ರಭಾವಿತವಾಗಿರುವ ದೇಶೀಯ ಖಾದ್ಯ ತೈಲ ಬೆಲೆಗಳನ್ನು ನಿಯಂತ್ರಿಸಲು.
  3. 2025-26 ರ ವೇಳೆಗೆ ದೇಶೀಯ ತಾಳೆ ಎಣ್ಣೆಯ ಉತ್ಪಾದನೆಯನ್ನು ಮೂರು ಪಟ್ಟು ಹೆಚ್ಚಿಸುವ ಮೂಲಕ 11 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಉತ್ಪಾದನೆ ಮಾಡುವುದು.

 

ಯೋಜನೆಯ ಪ್ರಮುಖ ಲಕ್ಷಣಗಳು:

ಈ ಯೋಜನೆಯಡಿಯಲ್ಲಿ, ಅನುಕೂಲಕರ ಹವಾಮಾನ ಪರಿಸ್ಥಿತಿಗಳಿಂದಾಗಿ, ಭಾರತದ ಈಶಾನ್ಯ ರಾಜ್ಯಗಳು ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಪ್ರದೇಶಗಳಿಗೆ ವಿಶೇಷ ಗಮನ ನೀಡಲಾಗುವುದು.

ಈ ಯೋಜನೆಯಡಿ, ತಾಳೆ ಎಣ್ಣೆ ಉತ್ಪಾದಿಸುವ ರೈತರಿಗೆ ಆರ್ಥಿಕ ನೆರವು ನೀಡಲಾಗುವುದು ಮತ್ತು ರೈತರಿಗೆ ‘ಬೆಲೆ ಮತ್ತು ಕಾರ್ಯಸಾಧ್ಯತೆ ಸೂತ್ರ’ದ ಅಡಿಯಲ್ಲಿ ಪ್ರತಿಫಲ ಸಿಗುತ್ತದೆ.

 

ಯೋಜನೆಯ ಮಹತ್ವ ಮತ್ತು ಪ್ರಯೋಜನಗಳು:

ತಾಳೆ ಎಣ್ಣೆಯ ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಮತ್ತು ರೈತರು ತಾಳೆ ಎಣ್ಣೆ ಉತ್ಪಾದಿಸುವ ಮೂಲಕ ಖಾದ್ಯ ತೈಲದ ಬ್ರಹತ್ ಮಾರುಕಟ್ಟೆಯಲ್ಲಿ ಲಾಭ ಪಡೆಯುವಂತೆ ಮಾಡುವುದು.

 

ಈ ಯೋಜನೆಯ ಅವಶ್ಯಕತೆ:

  1. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಸಸ್ಯಜನ್ಯ ಎಣ್ಣೆಯನ್ನು ಬಳಸುವ ದೇಶವಾಗಿದೆ. ಭಾರತದ ಒಟ್ಟು ಸಸ್ಯಜನ್ಯ ಎಣ್ಣೆ ಆಮದಿನಲ್ಲಿ ಪಾಮ್ ಆಯಿಲ್ ಆಮದು ಶೇ .60 ರಷ್ಟಿದೆ.
  2. 2016- 2017 ರಲ್ಲಿ, ಭಾರತದಲ್ಲಿ ಒಟ್ಟು ದೇಶೀಯ ಪಾಮ್ ಎಣ್ಣೆಯ ಬಳಕೆ 9.3 ಮಿಲಿಯನ್ ಮೆಟ್ರಿಕ್ ಟನ್‌ಗಳಷ್ಟಿದ್ದು, ಅದರಲ್ಲಿ 98.97 ಪ್ರತಿಶತ ಪಾಮ್ ಎಣ್ಣೆಯನ್ನು ಮಲೇಷಿಯಾ ಮತ್ತು ಇಂಡೋನೇಷಿಯಾದಿಂದ ಆಮದು ಮಾಡಿಕೊಳ್ಳಲಾಗಿದೆ.
  3. ಅಂದರೆ,ನಮ್ಮ ದೇಶದ ಅವಶ್ಯಕತೆಯ ಶೇಕಡಾ 1.027 ರಷ್ಟು ಮಾತ್ರ ಭಾರತದಲ್ಲಿ ಉತ್ಪಾದನೆಯಾಗುತ್ತಿದೆ.
  4. ಇದರ ಜೊತೆಯಲ್ಲಿ, ಭಾರತದಲ್ಲಿ 94.1 ರಷ್ಟು ಪಾಮ್ ಎಣ್ಣೆಯನ್ನು ಆಹಾರ ಉತ್ಪನ್ನಗಳಿಗೆ, ವಿಶೇಷವಾಗಿ ಅಡುಗೆ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಇದು ಭಾರತದ ಖಾದ್ಯ ತೈಲಗಳ ಆರ್ಥಿಕತೆಗೆ ತಾಳೆ ಎಣ್ಣೆಯನ್ನು ಅತ್ಯಂತ ಮುಖ್ಯವಾಗಿಸುತ್ತದೆ.

 

ತಾಳೆ ಎಣ್ಣೆ (Palm Oil)

  1. ತಾಳೆ ಎಣ್ಣೆಯು ಪ್ರಸ್ತುತ ವಿಶ್ವದಲ್ಲಿ ಅತಿ ಹೆಚ್ಚು ಬಳಕೆಯಾಗುವ ಸಸ್ಯಜನ್ಯ ಎಣ್ಣೆಯಾಗಿದೆ.
  2. ಇದನ್ನು ಮಾರ್ಜಕಗಳು, ಪ್ಲಾಸ್ಟಿಕ್‌ಗಳು, ಸೌಂದರ್ಯವರ್ಧಕಗಳು ಮತ್ತು ಜೈವಿಕ ಇಂಧನಗಳ ಉತ್ಪಾದನೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.
  3. ಜಾಗತಿಕವಾಗಿ, ಪಾಮ್ ಎಣ್ಣೆಯ ಅಗ್ರ ಗ್ರಾಹಕರು ಭಾರತ, ಚೀನಾ ಮತ್ತು ಯುರೋಪಿಯನ್ ಯೂನಿಯನ್ ಗಳಾಗಿವೆ.

 

ವಿಷಯಗಳು: ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಕಂಪ್ಯೂಟರ್, ರೊಬೊಟಿಕ್ಸ್, ನ್ಯಾನೊ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಿಗೆ ಸಂಬಂಧಿಸಿದಂತೆ ಜಾಗೃತಿ.

ನಾಸಾದ ಪರ್ಸೇವೆರನ್ಸ್ ರೋವರ್:


(NASA Perseverance Rover)

ಸಂದರ್ಭ:

ಮಂಗಳನ ಜೆಜೆರೊ ಕುಳಿಗಳನ್ನು(Jezero Crater) ನಾಸಾದ ಪರ್ಸೇವೆರನ್ಸ್ ರೋವರ್ ಮೂಲಕ ಪರಿಶೋಧಿಸಲಾಗುತ್ತಿದೆ ಮತ್ತು ಇದು ಗ್ರಹದ ಮೇಲ್ಮೈಯಲ್ಲಿನ ಬಂಡೆಗಳ ಮೊದಲ ಮಾದರಿಗಳನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿದೆ.

  1. ಆದಾಗ್ಯೂ, ಪರ್ಸೇವೆರನ್ಸ್ ರೋವರ್ ತನ್ನ ಮೊದಲ ಪ್ರಯತ್ನದಲ್ಲಿ ಯಾವುದೇ ರಾಕ್ ಮಾದರಿಗಳನ್ನು ಸಂಗ್ರಹಿಸುವಲ್ಲಿ ವಿಫಲವಾಯಿತು.

 

ಪರ್ಸೇವೆರನ್ಸ್ ರೋವರ್ ಕುರಿತು:

  1. ಪರ್ಸೇವೆರನ್ಸ್ ರೋವರ್ ಅನ್ನು ಜುಲೈ 2020 ರಲ್ಲಿ ಉಡಾವಣೆ ಮಾಡಲಾಯಿತು.
  2. ಇದು ಬಹುಶಃ ಮಂಗಳನ ಮೇಲ್ಮೈಯಲ್ಲಿ ಜೆಜೆರೊ ಕುಳಿಗಳ (Jezero Crater)  ಮೇಲೆ ಇಳಿಯುತ್ತದೆ.
  3. ಪ್ರಾಚೀನ ಜೀವಿಗಳ ಜೀವನದ ಖಗೋಳ ಸಾಕ್ಷ್ಯಗಳನ್ನು ಹುಡುಕುವುದು ಮತ್ತು ಭೂಮಿಗೆ ಮರಳಿ ತರಲು ಬಂಡೆಗಳು ಮತ್ತು ರೆಗ್ಲೋಲಿತ್‌ಗಳ (Reglolith) ಮಾದರಿಗಳನ್ನು ಸಂಗ್ರಹಿಸುವುದು ಪರ್ಸೇವೆರನ್ಸ್ ರೋವರ್ ನ ಮುಖ್ಯ ಕಾರ್ಯವಾಗಿದೆ.
  4. ಇದು ಪ್ಲುಟೋನಿಯಂನ ವಿಕಿರಣಶೀಲ ಕೊಳೆಯುವಿಕೆಯಿಂದ ಉತ್ಪತ್ತಿಯಾಗುವ ಶಾಖದಿಂದ ಉತ್ಪತ್ತಿಯಾಗುವ ವಿದ್ಯುತ್ ಶಕ್ತಿಯನ್ನು ಇಂಧನವಾಗಿ ಬಳಸುತ್ತದೆ.
  5. ನಾಸಾದ ಪರ್ಸೇವೆರನ್ಸ್, ಮಂಗಳನ ಮೇಲ್ಮೈಯಲ್ಲಿ ಸ್ಥಿರವಾಗಿರಲು ಆಕಾರ ಮೆಮೊರಿ ಮಿಶ್ರಲೋಹಗಳನ್ನು (shape memory alloys) ಬಳಸಲಾಗುತ್ತದೆ.
  6. ಸುಸಜ್ಜಿತ ಡ್ರಿಲ್, ಕ್ಯಾಮೆರಾ ಮತ್ತು ಲೇಸರ್ ಹೊಂದಿದ ರೋವರ್ ಅನ್ನು ಮಂಗಳ ಗ್ರಹವನ್ನು ಅನ್ವೇಷಿಸಲು  ಸಿದ್ಧಪಡಿಸಲಾಗಿದೆ.

ಈ ಯೋಜನೆಯ ಮಹತ್ವ:

  1. ಪರ್ಸೇವೆರನ್ಸ್ ರೋವರ್ MOXIE ಅಥವಾ ಮಾರ್ಸ್ ಆಕ್ಸಿಜನ್ ISRU ಪ್ರಯೋಗ ಎಂಬ ವಿಶೇಷ ಸಾಧನವನ್ನು ಹೊಂದಿದೆ, ಇದು ಮಂಗಳ ಗ್ರಹದಲ್ಲಿ ಇಂಗಾಲ-ಡೈಆಕ್ಸೈಡ್-ಸಮೃದ್ಧ ವಾತಾವರಣದಿಂದ ಇಂಗಾಲದ ಡೈಆಕ್ಸೈಡ್ ಬಳಸಿ ಮೊದಲ ಬಾರಿಗೆ ಆಣ್ವಿಕ ಆಮ್ಲಜನಕವನ್ನು ರಚಿಸುತ್ತದೆ. (ISRU- In Situ Resource Utilization, ಅಂದರೆ , ನೌಕೆಯಲ್ಲಿರುವ ಗಗನಯಾತ್ರಿಗಳ ಹಾಗೂ ಬಾಹ್ಯಾಕಾಶ ನೌಕೆಯ ಅವಶ್ಯಕತೆಗಳನ್ನು ಪೂರೈಸಲು ಸ್ಥಳೀಯ ಸಂಪನ್ಮೂಲಗಳ ಬಳಕೆ ಅಂದರೆ ಬಾಹ್ಯಾಕಾಶ ನೌಕೆಯ ಒಳಗಿನ ಸಂಪನ್ಮೂಲಗಳನ್ನು ಬಳಕೆ ಮಾಡುವುದು).
  2. ಈ ಕಾರ್ಯಾಚರಣೆಯಲ್ಲಿ INGENUITY (‘ಜಾಣ್ಮೆ’) ಎಂಬ ಹೆಲಿಕಾಪ್ಟರ್ ಅನ್ನು ಸಹ ಕಳುಹಿಸಲಾಗಿದೆ, ಇದು ಮಂಗಳ ಗ್ರಹದಲ್ಲಿ ಹಾರಾಟ ನಡೆಸುವ ಮೊದಲ ಹೆಲಿಕಾಪ್ಟರ್ ಆಗಲಿದೆ. ನಾಸಾ ಮತ್ತೊಂದು ಗ್ರಹ ಅಥವಾ ಉಪಗ್ರಹದಲ್ಲಿ ಹೆಲಿಕಾಪ್ಟರ್ ಅನ್ನು ಹಾರಾಟ ನಡೆಸುತ್ತಿರುವುದು ಇದೇ ಮೊದಲು.
  3. ಭೂಮಿಯ ಮೇಲಿನ ಅತ್ಯಾಧುನಿಕ ಪ್ರಯೋಗಾಲಯಗಳಲ್ಲಿ ವಿಶ್ಲೇಷಿಸಲು ಮಂಗಳದಿಂದ ರಾಕ್ ಮಾದರಿಗಳನ್ನು ತರುವ ಮೊದಲ ಯೋಜಿತ ಪ್ರಯತ್ನವಾಗಿದೆ. ಇದರ ಉದ್ದೇಶ ಮಂಗಳನಲ್ಲಿರುವ ಪ್ರಾಚೀನ ಸೂಕ್ಷ್ಮಾಣುಜೀವಿಯ ಖಗೋಳ ಪುರಾವೆಗಳನ್ನು ಹುಡುಕುವುದು ಮತ್ತು ವರ್ತಮಾನ ಅಥವಾ ಹಿಂದಿನ ಜೀವನದ ಕುರುಹುಗಳನ್ನು ಹುಡುಕುವುದು.

ಮಿಷನ್‌ನ ಕೆಲವು ಪ್ರಮುಖ ಉದ್ದೇಶಗಳು:

  1. ಪ್ರಾಚೀನ ಜೀವಿಗಳ ಜೀವನದ ಖಗೋಳ ಸಾಕ್ಷ್ಯಗಳನ್ನು ಹುಡುಕುವುದು.
  2. ಭೂಮಿಗೆ ಮರಳಿ ತರಲು ಬಂಡೆಗಳು ಮತ್ತು ರೆಗ್ಲೋಲಿತ್‌ಗಳ (Reglolith) ಮಾದರಿಗಳನ್ನು ಸಂಗ್ರಹಿಸುವುದು.
  3. ಮಂಗಳನ ಮೇಲೆ ಪ್ರಾಯೋಗಿಕ ಹೆಲಿಕಾಪ್ಟರ್ ಇಳಿಸಲು.
  4. ಮಂಗಳನ ಹವಾಮಾನ ಮತ್ತು ಭೂವಿಜ್ಞಾನವನ್ನು ಅಧ್ಯಯನ ಮಾಡಲು.
  5. ಭವಿಷ್ಯದ ಮಂಗಳಯಾನಗಳಿಗಾಗಿ ತಂತ್ರಜ್ಞಾನವನ್ನು ಪ್ರದರ್ಶಿಸುವುದು.

 

ಮಂಗಳನ ಬಗ್ಗೆ ಇತ್ತೀಚಿನ ಆಸಕ್ತಿಯ ಕಾರಣಗಳು:

  1. ಮಂಗಳ ಭೂಮಿಗೆ ಅತ್ಯಂತ ಸಮೀಪದಲ್ಲಿದೆ (ಸುಮಾರು 200 ಮಿಲಿಯನ್ ಕಿಮೀ ದೂರ).
  2. ಇದು ಮನುಷ್ಯನು ಭೇಟಿ ನೀಡಲು ಅಥವಾ ದೀರ್ಘಕಾಲ ಉಳಿಯಲು ಬಯಸುವ ಗ್ರಹವಾಗಿದೆ.
  3. ಈ ಹಿಂದೆ ಮಂಗಳನ ಮೇಲೆ ಹರಿಯುವ ನೀರು ಮತ್ತು ವಾತಾವರಣದ ಪುರಾವೆಗಳು ಕಂಡುಬಂದಿವೆ; ಮತ್ತು ಬಹುಶಃ ಈ ಗ್ರಹದಲ್ಲಿ ಒಮ್ಮೆ ಜೀವನಕ್ಕೆ ಸೂಕ್ತವಾದ ಪರಿಸ್ಥಿತಿಗಳು ಕೂಡ ಇದ್ದವು.
  4. ಈ ಗ್ರಹವು ವಾಣಿಜ್ಯ ಪ್ರಯಾಣಕ್ಕೂ ಸೂಕ್ತವಾಗಬಹುದು.

 

ವಿಷಯಗಳು: ಸಂವಹನ ನೆಟ್‌ವರ್ಕ್‌ಗಳ ಮೂಲಕ ಆಂತರಿಕ ಭದ್ರತೆಗೆ ಸವಾಲುಗಳು, ಆಂತರಿಕ ಭದ್ರತಾ ಸವಾಲುಗಳಲ್ಲಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಪಾತ್ರ, ಸೈಬರ್ ಸುರಕ್ಷತೆಯ ಮೂಲಗಳು; ಅಕ್ರಮ ಹಣ ವರ್ಗಾವಣೆ ಮತ್ತು ಅದರ ತಡೆಗಟ್ಟುವಿಕೆ.

ಪರಾರಿಯಾದ ಆರ್ಥಿಕ ಅಪರಾಧಿ ಯಾರು?:


(Who is a Fugitive Economic Offender)

ಸಂದರ್ಭ:

ಭಾರತಕ್ಕೆ ಹಸ್ತಾಂತರಿಸುವ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶದ ವಿರುದ್ಧ ಅರ್ಜಿ ಸಲ್ಲಿಸಲು ಲಂಡನ್ ಹೈಕೋರ್ಟ್ ಪರಾರಿಯಾದ ಆರ್ಥಿಕ ಅಪರಾಧಿ ಯಾದ ವಜ್ರದ ವ್ಯಾಪಾರಿ ನೀರವ್ ಮೋದಿಗೆ ಅನುಮತಿ ನೀಡಿದೆ. ಮಾನಸಿಕ ಆರೋಗ್ಯ ಮತ್ತು ಮಾನವ ಹಕ್ಕುಗಳ ಆಧಾರದ ಮೇಲೆ ನ್ಯಾಯಾಲಯವು ಈ ಅವಕಾಶ ಕಲ್ಪಿಸಿದೆ.

 

ಹಿನ್ನೆಲೆ:

ಏಪ್ರಿಲ್ 2020 ರಲ್ಲಿ, 13,758 ಕೋಟಿ ರೂಪಾಯಿಗಳ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಲು ಯುನೈಟೆಡ್ ಕಿಂಗ್‌ಡಂನ ಗೃಹ ಇಲಾಖೆಯು ಅನುಮೋದನೆ ನೀಡಿತ್ತು.

ಲಂಡನ್‌ನ ವೆಸ್ಟ್‌ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಆತನನ್ನು ಹಸ್ತಾಂತರಿಸುವಂತೆ ತೀರ್ಪು ನೀಡಿದ ಎರಡು ತಿಂಗಳ ನಂತರ ನೀರವ್ ಮೋದಿ ವಿರುದ್ಧ ವಂಚನೆ ಪ್ರಕರಣವನ್ನು ದಾಖಲಿಸಿ ಹಸ್ತಾಂತರಕ್ಕೆ ಅನುಮೋದನೆ ನೀಡಲಾಯಿತು.

 

ಪರಾರಿಯಾದ ಆರ್ಥಿಕ ಅಪರಾಧಿ:

ಡಿಸೆಂಬರ್ 2019 ರಲ್ಲಿ, ವಿಶೇಷ ನ್ಯಾಯಾಲಯವು ಜಾರಿ ನಿರ್ದೇಶನಾಲಯದ ಮನವಿಯ ಮೇರೆಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಗೆ $ 2 ಬಿಲಿಯನ್ ವಂಚಿಸಿದ ಪ್ರಕರಣದಲ್ಲಿ ವಜ್ರ ವ್ಯಾಪಾರಿ ನೀರವ್ ಮೋದಿಯವರನ್ನು ಪರಾರಿಯಾದ ಆರ್ಥಿಕ ಅಪರಾಧಿ (fugitive economic offender) ಎಂದು ಘೋಷಿಸಲಾಯಿತು.

 

ಪರಾರಿಯಾದ ಆರ್ಥಿಕ ಅಪರಾಧಿ – ವ್ಯಾಖ್ಯಾನ:

ಕನಿಷ್ಠ 100 ಕೋಟಿ ರೂಪಾಯಿಗಳು ಅಥವಾ ಅದಕ್ಕಿಂತ ಹೆಚ್ಚಿನ ಆರ್ಥಿಕ ಅಪರಾಧದಲ್ಲಿ ಭಾಗಿಯಾಗಿದ್ದಕ್ಕಾಗಿ ಯಾವುದೇ ವ್ಯಕ್ತಿಯ ವಿರುದ್ಧ ಬಂಧನ ವಾರೆಂಟ್ ಹೊರಡಿಸಲಾಗಿದ್ದರೆ ಮತ್ತು ಆ ವ್ಯಕ್ತಿ ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ಭಾರತದಿಂದ ಪಲಾಯನ ಮಾಡಿದ್ದರೆ ಆತನನ್ನು ಪರಾರಿಯಾದ ಆರ್ಥಿಕ ಅಪರಾಧಿ ಎಂದು ಘೋಷಿಸಬಹುದು.

 

ಪ್ರಕ್ರಿಯೆ / ವಿಧಾನ:

  1. ಅಕ್ರಮ ಹಣ ವರ್ಗಾವಣೆತಡೆ ಕಾಯ್ದೆಯ ( Money-Laundering Act) ಅಡಿಯಲ್ಲಿ ಅರ್ಜಿಯಲ್ಲಿ ವಶಪಡಿಸಿಕೊಳ್ಳಬೇಕಾದ ಸ್ವತ್ತುಗಳ ವಿವರಗಳು ಮತ್ತು ವ್ಯಕ್ತಿಯ ಇರುವಿಕೆಗೆ ಸಂಬಂಧಿಸಿದ ಇತರ ಮಾಹಿತಿಗಳನ್ನು ಒಳಗೊಂಡಿರುವ ತನಿಖಾ ಸಂಸ್ಥೆಗಳು ವಿಶೇಷ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ.
  2. ತರುವಾಯ, ವಿಶೇಷ ನ್ಯಾಯಾಲಯದಿಂದ, ಗೊತ್ತುಪಡಿಸಿದ ಸ್ಥಳದಲ್ಲಿ ಹಾಜರಾಗುವಂತೆ ಆ ವ್ಯಕ್ತಿಗೆ ನೋಟಿಸ್ ನೀಡಲಾಗುತ್ತದೆ. ಹಾಜರಾಗಲು, ನೋಟಿಸ್ ನೀಡಿದ ಕನಿಷ್ಠ ಆರು ವಾರಗಳ ನಂತರ ದಿನಾಂಕವನ್ನು ನಿಗದಿಪಡಿಸಲಾಗಿದೆ.
  3. ಆ ವ್ಯಕ್ತಿಯು ಗೊತ್ತುಪಡಿಸಿದ ಸ್ಥಳ ಮತ್ತು ದಿನಾಂಕದಂದು ಕಾಣಿಸಿಕೊಂಡರೆ, ಮುಂದಿನ ಪ್ರಕ್ರಿಯೆಗಳನ್ನು ಕೊನೆಗೊಳಿಸಲಾಗುತ್ತದೆ. ಇಲ್ಲದಿದ್ದರೆ, ತನಿಖಾ ಸಂಸ್ಥೆಗಳು ಪ್ರಸ್ತುತಪಡಿಸಿದ ಸಾಕ್ಷ್ಯಗಳ ಆಧಾರದ ಮೇಲೆ ವ್ಯಕ್ತಿಯನ್ನು ಪರಾರಿಯಾದ ಆರ್ಥಿಕ ಅಪರಾಧಿ ಎಂದು ಘೋಷಿಸಲಾಗುತ್ತದೆ.
  4. ಪರಾರಿಯಾದ ಆರ್ಥಿಕ ಅಪರಾಧಿಗಳ ಕಾಯ್ದೆ, 2018 ರ ಪ್ರಕಾರ, ಪರಾರಿಯಾದ ಆರ್ಥಿಕ ಅಪರಾಧಿ ಎಂದು ಘೋಷಿಸಲ್ಪಟ್ಟ ವ್ಯಕ್ತಿಯು ಅಂತಹ ಘೋಷಣೆ ಮಾಡಿದ 30 ದಿನಗಳೊಳಗೆ ಅದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಬಹುದು.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಅಂತರಾಷ್ಟ್ರೀಯ ಸೇನಾ ಆಟಗಳು:

(International Army Games)

  1.  ರಷ್ಯಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಸೇನಾ ಕ್ರೀಡಾಕೂಟ 2021 ರಲ್ಲಿ ಭಾರತೀಯ ಸೇನೆಯು ಭಾಗವಹಿಸುತ್ತಿದೆ.
  2. ಇಂಟರ್ನ್ಯಾಷನಲ್ ಆರ್ಮಿ ಗೇಮ್ಸ್ ರಷ್ಯಾದ ಮಿಲಿಟರಿ ಕ್ರೀಡಾಕೂಟವಾಗಿದ್ದು ಇದನ್ನು ರಷ್ಯಾದ ರಕ್ಷಣಾ ಸಚಿವಾಲಯ (MoD) ವಾರ್ಷಿಕವಾಗಿ ಆಯೋಜಿಸುತ್ತದೆ.
  3.  ಕ್ರೀಡಾಕೂಟವನ್ನು ಮೊದಲ ಬಾರಿಗೆ ಆಗಸ್ಟ್ 2015 ರಲ್ಲಿ ನಡೆಸಲಾಯಿತು, ಮತ್ತು ಸುಮಾರು 30 ದೇಶಗಳು ಎರಡು ವಾರಗಳ ಮಿಲಿಟರಿ ಕ್ರೀಡಾಕೂಟಕ್ಕಾಗಿ ಡಜನ್ಗಟ್ಟಲೆ ಸ್ಪರ್ಧೆಗಳಲ್ಲಿ ಭಾಗವಹಿಸಿದವು.
  4. ಈ ಆಟಗಳನ್ನು ‘ವಾರ್ ಒಲಿಂಪಿಕ್ಸ್’ (War Olympics) ಎಂದೂ ಕರೆಯುತ್ತಾರೆ.

  

ರಾಷ್ಟ್ರೀಯ ನಾಟಕ ಶಾಲೆ:

(National School of Drama – NSD)

  1.  ರಾಷ್ಟ್ರೀಯ ನಾಟಕ ಶಾಲೆ (NSD) ಯನ್ನು, 1959 ರಲ್ಲಿ ಸಂಗೀತ ನಾಟಕ ಅಕಾಡೆಮಿಯು ಅದರ ಒಂದು ಘಟಕವಾಗಿ ಸ್ಥಾಪಿಸಿತು.
  2. 1975 ರಲ್ಲಿ ಇದು ಸ್ವತಂತ್ರ ಸಂಸ್ಥೆಯಾಗಿ ಮಾರ್ಪಟ್ಟಿತು ಮತ್ತು ಇದನ್ನು 1860 ರ ಸೊಸೈಟಿ ನೋಂದಣಿ ಕಾಯ್ದೆ XXI ಅಡಿಯಲ್ಲಿ ಸ್ವಾಯತ್ತ ಸಂಸ್ಥೆಯಾಗಿ ನೋಂದಾಯಿಸಲ್ಪಟ್ಟಿತು. ಈ ಸಂಸ್ಥೆಯು ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದಿಂದ ಸಂಪೂರ್ಣ ಧನಸಹಾಯ ಪಡೆದಿದೆ.
  3. ಭಾರತ್ ರಂಗ್ ಮಹೋತ್ಸವ, ಅಥವಾ ‘ನ್ಯಾಷನಲ್ ಥಿಯೇಟರ್ ಫೆಸ್ಟಿವಲ್’ ಅನ್ನು ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ 1999 ರಲ್ಲಿ ಆರಂಭಿಸಿತು. ಇದು ನವದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ (NSD) ಆಯೋಜಿಸುವ ವಾರ್ಷಿಕ ನಾಟಕೋತ್ಸವವಾಗಿದೆ.
  4. ಪ್ರಸ್ತುತ, ‘ನ್ಯಾಷನಲ್ ಥಿಯೇಟರ್ ಫೆಸ್ಟಿವಲ್’ ಅನ್ನು ಏಷ್ಯಾದ ಅತಿದೊಡ್ಡ ಥಿಯೇಟರ್ ಫೆಸ್ಟಿವಲ್ ಎಂದು ಪರಿಗಣಿಸಲಾಗಿದೆ, ಇದನ್ನು ಸಂಪೂರ್ಣವಾಗಿ ರಂಗಭೂಮಿಗೆ ಸಮರ್ಪಿಸಲಾಗಿದೆ.

Join our Official Telegram Channel HERE for Motivation and Fast Updates

Subscribe to our YouTube Channel HERE to watch Motivational and New analysis videos

[ad_2]

Leave a Comment