[ad_1]
ಪರಿವಿಡಿ:
ಸಾಮಾನ್ಯ ಅಧ್ಯಯನ ಪತ್ರಿಕೆ 1 :
1. ಚಾರ್ ಧಾಮ್.
ಸಾಮಾನ್ಯ ಅಧ್ಯಯನ ಪತ್ರಿಕೆ 2:
1. ಒಂದು ರಾಷ್ಟ್ರ, ಒಂದು ಚುನಾವಣೆ.
2. ಸುಮಾರು ಮೂರು ವರ್ಷಗಳಲ್ಲಿ ಯಾರೊಬ್ಬರಿಗೂ ಪ್ರಾಸಿಕ್ಯೂಷನ್ ಮಂಜೂರಾತಿ ನೀಡಲು ಲೋಕಪಾಲ್ ವಿಫಲವಾಗಿದೆ.
3. ಮಾದರಿ ಬಾಡಿಗೆ ಕಾಯಿದೆ.
4. ಪಾಲಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯಿದೆ, 2007 ರ ಅಸಮರ್ಪಕತೆ.
5. ಇರಾನ್ ಪರಮಾಣು ಒಪ್ಪಂದ.
6. ಅಂತರಾಷ್ಟ್ರೀಯ ಕೃಷಿ ಅಭಿವೃದ್ಧಿ ನಿಧಿ (IFAD).
ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:
1. ರಾಷ್ಟ್ರೀಯ ರಕ್ಷಣಾ ವಿಶ್ವವಿದ್ಯಾಲಯ.
ಸಾಮಾನ್ಯ ಅಧ್ಯಯನ ಪತ್ರಿಕೆ : 1
ವಿಷಯಗಳು: ಭಾರತೀಯ ಸಂಸ್ಕೃತಿಯು ಪ್ರಾಚೀನ ಕಾಲದಿಂದ ಆಧುನಿಕ ಕಾಲದವರೆಗೆ ಕಲಾ ಪ್ರಕಾರಗಳು, ಸಾಹಿತ್ಯ ಮತ್ತು ವಾಸ್ತುಶಿಲ್ಪದ ಪ್ರಮುಖ ಅಂಶಗಳನ್ನು ಒಳಗೊಂಡಿದೆ.
ಚಾರ್ ಧಾಮ್ ಯೋಜನೆ:
(Char Dham)
ಸಂದರ್ಭ:
“ಚಾರ್ ಧಾಮ್ ಮಹಾಮಾರ್ಗ್ ವಿಕಾಸ್ ಪರಿಯೋಜನಾ (Char Dham Highway Development Project) ದಿಂದ ಸಂಪೂರ್ಣ ಹಿಮಾಲಯ ಕಣಿವೆಯ ಮೇಲೆ ಆಗಬಹುದಾದ ಸಂಚಿತ ಪರಿಣಾಮವನ್ನು ಪರಿಗಣಿಸಲು ರಚಿಸಲಾದ ಉನ್ನತಾಧಿಕಾರ ಸಮಿತಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್ ತನ್ನ ಮಾಜಿ ನ್ಯಾಯಮೂರ್ತಿ ಎಕೆ ಸಿಕ್ರಿ ಅವರನ್ನು ಒತ್ತಾಯಿಸಿದೆ.
ಏನಿದು ವಿವಾದ?
2022ರ ಫೆಬ್ರವರಿಯಲ್ಲಿ, ಹಿರಿಯ ಪರಿಸರವಾದಿ ರವಿ ಚೋಪ್ರಾ ಅವರು ಚಾರ್ ಧಾಮ್ ಯೋಜನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ಉನ್ನತ ಅಧಿಕಾರ ಸಮಿತಿಯ (High Powered Committee -HPC) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ, ಏಕೆಂದರೆ “HPC ಯು ಈ ದುರ್ಬಲವಾದ (ಹಿಮಾಲಯನ್) ಪರಿಸರವನ್ನು ರಕ್ಷಿಸುತ್ತದೆ ಎಂಬ ಅವರ ನಂಬಿಕೆಯು ಮುರಿದುಹೋಗಿದೆ” ಎಂದು ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ಹೇಳಿದ್ದರು.
ಜನವರಿ 27 ರಂದು ಸುಪ್ರೀಂ ಕೋರ್ಟ್‌ನ ಪ್ರಧಾನ ಕಾರ್ಯದರ್ಶಿಗೆ ಸಲ್ಲಿಸಿದ ರಾಜೀನಾಮೆ ಪತ್ರದಲ್ಲಿ, ಚೋಪ್ರಾ ಅವರು ಸುಪ್ರೀಂ ಕೋರ್ಟ್‌ನ ಡಿಸೆಂಬರ್ 2021 ರ ಆದೇಶವನ್ನು ಉಲ್ಲೇಖಿಸಿದ್ದಾರೆ, ಸುಪ್ರೀಂ ಕೋರ್ಟ್ ‘ಚಾರ್ ಧಾಮ್ ರಸ್ತೆ ಯೋಜನೆಯ’ ಭಾಗವಾಗಿ, ರಕ್ಷಣಾ ಅಗತ್ಯಗಳನ್ನು ಪೂರೈಸಲು ಮೂರು ಹೆದ್ದಾರಿಗಳಲ್ಲಿ ನಾಲ್ಕು ಚಕ್ರದ ವಾಹನಗಳ ರಸ್ತೆ ಮಾರ್ಗವನ್ನು 10 ಮೀಟರ್‌ವರೆಗೆ ವಿಸ್ತರಿಸಲು ಅನುಮತಿ ನೀಡಿದೆ, ಈ ಹಿಂದೆ, HPC ಶಿಫಾರಸು ಮಾಡಿದಂತೆ ಸುಪ್ರೀಂ ಕೋರ್ಟ್ ಈ ರಸ್ತೆ ಅಗಲವನ್ನು 5.5 ಮೀಟರ್‌ಗೆ ಸೀಮಿತಗೊಳಿಸುವಂತೆ ತನ್ನ ಸೆಪ್ಟೆಂಬರ್ 2020 ರ ಆದೇಶದಲ್ಲಿ ಸೂಚಿಸಿತ್ತು.
ಸುಪ್ರೀಂ ಕೋರ್ಟ್ ಹೇಳಿದ್ದೇನು?
- ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠವು 2020 ರ ಸೆಪ್ಟೆಂಬರ್‌ನಲ್ಲಿ ಮತ್ತೊಂದು ತ್ರಿಸದಸ್ಯ ಪೀಠ ಹೊರಡಿಸಿದ ಆದೇಶವನ್ನು ತಿದ್ದುಪಡಿ ಮಾಡಿದೆ. ಇದರಲ್ಲಿ ಉತ್ತರಾಖಂಡದ 899 ಕಿ.ಮೀ ರಸ್ತೆ ಜಾಲದ ಭಾಗವಾಗಿ ನಿರ್ಮಿಸಲಾಗುತ್ತಿರುವ ಮೂರು ಹೆದ್ದಾರಿಗಳಲ್ಲಿ ನಾಲ್ಕು ಚಕ್ರದ ವಾಹನಗಳ ಮಾರ್ಗದ ಅಗಲ 5.5 ಮೀಟರ್ ಆಗಿರಬೇಕು ಎಂದು ನಿರ್ದೇಶನ ನೀಡಿತ್ತು.
- ನ್ಯಾಯಾಲಯದ ಈ ತೀರ್ಪನ್ನು ರಕ್ಷಣಾ ಸಚಿವಾಲಯವು ಪರಿಶೀಲಿಸುವಂತೆ ಕೋರಿತ್ತು, ನಂತರ ಸುಪ್ರೀಂ ಕೋರ್ಟ್ ಈಗ ಕೇಂದ್ರ ಸರ್ಕಾರದ ಬೇಡಿಕೆಯಂತೆ ರಸ್ತೆಗಳ ಅಗಲವನ್ನು 10 ಮೀಟರ್‌ಗೆ ಹೆಚ್ಚಿಸಲು ತೀರ್ಪು ನೀಡಿದೆ ಇದರಿಂದಾಗಿ ಈ ಹೆದ್ದಾರಿಗಳನ್ನು ‘ಡಬಲ್ ಲೇನ್’ / ದ್ವಿಪಥ ಮಾಡಲು ದಾರಿ ಮಾಡಿಕೊಡಲಾಗಿದೆ.
- ಚೀನಾ ಗಡಿಗೆ ಫೀಡರ್ ರಸ್ತೆಗಳಾಗಿ ಕಾರ್ಯನಿರ್ವಹಿಸುವ ಈ ಮೂರು ಹೆದ್ದಾರಿಗಳ ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ಒಪ್ಪಿಕೊಳ್ಳುವ ಸಂದರ್ಭದಲ್ಲಿ, ಪರಿಸರ ಕಾಳಜಿಯೊಂದಿಗೆ ಅಂತಹ ಆದ್ಯತೆಗಳನ್ನು ಸಮತೋಲನಗೊಳಿಸುವ ಅಗತ್ಯವನ್ನು ಸುಪ್ರೀಂ ಕೋರ್ಟ್ ಗಮನಿಸಿದೆ.
- ಸರ್ವೋಚ್ಚ ನ್ಯಾಯಾಲಯವು, ಈ ನಿಟ್ಟಿನಲ್ಲಿ ‘ಉನ್ನತ ಅಧಿಕಾರ ಸಮಿತಿ’ಯ ಶಿಫಾರಸುಗಳನ್ನು ಒಳಗೊಂಡಂತೆ ಪರಿಸರ ಪ್ರಜ್ಞೆಯ ರೀತಿಯಲ್ಲಿ ಕಾಮಗಾರಿಗಳನ್ನು ಕಾರ್ಯಗತಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಕೆ ಸಿಕ್ರಿ ನೇತೃತ್ವದಲ್ಲಿ ‘ಮೇಲ್ವಿಚಾರಣಾ ಸಮಿತಿ’ಯನ್ನು ರಚಿಸುವಂತೆಯೂ ಆದೇಶಿಸಿದೆ.
ಚಾರ್‌ಧಾಮ್ ಯೋಜನೆಯಲ್ಲಿ ಇದುವರೆಗಿನ ಘಟನಾ ಕ್ರಮಗಳು:
- ಚಾರ್ ಧಾಮ್ ರಸ್ತೆ ಯೋಜನೆಯ ಶಂಕುಸ್ಥಾಪನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 2016 ರಲ್ಲಿ ನೆರವೇರಿಸಿದರು.
- ಆದರೆ, ಈ ಯೋಜನೆಯನ್ನು ಪರಿಸರದ ಆಧಾರದ ಮೇಲೆ ನ್ಯಾಯಾಲಯದಲ್ಲಿ ಪ್ರಶ್ನಿಸಲಾಯಿತು, ಅರ್ಜಿದಾರರು ಯೋಜನೆಗೆ ಪರಿಸರ ಅನುಮತಿ ನೀಡುವಲ್ಲಿ ಅವ್ಯವಹಾರ ನಡೆದಿದೆ ಮತ್ತು ಅಸ್ತಿತ್ವದಲ್ಲಿರುವ ನಿಯಮಗಳನ್ನು ಉಲ್ಲಂಘಿಸಿ ಯೋಜನೆಯಲ್ಲಿ ಕಾಮಗಾರಿಗಳನ್ನು ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
- ಯೋಜನೆಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಯು ಸೆಪ್ಟೆಂಬರ್ 2018 ರಲ್ಲಿ ಅನುಮೋದನೆ ನೀಡಿತು. ಆದರೆ, ಪ್ರಕರಣದ ವಿಚಾರಣೆ ನಡೆಸುತ್ತಿರುವ ಪೀಠದ ಹೊರತಾಗಿ ಬೇರೆ ಪೀಠ ಈ ಆದೇಶವನ್ನು ಹೊರಡಿಸಿದ ಹಿನ್ನೆಲೆಯಲ್ಲಿ ಅದರ ಆದೇಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು. ಅದರ ಮೇಲೆ ಸುಪ್ರೀಂ ಕೋರ್ಟ್ 2018 ರ ಅಕ್ಟೋಬರ್‌ನಲ್ಲಿ NGT ಆದೇಶಕ್ಕೆ ತಡೆ ನೀಡಿತು.
- ಸೆಪ್ಟೆಂಬರ್ 2020 ರಲ್ಲಿ, ಸುಪ್ರೀಂ ಕೋರ್ಟ್ ರಿಟ್ ಅರ್ಜಿಯ ವಿಚಾರಣೆ ನಡೆಸಿತು, ಕೇಂದ್ರ ರಸ್ತೆ ಸಾರಿಗೆ ಸಚಿವಾಲಯದ 2018 ರ ಸುತ್ತೋಲೆಯಲ್ಲಿ ಸೂಚಿಸಿದಂತೆ ‘ಚಾರ್ ಧಾಮ್ ಯೋಜನೆ’ಗೆ ಹೆದ್ದಾರಿಗಳ ಅಗಲವು 5.5 ಮೀಟರ್ ಮೀರಬಾರದು ಎಂದು ಆದೇಶವನ್ನು ನೀಡಿತು. ಆದರೆ ರಕ್ಷಣಾ ಸಚಿವಾಲಯ, ಅದೇ ವರ್ಷದ ಡಿಸೆಂಬರ್‌ನಲ್ಲಿ, ಹೆದ್ದಾರಿಗಳ ಅಗಲವನ್ನು 10 ಮೀಟರ್‌ಗೆ ಅನುಮತಿಸಲು ಆದೇಶವನ್ನು ತಿದ್ದುಪಡಿ ಮಾಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿತು.
- ಅದರ ನಂತರ, ಹೆದ್ದಾರಿಗಳ ಅಗಲದ ಕುರಿತು ಕೇಂದ್ರ ಸರ್ಕಾರ ಮಂಡಿಸಿದ ವಾದಗಳನ್ನು ಪರಿಶೀಲಿಸಲು ಸರ್ವೋಚ್ಚ ನ್ಯಾಯಾಲಯವು ‘ಉನ್ನತ ಅಧಿಕಾರ ಸಮಿತಿ’ (HPC) ಗೆ ಸೂಚಿಸಿದೆ.
ಉನ್ನತ ಅಧಿಕಾರ ಸಮಿತಿ (HPC) ಯು ಮಂಡಿಸಿದ ಸಂಶೋಧನೆಗಳು:
- ಈ ಹೆದ್ದಾರಿಗಳ ಆಯಕಟ್ಟಿನ ಪ್ರಾಮುಖ್ಯತೆಯನ್ನು ಪರಿಗಣಿಸಿ, ಅಗಲವನ್ನು 10 ಮೀಟರ್‌ಗೆ ವಿಸ್ತರಿಸಲು ಅನುಮತಿಸಬೇಕು.
- ಈಗಾಗಲೇ ಹೆದ್ದಾರಿಗಳ ಯಾವ ಭಾಗಗಳಲ್ಲಿ 10ಮೀಟರ್ ಅಗಲದಲ್ಲಿ ಕಾಮಗಾರಿ ಆರಂಭಿಸಲಾಗಿದೆಯೋ, ಅಲ್ಲೆಲ್ಲ ಪುನಃ ಅದರ ಅಗಲವನ್ನು 5.5 ಮೀಟರ್‌ಗೆ ಇಳಿಸಲು ಕೆಲಸ ಮಾಡುವುದು “ಪ್ರಾಯೋಗಿಕ” ಆಗುವುದಿಲ್ಲ.
- ರಸ್ತೆ ನಿರ್ಮಾಣಕ್ಕೆ ದಾರಿ ಮಾಡಿಕೊಡಲು ಮರಗಳನ್ನು ಕಡಿದ ಜಾಗಗಳಲ್ಲಿ ಮರಗಳನ್ನು ಮರು ನೆಡಲು ಸಾಧ್ಯವಾಗುವುದಿಲ್ಲ.
ಹೆದ್ದಾರಿಗಳ ಅಗಲವನ್ನು 10 ಮೀಟರ್‌ಗಳ ವರೆಗೆ ವಿಸ್ತರಿಸಬೇಕು ಎಂಬ ಬೇಡಿಕೆಗೆ ನೀಡಿದ ವಾದಗಳು:
ಭಾರೀ ವಾಹನಗಳು, ಯಂತ್ರೋಪಕರಣಗಳು, ಶಸ್ತ್ರಾಸ್ತ್ರಗಳು, ಕ್ಷಿಪಣಿಗಳು, ಟ್ಯಾಂಕ್‌ಗಳು, ಸಶಸ್ತ್ರ ಪಡೆಗಳು ಮತ್ತು ಆಹಾರ ಸರಬರಾಜುಗಳನ್ನು ತರಲು ಮತ್ತು ಸಾಗಿಸಲು ಮಿಲಿಟರಿ ಅಗತ್ಯವಿರುವ ಪ್ರದೇಶದಲ್ಲಿ ಅನೇಕ ಪ್ರವೇಶಿಸಲಾಗದ ದುರ್ಗಮ ಪ್ರದೇಶಗಳಿವೆ.
ಸಂಬಂಧಿತ ಪರಿಸರ ಕಾಳಜಿಗಳು:
- ಪರ್ವತ ಪ್ರದೇಶಗಳಲ್ಲಿ ದೊಡ್ಡ ಪ್ರಮಾಣದ ನಿರ್ಮಾಣ ಕಾರ್ಯವು ದುರಂತಕ್ಕೆ ಆಹ್ವಾನ ನೀಡಿದಂತಾಗುತ್ತದೆ ಮರಗಳನ್ನು ಕಡಿಯುವುದರಿಂದ ಮತ್ತು ಬಂಡೆಗಳನ್ನು ಸಡಿಲಗೊಳಿಸುವುದರಿಂದ, ಭೂಕುಸಿತದ ಅಪಾಯವು ಹೆಚ್ಚಾಗುತ್ತದೆ.
- ‘ಕಡ್ಡಾಯ ಪರಿಸರ ಅನುಮತಿ’ ಮತ್ತು ‘ಪರಿಸರ ಪ್ರಭಾವ ಮೌಲ್ಯಮಾಪನ (Environment Impact Assessment – EIA)’ ಕಾರ್ಯವಿಧಾನಗಳನ್ನು ಬೈಪಾಸ್ ಮಾಡಿ ಅಥವಾ ಉಲ್ಲಂಘನೆ ಮಾಡಿ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತಿದೆ.
- ಯೋಜನೆಯಡಿಯಲ್ಲಿ, ರಸ್ತೆಗಳನ್ನು ನಿರ್ಮಿಸಲು 25,000 ಮರಗಳನ್ನು ಕಡಿಯಲಾಗಿದೆ ಎಂದು ವರದಿಯಾಗಿದೆ ಇದು ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಗಂಭೀರ ಆತಂಕದ ವಿಷಯವಾಗಿದೆ.
- ನಾಲ್ಕು ಚಕ್ರದ ವಾಹನಗಳಿಗೆ ವಿಶಾಲವಾದ ಮಾರ್ಗಗಳನ್ನು ರಚಿಸಲು ಹೆಚ್ಚಿನ ಉತ್ಖನನ ಮತ್ತು ಸ್ಫೋಟಗಳನ್ನು ಮಾಡಬೇಕಾಗಿರುವುದರಿಂದ, ಈ ಪ್ರದೇಶದ ಸ್ಥಳಾಕೃತಿ / ಭೂ ರಚನೆಯು ಜಾರುವಿಕೆ ಮತ್ತು ಭೂಕುಸಿತಗಳಿಗೆ ಹೆಚ್ಚು ದುರ್ಬಲವಾಗಿರುತ್ತದೆ, ಪರಿಣಾಮವಾಗಿ ಸರ್ವಋತು ಹೆದ್ದಾರಿ ನಿರ್ಮಿಸುವ ಉದ್ದೇಶಕ್ಕೆ ಧಕ್ಕೆಯಾಗಬಹುದು.
‘ಚಾರ್ಧಾಮ್ ಯೋಜನೆ’ಯ ಕುರಿತು:
- 889 ಕಿಮೀ ಉದ್ದದ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಮತ್ತು ಸುಧಾರಣೆಯನ್ನು ‘ಚಾರ್ಧಾಮ್ ಯೋಜನೆ’ ಒಳಗೊಂಡಿದೆ. ಈ ಯೋಜನೆಯ ಮೂಲಕ ಬದರಿನಾಥ ಧಾಮ, ಕೇದಾರನಾಥ ಧಾಮ, ಗಂಗೋತ್ರಿ, ಯಮುನೋತ್ರಿ ಮತ್ತು ಕೈಲಾಸ ಮಾನಸ ಸರೋವರ ಯಾತ್ರೆಗೆ ಹೋಗುವ ಮಾರ್ಗವನ್ನು ಸಂಪರ್ಕಿಸಲಾಗುವುದು.
- ಈ ಹೆದ್ದಾರಿಯನ್ನು ‘ಚಾರ್ ಧಾಮ್ ಮಹಾಮಾರ್ಗ’ (ಚಾರ್ ಧಾಮ್ ಹೆದ್ದಾರಿ) ಮತ್ತು ಈ ‘ಹೆದ್ದಾರಿ ನಿರ್ಮಾಣ ಯೋಜನೆ’ಯನ್ನು ‘ಚಾರ್ ಧಾಮ್ ಮಹಾಮಾರ್ಗ ವಿಕಾಸ ಯೋಜನೆ’ ಎಂದು ಕರೆಯಲಾಗುವುದು.
ಸಾಮಾನ್ಯ ಅಧ್ಯಯನ ಪತ್ರಿಕೆ : 2
ವಿಷಯಗಳು: ಪ್ರಜಾ ಪ್ರಾತಿನಿಧ್ಯ ಕಾಯ್ದೆಯ ಪ್ರಮುಖ ಲಕ್ಷಣಗಳು.
ಒಂದು ರಾಷ್ಟ್ರ, ಒಂದು ಚುನಾವಣೆ:
(One Nation, One Election)
ಸಂದರ್ಭ:
ಏಕಕಾಲಕ್ಕೆ ಚುನಾವಣೆ ಅಥವಾ ‘ಒಂದು ರಾಷ್ಟ್ರ, ಒಂದು ಚುನಾವಣೆ’ ನಡೆಸಲು ಚುನಾವಣಾ ಆಯೋಗ ಸಿದ್ಧವಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಹೇಳಿದ್ದಾರೆ.
- ಈ ವರ್ಷದ ಆರಂಭದಲ್ಲಿ, ರಾಷ್ಟ್ರೀಯ ಮತದಾರರ ದಿನದಂದು, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣದಲ್ಲಿ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಮತ್ತು ‘ಒಂದು ರಾಷ್ಟ್ರ, ಒಂದು ಮತದಾರರ ಪಟ್ಟಿ’ ‘One Nation, One Election’ and (‘One Nation, One Voters’ list’)ಎಂಬ ವಿಷಯಗಳನ್ನು ಪ್ರಸ್ತಾಪಿಸಿದ್ದರು ಮತ್ತು ಚುನಾವಣಾ ಫಲಿತಾಂಶಗಳ ನಿರಂತರ ಚಕ್ರವು ಅಭಿವೃದ್ಧಿ ಕಾಮಗಾರಿಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಿದ್ದರು.
‘ಒಂದು ರಾಷ್ಟ್ರ, ಒಂದು ಚುನಾವಣೆ’ಯ ಬಗ್ಗೆ:
ಒಂದು ರಾಷ್ಟ್ರ ಒಂದು ಚುನಾವಣೆಯು ಲೋಕಸಭೆ, ರಾಜ್ಯ ವಿಧಾನಸಭೆಗಳು, ಪಂಚಾಯತ್‌ಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಏಕಕಾಲದಲ್ಲಿ ಮತ್ತು ಐದು ವರ್ಷಗಳಿಗೊಮ್ಮೆ ಚುನಾವಣೆಗಳನ್ನು ನಡೆಸುವುದನ್ನು ಸೂಚಿಸುತ್ತದೆ.
ಪದೇ ಪದೇ ಚುನಾವಣೆ ನಡೆಸುವುದರಿಂದ ಎದುರಾಗುವ ಸವಾಲುಗಳು:
- ಭಾರೀ ಖರ್ಚು.
- ಚುನಾವಣೆಯ ಸಮಯದಲ್ಲಿ ಮಾದರಿ ನೀತಿ ಸಂಹಿತೆ ಹೇರಿಕೆಯ ಪರಿಣಾಮವಾಗಿ ನೀತಿ ನಿರೂಪಣೆಗಳಲ್ಲಿನ ಅಡಚಣೆ.
- ಅಗತ್ಯ ಸೇವೆಗಳ ವಿತರಣೆಯ ಮೇಲೆ ಪರಿಣಾಮ.
- ಚುನಾವಣಾ ಸಮಯದಲ್ಲಿ ನಿಯೋಜಿಸಲು ಮಾನವ-ಶಕ್ತಿಯ ಮೇಲೆ ಹೆಚ್ಚುವರಿ ಹೊರೆ.
- ಚುನಾವಣೆಗಳ ವೆಚ್ಚಗಳು ದಿನದಿಂದ ದಿನಕ್ಕೆ ದುಬಾರಿಯಾಗುತ್ತಿರುವುದರಿಂದ ರಾಜಕೀಯ ಪಕ್ಷಗಳ ಮೇಲೆ ಅದರಲ್ಲೂ ಸಣ್ಣ ಪಕ್ಷಗಳ ಮೇಲೆ ಒತ್ತಡ ಹೆಚ್ಚುತ್ತಿದೆ.
ಏಕಕಾಲದಲ್ಲಿ ಚುನಾವಣೆ ನಡೆಸುವುದರಿಂದ ಆಗುವ ಪ್ರಯೋಜನಗಳು:
- ಆಡಳಿತ ಮತ್ತು ಸ್ಥಿರತೆ: ಆಡಳಿತ ಪಕ್ಷಗಳು ಯಾವಾಗಲೂ ಚುನಾವಣಾ ಪ್ರಚಾರದ ಮೋಡ್‌ನಲ್ಲಿರುವುದಕ್ಕಿಂತ ಹೆಚ್ಚಾಗಿ ಕಾನೂನು ಮತ್ತು ಆಡಳಿತದ ಮೇಲೆ ಗಮನ ಕೇಂದ್ರೀಕರಿಸಲು ಸಾಧ್ಯವಾಗುತ್ತದೆ.
- ಹಣದ ಖರ್ಚು ಕಡಿಮೆಯಾಗುತ್ತದೆ ಮತ್ತು ಆಡಳಿತದಲ್ಲಿ ದಕ್ಷತೆ ಮೂಡುತ್ತದೆ.
- ನೀತಿಗಳು ಮತ್ತು ಕಾರ್ಯಕ್ರಮಗಳಲ್ಲಿ ನಿರಂತರತೆ.
- ಆಡಳಿತ ದಕ್ಷತೆ: ಸರ್ಕಾರಗಳ ಜನಪ್ರಿಯ ಘೋಷಣೆಗಳು ಕಡಿಮೆಯಾಗುತ್ತವೆ.
- ಎಲ್ಲಾ ಚುನಾವಣೆಗಳನ್ನು ಒಂದೇ ಬಾರಿಗೆ ನಡೆಸುವ ಮೂಲಕ ಮತದಾರರ ಮೇಲೆ ಕಪ್ಪುಹಣದ ಪರಿಣಾಮವನ್ನು ಕಡಿಮೆ ಮಾಡಬಹುದು.
ಪ್ರಾದೇಶಿಕ ಪಕ್ಷಗಳ ಮೇಲೆ ಉಂಟಾಗುವ ಪರಿಣಾಮ:
ಲೋಕಸಭೆ ಮತ್ತು ರಾಜ್ಯ ವಿಧಾನಸಭೆ ಚುನಾವಣೆಗಳು ಏಕಕಾಲದಲ್ಲಿ ನಡೆದಾಗ ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷವನ್ನು ಅಧಿಕಾರಕ್ಕೆ ತರುವ ಪ್ರವೃತ್ತಿ ಮತದಾರರಲ್ಲಿ ಯಾವಾಗಲೂ ಇರುತ್ತದೆ.
ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವ ನಿಬಂಧನೆಯನ್ನು ಜಾರಿಗೆ ತರಲು ಸಂವಿಧಾನ ಮತ್ತು ಕಾನೂನುಗಳಲ್ಲಿ ಮಾಡಬೇಕಾದ ಬದಲಾವಣೆಗಳು:
- ಸಂಸತ್ತಿನ ಸದನಗಳ ಅಧಿಕಾರಾವಧಿಯೊಂದಿಗೆ ವ್ಯವಹರಿಸುವ 83 ನೇ ವಿಧಿಯನ್ನು ತಿದ್ದುಪಡಿ ಮಾಡಬೇಕಾಗುತ್ತದೆ.
- ವಿಧಿ 85 (ರಾಷ್ಟ್ರಪತಿಯಿಂದ ಲೋಕಸಭೆಯ ವಿಸರ್ಜನೆಗೆ ಸಂಬಂಧಿಸಿದ ಲೇಖನ).
- ವಿಧಿ 172 (ರಾಜ್ಯ ಶಾಸಕಾಂಗಗಳ ಅಧಿಕಾರಾವಧಿಗೆ ಸಂಬಂಧಿಸಿದ ಲೇಖನಗಳು)
- ವಿಧಿ 174 (ರಾಜ್ಯ ಶಾಸಕಾಂಗಗಳ ವಿಸರ್ಜನೆಗೆ ಸಂಬಂಧಿಸಿದ ಲೇಖನಗಳು)
- ವಿಧಿ 356 (ರಾಷ್ಟ್ರಪತಿ ಆಳ್ವಿಕೆಗೆ ಸಂಬಂಧಿಸಿದ ಲೇಖನಗಳು).
ಸಂಸತ್ತು ಮತ್ತು ವಿಧಾನ ಸಭೆಗಳೇರಡರ ಅಧಿಕಾರವಧಿಯ ಸ್ಥಿರತೆಗಾಗಿ ‘ಪ್ರಜಾ ಪ್ರಾತಿನಿಧ್ಯ ಕಾಯಿದೆ, (Representation of People Act) 1951’ ಅನ್ನು ತಿದ್ದುಪಡಿ ಮಾಡುವ ಅವಶ್ಯಕತೆಯಿದೆ. ಇದು ಕೆಳಗಿನ ಪ್ರಮುಖ ಅಂಶಗಳನ್ನು ಒಳಗೊಂಡಿರಬೇಕು:
- ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಲು ಅಗತ್ಯವಾದ ಕಾರ್ಯವಿಧಾನಗಳನ್ನು ಸುಲಭಗೊಳಿಸಲು ಭಾರತೀಯ ಚುನಾವಣಾ ಆಯೋಗದ (ಇಸಿಐ) ಅಧಿಕಾರಗಳು ಮತ್ತು ಕಾರ್ಯಗಳ ಮರುಸಂಘಟನೆ ಮಾಡುವುದು.
- 1951ರ ಜನತಾ ಪ್ರಾತಿನಿಧ್ಯ ಕಾಯಿದೆಯ ಸೆಕ್ಷನ್ 2ಕ್ಕೆ ‘ಏಕಕಾಲಿಕ ಚುನಾವಣೆ’ಯ ವ್ಯಾಖ್ಯಾನವನ್ನು ಸೇರಿಸಬಹುದು.
ವಿಷಯಗಳು: ಶಾಸನಬದ್ಧ, ನಿಯಂತ್ರಕ ಮತ್ತು ವಿವಿಧ ಅರೆ-ನ್ಯಾಯಾಂಗ ಸಂಸ್ಥೆಗಳು.
ಸುಮಾರು ಮೂರು ವರ್ಷಗಳಲ್ಲಿ ಯಾರೊಬ್ಬರಿಗೂ ಪ್ರಾಸಿಕ್ಯೂಷನ್ ಮಂಜೂರಾತಿ ನೀಡಲು ಲೋಕಪಾಲ್ ವಿಫಲವಾಗಿದೆ:
(Lokpal fails to give prosecution sanction to anyone in nearly three years)
ಸಂದರ್ಭ:
ಆರ್‌ಟಿಐ ಒಂದಕ್ಕೆ ನೀಡಿದ ಉತ್ತರದಲ್ಲಿ ಗ್ರಾಫ್ಟ್ ಆ್ಯಂಟಿ ಓಂಬುಡ್ಸ್‌ಮನ್ (Anti-Graft Ombudsman) ನೀಡಿದ ಮಾಹಿತಿಯ ಪ್ರಕಾರ, ಸುಮಾರು ಮೂರು ವರ್ಷಗಳ ಹಿಂದೆ ರಚನೆಯಾದಾಗಿನಿಂದ ಇಲ್ಲಿಯವರೆಗೆ ‘ಲೋಕಪಾಲ್’, ಭ್ರಷ್ಟಾಚಾರದ ಆರೋಪ ಹೊತ್ತಿರುವ ಸಾರ್ವಜನಿಕ ಸೇವಕರ ವಿರುದ್ಧ ‘ಪ್ರಾಸಿಕ್ಯೂಷನ್’ ಮಂಜೂರಾತಿ ನೀಡಲು ವಿಫಲವಾಗಿದೆ.
ಇತರ ಸಮಸ್ಯೆಗಳು:
ಲೋಕಪಾಲ್ ಅಸ್ತಿತ್ವಕ್ಕೆ ಬಂದ ಮೂರೂ ವರ್ಷಗಳ ನಂತರವೂ, ಕೇಂದ್ರ ಸರ್ಕಾರವು ಇನ್ನೂ ತನಿಖಾ / ವಿಚಾರಣಾ ನಿರ್ದೇಶಕರನ್ನು (director of inquiry) ನೇಮಕ ಮಾಡಬೇಕಿದೆ.
ಭ್ರಷ್ಟಾಚಾರದ ದೂರುಗಳನ್ನು ತನಿಖೆ ಮಾಡಲು ಮತ್ತು ಆರೋಪಿತ ಸಾರ್ವಜನಿಕ ಸೇವಕರನ್ನು ವಿಚಾರಣೆಗೆ ಒಳಪಡಿಸಲು, ಇಬ್ಬರು ಉನ್ನತ ಅಧಿಕಾರಿಗಳು – ವಿಚಾರಣೆಯ ನಿರ್ದೇಶಕರು (Directors of Inquiry) ಮತ್ತು ಪ್ರಾಸಿಕ್ಯೂಷನ್ ನಿರ್ದೇಶಕರನ್ನು (Directors of Prosecution) ಇನ್ನೂ ನೇಮಿಸಬೇಕಾಗಿದೆ.
ವಿಚಾರಣೆಯ ನಿರ್ದೇಶಕರು ಯಾರು?
ಲೋಕಪಾಲ್ ಮತ್ತು ಲೋಕಾಯುಕ್ತ ಕಾಯ್ದೆ, 2013 ರ ಪ್ರಕಾರ:
- ಭಾರತ ಸರ್ಕಾರದ ಜಂಟಿ ಕಾರ್ಯದರ್ಶಿ ಹುದ್ದೆಗೆ ಕಡಿಮೆಯಿಲ್ಲದಂತೆ ಒಬ್ಬರು ವಿಚಾರಣಾ ನಿರ್ದೇಶಕರು ಇರಬೇಕು.
- ಲೋಕಪಾಲರಿಂದ ಕೇಂದ್ರ ವಿಚಕ್ಷಣ ಆಯೋಗಕ್ಕೆ (Central Vigilance Commission -CVC) ಉಲ್ಲೇಖಿಸಲಾದ ಪ್ರಕರಣಗಳ ಪ್ರಾಥಮಿಕ ವಿಚಾರಣೆಗಳನ್ನು ನಡೆಸಲು ವಿಚಾರಣಾ ನಿರ್ದೇಶಕರ (ಅವನು / ಅವಳ) ನ್ನು ಕೇಂದ್ರ ಸರ್ಕಾರವು ನೇಮಕ ಮಾಡುತ್ತದೆ.
ಲೋಕಪಾಲರ ಆಯ್ಕೆ ಸಮಿತಿ:
ಆಯ್ಕೆ ಸಮಿತಿಯ ಶಿಫಾರಸಿನ ಮೇರೆಗೆ ಲೋಕಪಾಲ ಸಮಿತಿಯ ಸದಸ್ಯರನ್ನು ರಾಷ್ಟ್ರಪತಿಗಳು ನೇಮಿಸುತ್ತಾರೆ.
ಆಯ್ಕೆ ಸಮಿತಿಯ ಸಂಯೋಜನೆ:
- ಅಧ್ಯಕ್ಷತೆ ಪ್ರಧಾನ ಮಂತ್ರಿ.
- ಲೋಕಸಭೆಯ ಸಭಾಪತಿ.
- ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕ.
- ಭಾರತದ ಮುಖ್ಯ ನ್ಯಾಯಮೂರ್ತಿ ಅಥವಾ ಅವರು ನಾಮನಿರ್ದೇಶನ ಮಾಡಿದ ನ್ಯಾಯಾಧೀಶರು ಮತ್ತು
- ಓರ್ವ ಪ್ರಖ್ಯಾತ ನ್ಯಾಯವಾದಿ.
ಲೋಕಪಾಲ್ ಕಾಯ್ದೆ (ತಿದ್ದುಪಡಿ) 2016 ರ ಮೂಲಕ, ಮಾನ್ಯತೆ ಪಡೆದ ಪ್ರತಿಪಕ್ಷದ ನಾಯಕನ ಅನುಪಸ್ಥಿತಿಯಲ್ಲಿ ಲೋಕಸಭೆಯ ಏಕೈಕ ಅತಿದೊಡ್ಡ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಸಮಿತಿಯ ಸದಸ್ಯರನ್ನಾಗಿ ಮಾಡಲು ಅವಕಾಶ ಕಲ್ಪಿಸಲಾಗಿದೆ.
2013 ರ ಲೋಕಪಾಲ್ ಕಾಯ್ದೆಯ ಮುಖ್ಯಾಂಶಗಳು:
- ಕೇಂದ್ರ ಮಟ್ಟದಲ್ಲಿ ‘ಲೋಕಪಾಲ್’ ಮತ್ತು ರಾಜ್ಯ ಮಟ್ಟದಲ್ಲಿ ‘ಲೋಕಾಯುಕ್ತ’ ಎಂಬ ಭ್ರಷ್ಟಾಚಾರ-ವಿರೋಧಿ ‘ಆಡಳಿತಾತ್ಮಕ ಕುಂದುಕೊರತೆ ವಿಚಾರಣಾ ಅಧಿಕಾರಿ’ (OMBUDSAMAN)ಯನ್ನು ನೇಮಿಸಲು ಈ ಕಾಯ್ದೆಯು ಅವಕಾಶ ನೀಡುತ್ತದೆ.
- ಲೋಕಪಾಲ ಅಧ್ಯಕ್ಷರು ಮತ್ತು ಗರಿಷ್ಠ ಎಂಟು ಸದಸ್ಯರನ್ನು ಹೊಂದಿರುವ ಬಹು-ಸದಸ್ಯ ಸಂಸ್ಥೆಯಾಗಿರುತ್ತದೆ.
- ಲೋಕಪಾಲದ ಅಧಿಕಾರ ವ್ಯಾಪ್ತಿಯು ಪ್ರಧಾನಿ ಸೇರಿದಂತೆ ಎಲ್ಲಾ ವರ್ಗದ ಸಾರ್ವಜನಿಕ ಸೇವಕರನ್ನು ಒಳಗೊಂಡಿರುತ್ತದೆ. ಆದರೆ ಸಶಸ್ತ್ರ ಪಡೆಗಳು ಲೋಕಪಾಲ್ ವ್ಯಾಪ್ತಿಗೆ ಬರುವುದಿಲ್ಲ.
- ಕಾನೂನು ಕ್ರಮ ಜರುಗಿಸುವಾಗಲೂ ಭ್ರಷ್ಟ ವಿಧಾನಗಳಿಂದ ಸ್ವಾಧೀನಪಡಿಸಿಕೊಂಡ ಆಸ್ತಿಯನ್ನು ಲಗತ್ತಿಸಲು ಮತ್ತು ಮುಟ್ಟುಗೋಲು ಹಾಕಿಕೊಳ್ಳಲು ಈ ಕಾಯಿದೆಯು ಅವಕಾಶ ನೀಡುತ್ತದೆ.
- ಈ ಕಾಯ್ದೆ ಜಾರಿಗೆ ಬಂದ ಒಂದು ವರ್ಷದೊಳಗೆ ರಾಜ್ಯಗಳು ಲೋಕಾಯುಕ್ತವನ್ನು ರಚಿಸಬೇಕಾಗುತ್ತದೆ.
- ಮಾಹಿತಿ ಪೂರೈಕೆದಾರರಾಗಿ (ಶಿಳ್ಳೆ ಹೊಡೆಯುವವರು -whistleblowers) ಕಾರ್ಯನಿರ್ವಹಿಸುವ ಸಾರ್ವಜನಿಕ ಸೇವಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಈ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಅಧಿಕಾರಗಳು:
- ಲೋಕಪಾಲ ಸಂಸ್ಥೆಯು ಸಿಬಿಐ ಸೇರಿದಂತೆ ಯಾವುದೇ ತನಿಖಾ ಸಂಸ್ಥೆಯನ್ನು ಮೇಲ್ವಿಚಾರಣೆ ಮಾಡುವ ಮತ್ತು ನಿರ್ದೇಶನಗಳನ್ನು ನೀಡುವ ಅಧಿಕಾರವನ್ನು ಹೊಂದಿರುತ್ತದೆ.
- ಈ ಕಾಯ್ದೆಯ ಪ್ರಕಾರ, ತನಿಖಾ ಸಂಸ್ಥೆಯೊಂದು (ಕೇಂದ್ರ ಜಾಗೃತ/ ವಿಚಕ್ಷಣಾ ಆಯೋಗ ಅಥವಾ ಸಿಬಿಐನಂತಹ) ತನಿಖೆಯನ್ನು ಪ್ರಾರಂಭಿಸುವ ಮೊದಲೇ ಲೋಕಪಾಲ ಸಂಸ್ಥೆಯು ವ್ಯಕ್ತಿಯೊಬ್ಬರ ವಿರುದ್ಧ ಮೇಲ್ನೋಟದ ಪ್ರಕರಣವಿದ್ದಲ್ಲಿ (prima facie case) ಯಾವುದೇ ಸಾರ್ವಜನಿಕ ಸೇವಕನನ್ನು ಕರೆಸಿಕೊಳ್ಳಬಹುದು ಅಥವಾ ಪ್ರಶ್ನಿಸಬಹುದು. ಲೋಕಪಾಲ್ ಶಿಫಾರಸ್ಸು ಮಾಡಿರುವ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐನ ಯಾವುದೇ ಅಧಿಕಾರಿಯನ್ನು ಲೋಕಪಾಲ್ ಅನುಮೋದನೆ ಇಲ್ಲದೆ ವರ್ಗಾಯಿಸಲಾಗುವುದಿಲ್ಲ.
- ಆರು ತಿಂಗಳೊಳಗೆ ತನಿಖಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಆದಾಗ್ಯೂ, ಲೋಕಪಾಲ್ ಅಥವಾ ಲೋಕಾಯುಕ್ತರು ಸಮಂಜಸವಾದ ಕಾರಣಗಳನ್ನು ಲಿಖಿತವಾಗಿ ನೀಡಿದ ನಂತರ ತನಿಖೆಯ ಅವಧಿಯನ್ನು ಒಂದು ಸಮಯದಲ್ಲಿ ಆರು ತಿಂಗಳವರೆಗೆ ವಿಸ್ತರಿಸಬಹುದು.
- ಲೋಕಪಾಲ್ ಉಲ್ಲೇಖಿಸಿರುವ ಪ್ರಕರಣಗಳನ್ನು ಆಲಿಸಲು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗುವುದು.
ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.
ಮಾದರಿ ಬಾಡಿಗೆ ಕಾಯಿದೆ(MTA):
(Model Tenancy Act)
ಸಂದರ್ಭ:
ಬಹುನಿರೀಕ್ಷಿತ ‘ಚಂಡೀಗಢ ಟೆನೆನ್ಸಿ ಆಕ್ಟ್’ ಈಗ ಸಂಸತ್ತಿನ ಮೂಲಕ ಜಾರಿಗೆ ಬರಲು ಸರದಿಯಲ್ಲಿದೆ.
- ಕೇಂದ್ರಾಡಳಿತ ಪ್ರದೇಶದ ಆಡಳಿತವು, ಕೇಂದ್ರ ಸರ್ಕಾರದ ಮಾದರಿ ಟೆನೆನ್ಸಿ ಆಕ್ಟ್, 2021 (Model Tenancy Act – MTA), 2021 ರ ಆಧಾರದ ಮೇಲೆ ಪ್ರಸ್ತಾವಿತ ಕಾಯಿದೆಯನ್ನು ಅನುಮೋದನೆ ಮತ್ತು ಜಾರಿಗೆ ತರಲು ಕೇಂದ್ರ ಸರ್ಕಾರಕ್ಕೆ ಕಳುಹಿಸಲು ನಿರ್ಧರಿಸಿದೆ.
ಹಿನ್ನೆಲೆ:
2021ರ ಜೂನ್ ತಿಂಗಳಿನಲ್ಲಿ, ಮಾದರಿ ಬಾಡಿಗೆ ಕಾಯ್ದೆ (Model Tenancy Act) ಯನ್ನು ಕೇಂದ್ರ ಸಚಿವ ಸಂಪುಟವು ಅಂಗೀಕರಿಸಿತ್ತು.
- ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹೊಸ ಕಾನೂನುಗಳನ್ನು ಜಾರಿಗೆ ತರುವ ಮೂಲಕ ‘ಮಾದರಿ ಹಿಡುವಳಿ ಕಾಯ್ದೆ’ ಯನ್ನು ಜಾರಿಗೆ ತರಬಹುದು ಅಥವಾ ಅದಕ್ಕೆ ಅನುಗುಣವಾಗಿ ಈಗಾಗಲೇ ಅಸ್ತಿತ್ವದಲ್ಲಿರುವ ತಮ್ಮ ಹಿಡುವಳಿ ಕಾನೂನುಗಳನ್ನು ತಿದ್ದುಪಡಿ ಮಾಡಬಹುದು.
ಮಾದರಿ ಕಾನೂನಿನ ಪ್ರಮುಖ ಅಂಶಗಳು:
- ಈ ಕಾನೂನುಗಳು ಪುನರಾವಲೋಕನ ಪರಿಣಾಮದೊಂದಿಗೆ ಅನ್ವಯವಾಗುತ್ತವೆ ಮತ್ತು ಅಸ್ತಿತ್ವದಲ್ಲಿರುವ ಹಿಡುವಳಿದಾರರ ಅಥವಾ ಬಾಡಿಗೆದಾರರ ಮೇಲೆ ಪರಿಣಾಮ ಬೀರುವುದಿಲ್ಲ.
- ಎಲ್ಲಾ ಹೊಸ ಬಾಡಿಗೆದಾರರಿಗೆ ಲಿಖಿತ ಒಪ್ಪಂದದ ಅಗತ್ಯವಿರುತ್ತದೆ. ಈ ಒಪ್ಪಂದವನ್ನು ಸಂಬಂಧಿಸಿದ ಆಯಾ ಜಿಲ್ಲಾ ‘ಬಾಡಿಗೆ ಪ್ರಾಧಿಕಾರ’ಕ್ಕೆ ಸಲ್ಲಿಸಬೇಕಾಗುತ್ತದೆ.
- ಭೂಮಾಲೀಕರು ಮತ್ತು ಬಾಡಿಗೆದಾರರ ಪಾತ್ರಗಳು ಮತ್ತು ಜವಾಬ್ದಾರಿಗಳನ್ನು ಕಾನೂನು ಸ್ಪಷ್ಟಪಡಿಸುತ್ತದೆ.
- ಹಿಡುವಳಿದಾರನು ಆಕ್ರಮಿಸಿಕೊಂಡಿರುವ ಆವರಣಕ್ಕೆ ಯಾವುದೇ ಭೂಮಾಲೀಕರು ಅಥವಾ ಆಸ್ತಿ ವ್ಯವಸ್ಥಾಪಕರು ಯಾವುದೇ ಅಗತ್ಯ ವಸ್ತುಗಳ ಪೂರೈಕೆಯನ್ನು ತಡೆಹಿಡಿಯುವಂತಿಲ್ಲ.
- ಒಂದು ವೇಳೆ ಹಿಡುವಳಿಯ ಒಪ್ಪಂದವನ್ನು ನವೀಕರಿಸದಿದ್ದರೆ, ಹಳೆಯ ಒಪ್ಪಂದದ ನಿಯಮಗಳು ಮತ್ತು ಷರತ್ತುಗಳೊಂದಿಗೆ ಬಾಡಿಗೆದಾರರನ್ನು ಮಾಸಿಕ ಆಧಾರದ ಮೇಲೆ, ಗರಿಷ್ಠ ಆರು ತಿಂಗಳವರೆಗೆ ನವೀಕರಿಸಲಾಗುತ್ತದೆ ಎಂದು ಪರಿಗಣಿಸಲಾಗುತ್ತದೆ.
- ಖಾಲಿ ಇಲ್ಲದಿದ್ದ ಸಂದರ್ಭದಲ್ಲಿ ಪರಿಹಾರ: ನಿಗದಿತ ಹಿಡುವಳಿ ಅವಧಿಯ ಆರು ತಿಂಗಳ ಅವಧಿ ಮುಗಿದ ನಂತರ ಅಥವಾ ಆದೇಶ ಅಥವಾ ಸೂಚನೆಯ ಮೂಲಕ ಹಿಡುವಳಿಯನ್ನು ಮುಕ್ತಾಯಗೊಳಿಸಿದ ನಂತರ, ಬಾಡಿಗೆದಾರನು ‘ಬಾಕಿ ಇರುವ ಬಾಡಿಗೆದಾರ’(Tenant in Default) ಆಗುತ್ತಾನೆ. ಮತ್ತು ಅವನು ಮುಂದಿನ ಎರಡು ತಿಂಗಳುಗಳ ನಿಗದಿತ ಬಾಡಿಗೆಯನ್ನು ಎರಡು ಪಟ್ಟು ಹೆಚ್ಚು ಮತ್ತು ನಂತರದ ತಿಂಗಳುಗಳ ಬಾಡಿಗೆಯನ್ನು ಮಾಸಿಕ ಬಾಡಿಗೆಗಿಂತ ನಾಲ್ಕು ಪಟ್ಟು ಪಾವತಿಸಬೇಕಾಗುತ್ತದೆ.
- ಪ್ರವೇಶಕ್ಕೆ ಕನಿಷ್ಠ ಇಪ್ಪತ್ನಾಲ್ಕು ಗಂಟೆಗಳ ಮೊದಲು ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಸೂಚನೆ ಅಥವಾ ಲಿಖಿತವಾಗಿ ಸೂಚನೆ ನೀಡಿದ ನಂತರವೇ ಭೂಮಾಲೀಕರು ಅಥವಾ ಆಸ್ತಿ ವ್ಯವಸ್ಥಾಪಕರು ಬಾಡಿಗೆದಾರರ ಆವರಣಕ್ಕೆ ಪ್ರವೇಶಿಸಬಹುದು.
ಮಹತ್ವ:
ಇದು ಸಿವಿಲ್ ನ್ಯಾಯಾಲಯಗಳ ಮೇಲಿನ ಹೊರೆ ಕಡಿಮೆ ಮಾಡುವುದು, ಕಾನೂನು ವಿವಾದಗಳಲ್ಲಿ ಸಿಲುಕಿರುವ ಬಾಡಿಗೆ ಆಸ್ತಿಗಳನ್ನು ಮುಕ್ತಗೊಳಿಸುವುದು ಅಥವಾ ಅನ್ಲಾಕ್ ಮಾಡುವುದು ಮತ್ತು ಬಾಡಿಗೆದಾರರು ಮತ್ತು ಭೂಮಾಲೀಕರ ಹಿತಾಸಕ್ತಿಗಳನ್ನು ಸಮತೋಲನಗೊಳಿಸುವ ಮೂಲಕ ಭವಿಷ್ಯದ ಘರ್ಷಣೆಯನ್ನು ತಡೆಯುವ ಭರವಸೆ ನೀಡುವ ಪ್ರಮುಖ ಶಾಸನವಾಗಿದೆ.
ಈ ನಿಟ್ಟಿನಲ್ಲಿ ‘ಕಾನೂನು’ ಅವಶ್ಯಕತೆ:
- ಯುವ, ವಿದ್ಯಾವಂತ ವ್ಯಕ್ತಿಗಳು ಉದ್ಯೋಗದ ಹುಡುಕಾಟದಲ್ಲಿ ದೊಡ್ಡ ಮಹಾನಗರಗಳಿಗೆ ವಲಸೆ ಹೋಗುತ್ತಾರೆ, ಆಗಾಗ್ಗೆ ಬಾಡಿಗೆ ಹಿಡುವಳಿ ಪರಿಸ್ಥಿತಿಗಳು ಮತ್ತು ಬಾಡಿಗೆಗೆ ವಾಸಿಸಲು ಒಂದು ಸ್ಥಳಕ್ಕೆ ಭದ್ರತಾ ಠೇವಣಿಗಳ ಲೆಕ್ಕವಿಲ್ಲದ ಬೇಡಿಕೆಯ ಬಗ್ಗೆ ದೂರು ನೀಡುತ್ತಾರೆ. ಕೆಲವು ನಗರಗಳಲ್ಲಿ, ಬಾಡಿಗೆದಾರರಿಗೆ 11 ತಿಂಗಳ ಬಾಡಿಗೆಗೆ ಸಮಾನವಾದ ಭದ್ರತಾ-ಠೇವಣಿ ಪಾವತಿಸಲು ಕೇಳಲಾಗುತ್ತದೆ.
- ಇದಲ್ಲದೆ, ಕೆಲವು ಭೂಮಾಲೀಕರು ದುರಸ್ತಿ ಕಾರ್ಯಗಳಿಗಾಗಿ ಯಾವುದೇ ಮುನ್ಸೂಚನೆ ನೀಡದೆ ಬಾಡಿಗೆದಾರರ ಆವರಣಕ್ಕೆ ಭೇಟಿ ನೀಡುವ ಮೂಲಕ ನಿಯಮಿತವಾಗಿ ಅವರ ಗೌಪ್ಯತೆಯ ಹಕ್ಕನ್ನು ಉಲ್ಲಂಘಿಸುತ್ತಾರೆ.
- ಅನಿಯಂತ್ರಿತ ಬಾಡಿಗೆ ಹೆಚ್ಚಳವು ಬಾಡಿಗೆದಾರರಿಗೆ ಮತ್ತೊಂದು ಸಮಸ್ಯೆಯಾಗಿದೆ, ಅವರಲ್ಲಿ ಹಲವರು “ಸೆರೆಯಾಳು ಗ್ರಾಹಕರಂತೆ” ಹಿಂಸೆ ಅನುಭವಿಸಿ ದಂತಾಗುತ್ತದೆ ಎಂದು ದೂರು ನೀಡುತ್ತಾರೆ.
- ಇದಲ್ಲದೆ, ಬಾಡಿಗೆದಾರರು ಹೆಚ್ಚಾಗಿ ಬಾಡಿಗೆ ಆವರಣದಲ್ಲಿ “ಅಕ್ರಮವಾಗಿ ವಾಸಿಸುತ್ತಿದ್ದಾರೆ” ಅಥವಾ ಆಸ್ತಿಯನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪವಿದೆ.
ವಿಷಯಗಳು: ಕೇಂದ್ರ ಮತ್ತು ರಾಜ್ಯಗಳಿಂದ ದುರ್ಬಲ ವರ್ಗದ ಜನಸಮುದಾಯದವರಿಗೆ ಇರುವ ಕಲ್ಯಾಣ ಯೋಜನೆಗಳು ಮತ್ತು ಈ ಯೋಜನೆಗಳ ಕಾರ್ಯಕ್ಷಮತೆ; ಕಾರ್ಯವಿಧಾನಗಳು,ಕಾನೂನುಗಳು, ಸಂಸ್ಥೆಗಳು ಮತ್ತು ಈ ದುರ್ಬಲ ವಿಭಾಗಗಳ ರಕ್ಷಣೆ ಮತ್ತು ಸುಧಾರಣೆಗಾಗಿ ರಚಿಸಲಾದ ಸಂಸ್ಥೆಗಳು.
ಪಾಲಕರು / ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯಿದೆ, 2007 ರ ಅಸಮರ್ಪಕತೆ:
(The Maintenance and Welfare of Parents and Senior Citizens Act, 2007 alone is not sufficient)
ಸಂದರ್ಭ:
COVID-19 ಸಾಂಕ್ರಾಮಿಕ ರೋಗವು ವಯೋ ವೃದ್ಧ ವ್ಯಕ್ತಿಗಳು ಹೇಗೆ ವಿಶಿಷ್ಟ ಸವಾಲುಗಳನ್ನು ಎದುರಿಸ ಬೇಕಾಯಿತು ಎಂಬುದನ್ನು ನಮಗೆ ತೋರಿಸಿದೆ.
ಅವರು ಎದುರಿಸಿದ ಸವಾಲುಗಳು/ದೌರ್ಬಲ್ಯಗಳು ಎಂದರೆ:
- ‘ವಯಸ್ಸಾದ ವ್ಯಕ್ತಿಗಳ ವಿರುದ್ಧ ತೋರಿದ ಅನುಚಿತ ವರ್ತನೆಗಳು (Ageist attitudes) ಮತ್ತು ಸ್ಟೀರಿಯೊಟೈಪ್ ನಡವಳಿಕೆಗಳಿಂದಾಗಿ ವೃದ್ಧ ಜನರು ತಾರತಮ್ಯದ ಮತ್ತು ಋಣಾತ್ಮಕ ನಡವಳಿಕೆಯನ್ನು ಎದುರಿಸ ಬೇಕಾಯಿತು. ಇದು ಲಿಂಗ, ಜನಾಂಗ ಮತ್ತು ಅಂಗವೈಕಲ್ಯವನ್ನು ಆಧರಿಸಿದ ಇತರ ಕಳಂಕಗಳೊಂದಿಗೆ ಸಂಯೋಜಿಸಲ್ಪಟ್ಟಿದೆ ಮತ್ತು ಮತ್ತಷ್ಟು ಅಸಹನೀಯವಾಗಿದೆ.
- ಅವರ ಕಾಯಿಲೆಗಳು ಮತ್ತು ಮರಣವನ್ನು “ಸ್ವೀಕಾರಾರ್ಹ” ಎಂದು ಪರಿಗಣಿಸಲಾಗುತ್ತದೆ ಮತ್ತು ಇದನ್ನು ಸಾಮಾನ್ಯವಾಗಿ ವಯಸ್ಸಾಗುವಿಕೆಯ ಭಾಗವೆಂದು ಪರಿಗಣಿಸಲಾಗುತ್ತದೆ.
- ಹೆಲ್ಪ್‌ಏಜ್ ಇಂಡಿಯಾ ಪ್ರಕಟಿಸಿದ ವರದಿಯ ಪ್ರಕಾರ, ಸಾಂಕ್ರಾಮಿಕ ಸಮಯದಲ್ಲಿ ವೃದ್ಧರ ಮೇಲಿನ ದೌರ್ಜನ್ಯದಲ್ಲಿ ತೀವ್ರ ಹೆಚ್ಚಳ ಕಂಡುಬಂದಿದೆ.
- ವೃದ್ಧಾಪ್ಯದ ಬಗ್ಗೆ ತಪ್ಪು ಮಾಹಿತಿ ಮತ್ತು ಕಟ್ಟು ಕಥೆಗಳು, ನಿರ್ದಿಷ್ಟ ಆರೋಗ್ಯ ಮತ್ತು ನೀತಿ ಕ್ರಮಗಳಲ್ಲಿನ ಕೊರತೆ, ಸಮಾಜದಲ್ಲಿನ ವಯೋಸಹಜತೆ ಮತ್ತು ಸೀಮಿತ ಡಿಜಿಟಲ್ ಸಾಕ್ಷರತೆಯು ವಯಸ್ಸಾದ ವ್ಯಕ್ತಿಗಳಲ್ಲಿ ವಿಶಿಷ್ಟವಾದ ದುರ್ಬಲತೆಗಳಿಗೆ ಕೊಡುಗೆ ನೀಡುತ್ತವೆ.
‘ವಯಸ್ಸಾದ ವ್ಯಕ್ತಿಗಳ ವಿರುದ್ಧದ ಅನುಚಿತ ವರ್ತನೆಗಳ ಕುರಿತು ಇತ್ತೀಚೆಗೆ ಬಿಡುಗಡೆಯಾದ WHO ದ ವರದಿಯ ಪ್ರಕಾರ:
- ಪ್ರಪಂಚದಾದ್ಯಂತ, ಮೂವರಲ್ಲಿ ಒಬ್ಬರು ‘ವಯಸ್ಸಾದ ವ್ಯಕ್ತಿಗಳ ವಿರುದ್ಧ ತೋರುವ ಅನುಚಿತ ವರ್ತನೆಗಳು (Ageist attitudes) ಮತ್ತು ಸ್ಟೀರಿಯೊಟೈಪ್ ನಡವಳಿಕೆಗಳನ್ನು ಎದುರಿಸುತ್ತಾರೆ.
- ಈ ಕಾರಣದಿಂದಾಗಿ, ಸಮಾಜದಲ್ಲಿ ವಯೋವೃದ್ಧ ವ್ಯಕ್ತಿಗಳ ಕಡೆಗಣನೆ ಮತ್ತು ಗಂಭೀರ ಮಾನವ ಹಕ್ಕುಗಳ ಬಿಕ್ಕಟ್ಟು ಉದ್ಭವಿಸಿದೆ.
- ಇದು ಘನತೆ, ಸ್ವಾಯತ್ತತೆ, ಗೌರವ, ಸಾಮರ್ಥ್ಯ, ಒಳಗೊಳ್ಳುವಿಕೆ ಮತ್ತು ಸಮಾನತೆ ಇತ್ಯಾದಿಗಳ ಹಕ್ಕುಗಳನ್ನು ಒಳಗೊಂಡಂತೆ ಹಿರಿಯ ನಾಗರಿಕರ ಹಕ್ಕುಗಳನ್ನು ಉಲ್ಲಂಘಿಸುತ್ತದೆ.
- ಸಾಮಾಜಿಕ ಕಳಂಕ, ”ವಯಸ್ಸಾದ ವ್ಯಕ್ತಿಗಳ ವಿರುದ್ಧ ತೋರುವ ಅನುಚಿತ ವರ್ತನೆಗಳು’ ಮತ್ತು ಅವರ ಹಕ್ಕುಗಳ ಉಲ್ಲಂಘನೆಯು ವಯಸ್ಸಾದ ವ್ಯಕ್ತಿಗಳ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು.
- ಇದು,ಅವರು ಮಧುಮೇಹ, ಅಧಿಕ ರಕ್ತದೊತ್ತಡ, ಹೃದ್ರೋಗ, ಪಾರ್ಶ್ವವಾಯು ಮತ್ತು ಮಾನಸಿಕ ಅಸ್ವಸ್ಥತೆಗಳ (ಖಿನ್ನತೆ, ಆತಂಕ, ನಿದ್ರಾಹೀನತೆ ಮತ್ತು ಬುದ್ಧಿಮಾಂದ್ಯತೆ) ನಂತಹ ‘ಸಾಂಕ್ರಾಮಿಕವಲ್ಲದ ಕಾಯಿಲೆಗಳಿಗೆ’ ತುತ್ತಾಗುವ ಅಪಾಯವನ್ನು ಹೆಚ್ಚಿಸುತ್ತದೆ.
- ವಯಸ್ಸಾದವರನ್ನು ನಿರ್ಲಕ್ಷಿಸುವುದರಿಂದ ಒಂಟಿತನ, ಸೋಂಕುಗಳು, ಬೀಳುವಿಕೆ, ಯಾಂತ್ರಿಕ ಗಾಯಗಳು ಮತ್ತು ಅಕಾಲಿಕ ಮರಣಕ್ಕೆ ಕಾರಣವಾಗಬಹುದು ಎಂದು ಸಂಶೋಧನೆ ತೋರಿಸುತ್ತದೆ.
- ಅಂತಿಮವಾಗಿ, ಒತ್ತಡ ಮತ್ತು ಪ್ರತ್ಯೇಕತೆಯ ಬದುಕು ವಯಸ್ಸಾದವರನ್ನು ಹೆಚ್ಚಾಗಿ ವೃದ್ಧಾಪ್ಯದಲ್ಲಿ ತುತ್ತಾಗುವ ಯಾವುದೇ ದೀರ್ಘಕಾಲದ ಕಾಯಿಲೆಗಳಿಗೆ ಹೆಚ್ಚು ಒಳಗಾಗುವಂತೆ ಮಾಡುತ್ತದೆ.
ವಯಸ್ಸಾದ ವ್ಯಕ್ತಿಗಳ ಹಕ್ಕುಗಳು ಮತ್ತು ಆರೋಗ್ಯವನ್ನು ರಕ್ಷಿಸಲು ಅಸ್ತಿತ್ವದಲ್ಲಿರುವ ಕಾನೂನು ನಿಬಂಧನೆಗಳು:
- ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯಿದೆ, 2007 (Maintenance and Welfare of Parents and Senior Citizens Act, 2007) ವಯಸ್ಸಾದ ವ್ಯಕ್ತಿಗಳ ಹಕ್ಕುಗಳು ಮತ್ತು ಆರೋಗ್ಯವನ್ನು ರಕ್ಷಿಸಲು ಮೀಸಲಾಗಿರುವ ಏಕೈಕ ನಿರ್ದಿಷ್ಟ ಶಾಸನವಾಗಿದೆ.
- ಹಿರಿಯ ವ್ಯಕ್ತಿಗಳ ರಾಷ್ಟ್ರೀಯ ನೀತಿಯ (National Policy for Older Persons – NPOP) ಅನುಸಾರವಾಗಿ, 1999 ರಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ಸಚಿವರ ಅಧ್ಯಕ್ಷತೆಯಲ್ಲಿ ‘ವಯಸ್ಸಾದ ವ್ಯಕ್ತಿಗಳಿಗಾಗಿ ರಾಷ್ಟ್ರೀಯ ಮಂಡಳಿ’ಯ ನೀತಿಯ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡಲು ಮತ್ತು ಸರ್ಕಾರಕ್ಕೆ ಸಲಹೆ ನೀಡಲು ಹಿರಿಯ ನಾಗರಿಕರ ರಾಷ್ಟ್ರೀಯ ಮಂಡಳಿ(National Council for Older Persons – NCOP) ಅನ್ನು ಸ್ಥಾಪಿಸಲಾಯಿತು.
ಪ್ರಸ್ತುತ ವ್ಯವಸ್ಥೆಯಲ್ಲಿನ ಸಮಸ್ಯೆಗಳು:
- ಯೋಜನೆಗಳು ಮತ್ತು ನೀತಿಗಳನ್ನು ‘ಪೇಪರ್-ಟು-ರಿಯಾಲಿಟಿ’ ಅಂದರೆ ಕಾಗದದಿಂದ ವಾಸ್ತವಕ್ಕೆ ಪರಿವರ್ತಿಸುವುದು ಇನ್ನೂ ಬಹಳ ದೂರದಲ್ಲಿದೆ. ಇಲ್ಲಿಯವರೆಗೆ ಜಾರಿಗೊಳಿಸಲಾದ ಹಲವು ಕಾಯಿದೆಗಳು ಮತ್ತು ಕ್ರಮಗಳು ಕಳಪೆಯಾಗಿ ಅನುಷ್ಠಾನಗೊಂಡಿವೆ ಮತ್ತು ಅವುಗಳನ್ನು ಸೇವಾ ಪೂರೈಕೆದಾರರು ಮತ್ತು ಬಳಕೆದಾರರಲ್ಲಿ ಕನಿಷ್ಠ ಅರಿವಿನೊಂದಿಗೆ ಅಥವಾ ಜಾಗೃತಿಯೊಂದಿಗೆ ಕಳಪೆಯಾಗಿ ಕಾರ್ಯಗತಗೊಳಿಸಲಾಗಿದೆ.
- ಲಾಂಗಿಟ್ಯೂಡಿನಲ್ ಏಜಿಂಗ್ ಸ್ಟಡಿ ಆಫ್ ಇಂಡಿಯಾ (Longitudinal Ageing Study in India- LASI) ದ ಇತ್ತೀಚಿನ ಮಾಹಿತಿಯು ಐದು ವಯಸ್ಸಾದವರಲ್ಲಿ ಒಬ್ಬರು ಮಾತ್ರ ತಮ್ಮ ಆಸಕ್ತಿಗಳನ್ನು ಬೆಂಬಲಿಸಲು ಅಥವಾ ಅನುಕೂಲಕ್ಕಾಗಿ ಲಭ್ಯವಿರುವ ಸಾಮಾಜಿಕ ಭದ್ರತೆ ಮತ್ತು ಕಾನೂನು ಕ್ರಮಗಳ ಬಗ್ಗೆ ತಿಳಿದಿರುತ್ತಾರೆ ಎಂದು ತೋರಿಸುತ್ತದೆ.
- ಜೊತೆಗೆ, ಕಾನೂನು ತೊಡಕುಗಳು ಮತ್ತು ಅಂತರ್ಗತ ಕಳಂಕದ ಭಯದಿಂದಾಗಿ, ಹಿರಿಯರ ನಿಂದನೆಯ ಪ್ರಕರಣಗಳು ಕಡಿಮೆ ಸಂಖ್ಯೆಯಲ್ಲಿ ವರದಿಯಾಗಿದೆ.
- ಸ್ಮರಣ ಶಕ್ತಿಯ ಕೊರತೆ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳಿರುವ ಹಿರಿಯರು ಹೆಚ್ಚುವರಿ ಸಂಕಟವನ್ನು ಎದುರಿಸ ಬೇಕಾಗುತ್ತದೆ.
ಪಾಲಕರು/ ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯಿದೆ, 2007 ರ ಅವಲೋಕನ:
- ಈ ಕಾಯಿದೆಯಡಿ, ವಯಸ್ಕ ಮಕ್ಕಳು ಮತ್ತು ಉತ್ತರಾಧಿಕಾರಿಗಳಿಗೆ ಪೋಷಕರಿಗೆ ಮಾಸಿಕ ಭತ್ಯೆಯ ರೂಪದಲ್ಲಿ ನಿರ್ವಹಣೆ ವೆಚ್ಚವನ್ನು ಒದಗಿಸುವುದನ್ನು ಕಾನೂನುಬದ್ಧವಾಗಿ ಮಾಡಲಾಗಿದೆ.
- ಈ ಕಾಯಿದೆಯು ‘ಪೋಷಕರು ಮತ್ತು ಹಿರಿಯ ನಾಗರಿಕರಿಗೆ ಮಾಸಿಕ ನಿರ್ವಹಣೆಯನ್ನು ಪಡೆಯಲು ಕೈಗೆಟುಕುವ ಮತ್ತು ತ್ವರಿತ ಪ್ರಕ್ರಿಯೆಯನ್ನು’ ಒದಗಿಸುತ್ತದೆ.
- ಈ ಕಾಯಿದೆಯ ಪ್ರಕಾರ, ಪೋಷಕರನ್ನು ಜೈವಿಕ ಅಂದರೆ ಜನ್ಮ ನೀಡಿದವರು, ದತ್ತು ಪಡೆದ ಪೋಷಕರು ಅಥವಾ ಮಲ – ತಂದೆತಾಯಿಗಳು ಎಂದು ಅರ್ಥೈಸಬಹುದು.
- ಅಂತಹ ವ್ಯಕ್ತಿಗಳ (ವೃದ್ಧರ) ಜೀವ ಮತ್ತು ಆಸ್ತಿಯನ್ನು ರಕ್ಷಿಸಲು ಈ ಕಾಯ್ದೆಯಡಿ ಅವಕಾಶ ಕಲ್ಪಿಸಲಾಗಿದೆ.
ಕಾನೂನಿನ ಪ್ರಕಾರ ರಾಜ್ಯವು ‘ವೃದ್ಧಾಶ್ರಮಗಳನ್ನು’ ಸ್ಥಾಪಿಸುವುದು ಕಡ್ಡಾಯವೇ?
ಕಾಯಿದೆಯ ಸೆಕ್ಷನ್ 19 ರ ಪ್ರಕಾರ-
ರಾಜ್ಯ ಸರ್ಕಾರವು ಹಂತಹಂತವಾಗಿ, ಪ್ರವೇಶಿಸಬಹುದಾದ ಸ್ಥಳಗಳಲ್ಲಿ ಅಗತ್ಯವೆಂದು ಪರಿಗಣಿಸಬಹುದಾದಷ್ಟು ವೃದ್ಧಾಶ್ರಮಗಳನ್ನು ಸ್ಥಾಪಿಸಿ ಮತ್ತು ನಿರ್ವಹಿಸಬಹುದು ಮತ್ತು ಆರಂಭದಲ್ಲಿ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ವೃದ್ಧಾಶ್ರಮವನ್ನಾದರು ಸ್ಥಾಪಿಸಬೇಕು.
- ವೃದ್ಧಾಶ್ರಮಗಳ ನಿರ್ವಹಣೆಗಾಗಿ ರಾಜ್ಯ ಸರ್ಕಾರವು ಯೋಜನೆಯನ್ನು ರೂಪಿಸಬಹುದು.
ಈ ವಿಷಯದ ಬಗ್ಗೆ ಹೈಕೋರ್ಟ್ ಹೇಳಿರುವುದೇನು?
ರಾಜ್ಯ ಸರ್ಕಾರಗಳು ವೃದ್ಧಾಶ್ರಮಗಳನ್ನು ‘ಸ್ಥಾಪಿಸಬಹುದು ಮತ್ತು ನಿರ್ವಹಿಸಬಹುದು’ ಎಂದು ಕಾಯಿದೆಯಲ್ಲಿ ಹೇಳಲಾಗಿದ್ದು, ಇದಕ್ಕಾಗಿ ‘May’ ಎಂಬ ಇಂಗ್ಲಿಷ್ ಪದವನ್ನು ಬಳಸಲಾಗಿದೆ, ಕಾನೂನನ್ನು ವಿವಿಧ ಅಂಶಗಳ ಆಧಾರದ ಮೇಲೆ ವ್ಯಾಖ್ಯಾನಿಸುವಾಗ, ಮಾಡಬಹುದು ಎಂಬ ಅರ್ಥವನ್ನು ನೀಡುವ ‘May’ ಎಂಬ ಪದವನ್ನು ‘ಮಾಡಬೇಕಾಗುತ್ತದೆ’ ಎಂಬ ಅರ್ಥವನ್ನು ನೀಡುವ ‘Shall’ ಎಂದೂ ವ್ಯಾಖ್ಯಾನಿಸಬಹುದು, ಮತ್ತು ಸಂದರ್ಭಕ್ಕೆ ತಕ್ಕಂತೆ ಎರಡು ಪದಗಳನ್ನು ಅದಲು-ಬದಲು ಮಾಡಬಹುದು ಎಂದು ನ್ಯಾಯಾಲಯವು ಹೇಳಿದೆ.
ವೃದ್ಧಾಶ್ರಮಗಳ ಅವಶ್ಯಕತೆ:
ಜೀವನದ ಕಠಿಣ ವಾಸ್ತವವನ್ನು ಗಮನಿಸಿದರೆ, ಬಡ ಅಥವಾ ಆದಾಯದ ಮೂಲವಿಲ್ಲದ ಹಿರಿಯ ನಾಗರಿಕರಿಗೆ ರಕ್ಷಣೆ ಬೇಕು. ಅವಿಭಕ್ತ ಕುಟುಂಬ ವ್ಯವಸ್ಥೆಯು ಕ್ಷೀಣಿಸುತ್ತಿರುವುದರಿಂದಾಗಿ, ಹೆಚ್ಚಿನ ಸಂಖ್ಯೆಯ ವೃದ್ಧರನ್ನು ಅವರ ಕುಟುಂಬಗಳು ನೋಡಿಕೊಳ್ಳುವುದಿಲ್ಲ. ಇದಲ್ಲದೆ, ವಯಸ್ಸಾಗುವಿಕೆಯು ಅಥವಾ ಮುದಿತನವು ಒಂದು ದೊಡ್ಡ ಸಾಮಾಜಿಕ ಸವಾಲಾಗಿ ಮಾರ್ಪಟ್ಟಿದೆ.
ಈ ಹೊತ್ತಿನ ಅವಶ್ಯಕತೆ:
- ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ, ವಯಸ್ಸಾದ ವ್ಯಕ್ತಿಗಳ ಹಕ್ಕುಗಳನ್ನು ರಕ್ಷಿಸಲು ನಮಗೆ ನಿರ್ದಿಷ್ಟ ಚೌಕಟ್ಟುಗಳ ಅಗತ್ಯವಿದೆ. ಇದಕ್ಕಾಗಿ, ‘ಯುನೈಟೆಡ್ ನೇಷನ್ಸ್ ಕನ್ವೆನ್ಷನ್’ ಮತ್ತು ‘ಗ್ಲೋಬಲ್ ಅಲೈಯನ್ಸ್ ಫಾರ್ ದಿ ರೈಟ್ಸ್ ಆಫ್ ಓಲ್ಡ್ ಪೀಪಲ್ (Global Alliance for the Rights of Older People – GAROP)’ ಸೂಕ್ತ ವೇದಿಕೆಯಾಗಬಹುದು.
ವಿಷಯಗಳು:ಅನಿವಾಸಿ ಭಾರತೀಯರು ಮತ್ತು ಭಾರತದ ಹಿತಾಸಕ್ತಿಗಳ ಮೇಲೆ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ನೀತಿಗಳು ಮತ್ತು ರಾಜಕೀಯದ ಪರಿಣಾಮಗಳು.
ಇರಾನ್ ಪರಮಾಣು ಒಪ್ಪಂದ:
(Iran Nuclear Deal)
ಸಂದರ್ಭ:
ಕೊನೆಯ ಕ್ಷಣದಲ್ಲಿ ರಷ್ಯಾದ ಬೇಡಿಕೆಗಳಿಗೆ ಅನಿರ್ದಿಷ್ಟ ವಿರಾಮವನ್ನು ಘೋಷಿಸಿದ ನಂತರ ‘ಇರಾನ್ ಪರಮಾಣು ಒಪ್ಪಂದ’ ದ ಪುನರುಜ್ಜೀವನದ ಕುರಿತು ನಡೆಯುತ್ತಿರುವ ಮಾತುಕತೆಗಳು ಉಕ್ರೇನ್-ರಷ್ಯಾ ಯುದ್ಧದ ಬಲಿಪಶುವಾಗಿ ಮಾರ್ಪಟ್ಟಿವೆ.
ಏನಿದು ಪ್ರಕರಣ?
ಯುಎಸ್ ಮತ್ತು ಇರಾನ್ ಅನ್ನು ‘ಇರಾನ್ ಪರಮಾಣು ಒಪ್ಪಂದ’ಕ್ಕೆ ಮರಳಿ ತರುವ ಒಪ್ಪಂದದ ಅಡಿಯಲ್ಲಿ, ಇರಾನ್ ಕಚ್ಚಾ ತೈಲ ಮತ್ತು ಪೆಟ್ರೋಕೆಮಿಕಲ್ಗಳ ರಫ್ತಿನ ಮೇಲಿನ ನಿರ್ಬಂಧಗಳು ಸೇರಿದಂತೆ ಇರಾನ್ ಮೇಲಿನ ಯುಎಸ್ ನಿರ್ಬಂಧಗಳನ್ನು ತೆಗೆದುಹಾಕಲು ಕಾರಣವಾಗಬಹುದು. ಪ್ರತಿಯಾಗಿ, ಟೆಹ್ರಾನ್ ತನ್ನ “ಪರಮಾಣು ಚಟುವಟಿಕೆಗಳನ್ನು” ಮಿತಿಗೊಳಿಸಬೇಕಾಗುತ್ತದೆ.
- ಆದಾಗ್ಯೂ, ಕಳೆದ ವಾರ, ಒಪ್ಪಂದಕ್ಕೆ ಸಹಿ ಹಾಕಿದ ನಂತರ ರಷ್ಯಾ ಮತ್ತು ಇರಾನ್ ನಡುವಿನ ಯಾವುದೇ ವ್ಯಾಪಾರದ ಮೇಲೆ ನಿರ್ಬಂಧಗಳನ್ನು ವಿಧಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡುವಂತೆ ಮಾಸ್ಕೋ ವಾಷಿಂಗ್ಟನ್ ಅನ್ನು ಒತ್ತಾಯಿಸಿದೆ.
ಮುಂದಿನ ಕಾಳಜಿಗಳು:
ಸುಮಾರು ಒಂದು ವರ್ಷದಿಂದ ವಿಯೆನ್ನಾದಲ್ಲಿ ನಡೆದ ಪ್ರಯಾಸಕರ ಮಾತುಕತೆಗಳಲ್ಲಿ ರಷ್ಯಾ ಪ್ರಮುಖ ಭಾಗಿದಾರನಾಗಿದೆ. ಒಂದು ವೇಳೆ ಈ ಬಿಕ್ಕಟ್ಟು ದೀರ್ಘಕಾಲ ಮುಂದುವರಿದರೆ, ‘ಜಂಟಿ ಸಮಗ್ರ ಕ್ರಿಯಾ ಯೋಜನೆ’ (JCPOA) ಒಪ್ಪಂದದ ಮೇಲೆ ಮಾಸ್ಕೋ UN ವೀಟೋವನ್ನು ಬಳಸಬಹುದೇ ಎಂಬುದರ ಕುರಿತು ಚರ್ಚೆ ನಡೆಯುವ ಸಾಧ್ಯತೆಯಿದೆ.
ರಷ್ಯಾ ಮತ್ತು JCPOA:
‘ಜಂಟಿ ಸಮಗ್ರ ಕ್ರಿಯಾ ಯೋಜನೆ’ ಯ (JCPOA) ಅನುಷ್ಠಾನದಲ್ಲಿ ರಷ್ಯಾದ ಪ್ರಮುಖ ಪಾತ್ರವು ಇರಾನ್‌ನ ಹೆಚ್ಚುವರಿ ‘ವರ್ಧಿತ / ಪುಷ್ಟೀಕರಿಸಿದ ಯುರೇನಿಯಂ ಸಂಗ್ರಹದ’ ಆಮದುದಾರನ ರೂಪದಲ್ಲಿರಲಿದೆ. ಈ ಯುರೇನಿಯಂ ಸಂಗ್ರಹವನ್ನು ರಷ್ಯಾಕ್ಕೆ ಹಡಗಿನ ಮೂಲಕ ರವಾನಿಸಲಾಗುತ್ತದೆ ಮತ್ತು ಇದಕ್ಕೆ ಪ್ರತಿಯಾಗಿ ‘ನೈಸರ್ಗಿಕ ಯುರೇನಿಯಂ’ ಅನ್ನು ರಷ್ಯಾದಿಂದ ಪಡೆಯಲಾಗುತ್ತದೆ.
ಇರಾನ್ ಪರಮಾಣು ಒಪ್ಪಂದದ ಕುರಿತು:
- ಇದನ್ನು,’ಜಂಟಿ ಸಮಗ್ರ ಕ್ರಿಯಾ ಯೋಜನೆ’ ಯ (JCPOA) ಎಂದೂ ಕರೆಯಲಾಗುತ್ತದೆ.
- ಈ ಒಪ್ಪಂದ, ಅಂದರೆ ‘ಜಂಟಿ ಸಮಗ್ರ ಕ್ರಿಯಾ ಯೋಜನೆ’, 2013 ರಿಂದ 2015 ರವರೆಗೆ ಇರಾನ್ ಮತ್ತು ಪಿ 5 + 1 (ಚೀನಾ, ಫ್ರಾನ್ಸ್, ರಷ್ಯಾ, ಯುನೈಟೆಡ್ ಕಿಂಗ್‌ಡಮ್, ಯುನೈಟೆಡ್ ಸ್ಟೇಟ್ಸ್ ಮತ್ತು ಜರ್ಮನಿ ಮತ್ತು ಯುರೋಪಿಯನ್ ಯೂನಿಯನ್) ನಡುವಿನ ಸುದೀರ್ಘ ಮಾತುಕತೆಗಳ ಫಲಿತಾಂಶವಾಗಿದೆ.
- 2015 ರಲ್ಲಿ ಸಹಿ ಮಾಡಲಾದ ಪರಮಾಣು ಒಪ್ಪಂದದ ಅಡಿಯಲ್ಲಿ ಇರಾನ್ ತನ್ನ ಪರಮಾಣು ಕಾರ್ಯಕ್ರಮಗಳನ್ನು ಸೀಮಿತಗೊಳಿಸಿದರೆ ಅದಕ್ಕೆ ಪ್ರತಿಯಾಗಿ ಆರ್ಥಿಕ ಪ್ರೋತ್ಸಾಹವನ್ನು ನೀಡಲು ಒಪ್ಪಿಕೊಳ್ಳಲಾಗಿದೆ. ಒಟ್ಟಿನಲ್ಲಿ ಈ ಒಪ್ಪಂದದ ಉದ್ದೇಶ ಇರಾನ್ ಪರಮಾಣು ಬಾಂಬನ್ನು ತಯಾರಿಸಿದಂತೆ ತಡೆಯುವುದಾಗಿದೆ.
- ಜಂಟಿ ಸಮಗ್ರ ಕ್ರಿಯಾ ಯೋಜನೆ (JCPOA) ಅಡಿಯಲ್ಲಿ, ಟೆಹ್ರಾನ್ ಮಧ್ಯಮ-ಪುಷ್ಟೀಕರಿಸಿದ ಯುರೇನಿಯಂನ ಸಂಗ್ರಹವನ್ನು ಸಂಪೂರ್ಣವಾಗಿ ತೆಗೆದುಹಾಕುತ್ತದೆ, ಕಡಿಮೆ-ಸಮೃದ್ಧ ಯುರೇನಿಯಂನ ಶೇಖರಣೆಯನ್ನು 98% ರಷ್ಟು ಕಡಿಮೆ ಮಾಡುತ್ತದೆ ಮತ್ತು ಮುಂದಿನ 13 ವರ್ಷಗಳಲ್ಲಿ ಅದರ ಮೂರನೇ ಎರಡರಷ್ಟು ಅನಿಲ ಕೇಂದ್ರಾಪಗಾಮಿಗಳನ್ನು ಕಡಿಮೆ ಮಾಡಲು ಒಪ್ಪಿಕೊಂಡಿತು.
- ಒಪ್ಪಂದದ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡಲು ಜಂಟಿ ಆಯೋಗವನ್ನು ಸ್ಥಾಪಿಸಲಾಯಿತು.
- ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಜೆ. ಟ್ರಂಪ್ ಅವರು 2018 ರಲ್ಲಿ ಇರಾನ್ ನೊಂದಿಗಿನ (ಜಂಟಿ ಸಮಗ್ರ ಕ್ರಿಯಾಯೋಜನೆ- JCPOA) ಒಪ್ಪಂದವನ್ನು ಏಕಪಕ್ಷೀಯವಾಗಿ ರದ್ದುಗೊಳಿಸಿದರು ಆದರೆ ಬ್ರಿಟನ್, ಫ್ರಾನ್ಸ್, ಜರ್ಮನಿ, ಚೀನಾ ಮತ್ತು ರಷ್ಯಾ ಒಪ್ಪಂದವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿವೆ.
- ವಿಶ್ವ ಶಕ್ತಿಗಳೊಂದಿಗಿನ ಈ ಒಪ್ಪಂದದಲ್ಲಿ, ಇರಾನ್ ತನ್ನ ಸಂಶೋಧನಾ ರಿಯಾಕ್ಟರ್‌ಗೆ ಅಗತ್ಯವಿರುವ 20% ಪುಷ್ಟೀಕರಿಸಿದ ಯುರೇನಿಯಂ ಅನ್ನು ಒದಗಿಸಲು ಈ ಒಪ್ಪಂದಕ್ಕೆ ಸಹಿ ಹಾಕಿದ ಇತರ ದೇಶಗಳು ಒಪ್ಪಿಕೊಂಡವು.
- ಪರಮಾಣು ಒಪ್ಪಂದದ ನಿಯಮಗಳ ಅಡಿಯಲ್ಲಿ, ಇರಾನ್ ತನ್ನ ಸಂಶೋಧನಾ ರಿಯಾಕ್ಟರ್ ಚಟುವಟಿಕೆಗಳನ್ನು ಹೊರತುಪಡಿಸಿ, 3.67% ಕ್ಕಿಂತ ಹೆಚ್ಚು ಸಮೃದ್ಧ ಯುರೇನಿಯಂ ಉತ್ಪಾದಿಸುವುದನ್ನು ನಿಷೇಧಿಸಲಾಗಿದೆ.
ಭಾರತಕ್ಕೆ ಈ ಒಪ್ಪಂದದ ಮಹತ್ವ:
- ಇರಾನ್ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕುವುದರೊಂದಿಗೆ, ಚಬಹಾರ್ ಬಂದರು, ಬಂದರ್ ಅಬ್ಬಾಸ್ ಬಂದರು ಮತ್ತು ಪ್ರಾದೇಶಿಕ ಸಂಪರ್ಕಗಳನ್ನು ಒಳಗೊಂಡ ಇತರ ಯೋಜನೆಗಳಲ್ಲಿನ ಭಾರತದ ಹಿತಾಸಕ್ತಿಗಳನ್ನು ಪುನರುಜ್ಜೀವನಗೊಳಿಸಬಹುದು.
- ಇದು ಪಾಕಿಸ್ತಾನದ ಗ್ವಾದರ್ ಬಂದರಿನಲ್ಲಿ ಚೀನಾದ ಉಪಸ್ಥಿತಿಯನ್ನು ತಟಸ್ಥಗೊಳಿಸಲು ಭಾರತಕ್ಕೆ ಸಹಾಯ ಮಾಡುತ್ತದೆ.
- ಅಮೆರಿಕ ಮತ್ತು ಇರಾನ್ ನಡುವಿನ ಸಂಬಂಧಗಳ ಪುನಃ ಸ್ಥಾಪನೆಯು ಇರಾನ್‌ನಿಂದ ಅಗ್ಗದ ದರದಲ್ಲಿ ತೈಲವನ್ನು ಖರೀದಿಸಲು ಮತ್ತು ಇಂಧನ ಸುರಕ್ಷತೆಯನ್ನು ಸಾಧಿಸಲು ಭಾರತಕ್ಕೆ ಸಹಾಯ ಮಾಡುತ್ತದೆ.
ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಮತ್ತು ಆದೇಶ.
ಅಂತರರಾಷ್ಟ್ರೀಯ ಕೃಷಿ ಅಭಿವೃದ್ಧಿ ನಿಧಿ (IFAD):
(International Fund for Agricultural Development)
ಸಂದರ್ಭ:
ಮಧ್ಯಪ್ರದೇಶ ಸರ್ಕಾರವು ಇಂಟರ್ನ್ಯಾಷನಲ್ ಫಂಡ್ ಫಾರ್ ಅಗ್ರಿಕಲ್ಚರಲ್ ಡೆವಲಪ್ಮೆಂಟ್ ನ (IFAD) ಸಹಭಾಗಿತ್ವದಲ್ಲಿ, ಸಮತೋಲಿತ ಆಹಾರವನ್ನು ತಯಾರು ಮಾಡಲು ಮಹಿಳೆಯರನ್ನು ಪ್ರೋತ್ಸಾಹಿಸಲು ಎರಡು ಅಗ್ಗದ ಮತ್ತು ಸರಳವಾದ ವಿಚಾರಗಳನ್ನು ಪ್ರಸ್ತಾಪಿಸಿದೆ.
ಅವುಗಳು:
‘7 ದಿನ್ 7 ಕ್ಯಾರಿ’ ಕಾರ್ಯಕ್ರಮ (‘7 days 7 plots’ programme):
ಇದರ ಅಡಿಯಲ್ಲಿ, ಹಳ್ಳಿಯ ಮಹಿಳೆಯರಿಗೆ ತಮ್ಮ ತೋಟದಲ್ಲಿ ವಿವಿಧ ತರಕಾರಿಗಳನ್ನು-ಏಳು ತರಕಾರಿಗಳನ್ನು-ವಾರದ ಪ್ರತಿ ದಿನಕ್ಕೆ ಒಂದರಂತೆ ಒಂದು ತರಕಾರಿಯನ್ನು ಹೇಗೆ ಬೆಳೆಯಬೇಕೆಂದು ಕಲಿಸಲಾಗುತ್ತದೆ.
- ವಾರದ ಅಂತ್ಯದ ವೇಳೆಗೆ, ಮೊದಲ ಬೆಡ್‌ನಲ್ಲಿ ಬೆಳೆದ ತರಕಾರಿ ಮತ್ತೆ ಕೊಯ್ಲಿಗೆ ಸಿದ್ಧವಾಗುತ್ತದೆ. ಈ ರೀತಿಯಾಗಿ, ಕುಟುಂಬಗಳು ತಾಜಾ, ಅಗ್ಗದ ತರಕಾರಿಗಳನ್ನು ತಿನ್ನುತ್ತವೆ, ಅವರು ತರಕಾರಿಯನ್ನು ಮಾರುಕಟ್ಟೆಯಿಂದ ಖರೀದಿಸುವ ಬದಲು ದೀರ್ಘಕಾಲದವರೆಗೆ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬಹುದು ಮತ್ತು ಇದರಿಂದಾಗಿ ರೋಗಕ್ಕೆ ತುತ್ತಾಗುವುದನ್ನು ಕಡಿಮೆ ಮಾಡಬಹುದು.
- ಇದು ಮಧ್ಯಪ್ರದೇಶದಲ್ಲಿ ವಿಶ್ವಸಂಸ್ಥೆಗೆ ಸಂಯೋಜಿತವಾಗಿರುವ ಐಎಫ್‌ಎಡಿ ಜಾರಿಗೊಳಿಸಿದ ‘ತೇಜಸ್ವಿನಿ ಗ್ರಾಮೀಣ ಮಹಿಳಾ ಸಬಲೀಕರಣ ಕಾರ್ಯಕ್ರಮ’ದ ಒಂದು ಪೂರಕ ಯೋಜನೆಯಾಗಿದೆ.
ತಿರಂಗಾ ಥಾಲಿ:
ಹೆಚ್ಚು ಸಮತೋಲಿತ ಆಹಾರವನ್ನು ಪ್ರೋತ್ಸಾಹಿಸಲು, ಯೋಜನೆಯು “ತಿರಂಗಾ ಥಾಲಿ” ಎಂಬ ಪರಿಕಲ್ಪನೆಯನ್ನು ಪರಿಚಯಿಸುತ್ತದೆ, ಅಲ್ಲಿ ಪ್ರತಿ ಪ್ಲೇಟ್ ಭಾರತೀಯ ಧ್ವಜದ ಮೂರು ಬಣ್ಣಗಳಿಗೆ ಹೊಂದಿಕೆಯಾಗುವ ಪದಾರ್ಥಗಳನ್ನು ಹೊಂದಿರುತ್ತದೆ.
- ಕೇಸರಿ – ಹಳದಿ ಒಡೆದ ಬಟಾಣಿ, ಹಲಸಂದೆ ಮತ್ತು ಒಡೆದ ಕೆಂಪು ಮಸೂರಗಳಂತಹ ಎಲ್ಲಾ ಕಾಳುಗಳು ಪ್ರೋಟೀನ್ ಅನ್ನು ಪ್ರತಿನಿಧಿಸುತ್ತವೆ;
- ಬಿಳಿ – ಅಕ್ಕಿ, ಹಾಲು ಮತ್ತು ಬ್ರೆಡ್ ಕಾರ್ಬೋಹೈಡ್ರೇಟ್ಗಳನ್ನು ಪ್ರತಿನಿಧಿಸುತ್ತದೆ; ಮತ್ತು
- ಹಸಿರು– ಹಸಿರು ಎಲೆಗಳ ತರಕಾರಿಗಳು ಜೀವಸತ್ವಗಳು ಮತ್ತು ಖನಿಜಗಳನ್ನು ಪ್ರತಿನಿಧಿಸುತ್ತವೆ.
ಕೃಷಿ ಅಭಿವೃದ್ಧಿಗಾಗಿ ಅಂತರಾಷ್ಟ್ರೀಯ ನಿಧಿ (IFAD) ಬಗ್ಗೆ:
- ಇದು ವಿಶ್ವಸಂಸ್ಥೆಯ ವಿಶೇಷ ಸಂಸ್ಥೆಯಾಗಿದೆ, ಇದನ್ನು 1977 ರಲ್ಲಿ ರಚಿಸಲಾಯಿತು. ಇದು ಅಭಿವೃದ್ಧಿಶೀಲ ರಾಷ್ಟ್ರಗಳ ಗ್ರಾಮೀಣ ಪ್ರದೇಶಗಳಲ್ಲಿ ಬಡತನ ನಿರ್ಮೂಲನೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದೆ ಮತ್ತು ಮಿತ್ರ ಯೋಜನೆಗಳಿಗೆ ಕಡಿಮೆ ಬಡ್ಡಿಯೊಂದಿಗೆ ಅನುದಾನ ಮತ್ತು ಸಾಲಗಳನ್ನು ಒದಗಿಸುತ್ತದೆ.
- IFAD ಗ್ರಾಮೀಣ ಜನರೊಂದಿಗೆ ಕೆಲಸ ಮಾಡುತ್ತದೆ ಮತ್ತು ಅವರ ಆಹಾರ ಭದ್ರತೆಯನ್ನು ಹೆಚ್ಚಿಸಲು, ಪೌಷ್ಟಿಕಾಂಶ ಮಟ್ಟವನ್ನು ಸುಧಾರಿಸಲು ಮತ್ತು ಆದಾಯವನ್ನು ಹೆಚ್ಚಿಸಲು ಅವರಿಗೆ ಅನುವು ಮಾಡಿಕೊಡುತ್ತದೆ.
- ಇದು ಜನರು ತಮ್ಮ ವ್ಯಾಪಾರವನ್ನು ವಿಸ್ತರಿಸಲು ಸಹಾಯ ಮಾಡುತ್ತದೆ.
- ಈ ಸಂಸ್ಥೆಯು 1974 ರಲ್ಲಿ ನಡೆದ ವಿಶ್ವ ಆಹಾರ ಸಮ್ಮೇಳನ (World Food Conference) ದ ಫಲಿತಾಂಶವಾಗಿದೆ.
- ಇದರ ಪ್ರಧಾನ ಕಛೇರಿ ರೋಮ್‌ನಲ್ಲಿದೆ.
- ಇದು 177 ದೇಶಗಳನ್ನು ಸದಸ್ಯರನ್ನಾಗಿ ಒಳಗೊಂಡಿದೆ.
- ‘ಅಂತಾರಾಷ್ಟ್ರೀಯ ಕೃಷಿ ಅಭಿವೃದ್ಧಿ ನಿಧಿಯಿಂದ’ ಪ್ರತಿ ವರ್ಷ ‘ಗ್ರಾಮೀಣ ಅಭಿವೃದ್ಧಿ ವರದಿ’ ಬಿಡುಗಡೆಯಾಗುತ್ತದೆ.
IFAD ನ ಉದ್ದೇಶಗಳು:
- ಬಡ ಜನರ ಉತ್ಪಾದಕ ಸಾಮರ್ಥ್ಯವನ್ನು ಹೆಚ್ಚಿಸಲು.
- ಮಾರುಕಟ್ಟೆ ಭಾಗವಹಿಸುವಿಕೆಯ ಮೂಲಕ ಅವರ ಲಾಭವನ್ನು ಹೆಚ್ಚಿಸಲು.
- ಅವರ ಆರ್ಥಿಕ ಚಟುವಟಿಕೆಗಳ ಪರಿಸರ ಸಮರ್ಥನೀಯತೆ ಮತ್ತು ಹವಾಮಾನ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸಲು.
ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:
ರಾಷ್ಟ್ರೀಯ ರಕ್ಷಣಾ ವಿಶ್ವವಿದ್ಯಾಲಯ:
(Rashtriya Raksha University)
ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಗುಜರಾತ್‌ನ ಗಾಂಧಿನಗರದ ಬಳಿ ನಿರ್ಮಿಸಲಾದ ‘ರಾಷ್ಟ್ರೀಯ ರಕ್ಷಣಾ ವಿಶ್ವವಿದ್ಯಾಲಯ’ ಕಟ್ಟಡವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.
- ‘ರಾಷ್ಟ್ರೀಯ ರಕ್ಷಣಾ ವಿಶ್ವವಿದ್ಯಾನಿಲಯ’ ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಯಾಗಿದೆ ಮತ್ತು ಇದನ್ನು ಭಾರತದ ಸಂಸತ್ತಿನ ಕಾಯಿದೆಯಿಂದ ಸ್ಥಾಪಿಸಲಾಗಿದೆ.
- ವಿಶ್ವವಿದ್ಯಾನಿಲಯವು ರಾಷ್ಟ್ರೀಯ ಭದ್ರತೆ ಮತ್ತು ಪೊಲೀಸರಿಗೆ ಶೈಕ್ಷಣಿಕ-ಸಂಶೋಧನೆ-ತರಬೇತಿ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ.
[ad_2]