[ad_1]
ಪರಿವಿಡಿ:
ಸಾಮಾನ್ಯ ಅಧ್ಯಯನ ಪತ್ರಿಕೆ 2 :
1. ಸಂವಿಧಾನದ 80 ನೇ ವಿಧಿಗೆ ತಿದ್ದುಪಡಿ ತರಲು ಚಂಡೀಗಢದ ಪ್ರಸ್ತಾಪ.
2. ಮರಣದಂಡನೆಗೆ ಸಂಬಂಧಿಸಿದಂತೆ ಮಹತ್ವದ ತೀರ್ಪನ್ನು ಜಾರಿಗೊಳಿಸಿದ ಸುಪ್ರೀಮ್ ಕೋರ್ಟ್.
3. ಬಿಜು ಸ್ವಾಸ್ಥ್ಯ ಕಲ್ಯಾಣ ಯೋಜನೆ.
4. WHO ದ ಸಾಂಕ್ರಾಮಿಕ ಒಪ್ಪಂದ.
5. ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (IAEA).
ಸಾಮಾನ್ಯ ಅಧ್ಯಯನ ಪತ್ರಿಕೆ 3:
1. ಕ್ಲಸ್ಟರ್ ಬಾಂಬ್‌ಗಳು ಮತ್ತು ಥರ್ಮೋಬಾರಿಕ್ ಶಸ್ತ್ರಾಸ್ತ್ರಗಳು ಯಾವುವು?
ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:
1. ಪಾಕ್ ಕೊಲ್ಲಿಯಲ್ಲಿ ಭಾರತದ ಮೊದಲ ಡುಗಾಂಗ್ ರಿಸರ್ವ್.
2. ವಿಶ್ವಭಾರತಿ ವಿಶ್ವವಿದ್ಯಾಲಯ.
3. ಪ್ರತಿ ಏಷ್ಯಾಟಿಕ್ ಸಿಂಹಕ್ಕೆ ಪ್ರತ್ಯೇಕ ಗುರುತನ್ನು ನೀಡಲಿರುವ SIMBA.
ಸಾಮಾನ್ಯ ಅಧ್ಯಯನ ಪತ್ರಿಕೆ : 2
ವಿಷಯಗಳು: ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳು – ರಚನೆ, ಕಾರ್ಯವೈಖರಿ, ವ್ಯವಹಾರದ ನಡಾವಳಿಗಳು, ಅಧಿಕಾರಗಳು ಮತ್ತು ಸವಲತ್ತುಗಳು ಮತ್ತು ಇವುಗಳಿಂದ ಉಂಟಾಗುವ ಸಮಸ್ಯೆಗಳು.
ಸಂವಿಧಾನದ 80 ನೇ ವಿಧಿಗೆ ತಿದ್ದುಪಡಿ ತರಲು ಚಂಡೀಗಢದ ಪ್ರಸ್ತಾಪ:
(Chandigarh’s proposal to amend Article 80 of the Constitution)
ಸಂದರ್ಭ:
ಚಂಡೀಗಢ ಮುನ್ಸಿಪಲ್ ಕಾರ್ಪೊರೇಷನ್ ಸಂವಿಧಾನದ 80 ನೇ ವಿಧಿಗೆ ತಿದ್ದುಪಡಿ ಮಾಡುವ ಪ್ರಸ್ತಾಪವನ್ನು ಅನುಮೋದಿಸಿದೆ.
- ಅದರ ಕೌನ್ಸಿಲರ್‌ಗಳು ರಾಜ್ಯಸಭೆಗೆ ತಮ್ಮ ಪ್ರತಿನಿಧಿಯನ್ನು ಕಳುಹಿಸಬಹುದು ಎಂದು ಈ ತಿದ್ದುಪಡಿಯು ಹೇಳುತ್ತದೆ.
- ಈ ನಿಟ್ಟಿನಲ್ಲಿ ಖಾಸಗಿ ಸದಸ್ಯರ ಮಸೂದೆಯನ್ನೂ ಮಂಡಿಸಲಾಗಿದೆ.
ತಿಳಿದುಕೊಳ್ಳಬೇಕಾದ ಮೂಲಭೂತ ಅಂಶಗಳು:
- ಭಾರತದ ಸಂವಿಧಾನದ 80 ನೇ ವಿಧಿಯು ರಾಜ್ಯಗಳ ಮಂಡಳಿ ಎಂದೂ ಕರೆಯಲ್ಪಡುವ ರಾಜ್ಯಸಭೆ (ಮೇಲ್ಮನೆ) ಯ ಸಂಯೋಜನೆಯೊಂದಿಗೆ ವ್ಯವಹರಿಸುತ್ತದೆ.
- ಚಂಡೀಗಢ ಯಾವುದೇ ಶಾಸಕಾಂಗ ಸಭೆ ಹೊಂದಿಲ್ಲದ ಕೇಂದ್ರಾಡಳಿತ ಪ್ರದೇಶವಾಗಿದೆ. ಚಂಡೀಗಢವು ಕೆಳಮನೆ (ಲೋಕಸಭೆ) ಅಥವಾ ಹೌಸ್ ಆಫ್ ದಿ ಪೀಪಲ್‌ನಲ್ಲಿ ಸಂಸದ (MP) ಸ್ಥಾನವನ್ನು ಹೊಂದಿದೆ.
- ಚಂಡೀಗಢ ನಿವಾಸಿಗಳು ನೇರ ಮತದಾನದ ಮೂಲಕ ಪ್ರತಿ ಐದು ವರ್ಷಗಳಿಗೊಮ್ಮೆ ಸಂಸದರನ್ನು ಆಯ್ಕೆ ಮಾಡುತ್ತಾರೆ.
ಪ್ರಸ್ತಾವಿತ ಮಸೂದೆಯ ಬೇಡಿಕೆ ಏನು?
ಮಸೂದೆಯು (ಖಾಸಗಿ ಸದಸ್ಯರ ಮಸೂದೆ) “ರಾಜ್ಯಗಳ ಪರಿಷತ್ತಿನಲ್ಲಿ (ರಾಜ್ಯಸಭೆ) ಚಂಡೀಗಢ ಕೇಂದ್ರಾಡಳಿತ ಪ್ರದೇಶದ ಪ್ರತಿನಿಧಿಯನ್ನು ಚುನಾವಣಾ ಕಾಲೇಜಿನಿಂದ ಚುನಾಯಿಸಲಾಗುವುದು ಎಂಬ ಒಂದು ನಿಬಂಧನೆಯನ್ನು ಸೇರಿಸಲು ಪ್ರಯತ್ನಿಸುತ್ತದೆ.
ಚುನಾವಣಾ ಕಾಲೇಜು ಸಂವಿಧಾನದ 80 ನೇ ವಿಧಿಯಲ್ಲಿ ಪಂಜಾಬ್ ಮುನ್ಸಿಪಲ್ ಕಾರ್ಪೊರೇಶನ್ (ಚಂಡೀಗಢಕ್ಕೆ ವಿಸ್ತರಣೆಯಾಗಿ) ಕಾಯಿದೆ, 1994 ರ ಅಡಿಯಲ್ಲಿ ರಚಿತವಾದ ಚಂಡೀಗಢದ ಮುನ್ಸಿಪಲ್ ಕಾರ್ಪೊರೇಶನ್‌ನ ಚುನಾಯಿತ ಸದಸ್ಯರನ್ನು ಒಳಗೊಂಡಿರಬೇಕು.
‘ಪ್ರವೇಶ 32, ಚಂಡೀಗಢದ ವಿಷಯವಾಗಿ ಸಂವಿಧಾನದ ನಾಲ್ಕನೇ ಶೆಡ್ಯೂಲ್‌ಗೆ ತಿದ್ದುಪಡಿಯನ್ನು ಸಹ ಕೋರಲಾಗಿದೆ.
- ನಾಲ್ಕನೇ ಅನುಸೂಚಿಯು ಕೌನ್ಸಿಲ್ ಆಫ್ ಸ್ಟೇಟ್ಸ್‌ನಲ್ಲಿ ಸ್ಥಾನಗಳ ಹಂಚಿಕೆಗೆ ಸಂಬಂಧಿಸಿದ ನಿಬಂಧನೆಗಳನ್ನು ಒಳಗೊಂಡಿದೆ.
ಈಗ ಉದ್ಭವಿಸಿರುವ ಕಾನೂನು ಸಮಸ್ಯೆ ಏನು? ನಗರಸಭಾ ಸದಸ್ಯರು ಏಕೆ ಆಯ್ಕೆ ಮಾಡುವಂತಿಲ್ಲ?
ಚುನಾಯಿತ ಮುನ್ಸಿಪಲ್ ಕಾರ್ಪೊರೇಷನ್ ಕೌನ್ಸಿಲರ್‌ಗಳು ಮೇಲ್ಮನೆಗೆ (ರಾಜ್ಯಸಭೆ) ಸದಸ್ಯರನ್ನು ಆಯ್ಕೆ ಮಾಡಲು ಚುನಾವಣಾ ಕಾಲೇಜನ್ನು ರಚಿಸುವುದಿಲ್ಲ ಏಕೆಂದರೆ ಅದು ಮುನ್ಸಿಪಲ್ ಕಾರ್ಪೊರೇಶನ್‌ನ ಅಧಿಕಾರ ವ್ಯಾಪ್ತಿಯನ್ನು ಮೀರಿದೆ (ಸಂವಿಧಾನದಲ್ಲಿ ವ್ಯಾಖ್ಯಾನಿಸಲ್ಪಟ್ಟಂತೆ).
- ಪಟ್ಟಿ ಮಾಡಲಾದ ಕಾರ್ಯಗಳ ವ್ಯಾಪ್ತಿಯನ್ನು ಮೀರಿ ನಾಗರಿಕ ಸಂಸ್ಥೆಯೊಂದರ ಕಾರ್ಯಗಳನ್ನು ವಿಸ್ತರಿಸಿದರೆ ಅದು ಕಾರ್ಯಸಾಧ್ಯವಾಗುವುದಿಲ್ಲ ಮತ್ತು ಅಂತಹ ಕ್ರಮವು ಯಾವುದೇ ಮುನ್ಸಿಪಲ್ ಕಾರ್ಪೊರೇಶನ್‌ನ ಸಾಂವಿಧಾನಿಕ ಆದೇಶಕ್ಕೆ ವಿರುದ್ಧವಾಗಿರುತ್ತದೆ.
ರಾಜ್ಯಸಭಾ ಸದಸ್ಯರ ಆಯ್ಕೆ:
ರಾಜ್ಯಸಭಾ ಸದಸ್ಯರು ಜನರಿಂದ ಪರೋಕ್ಷವಾಗಿ ಆಯ್ಕೆಯಾಗುತ್ತಾರೆ ಅಂದರೆ ವಿಧಾನಸಭಾ ಸದಸ್ಯರಿಂದ ಆಯ್ಕೆಯಾಗುತ್ತಾರೆ.
- ಒಂದು ರಾಜ್ಯದ ಶಾಸಕಾಂಗ ಸಭೆಯ ಸದಸ್ಯರು ರಾಜ್ಯಸಭಾ ಚುನಾವಣೆಯಲ್ಲಿ ಏಕ ವರ್ಗಾವಣೆ ಮತದಾನ (STV) ವ್ಯವಸ್ಥೆಯೊಂದಿಗೆ ಅನುಪಾತದ ಪ್ರಾತಿನಿಧ್ಯದಲ್ಲಿ ಮತ ಚಲಾಯಿಸುತ್ತಾರೆ. ಪ್ರತಿಯೊಬ್ಬ ಶಾಸಕರ ಮತವನ್ನು ಒಮ್ಮೆ ಮಾತ್ರ ಎಣಿಸಲಾಗುತ್ತದೆ.
- ರಾಜ್ಯಸಭಾ ಸ್ಥಾನವನ್ನು ಗೆಲ್ಲಲು, ಅಭ್ಯರ್ಥಿಯು ಅಗತ್ಯ ಸಂಖ್ಯೆಯ ಮತಗಳನ್ನು ಪಡೆಯಬೇಕು. ಕೆಳಗಿನ ಸೂತ್ರವನ್ನು ಬಳಸಿಕೊಂಡು ಆ ಸಂಖ್ಯೆಯನ್ನು ನಿರ್ಧರಿಸಲಾಗುತ್ತದೆ. ಅಗತ್ಯವಿರುವ ಮತಗಳು = ಒಟ್ಟು ಮತಗಳ ಸಂಖ್ಯೆ / (ರಾಜ್ಯಸಭಾ ಸ್ಥಾನಗಳು + 1 ) + 1.
ವಿಷಯಗಳು:ಸರ್ಕಾರದ ವಿವಿಧ ಅಂಗಗಳ ನಡುವೆ ಅಧಿಕಾರ ವಿಭಜನೆ, ವಿವಾದ ಪರಿಹಾರ ಕಾರ್ಯವಿಧಾನಗಳು ಮತ್ತು ಸಂಸ್ಥೆಗಳು.
ಮರಣದಂಡನೆಗೆ ಸಂಬಂಧಿಸಿದಂತೆ ಮಹತ್ವದ ತೀರ್ಪನ್ನು ಜಾರಿಗೊಳಿಸಿದ ಸುಪ್ರೀಮ್ ಕೋರ್ಟ್:
(SC enforces a landmark ruling on death penalty)
ಸಂದರ್ಭ:
ಮರಣದಂಡನೆ ಪ್ರಕರಣಗಳ ಕುರಿತು ನಾಲ್ಕು ದಶಕಗಳ ನಂತರ, ನೀಡಿದ ಮಹತ್ವದ ತೀರ್ಪೊಂದರಲ್ಲಿ ಸುಪ್ರೀಂ ಕೋರ್ಟ್‌ನ ಪೀಠವು ಶಿಕ್ಷೆಗೊಳಗಾದ ಕೈದಿಗಳ ಮಾನಸಿಕ ಮೌಲ್ಯಮಾಪನ (psychological evaluation of the condemned prisoner mandatory)ಮಾಡುವುದನ್ನು ಕಡ್ಡಾಯಗೊಳಿಸಿದೆ.
- ಶಿಕ್ಷೆಯ ಸ್ವರೂಪವಾಗಿ ಗಲ್ಲು ಶಿಕ್ಷೆ ಮಾತ್ರವೆ ಸೂಕ್ತವಾದ ಶಿಕ್ಷೆಯಾಗಿ ಉಳಿದಿದೆಯೇ ಎಂದು ತನಿಖೆಯ ಸಮಯದಲ್ಲಿ ಕೈದಿಯ ನಡವಳಿಕೆಯ ಬಗ್ಗೆ ವರದಿಯನ್ನು ಕೇಳಿದೆ.
ವರಿಷ್ಠ ನ್ಯಾಯಾಲಯವು ಹೇಳಿರುವುದೇನು?
ಬಚನ್ ಸಿಂಗ್ ತೀರ್ಪಿನಲ್ಲಿ ನೀಡಲಾದ ಸೂಚನೆಯನ್ನು ತೆಗೆದುಕೊಂಡು, ಗಲ್ಲು ಶಿಕ್ಷೆಯ ಪ್ರಕರಣಗಳ ಸರಣಿಯಲ್ಲಿ ನ್ಯಾಯಮೂರ್ತಿ ಲಲಿತ್, ಇತ್ತೀಚೆಗೆ ಅಂತಹ ವಿಷಯಗಳಲ್ಲಿ ನ್ಯಾಯಾಲಯಕ್ಕೆ “ಸಂಪೂರ್ಣ ನೆರವು” ಪ್ರಕರಣದಲ್ಲಿ ಸಾಕ್ಷ್ಯವನ್ನು ಮಾತ್ರವಲ್ಲದೆ ಖೈದಿಯ ಮಾನಸಿಕ ಆರೋಗ್ಯದ ಇತ್ತೀಚಿನ ಸ್ಥಿತಿಯನ್ನು ಸಹ ಸಲ್ಲಿಸುವುದು ಅಗತ್ಯವಾಗಿರುತ್ತದೆ ಎಂದು ಹೇಳಿದ್ದಾರೆ.
ಬಚನ್ ಸಿಂಗ್ vs ಪಂಜಾಬ್ ರಾಜ್ಯ (1980) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು:
ಈ ತೀರ್ಪು ಆರೋಪಿಗೆ ಸಂಬಂಧಿಸಿದಂತೆ, ಒಬ್ಬ ವ್ಯಕ್ತಿಗೆ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆಯನ್ನು ವಿಧಿಸಬೇಕೆ ಎಂದು ನಿರ್ಧರಿಸಲು, ಅಪರಾಧ ಮತ್ತು ಅಪರಾಧಿ ಎರಡು ಸಂದರ್ಭಗಳಿಗೆ ಸಂಬಂಧಿಸಿದ ‘ಗಂಭೀರತೆಯನ್ನು ಹೆಚ್ಚಿಸುವ’ ಮತ್ತು ‘ಗಂಭೀರತೆಯನ್ನು ಕಡಿಮೆಗೊಳಿಸುವ’ ಸಂದರ್ಭಗಳನ್ನು ಮೌಲ್ಯಮಾಪನ ಮಾಡುವುದು ಅವಶ್ಯಕವಾಗಿದೆ ಎಂದು ಹೇಳಿದ್ದಲ್ಲದೆ “ಅಪರೂಪದಲ್ಲೇ ಅಪರೂಪದ” ಅಪರಾಧದ ಸಿದ್ಧಾಂತವನ್ನು (doctrine of “rarest of rare”) ಸ್ಥಾಪಿಸಿತು.
- ನ್ಯಾಯಾಲಯವು ಅಪರಾಧ ಮತ್ತು ಕ್ರಿಮಿನಲ್ ಎರಡನ್ನೂ ಕೂಲಂಕಷವಾಗಿ ಪರಿಶೀಲಿಸಬೇಕು ಮತ್ತು ನಂತರ ಪ್ರಕರಣದ ಸತ್ಯಗಳಲ್ಲಿ ಮರಣದಂಡನೆಯು ಸೂಕ್ತವಾದ ಶಿಕ್ಷೆಯೇ ಎಂದು ನಿರ್ಧರಿಸಬೇಕು ಎಂದು ತೀರ್ಪು ವಿಧಿಸಿತು.
- ಪ್ರಕರಣದ ಸತ್ಯಗಳು ಮತ್ತು ಸಂದರ್ಭಗಳ ಮೇಲೆ ಅವಲಂಬಿತವಾಗಿರುವ ಉಲ್ಬಣಗೊಳ್ಳುವ ಮತ್ತು ತಗ್ಗಿಸುವ ಅಂಶಗಳ ಮೇಲೆ ಸಹ ಒತ್ತು ನೀಡಬೇಕು.
- ನ್ಯಾಯಾಲಯವು ಅಪರಾಧ ಮತ್ತು ಅಪರಾಧಿ ಎರಡನ್ನೂ ಕೂಲಂಕಷವಾಗಿ ಪರಿಶೀಲಿಸಬೇಕು ಮತ್ತು ನಂತರ ಪ್ರಕರಣದಲ್ಲಿ ಲಭ್ಯವಿರುವ ಸಾಕ್ಷಿಗಳಿಗೆ ಅನುಗುಣವಾಗಿ ಮರಣದಂಡನೆಯೊಂದೆ ಸೂಕ್ತವಾದ ಶಿಕ್ಷೆಯೇ ಎಂದು ನಿರ್ಧರಿಸಬೇಕು ಎಂದು ತೀರ್ಪು ನೀಡಿತು.
- ಬಚನ್ ಸಿಂಗ್ ಪ್ರಕರಣದ ತೀರ್ಪಿನ ಪ್ರಕಾರ, ಒಬ್ಬ ಅಪರಾಧಿಯು ಪ್ರಕರಣದಲ್ಲಿ ಮರಣದಂಡನೆಗೆ ಅರ್ಹನಾಗಲು, ಸನ್ನಿವೇಶಗಳ ‘ ಗಂಭೀರತೆಯನ್ನು -ಹೆಚ್ಚುತ್ತಿರುವ’ ಸಂದರ್ಭಗಳು ‘ಗಂಭೀರತೆಯನ್ನು- ಕಡಿಮೆ ಗೊಳಿಸುವ’ ಪರಿಸ್ಥಿತಿಗಳಿಗಿಂತ ಹೆಚ್ಚಾಗಿರಬೇಕು.
1983 ರ ಮಾಚಿ ಸಿಂಗ್ v/s ಪಂಜಾಬ್ ರಾಜ್ಯ ಪ್ರಕರಣ:
ಈ ಪ್ರಕರಣದಲ್ಲಿ, ಸುಪ್ರೀಂ ಕೋರ್ಟ್ “ಅಪರೂಪದಲ್ಲೇ ಅಪರೂಪದ” ಸಿದ್ಧಾಂತವನ್ನು ಸ್ಪಷ್ಟಪಡಿಸಿತು ಮತ್ತು ಮರಣದಂಡನೆ ಪ್ರಕರಣಗಳಲ್ಲಿ ಕೆಲವು ಮಾರ್ಗದರ್ಶಿ ತತ್ವಗಳನ್ನು ರೂಪಿಸಿತು.
- ‘ಗಂಭೀರತೆಯನ್ನು ಹೆಚ್ಚಿಸುವ’ ಸಂದರ್ಭಗಳು ಅಪರಾಧವನ್ನು ಮಾಡಿದ ವಿಧಾನ, ಅಪರಾಧವನ್ನು ಮಾಡಿದ ಉದ್ದೇಶ, ಅಪರಾಧದ ತೀವ್ರತೆ ಮತ್ತು ಅಪರಾಧದ ಬಲಿಪಶುವನ್ನು ಒಳಗೊಂಡಿವೆ.
- ‘ಗಂಭೀರತೆಯನ್ನು ತಗ್ಗಿಸುವ ಸಂದರ್ಭಗಳು ಆರೋಪಿಯ ಮನಃ ಪರಿವರ್ತನೆ ಮತ್ತು ಪುನರ್ವಸತಿ ಸಾಧ್ಯತೆ, ಅವನ ಮಾನಸಿಕ ಆರೋಗ್ಯ ಮತ್ತು ಅವನ ಪೂರ್ವಾಪರಗಳನ್ನು ಒಳಗೊಂಡಿವೆ.
ದೀರ್ಘಕಾಲದಿಂದ ಬಾಕಿ ಉಳಿದಿರುವ ಮರಣದಂಡನೆ ಶಿಕ್ಷೆಯ ಪ್ರಕರಣಗಳು ಹಾಗೂ ಪುನರ್ ಪರಿಶೀಲನಾ ಅರ್ಜಿಗಳ ಬಗ್ಗೆ ವರಿಷ್ಠ ನ್ಯಾಯಾಲಯದ ಅಭಿಮತ:
- 2014 ರಲ್ಲಿ, ಮರಣದಂಡನೆಯನ್ನು ಜಾರಿಗೊಳಿಸುವಲ್ಲಿನ ವಿವರಿಸಲಾಗದ ವಿಳಂಬವು ಮರಣದಂಡನೆಯನ್ನು ಪರಿವರ್ತಿಸಲು ಒಂದು ಕಾರಣವೆಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತು ಮತ್ತು ಒಬ್ಬ ಕೈದಿ, ಅವನ ಅಥವಾ ಅವಳ ಸಂಬಂಧಿಕರು ಅಥವಾ ಸಾರ್ವಜನಿಕ ಮನೋಭಾವದ ನಾಗರಿಕರು ಸಹ ಅಂತಹ ಬದಲಾವಣೆಯನ್ನು ಕೋರಿ ರಿಟ್ ಅರ್ಜಿಯನ್ನು ಸಲ್ಲಿಸಬಹುದು.
- ಮರಣದಂಡನೆಯನ್ನು ಜಾರಿಗೊಳಿಸುವಲ್ಲಿನ ದೀರ್ಘಾವಧಿಯ ವಿಳಂಬವು ಮರಣದಂಡನೆ ಶಿಕ್ಷೆಗೊಳಗಾದ ಕೈದಿಗಳ ಮೇಲೆ “ಅಮಾನವೀಯ ಪರಿಣಾಮ” ಬೀರುತ್ತದೆ ಎಂದು ಅದು ಹೇಳಿದೆ, ಅವರು ತಮ್ಮ ಕ್ಷಮಾದಾನ ಅರ್ಜಿಯು ವಿಲೇವಾರಿಗಾಗಿ ಕಾದಿರುವ ಸಮಯದಲ್ಲಿ ಸಾವಿನ ನೆರಳಿನಲ್ಲಿ ವರ್ಷಗಳ ಕಾಲ ಕಾಯುವ ಸಂಕಟವನ್ನು ಎದುರಿಸಬೇಕಾಗುತ್ತದೆ.ಮಿತಿಮೀರಿದ ವಿಳಂಬವು ಖಂಡಿತವಾಗಿಯೂ ಅವರ ದೇಹ ಮತ್ತು ಮನಸ್ಸಿನ ಮೇಲೆ ಮಾನಸಿಕ ಕ್ಲೇಶೆಯ ಪರಿಣಾಮಗಳನ್ನು ಬೀರುತ್ತದೆ.
- ಅದೇ ವರ್ಷದಲ್ಲಿ, ಸಾಂವಿಧಾನಿಕ ಪೀಠವು ಮರಣದಂಡನೆಯ ಅಪರಾಧಿಯ ಮರುಪರಿಶೀಲನಾ ಅರ್ಜಿಯನ್ನು ಮುಕ್ತ ನ್ಯಾಯಾಲಯದಲ್ಲಿ ತ್ರಿಸದಸ್ಯ ಪೀಠದಿಂದ ವಿಚಾರಣೆ ನಡೆಸಲಾಗುವುದು ಎಂದು ತೀರ್ಪು ನೀಡಿತು. ಅಂತಹ ಪ್ರಕರಣಗಳನ್ನು ಮೊದಲು ನ್ಯಾಯಾಧೀಶರ ಕೊಠಡಿಯಲ್ಲಿ ದ್ವಿಸದಸ್ಯ ಪೀಠಗಳು ಯಾವುದೇ ಮೌಖಿಕ ವಾದಗಳಿಲ್ಲದೆ ಪರಿಗಣಿಸುತ್ತಿದ್ದವು.
ಮುಂದಿರುವ ಸವಾಲುಗಳು:
- 2022 ರಲ್ಲಿ ಭಾರತದಲ್ಲಿನ ವಿಚಾರಣಾ ನ್ಯಾಯಾಲಯಗಳು ಈಗಾಗಲೇ 50 ಕ್ಕೂ ಹೆಚ್ಚು ಜನರಿಗೆ ಮರಣದಂಡನೆಯನ್ನು ಸಾಮಾನ್ಯವಾಗಿ ಕಾರ್ಯವಿಧಾನದ ಮತ್ತು ವಸ್ತುನಿಷ್ಠ ಕಾನೂನುಗಳನ್ನು ಉಲ್ಲಂಘಿಸಿವ ಮೂಲಕ ವಿಧಿಸಿವೆ ಮತ್ತು ಈ ಅಂಶದಿಂದ ಸುಪ್ರೀಂ ಕೋರ್ಟ್‌ನ ಮುಂದಿರುವ ಕಾರ್ಯದ ಅಗಾಧತೆಯನ್ನು ಕಂಡುಹಿಡಿಯಲಾಗಿದೆ.
- ಭಾರತದಲ್ಲಿನ ನ್ಯಾಯಾಲಯಗಳಾದ್ಯಂತ ಮರಣದಂಡನೆ ಶಿಕ್ಷೆಯಲ್ಲಿ ನ್ಯಾಯಸಮ್ಮತತೆ ಮತ್ತು ಸ್ಥಿರತೆಯ ಸಮತೋಲನವನ್ನು ತರಲು ಸುಪ್ರೀಂ ಕೋರ್ಟ್‌ಗೆ ಸುಲಭವಲ್ಲ ಆದರೆ ನ್ಯಾಯಾಲಯವು ಅದನ್ನು ನೇರವಾಗಿ ಪರಿಹರಿಸಲು ಆಯ್ಕೆ ಮಾಡಿದೆ ಎಂಬುದು ಖಂಡಿತವಾಗಿಯೂ ಗಮನಾರ್ಹ ಮತ್ತು ನಮ್ಮ ಮೆಚ್ಚುಗೆಗೆ ಅರ್ಹವಾಗಿದೆ.
ವಿಷಯಗಳು: ಆರೋಗ್ಯ, ಶಿಕ್ಷಣ, ಸಾಮಾಜಿಕ ವಲಯ / ಸೇವೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ಮಾನವ ಸಂಪನ್ಮೂಲ ಸಂಬಂಧಿತ ವಿಷಯಗಳು.
ಬಿಜು ಸ್ವಾಸ್ಥ್ಯ ಕಲ್ಯಾಣ ಯೋಜನೆ:
(Biju Swasthya Kalyan Yojana)
ಸಂದರ್ಭ:
ಒಡಿಶಾ ಸರ್ಕಾರವು ಇತ್ತೀಚೆಗೆ ತನ್ನ ಪ್ರಮುಖ ಬಿಜು ಸ್ವಾಸ್ಥ್ಯ ಕಲ್ಯಾಣ ಯೋಜನೆಯಡಿ ಫಲಾನುಭವಿಗಳಿಗೆ ಸ್ಮಾರ್ಟ್ ಆರೋಗ್ಯ ಕಾರ್ಡ್‌ಗಳನ್ನು ವಿತರಿಸಿದೆ.
ಬಿಜು ಸ್ವಾಸ್ಥ್ಯ ಕಲ್ಯಾಣ ಯೋಜನೆಯ ಬಗ್ಗೆ:
ಆಗಸ್ಟ್ 15, 2018 ರಂದು ಪ್ರಾರಂಭ.
ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳ ಆರೋಗ್ಯ ರಕ್ಷಣೆಗೆ ವಿಶೇಷ ಒತ್ತು ನೀಡುವ ಮೂಲಕ ಸಾರ್ವತ್ರಿಕ ಆರೋಗ್ಯ ರಕ್ಷಣೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ.
ಈ ಯೋಜನೆಯು ಎರಡು ಘಟಕಗಳನ್ನು ಹೊಂದಿದೆ:
- ಒಂದು, ಉಚಿತ ಆರೋಗ್ಯ ಸೇವೆಗಳನ್ನು (ಆದಾಯ, ಸ್ಥಾನಮಾನ ಅಥವಾ ವಾಸಸ್ಥಳವನ್ನು ಲೆಕ್ಕಿಸದೆ) ರಾಜ್ಯ ಸರ್ಕಾರದ ಎಲ್ಲಾ ಆರೋಗ್ಯ ಸೌಲಭ್ಯಗಳನ್ನು ಉಪ ಕೇಂದ್ರ ಮಟ್ಟದಿಂದ ಪ್ರಾರಂಭವಾಗಿ ಜಿಲ್ಲಾ ಪ್ರಧಾನ ಆಸ್ಪತ್ರೆ ಮಟ್ಟದವರೆಗೆ ಒದಗಿಸುವುದು.
- ಎರಡು, ಆರ್ಥಿಕವಾಗಿ ದುರ್ಬಲವಾಗಿರುವ ರಾಜ್ಯದ 70 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಜಿಲ್ಲಾ ಕೇಂದ್ರ ಆಸ್ಪತ್ರೆಯ ಮಟ್ಟವನ್ನು ಮೀರಿ ಉಚಿತ ಆರೋಗ್ಯ ಸೇವೆಯ ಹೆಚ್ಚುವರಿ ಸೌಲಭ್ಯವನ್ನು ಒದಗಿಸುವುದು.
ಅರ್ಹತೆ:
ಕಳೆದ ವರ್ಷ ಸ್ವಾತಂತ್ರ್ಯ ದಿನದಂದು ಘೋಷಣೆಯಾದ ನಂತರ, ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ (NFSA) ಮತ್ತು SFSA ಅಡಿಯಲ್ಲಿ ಒಳಗೊಳ್ಳುವ ಎಲ್ಲಾ ಅರ್ಹ ಕುಟುಂಬಗಳು BSKY ಅಡಿಯಲ್ಲಿ ಆರೋಗ್ಯ ಸೇವೆಗಳನ್ನು ಅರ್ಹತೆ ಪಡೆದಿವೆ.
ಯೋಜನೆಯಡಿ ಪ್ರಯೋಜನಗಳು:
- ಈ ಯೋಜನೆಯು ರಾಜ್ಯದ ಸುಮಾರು 96 ಲಕ್ಷ ಕುಟುಂಬಗಳಿಗೆ 5 ಲಕ್ಷದವರೆಗೆ ನಗದುರಹಿತ ಆರೋಗ್ಯ ರಕ್ಷಣೆಯ ಭರವಸೆ ನೀಡುತ್ತದೆ. BSKY ಅಡಿಯಲ್ಲಿ ಮಹಿಳಾ ಫಲಾನುಭವಿಗಳಿಗೆ ನೀಡಲಾಗುವ ಆರೋಗ್ಯ ವೆಚ್ಚದ ಮಿತಿ 10 ಲಕ್ಷ ರೂ.ಗಳಾಗಿದೆ.
- ಸ್ಮಾರ್ಟ್ ಕಾರ್ಡ್ ಹೊಂದಿರುವವರು ರಾಜ್ಯದ 200 ಕ್ಕೂ ಹೆಚ್ಚು ಸಂಯೋಜಿತ ಆಸ್ಪತ್ರೆಗಳಲ್ಲಿ ನಗದುರಹಿತ ಆರೋಗ್ಯ ರಕ್ಷಣೆಯನ್ನು / ಸೇವೆಯನ್ನು ಪಡೆಯುತ್ತಾರೆ.
ಎಲ್ಲಾ ವ್ಯಕ್ತಿಗಳಿಗೆ ಉಚಿತ ಔಷಧಗಳು, ಉಚಿತ ರೋಗನಿರ್ಣಯ, ಉಚಿತ ಡಯಾಲಿಸಿಸ್, ಉಚಿತ ಕ್ಯಾನ್ಸರ್ ಕಿಮೊಥೆರಪಿ, ಉಚಿತ ಓಟಿ, ಉಚಿತ ಐಸಿಯು ಸೌಲಭ್ಯ, ಒಳರೋಗಿಗಳ ಪ್ರವೇಶ ಇತ್ಯಾದಿಗಳನ್ನು ಒಳಗೊಂಡಂತೆ ಎಲ್ಲಾ ಆರೋಗ್ಯ ಸೇವೆಗಳು ಉಚಿತವಾಗಿದೆ.
BSKY vs ಆಯುಷ್ಮಾನ್ ಭಾರತ್:
ಬಿಜು ಸ್ವಾಸ್ಥ್ಯ ಕಲ್ಯಾಣ ಯೋಜನೆ(BSKY) ಪ್ರಾರಂಭವಾದ ಸುಮಾರು ಒಂದು ತಿಂಗಳ ನಂತರ, ಕೇಂದ್ರ ಸರ್ಕಾರವು ಸೆಪ್ಟೆಂಬರ್ 28, 2018 ರಂದು ತನ್ನ ಆರೋಗ್ಯ ಸೇವಾ ಯೋಜನೆ – ಆಯುಷ್ಮಾನ್ ಭಾರತ್ – ಅನ್ನು ಪ್ರಾರಂಭಿಸಿತು. ಕೇಂದ್ರದ ಆರೋಗ್ಯ ರಕ್ಷಣೆ ಯೋಜನೆಯನ್ನು ಜಾರಿಗೆ ತರದ ನಾಲ್ಕು ರಾಜ್ಯಗಳಲ್ಲಿ ಒಡಿಶಾ ಕೂಡ ಒಂದಾಗಿದೆ.
ಪ್ರಮುಖ ವ್ಯತ್ಯಾಸಗಳು:
ಪ್ಯಾಕೇಜ್ ಕ್ಯಾಪ್: ಆಯುಷ್ಮಾನ್ ಭಾರತ್ ಅಡಿಯಲ್ಲಿ ವರ್ಷಕ್ಕೆ ರೂ 5 ಲಕ್ಷ ವರೆಗೆ ಉಚಿತ ಚಿಕಿತ್ಸೆ ಆದರೆ BSKY ಅಡಿಯಲ್ಲಿ ರೂ 10 ಲಕ್ಷದವರೆಗೆ ಉಚಿತ ಚಿಕಿತ್ಸೆ ದೊರೆಯುತ್ತದೆ.
ವ್ಯಾಪ್ತಿ: BSKY 90 ಲಕ್ಷ ಕುಟುಂಬಗಳನ್ನು ಒಳಗೊಂಡಿದ್ದರೆ, ಆಯುಷ್ಮಾನ್ ಭಾರತ್ ಯೋಜನೆಯು 60 ಲಕ್ಷ ಕುಟುಂಬಗಳನ್ನು ಮಾತ್ರ ಒಳಗೊಂಡಿದೆ.
ವಿಷಯಗಳು: ಆರೋಗ್ಯ, ಶಿಕ್ಷಣ, ಸಾಮಾಜಿಕ ವಲಯ / ಸೇವೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ಮಾನವ ಸಂಪನ್ಮೂಲ ಸಂಬಂಧಿತ ವಿಷಯಗಳು.
WHO ದ ಸಾಂಕ್ರಾಮಿಕ ಒಪ್ಪಂದ:
(WHO’s pandemic treaty)
ಸಂದರ್ಭ:
ವಿಶ್ವ ಆರೋಗ್ಯ ಸಂಸ್ಥೆಯ (WHO) ಸದಸ್ಯರು ಫೆಬ್ರವರಿ 24, 2022 ರಂದು ಸಾಂಕ್ರಾಮಿಕ ರೋಗದ (Pandemic Treaty) ಕುರಿತು ಮೊದಲ ಸುತ್ತಿನ ಮಾತುಕತೆ ನಡೆಸಿದರು.
- ಭವಿಷ್ಯದ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಮತ್ತು ಸಾಂಕ್ರಾಮಿಕ ಔಟ್ ಬ್ರೆಕ್ ಗಳ ಸಂಭವದ ಸಂದರ್ಭದಲ್ಲಿ ಸನ್ನದ್ಧತೆ ಮತ್ತು ಪ್ರತಿಕ್ರಿಯೆಯನ್ನು ಸುಧಾರಿಸಲು “ಸಮಾವೇಶಗಳು, ಒಪ್ಪಂದಗಳು ಅಥವಾ ಇತರ ಅಂತರರಾಷ್ಟ್ರೀಯ ಕ್ರಮಗಳ” ಮೇಲೆ ಕೆಲಸ ಮಾಡುವ ಮಾರ್ಗಗಳು ಮತ್ತು ಸಮಯಾವಧಿಯನ್ನು ಒಪ್ಪಿಕೊಳ್ಳುವುದು ಸಭೆಯ ಉದ್ದೇಶವಾಗಿತ್ತು.
ಸಾಂಕ್ರಾಮಿಕ ಒಪ್ಪಂದದ ಕುರಿತು:
ಡಿಸೆಂಬರ್ 2021 ರಲ್ಲಿ, ‘ಆರೋಗ್ಯ ಅಸೆಂಬ್ಲಿ’ ಮೂಲಕ- 1948 ರಲ್ಲಿ ಅದರ ಸ್ಥಾಪನೆಯ ನಂತರ – ಅದರ ಎರಡನೇ ವಿಶೇಷ ಅಧಿವೇಶನದಲ್ಲಿ “ದಿ ವರ್ಲ್ಡ್ ಟುಗೆದರ್” ಎಂಬ ಶೀರ್ಷಿಕೆಯ ನಿರ್ಧಾರವನ್ನು ಅಂಗೀಕರಿಸಲಾಯಿತು.
- ನಿರ್ಧಾರದ ಅಡಿಯಲ್ಲಿ, ಡಬ್ಲ್ಯುಎಚ್‌ಒ ಸಂವಿಧಾನದ 19 ನೇ ವಿಧಿಗೆ ಅನುಸಾರವಾಗಿ ‘ಸಾಂಕ್ರಾಮಿಕ ಒಪ್ಪಂದ’ದ ವಿಷಯಗಳನ್ನು ಕರಡು ಮತ್ತು ಮಾತುಕತೆ ನಡೆಸಲು ಆರೋಗ್ಯ ಸಂಸ್ಥೆಯು ಅಂತರ್ ಸರ್ಕಾರಿ ಸಮಾಲೋಚನಾ ಸಂಸ್ಥೆಯನ್ನು (Intergovernmental Negotiating Body – INB) ಸ್ಥಾಪಿಸಿತು.
- ‘ಸಾಂಕ್ರಾಮಿಕ ಒಪ್ಪಂದ’ವು ಡೇಟಾ ಹಂಚಿಕೆ ಮತ್ತು ಉದಯೋನ್ಮುಖ ವೈರಸ್‌ಗಳ ಜೀನೋಮ್ ಅನುಕ್ರಮ ಮತ್ತು ಲಸಿಕೆಗಳು ಮತ್ತು ಔಷಧಿಗಳ ಸಮಾನ ವಿತರಣೆ ಮತ್ತು ಪ್ರಪಂಚದಾದ್ಯಂತ ಸಂಬಂಧಿತ ಸಂಶೋಧನೆಗಳಂತಹ ಅಂಶಗಳನ್ನು ಒಳಗೊಂಡಿರುತ್ತದೆ ಎಂದು ನಿರೀಕ್ಷಿಸಲಾಗಿದೆ.
ಅವಶ್ಯಕತೆ:
- COVID-19 ಸಾಂಕ್ರಾಮಿಕ ರೋಗಕ್ಕೆ ಪರಿಹಾರವು ಇಲ್ಲಿಯವರೆಗೆ ಲಸಿಕೆಗಳ ಅಸಮಾನ ವಿತರಣೆಯನ್ನು ಕಂಡಿದೆ ಮತ್ತು ತಡೆಗಟ್ಟುವ ಔಷಧವನ್ನು ಪಡೆಯಲು ಬಡ ದೇಶಗಳು ಇತರರ ಕರುಣೆಯ ಮೇಲೆ ಅವಲಂಬಿತವಾಗಿವೆ.
- “ಮಿ-ಫಸ್ಟ್” ವಿಧಾನವನ್ನು ಹೆಚ್ಚಿನ ದೇಶಗಳು ಅಳವಡಿಸಿಕೊಂಡಿವೆ, ಆದರೆ ಇದು ಜಾಗತಿಕ ಸಾಂಕ್ರಾಮಿಕ ರೋಗವನ್ನು ಎದುರಿಸಲು ಪರಿಣಾಮಕಾರಿ ಮಾರ್ಗವಲ್ಲ.
ಪ್ರಸ್ತುತ ಅಥವಾ ಭವಿಷ್ಯದ ಸಾಂಕ್ರಾಮಿಕ ರೋಗಗಳ ವಿರುದ್ಧ ಹೋರಾಡಲು ಈ ಒಪ್ಪಂದವು ಏಕೆ ಒಂದು ಸಮರ್ಪಕ ಕ್ರಮವಾಗಿಲ್ಲ?
- ಒಪ್ಪಂದವು ನಿರ್ದಿಷ್ಟ ಸಮಸ್ಯೆಯನ್ನು ಎದುರಿಸಲು ಶಿಫಾರಸುಗಳನ್ನು ಮಾತ್ರ ಒದಗಿಸುತ್ತದೆ, ಆದರೆ ಸಾರ್ವಜನಿಕ ಆರೋಗ್ಯ ಗುರಿಗಳನ್ನು ತಲುಪಲು ವಿಶೇಷವಾಗಿ ಸಮಭಾಜಕದ ದಕ್ಷಿಣಕ್ಕೆ ಇರುವ ದೇಶಗಳಿಗೆ, ಸಂಪನ್ಮೂಲಗಳು ಮತ್ತು ಸಾಮರ್ಥ್ಯಗಳ ಅಗತ್ಯವನ್ನು ನಿರ್ಲಕ್ಷಿಸುತ್ತದೆ.
- ಈ ಕೊರತೆ ಅಥವಾ ಸಾಮರ್ಥ್ಯದ ಅಸಮಾನತೆಗಳನ್ನು ಪರಿಹರಿಸಲು ಯಾವುದೇ ಗಮನವನ್ನು ನೀಡುತ್ತಿಲ್ಲ. ಶ್ರೀಮಂತ ರಾಷ್ಟ್ರಗಳು ನಾಲ್ಕು ತಿಂಗಳಲ್ಲಿ ಹೆಚ್ಚು ಬೂಸ್ಟರ್ ಡೋಸ್ ಗಳನ್ನು ನೀಡಿವೆ, ಆದರೆ ಬಡ ದೇಶಗಳು ವರ್ಷವಿಡೀ ಲಸಿಕೆ ನೀಡಿಕೆಯನ್ನು ಮುಂದುವರೆಸಿವೆ. ಈ ಸತ್ಯವು ಜಾಗತಿಕ ಉತ್ತರ ಮತ್ತು ದಕ್ಷಿಣದಲ್ಲಿನ ಸಾಮರ್ಥ್ಯ-ಅಸಮಾನತೆಯನ್ನು ಪ್ರತಿಬಿಂಬಿಸುತ್ತದೆ.
- ಯಾವುದೇ ಜಾಗತಿಕ ಪ್ರಯತ್ನದ ಭಾಗವಾಗಿ, ವಿತರಣೆಯ ಸಮಾನ ಸಾಮರ್ಥ್ಯಗಳನ್ನು ಖಾತ್ರಿಪಡಿಸಿಕೊಳ್ಳಬೇಕು, ಆದ್ದರಿಂದ ಭೂ-ಗೋಳದ ದಕ್ಷಿಣದಲ್ಲಿರುವ ದೇಶಗಳು ಮತ್ತು ಪ್ರದೇಶಗಳು ಅಗತ್ಯ ಔಷಧಗಳು, ವಸ್ತುಗಳು, ಉತ್ಪಾದನೆ ಮತ್ತು ಪೂರೈಕೆ ಸರಪಳಿಗಳ ಮೇಲೆ ಸಾರ್ವಭೌಮತ್ವವನ್ನು ಹೊಂದಿವೆ.
ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಮತ್ತು ಆದೇಶ.
ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (IAEA):
(International Atomic Energy Agency)
ಸಂದರ್ಭ:
ತನ್ನ ಸೇನಾ ಪಡೆಗಳು ಉಕ್ರೇನ್‌ನ ಝಪೊರಿಝಿಯಾ ಪರಮಾಣು ವಿದ್ಯುತ್ ಸ್ಥಾವರ (Zaporizhzhia Nuclear Power Plant -NPP) ಸುತ್ತಲಿನ ಪ್ರದೇಶವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿವೆ ಎಂದು ರಷ್ಯಾ ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (International Atomic Energy Agency -IAEA) ಗೆ ಮಾಹಿತಿ ನೀಡಿದೆ.
IAEA ತನ್ನ ಪರಮಾಣು ಶಕ್ತಿ ರಿಯಾಕ್ಟರ್‌ಗಳ ಸುರಕ್ಷತೆ ಮತ್ತು ಭದ್ರತೆಯ ಮೇಲೆ ವಿಶೇಷ ಗಮನಹರಿಸುವುದರೊಂದಿಗೆ ಉಕ್ರೇನ್‌ನಲ್ಲಿನ ಬೆಳವಣಿಗೆಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವುದನ್ನು ಮುಂದುವರೆಸಿದೆ.
ಕಳವಳಗಳು:
ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯು ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣವು ಮೊದಲ ಬಾರಿಗೆ ದೊಡ್ಡ ಮತ್ತು ಸ್ಥಾಪಿತ ಪರಮಾಣು ಶಕ್ತಿ ಕಾರ್ಯಕ್ರಮದ ಸೌಲಭ್ಯಗಳ ನಡುವೆ ಮಿಲಿಟರಿ ಸಂಘರ್ಷವನ್ನು ಗುರುತಿಸುತ್ತದೆ ಎಂದು ಹೇಳಿದೆ.
ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ ಅಥವಾ ಇಂಧನ ಸಂಸ್ಥೆಯ (IAEA) ಕುರಿತು:
- ಅಂತರರಾಷ್ಟ್ರೀಯ ಪರಮಾಣು ಶಕ್ತಿ ಏಜೆನ್ಸಿಯನ್ನು 1957 ರಲ್ಲಿ ವಿಶ್ವಸಂಸ್ಥೆಯ ಕುಟುಂಬದಲ್ಲಿ ಒಂದಾಗಿ ‘ಜಾಗತಿಕ ಶಾಂತಿಗಾಗಿ ಪರಮಾಣು ಸಂಸ್ಥೆ’ ಎಂಬ ಸಂಘಟನೆಯಾಗಿ ಸ್ಥಾಪಿಸಲಾಯಿತು. ಇದೊಂದು ಅಂತರರಾಷ್ಟ್ರೀಯ ಸ್ವಾಯತ್ತ ಸಂಸ್ಥೆ ಯಾಗಿದೆ.
- ಜಗತ್ತಿನಲ್ಲಿ ಪರಮಾಣು ಶಕ್ತಿಯ ಶಾಂತಿಯುತ ಬಳಕೆಯನ್ನು ಖಚಿತಪಡಿಸಿಕೊಳ್ಳುವ ಗುರಿ ಹೊಂದಿದೆ. ಪರಮಾಣು ಶಕ್ತಿಯನ್ನು ಮಿಲಿಟರಿ ಬಳಕೆಯನ್ನು ಯಾವುದೇ ರೀತಿಯಲ್ಲಿ ತಡೆಯಲು ಅದು ಶ್ರಮಿಸುತ್ತದೆ.
- IAEA ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಮತ್ತು ಭದ್ರತಾ ಮಂಡಳಿ ಎರಡಕ್ಕೂ ವರದಿ ಮಾಡುತ್ತದೆ.
- ಪ್ರಧಾನ ಕಛೇರಿ ಆಸ್ಟ್ರಿಯಾದ ವಿಯನ್ನಾ ದಲ್ಲಿದೆ.
ಕಾರ್ಯಗಳು:
- ಪರಮಾಣು ತಂತ್ರಜ್ಞಾನಗಳ ಸುರಕ್ಷಿತ, ನಿರ್ಭೀತ ಮತ್ತು ಶಾಂತಿಯುತ ಬಳಕೆಯನ್ನು ಉತ್ತೇಜಿಸಲು IAEA ತನ್ನ ಸದಸ್ಯ ರಾಷ್ಟ್ರಗಳು ಮತ್ತು ವಿವಿಧ ಪಾಲುದಾರರೊಂದಿಗೆ ಕೆಲಸ ಮಾಡುತ್ತದೆ.
- ಪರಮಾಣು ಶಕ್ತಿಯ ಶಾಂತಿಯುತ ಬಳಕೆಯನ್ನು ಉತ್ತೇಜಿಸುವುದು ಮತ್ತು ಪರಮಾಣು ಶಸ್ತ್ರಾಸ್ತ್ರಗಳು ಸೇರಿದಂತೆ ಯಾವುದೇ ಮಿಲಿಟರಿ ಉದ್ದೇಶಕ್ಕಾಗಿ ಅದರ ಬಳಕೆಯನ್ನು ತಡೆಯುವುದು ಇದರ ಉದ್ದೇಶವಾಗಿದೆ.
ಆಡಳಿತ ಮಂಡಳಿ:
- 22 ಸದಸ್ಯ ರಾಷ್ಟ್ರಗಳು (ಪ್ರತಿಯೊಬ್ಬರಿಂದ ನಿರ್ಧರಿಸಲ್ಪಟ್ಟ ಭೌಗೋಳಿಕ ವೈವಿಧ್ಯತೆಯನ್ನು ಪ್ರತಿನಿಧಿಸುತ್ತವೆ) – ಸಾಮಾನ್ಯ ಸಮ್ಮೇಳನದ ಮೂಲಕ ಚುನಾವಣೆ (ಪ್ರತಿ ವರ್ಷ 11 ಸದಸ್ಯರು) – 2 ವರ್ಷಗಳ ಅವಧಿಗೆ ಆಯ್ಕೆ.
- ಕನಿಷ್ಠ 10 ಸದಸ್ಯ ರಾಷ್ಟ್ರಗಳು – ಹೊರಹೋಗುವ ಮಂಡಳಿಯಿಂದ ನಾಮನಿರ್ದೇಶನಗೊಳ್ಳುತ್ತವೆ.
IAEA ಪಾತ್ರಗಳು:
- IAEA, ಚಟುವಟಿಕೆಗಳು ಮತ್ತು ಬಜೆಟ್ ಕುರಿತು ಸಾಮಾನ್ಯ ಸಮಾವೇಶಕ್ಕೆ ಶಿಫಾರಸುಗಳನ್ನು ಮಾಡುತ್ತದೆ.
- IAEA, ಮಾನದಂಡಗಳನ್ನು ಪ್ರಕಟಿಸುವ ಜವಾಬ್ದಾರಿ ಹೊಂದಿದೆ.
- IAEA, ಸಂಸ್ಥೆಯ ಹೆಚ್ಚಿನ ನೀತಿಗಳ ಸೂತ್ರೀಕರಣ ಮಾಡುತ್ತದೆ.
- ಸಾಮಾನ್ಯ ಸಮ್ಮೇಳನದ ಅನುಮೋದನೆಯೊಂದಿಗೆ ಮಹಾನಿರ್ದೇಶಕರನ್ನು ನೇಮಿಸುತ್ತದೆ.
IAEA, ನಡೆಸುವ ಕಾರ್ಯಕ್ರಮಗಳು:
- ಕ್ಯಾನ್ಸರ್ ಥೆರಪಿಗಾಗಿ ಕ್ರಿಯಾ ಕಾರ್ಯಕ್ರಮ- (Program of Action for Cancer Therapy- PACT).
- ಮಾನವ ಆರೋಗ್ಯ ಕಾರ್ಯಕ್ರಮ.
- ನೀರಿನ ಲಭ್ಯತೆ ವರ್ಧನೆ ಯೋಜನೆ.
- ನವೀನ ಪರಮಾಣು ರಿಯಾಕ್ಟರ್‌ಗಳು ಮತ್ತು ಇಂಧನ ಚಕ್ರಗಳ ಕುರಿತಾದ ಅಂತರರಾಷ್ಟ್ರೀಯ ಯೋಜನೆ, 2000.
ಸಾಮಾನ್ಯ ಅಧ್ಯಯನ ಪತ್ರಿಕೆ : 3
ವಿಷಯಗಳು: ವಿಪತ್ತು ನಿರ್ವಹಣೆ.
ಕ್ಲಸ್ಟರ್ ಬಾಂಬ್‌ಗಳು ಮತ್ತು ಥರ್ಮೋಬಾರಿಕ್ ಶಸ್ತ್ರಾಸ್ತ್ರಗಳು ಯಾವುವು?
(What are cluster bombs and thermobaric weapons?)
ಸಂದರ್ಭ:
ರಷ್ಯಾ ಉಕ್ರೇನ್‌ನಲ್ಲಿ ಅಪಾಯಕಾರಿ ಥರ್ಮೋಬಾರಿಕ್ ಬಾಂಬ್(Thermobaric Bombs) ಗಳನ್ನು ಅಥವಾ ನಿರ್ವಾತ ಬಾಂಬ್‌ಗಳನ್ನು ಬಳಸಲು ಪ್ರಾರಂಭಿಸಿದೆ.
- 2008 ರ ಕ್ಲಸ್ಟರ್ ಯುದ್ಧಸಾಮಗ್ರಿಗಳ ಸಮಾವೇಶದಿಂದ (Convention on Cluster Munitions) ಕ್ಲಸ್ಟರ್ ಶಸ್ತ್ರಾಸ್ತ್ರಗಳ (Cluster weaponry) ಬಳಕೆಯನ್ನು ನಿಷೇಧಿಸಲಾಗಿದೆ; ಆದಾಗ್ಯೂ, ಉಕ್ರೇನ್ ಅಥವಾ ರಷ್ಯಾ ಸಮಾವೇಶಕ್ಕೆ ಸಹಿ ಹಾಕಿಲ್ಲ.
ಥರ್ಮೋಬಾರಿಕ್ ಆಯುಧಗಳು:
ಥರ್ಮೋಬಾರಿಕ್ ಆಯುಧಗಳನ್ನು (Thermobaric Weapons) ‘ನಿರ್ವಾತ ಬಾಂಬುಗಳು’ ಅಥವಾ ‘ವ್ಯಾಕ್ಯೂಮ್ ಬಾಂಬುಗಳು’ (Vacuum Bombs) ಎಂದೂ ಕರೆಯುತ್ತಾರೆ ಏಕೆಂದರೆ ಅವುಗಳು ಹೆಚ್ಚಿನ-ವೋಲ್ಟೇಜ್ ಸ್ಫೋಟಗಳನ್ನು ಉಂಟುಮಾಡಲು ಸುತ್ತಮುತ್ತಲಿನ ಪ್ರದೇಶಗಳಿಂದ ‘ಆಮ್ಲಜನಕ’ವನ್ನು ಹೀರಿಕೊಳ್ಳುತ್ತವೆ.
- ಈ ಬಾಂಬ್‌ಗಳ ಆಸ್ಫೋಟನ ತರಂಗವು ಸಾಂಪ್ರದಾಯಿಕ ಬಾಂಬ್‌ಗಳಿಗಿಂತ ಹೆಚ್ಚಿನ ತೀವ್ರತೆ ಮತ್ತು ಅವಧಿಯನ್ನು ಹೊಂದಿದೆ ಮತ್ತು ಮಾನವರನ್ನು ಸಹ ಆವಿಯಾಗಿಸಬಹುದಾಗಿದೆ.
- ಟ್ಯಾಂಕ್‌ಗಳು ಮತ್ತು ಇತರ ಮಿಲಿಟರಿ ವಾಹನಗಳನ್ನು ನಾಶಮಾಡಲು ಈ ಬಾಂಬ್‌ಗಳನ್ನು ಬಳಸಲಾಗದಿದ್ದರೂ, ಅವು ವಸತಿ ಅಥವಾ ವಾಣಿಜ್ಯ ಸಂಕೀರ್ಣಗಳಂತಹ ನಾಗರಿಕ ವಾಸಸ್ಥಳಗಳನ್ನು ನಾಶಮಾಡಲು ಸಮರ್ಥವಾಗಿವೆ.
ಕ್ಲಸ್ಟರ್ ಬಾಂಬುಗಳು(Cluster bombs):
‘ಕ್ಲಸ್ಟರ್ ಯುದ್ಧಸಾಮಗ್ರಿಗಳು’, ‘ದೊಡ್ಡ ಪ್ರದೇಶದಲ್ಲಿ ಮಾನವರನ್ನು ವಿವೇಚನಾರಹಿತವಾಗಿ ಗಾಯಗೊಳಿಸಲು ಅಥವಾ ಕೊಲ್ಲಲು ವಿನ್ಯಾಸಗೊಳಿಸಲಾದ ನಿಖರವಲ್ಲದ ಆಯುಧಗಳಾಗಿವೆ ಮತ್ತು ರನ್ವೇಗಳು, ರೈಲುಮಾರ್ಗಗಳು ಅಥವಾ ವಿದ್ಯುತ್ ಪ್ರಸರಣ ಮಾರ್ಗಗಳಂತಹ ಮೂಲಸೌಕರ್ಯಗಳನ್ನು ನಾಶಮಾಡಲು ವಿನ್ಯಾಸಗೊಳಿಸಲಾದ ನಾನ್-ಪ್ರೆಸಿಶನ್ ವೆಪನ್ಸ್ (Non-Precision Weapons) ಆಯುಧಗಳಾಗಿವೆ.
- ಕ್ಲಸ್ಟರ್ ಬಾಂಬುಗಳನ್ನು ವಿಮಾನದಿಂದ ಬಿಡಬಹುದು ಮತ್ತು ಉತ್ಕ್ಷೇಪಕದಿಂದ ಉಡಾವಣೆ ಮಾಡಬಹುದು, ಇದರಲ್ಲಿ ಅವರು ತಮ್ಮ ಹಾರಾಟದ ಸಮಯದಲ್ಲಿ ವೃತ್ತಾಕಾರದ ಚಲನೆಯಲ್ಲಿ ಹಲವಾರು ಸಣ್ಣ ಬಾಂಬ್‌ಗಳನ್ನು ಚದುರಿದಂತೆ ಬೀಳಿಸುತ್ತವೆ.
- ಈ ಸಣ್ಣ ಬಾಂಬ್‌ಗಳಲ್ಲಿ ಹೆಚ್ಚಿನವು ತಕ್ಷಣವೇ ಸ್ಫೋಟಗೊಳ್ಳುವುದಿಲ್ಲ, ಆದರೆ ನೆಲದ ಮೇಲೆ ಒರಗಿರುತ್ತವೆ ಮತ್ತು ಆಗಾಗ್ಗೆ ಭಾಗಶಃ ಅಥವಾ ಸಂಪೂರ್ಣವಾಗಿ ಮರೆಮಾಡಲ್ಪಡುತ್ತವೆ ಮತ್ತು ಪತ್ತೆಹಚ್ಚಲು ಮತ್ತು ನಾಶಮಾಡಲು ಕಷ್ಟವಾಗುತ್ತದೆ. ಹೋರಾಟವನ್ನು ನಿಲ್ಲಿಸಿದ ನಂತರವೂ ಈ ಬಾಂಬ್‌ಗಳು ‘ನಾಗರಿಕ ಜನಸಂಖ್ಯೆ’ಗೆ ದೀರ್ಘಾವಧಿಯ ಬೆದರಿಕೆಯಾಗಿ ಉಳಿಯುತ್ತವೆ.
‘ಕ್ಲಸ್ಟರ್ ಯುದ್ಧೋಪಕರಣಗಳ ಸಮಾವೇಶ’:
(Convention on Cluster Munitions)
ಕ್ಲಸ್ಟರ್ ಯುದ್ಧಸಾಮಗ್ರಿಗಳ ಸಮಾವೇಶವು ಎಲ್ಲಾ ರೀತಿಯ ಕ್ಲಸ್ಟರ್ ಬಾಂಬ್‌ಗಳ ಬಳಕೆ, ವರ್ಗಾವಣೆ, ಉತ್ಪಾದನೆ ಮತ್ತು ಸಂಗ್ರಹಣೆಯನ್ನು ನಿಷೇಧಿಸುವ ಅಂತರರಾಷ್ಟ್ರೀಯ ಒಪ್ಪಂದವಾಗಿದೆ. ಕ್ಲಸ್ಟರ್ ಬಾಂಬ್‌ಗಳು ಒಂದು ರೀತಿಯ ಸ್ಫೋಟಕ ಆಯುಧವಾಗಿದ್ದು ಅದು ಒಂದು ಪ್ರದೇಶದ ಮೇಲೆ ಸಣ್ಣ ಸಣ್ಣ ಬಾಂಬ್‌ಗಳನ್ನು (“bomblets”) ಸುರಿಸುತ್ತದೆ.
- ಹೆಚ್ಚುವರಿಯಾಗಿ, ಕನ್ವೆನ್ಷನ್ ಅಡಿಯಲ್ಲಿ, ಬಲಿಪಶುಗಳಿಗೆ ಸಹಾಯ ಮಾಡಲು, ಕಲುಷಿತ ಸೈಟ್ಗಳನ್ನು ಸ್ವಚ್ಛಗೊಳಿಸಲು, ಅಪಾಯವನ್ನು ತಗ್ಗಿಸುವ ಮಾಹಿತಿಯನ್ನು ಒದಗಿಸಲು ಮತ್ತು ಬಾಂಬ್ಗಳನ್ನು ನಾಶಪಡಿಸುವಲ್ಲಿ ಸಹಾಯ ಮಾಡಲು ಚೌಕಟ್ಟನ್ನು ಸ್ಥಾಪಿಸಲಾಗಿದೆ.
- ಈ ಸಮಾವೇಶ/ಸಮ್ಮೇಳನವನ್ನು 30 ಮೇ 2008 ರಂದು ಡಬ್ಲಿನ್‌ನಲ್ಲಿ ಅಂಗೀಕರಿಸಲಾಯಿತು.
- ಇಲ್ಲಿಯವರೆಗೆ, ಸಮಾವೇಶವನ್ನು 110 ರಾಷ್ಟ್ರಗಳು ಅಳವಡಿಸಿಕೊಂಡಿವೆ ಮತ್ತು 13 ಇತರ ದೇಶಗಳು ಸಹಿ ಹಾಕಿವೆ ಆದರೆ ಇನ್ನೂ ಅನುಮೋದಿಸಿಲ್ಲ.
ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:
ಪಾಕ್ ಕೊಲ್ಲಿಯಲ್ಲಿ ಭಾರತದ ಮೊದಲ ಡುಗಾಂಗ್ ರಿಸರ್ವ್:
- ಡುಗಾಂಗ್ ಗಳ ಸಂರಕ್ಷಣೆಗಾಗಿ ಭಾರತದ ಮೊದಲ ‘ಡುಗಾಂಗ್ ಸಂರಕ್ಷಣ ಮೀಸಲು’ (Dugong conservation reserve) ಅನ್ನು ತಮಿಳುನಾಡು ಬಳಿಯ ‘ಪಾಕ್ ಬೇ’ ನಲ್ಲಿ ನಿರ್ಮಿಸಲಾಗುವುದು.
- ಪ್ರಾಣಿಗಳ ಸಂರಕ್ಷಣೆಗಾಗಿ, ಭಾರತ ಮತ್ತು ಶ್ರೀಲಂಕಾ ನಡುವೆ ‘ಮನ್ನಾರ್ ಗಲ್ಫ್’ ಮತ್ತು ‘ಪಾಕ್ ಕೊಲ್ಲಿಯಲ್ಲಿ’ ಸ್ಥಾಪಿಸಲಾಗುವುದು.
- ಈ ಮೀಸಲು ತಮಿಳುನಾಡಿನ ಆಗ್ನೇಯ ಕರಾವಳಿಯ ‘ಪಾಕ್ ಬೇ” ನಲ್ಲಿ 500 ಕಿಮೀ ಪ್ರದೇಶದಲ್ಲಿ ಹರಡುತ್ತದೆ.
- ಡುಗಾಂಗ್‌ಗಳು ಅಳಿವಿನ ಅಂಚಿನಲ್ಲಿವೆ ಮತ್ತು ಅವುಗಳ ಜನಸಂಖ್ಯೆಯು ‘ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ’ 100 ಕ್ಕಿಂತ ಕಡಿಮೆ ಉಳಿದಿದೆ.
- ‘ಮನ್ನಾರ್ ಗಲ್ಫ್’ ಮತ್ತು ‘ಗಲ್ಫ್ ಆಫ್ ಕಚ್’ ಎರಡರಲ್ಲೂ ಕಡಿಮೆ ಸಂಖ್ಯೆಯಲ್ಲಿ ಅವು ದಾಖಲಾಗಿವೆ.
ಡುಗಾಂಗ್ ಸಮುದ್ರ ಹಸು:
(Dugong: The sea cow)
- ಇದು ‘ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ’ ರಾಜ್ಯ ಪ್ರಾಣಿಯಾಗಿದೆ.
- ಡುಗಾಂಗ್ ಒಂದು ಸಮುದ್ರ ಪ್ರಾಣಿಯಾಗಿದ್ದು, ಇದನ್ನು ವಿಶ್ವ ಸಂರಕ್ಷಣಾ ಒಕ್ಕೂಟವು (IUCN) ಜಾಗತಿಕವಾಗಿ ‘ಅಳಿವಿನಂಚಿನಲ್ಲಿರುವ’ ಎಂದು ಪಟ್ಟಿ ಮಾಡಿದೆ.
- ಈ ಅಳಿವಿನಂಚಿನಲ್ಲಿರುವ ಸಮುದ್ರ ಪ್ರಭೇದವು ಸಮುದ್ರದ ಹುಲ್ಲು ಮತ್ತು ಪ್ರದೇಶದಲ್ಲಿ ಕಂಡುಬರುವ ಇತರ ಜಲಸಸ್ಯಗಳ ಮೇಲೆ ಬದುಕುಳಿಯುತ್ತದೆ.
- ಇದು ಏಕೈಕ ಸಸ್ಯಾಹಾರಿ ಸಮುದ್ರ ಸಸ್ತನಿ ಮತ್ತು ಡುಗೊಂಗಿಡೆ ಕುಟುಂಬದ ಏಕೈಕ ಅಸ್ತಿತ್ವದಲ್ಲಿರುವ ಪ್ರಜಾತಿಯಾಗಿದೆ.
- IUCN ಕೆಂಪು ಪಟ್ಟಿ: ಅಳಿವಿನಂಚಿನಲ್ಲಿರುವ ಪ್ರಬೇಧ.
ವಿಶ್ವಭಾರತಿ ವಿಶ್ವವಿದ್ಯಾಲಯ:
- ವಿಶ್ವಭಾರತಿ (Visva-Bharati) ಸಾರ್ವಜನಿಕ ಸಂಶೋಧನಾ ಕೇಂದ್ರೀಯ ವಿಶ್ವವಿದ್ಯಾಲಯ ಮತ್ತು ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಯಾಗಿದೆ. ಈ ವಿಶ್ವವಿದ್ಯಾಲಯವು ಭಾರತದ ಪಶ್ಚಿಮ ಬಂಗಾಳದ ಶಾಂತಿನಿಕೇತನದಲ್ಲಿದೆ.
- ಈ ವಿಶ್ವವಿದ್ಯಾನಿಲಯವನ್ನು ರವೀಂದ್ರನಾಥ ಟ್ಯಾಗೋರ್ ಅವರು ಸ್ಥಾಪಿಸಿದರು ಮತ್ತು ಅವರು ಅದಕ್ಕೆ ‘ವಿಶ್ವ-ಭಾರತಿ’ ಎಂದು ಹೆಸರಿಸಿದರು, ಅದರರ್ಥ ಭಾರತದೊಂದಿಗೆ ವಿಶ್ವದ ಒಕ್ಕೂಟ.
- ವಿಶ್ವ ಭಾರತಿಯನ್ನು 1951 ರಲ್ಲಿ ಸಂಸತ್ತಿನ ಕಾಯಿದೆಯ ಮೂಲಕ ‘ಕೇಂದ್ರೀಯ ವಿಶ್ವವಿದ್ಯಾಲಯ’ ಮತ್ತು ‘ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆ’ ಎಂದು ಘೋಷಿಸಲಾಯಿತು.
ಪ್ರತಿ ಏಷ್ಯಾಟಿಕ್ ಸಿಂಹಕ್ಕೆ ಪ್ರತ್ಯೇಕ ಗುರುತನ್ನು ನೀಡಲಿರುವ SIMBA:
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಆಧಾರಿತ ಫೋಟೋ-ರೆಕಗ್ನಿಷನ್ ಸಾಫ್ಟ್‌ವೇರ್ ಅನ್ನು ಗುಜರಾತ್ ಅರಣ್ಯ ಇಲಾಖೆ ಅಭಿವೃದ್ಧಿಪಡಿಸಿದೆ.
- ಈ ಸಾಫ್ಟ್‌ವೇರ್ ಅನ್ನು ‘ಏಷ್ಯಾಟಿಕ್ ಸಿಂಹಗಳನ್ನು ವೈಯಕ್ತಿಕವಾಗಿ ಗುರುತಿಸಲು ಮಾದರಿಗಳು/ಗುರುತುಗಳನ್ನು ಪ್ರತ್ಯೇಕಿಸಲು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.
- ಈ ಸಾಫ್ಟ್‌ವೇರ್‌ನ ಹೆಸರು ಸಿಂಬಾ ಅಂದರೆ ‘ಇಂಟೆಲಿಜೆನ್ಸ್ ಮಾರ್ಕಿಂಗ್ ಬೇಸ್ಡ್ ಐಡೆಂಟಿಫಿಕೇಶನ್ ಸಾಫ್ಟ್‌ವೇರ್ ಫಾರ್ ಏಷ್ಯಾಟಿಕ್ ಲಯನ್ಸ್’ ಎಂದಾಗಿದೆ.
- SIMBA ಆಳವಾದ ಯಂತ್ರ ಕಲಿಕೆ / ಮಶೀನ್ ಲರ್ನಿಂಗ್ ತಂತ್ರಜ್ಞಾನದೊಂದಿಗೆ ಕಾರ್ಯನಿರ್ವಹಿಸುತ್ತದೆ.ಈ ತಂತ್ರವು ಅಡ್ಡ-ಜೋಡಿ ಹೋಲಿಕೆಗಳಿಗಾಗಿ ‘ಪಾಯಿಂಟ್-ಪ್ಯಾಟರ್ನ್ ಮ್ಯಾಚಿಂಗ್’ ಅನ್ನು ನಿರ್ವಹಿಸುತ್ತದೆ ಮತ್ತು ಜೀವಿಗಳ ಮೀಸೆ ಕೂದಲಿನ ಗಮನಿಸಿದ ಮಾದರಿಯಲ್ಲಿ ವ್ಯತ್ಯಾಸವನ್ನು ಅನುಮತಿಸುತ್ತದೆ, ಮುಖದ ಮೇಲಿನ ಗುರುತುಗಳ ಉಪಸ್ಥಿತಿ, ಕಿವಿಗಳ ಮೇಲಿನ ಗುರುತುಗಳು ಮತ್ತು ಚಿತ್ರದ ಇತರ ಮೆಟಾಡೇಟಾ ಅನ್ನು ಸ್ವಯಂಚಾಲಿತವಾಗಿ ಬಹಿರಂಗಪಡಿಸುತ್ತದೆ.
- ಈ ಸಾಫ್ಟ್‌ವೇರ್ ಛಾಯಾಚಿತ್ರದಿಂದ ಯಾವುದೇ ನಿರ್ದಿಷ್ಟತೆಯನ್ನು ಹೊರತೆಗೆಯುತ್ತದೆ ಮತ್ತು ಗುಂಪಿನಲ್ಲಿ ಇದೇ ಮಾದರಿಗಳನ್ನು ಪ್ರದರ್ಶಿಸಬಹುದು.
ಏಷ್ಯಾಟಿಕ್ ಸಿಂಹವನ್ನು IUCN ಕೆಂಪು ಪಟ್ಟಿಯ ಅಡಿಯಲ್ಲಿ ‘ಅಳಿವಿನಂಚಿನಲ್ಲಿರುವ’ ಎಂದು ಪಟ್ಟಿ ಮಾಡಲಾಗಿದೆ.
[ad_2]