[ad_1]
ಪರಿವಿಡಿ:
ಸಾಮಾನ್ಯ ಅಧ್ಯಯನ ಪತ್ರಿಕೆ 2:
1. ಚುನಾವಣಾ ಆಯೋಗದ ನಿಷ್ಪಕ್ಷಪಾತತನದ ಕುರಿತ ಪ್ರಶ್ನೆ.
2. ಜಮ್ಮು ಮತ್ತು ಕಾಶ್ಮೀರ ಕ್ಷೇತ್ರ ಪುನರ್ವಿಂಗಡಣೆ / ಡಿಲಿಮಿಟೇಶನ್.
3. NDPS ಬಿಲ್.
4. 4 ಕಾರ್ಮಿಕ ಸಂಹಿತೆಗಳು.
5. ಭಾರತ ಮತ್ತು ತೈವಾನ್ ಸಂಬಂಧಗಳು.
ಸಾಮಾನ್ಯ ಅಧ್ಯಯನ ಪತ್ರಿಕೆ 3:
1. ಹಸಿರು ಜಲಜನಕ / ಗ್ರೀನ್ ಹೈಡ್ರೋಜನ್.
2. 2002 ರ ಜೈವಿಕ ವೈವಿಧ್ಯ ಕಾಯಿದೆಗೆ ಬದಲಾವಣೆಗಳು.
ಪೂರ್ವಭಾವಿ ಪರೀಕ್ಷೆಯ ಸಂಬಂಧಿಸಿದ ಸಂಗತಿಗಳು:
1. ಓಪನ್ ಆಕ್ರಿಯೇಜ್ ಪರವಾನಗಿ ನೀತಿ.
ಸಾಮಾನ್ಯ ಅಧ್ಯಯನ ಪತ್ರಿಕೆ : 2
ವಿಷಯಗಳು: ವಿವಿಧ ಸಾಂವಿಧಾನಿಕ ಹುದ್ದೆಗಳಿಗೆ ನೇಮಕಾತಿ,ವಿವಿಧ ಸಾಂವಿಧಾನಿಕ ಸಂಸ್ಥೆಗಳ ಅಧಿಕಾರಗಳು, ಕಾರ್ಯಗಳು ಮತ್ತು ಜವಾಬ್ದಾರಿಗಳು.
ಚುನಾವಣಾ ಆಯೋಗದ ನಿಷ್ಪಕ್ಷಪಾತತನದ ಕುರಿತ ಪ್ರಶ್ನೆ:
(Questioning the impartiality of the Election Commission)
ಸಂದರ್ಭ:
ಮುಖ್ಯ ಚುನಾವಣಾ ಆಯುಕ್ತ (Chief Election Commissioner – CEC) ಸುಶೀಲ್ ಚಂದ್ರ ಮತ್ತು ಚುನಾವಣಾ ಆಯುಕ್ತರಾದ ರಾಜೀವ್ ಕುಮಾರ್ ಮತ್ತು ಅನುಪ್ ಚಂದ್ರ ಪಾಂಡೆ ಅವರು ಪ್ರಧಾನ ಮಂತ್ರಿ ಕಚೇರಿ (Prime Minister’s Office -PMO) ಕರೆದ ಆನ್‌ಲೈನ್ ಸಂವಾದದಲ್ಲಿ ಭಾಗವಹಿಸಿದ ನಂತರ ಐದು ರಾಜ್ಯಗಳಲ್ಲಿ ಮುಂಬರುವ ಚುನಾವಣೆಗಳ ನಿಷ್ಪಕ್ಷಪಾತತೆಯನ್ನು ಪ್ರತಿಪಕ್ಷಗಳು ಪ್ರಶ್ನಿಸಿವೆ.
ಚುನಾವಣಾ ಆಯೋಗವು ಒಂದು ಸ್ವತಂತ್ರ ಸಂಸ್ಥೆಯಾಗಿರುವುದರಿಂದ PMO ಇಂತಹ ಸಂವಾದಗಳಿಗೆ ‘ಚುನಾವಣಾ ಆಯೋಗ’ ವನ್ನು ಕರೆಯುವಂತಿಲ್ಲ ಎಂದು ವಿಮರ್ಶಕರು ಹೇಳಿದ್ದಾರೆ.
ಕೇಂದ್ರ ಹೇಳಿದ್ದೇನು?
ಚುನಾವಣಾ ಆಯೋಗದ ಆಡಳಿತಾತ್ಮಕ ಸಚಿವಾಲಯವಾದ ಕಾನೂನು ಸಚಿವಾಲಯವು ಚುನಾವಣಾ ಸುಧಾರಣೆಗಳ ಕುರಿತು ಚರ್ಚಿಸಲು ಸಭೆ ಕರೆಯಲಾಗಿದೆ ಎಂದು ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಅಲ್ಲದೆ, ಸಭೆಯು “ಅನೌಪಚಾರಿಕ ಸಂವಾದ” ವಾಗಿತ್ತು ಎಂದು ಸಹ ಸಚಿವಾಲಯ ಹೇಳಿಕೊಂಡಿದೆ.
ಏನಿದು ಪ್ರಕರಣ?
- PMO ದ “ನಿರ್ದೇಶನ” ವು ಆಯೋಗದ ಸ್ವತಂತ್ರ ಕಾರ್ಯನಿರ್ವಹಣೆಯ ಬಗ್ಗೆ ಕಳವಳವನ್ನು ಉಂಟುಮಾಡಿದೆ, ಅದರ ಸ್ವಾಯತ್ತತೆಯನ್ನು ರಕ್ಷಿಸಲು ಪ್ರತಿಯೊಬ್ಬ ಮುಖ್ಯ ಚುನಾವಣಾ ಆಯುಕ್ತರು ಗಳು ಉತ್ಸಾಹದಿಂದ ಪ್ರಯತ್ನಿಸಿದ್ದಾರೆ.
- ಈ“ಅನೌಪಚಾರಿಕ ಸಂವಹನ”ವು ಆಯೋಗದ ತಟಸ್ಥತೆಯ ಅಥವಾ ನಿಷ್ಪಕ್ಷಪಾತದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ, ವಿಶೇಷವಾಗಿ ಪ್ರಮುಖ ರಾಜ್ಯಗಳಿಗೆ ಚುನಾವಣೆಗಳು ಅತೀ ಹತ್ತಿರದಲ್ಲಿರುವಾಗ.
ಸಂವಿಧಾನದಲ್ಲಿ ಚುನಾವಣಾ ಆಯೋಗದ ಜವಾಬ್ದಾರಿಗಳು ಮತ್ತು ಅಧಿಕಾರಗಳು:
ಚುನಾವಣಾ ಆಯೋಗವು ಸಾಂವಿಧಾನಿಕ ಪ್ರಾಧಿಕಾರವಾಗಿದೆ, ಚುನಾವಣಾ ಆಯೋಗದ ಜವಾಬ್ದಾರಿಗಳು ಮತ್ತು ಅಧಿಕಾರಗಳನ್ನು ಸಂವಿಧಾನದ 324 ನೇ ವಿಧಿಯ ಅಡಿಯಲ್ಲಿ ತಿಳಿಸಲಾಗಿದೆ.
- ಚುನಾವಣಾ ಆಯೋಗವು ಕಾರ್ಯಾಂಗದ ಹಸ್ತಕ್ಷೇಪದಿಂದ ಮುಕ್ತವಾಗಿದೆ.
- ಚುನಾವಣೆಗಳನ್ನು ನಡೆಸಲು– ಸಾರ್ವತ್ರಿಕ ಚುನಾವಣೆಗಳೆ ಇರಲಿ ಅಥವಾ ಉಪ ಚುನಾವಣೆಗಳೆ ಇರಲಿ ಚುನಾವಣಾ ಆಯೋಗವು ಚುನಾವಣಾ ವೇಳಾಪಟ್ಟಿಯನ್ನು ನಿರ್ಧರಿಸುತ್ತದೆ .
- ಚುನಾವಣಾ ಆಯೋಗವು ಸ್ವತಃ ಮತದಾನ ಕೇಂದ್ರಗಳ ಸ್ಥಳ, ಮತದಾರರಿಗೆ ಮತಗಟ್ಟೆಗಳ ಹಂಚಿಕೆ, ಮತ ಎಣಿಕೆ ಕೇಂದ್ರಗಳ ಸ್ಥಳ, ಮತಗಟ್ಟೆಗಳು ಮತ್ತು ಮತ ಎಣಿಕೆ ಕೇಂದ್ರಗಳ ಸುತ್ತಮುತ್ತಲಿನ ವ್ಯವಸ್ಥೆಗಳು ಮತ್ತು ಎಲ್ಲಾ ಸಂಬಂಧಿತ ವಿಷಯಗಳನ್ನು ನಿರ್ಧರಿಸುತ್ತದೆ.
- ಚುನಾವಣಾ ಆಯೋಗದ ನಿರ್ಧಾರಗಳನ್ನು ಸೂಕ್ತ ಅರ್ಜಿಗಳ ಮೂಲಕ ಭಾರತದ ಉಚ್ಚ ನ್ಯಾಯಾಲಯಗಳು ಮತ್ತು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಬಹುದು.
- ದೀರ್ಘಕಾಲದ ಸಂಪ್ರದಾಯ ಮತ್ತು ಅನೇಕ ನ್ಯಾಯಾಂಗ ನಿರ್ಧಾರಗಳ ಪ್ರಕಾರ, ಚುನಾವಣೆಯ ನಿಜವಾದ ಪ್ರಕ್ರಿಯೆ ಪ್ರಾರಂಭವಾದ ನಂತರ, ನ್ಯಾಯಾಂಗವು ಚುನಾವಣೆಗಳ ನೈಜ ನಡವಳಿಕೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಅಥವಾ ಮಧ್ಯ ಪ್ರವೇಶಿಸುವುದಿಲ್ಲ.
ಚುನಾವಣಾ ಆಯೋಗ ಮತ್ತು ಸರ್ಕಾರದ ನಡುವಿನ ಸಂವಹನ:
- ಚುನಾವಣಾ ಆಯೋಗವು ಸರ್ಕಾರದೊಂದಿಗೆ (ಅದರ ಆಡಳಿತಾತ್ಮಕ ಸಚಿವಾಲಯ ಅಂದರೆ ‘ಕಾನೂನು ಸಚಿವಾಲಯ’ ಅಥವಾ ‘ಗೃಹ ವ್ಯವಹಾರಗಳ ಸಚಿವಾಲಯ’) ಚುನಾವಣಾ ಸಂಬಂಧಿತ ವಿಷಯಗಳ ಬಗ್ಗೆ, ಚುನಾವಣಾ ಸಮಯದಲ್ಲಿ ಭದ್ರತಾ ಪಡೆಗಳ ನಿಯೋಜನೆಗಾಗಿ ಅಧಿಕಾರಶಾಹಿಯ ಮೂಲಕ ಸಂವಹನ (Communication) ನಡೆಸುತ್ತದೆ.
- ಅಂತಹ ಸಂದರ್ಭಗಳಲ್ಲಿ, ಸಾಮಾನ್ಯವಾಗಿ ಗೃಹ ಕಾರ್ಯದರ್ಶಿಯನ್ನು ‘ಪೂರ್ಣ ಆಯೋಗ’ದ ಮುಂದೆ ಆಹ್ವಾನಿಸಲಾಗುತ್ತದೆ, ಅದರಲ್ಲಿ ಎಲ್ಲಾ ಮೂರು ಚುನಾವಣಾ ಆಯುಕ್ತರು ಉಪಸ್ಥಿತರಿರುತ್ತಾರೆ.
- ದೇಶದ ಕಾನೂನಿನ ವಿಶಿಷ್ಟತೆಗಳನ್ನು ಕಾನೂನು ಸಚಿವಾಲಯ ಸ್ಪಷ್ಟಪಡಿಸಿದೆ,ಮತ್ತು ಚುನಾವಣಾ ಆಯೋಗದ ಸ್ವಾಯತ್ತತೆಯನ್ನು ಖಚಿತಪಡಿಸಿಕೊಳ್ಳಲು ಅದು ಒದಗಿಸಿದ ಸಾಂವಿಧಾನಿಕ ಸುರಕ್ಷತೆಗಳನ್ನು ಉಲ್ಲಂಘಿಸುವುದಿಲ್ಲ ಎಂದು ಸಚಿವಾಲಯವು ಖಚಿತಪಡಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.
ಇತ್ತೀಚಿನ ಈ ರೀತಿಯ ಘಟನೆಗಳು:
- 2019 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ, ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ನೇತೃತ್ವದ ಚುನಾವಣಾ ಆಯೋಗವು ಪ್ರಕರಣವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಕ್ಲೀನ್ ಚಿಟ್ ನೀಡಿತು. ಇದರಲ್ಲಿ ಲಾತೂರ್‌ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಮಂತ್ರಿಯವರು ಸಶಸ್ತ್ರ ಪಡೆಗಳ ಪರವಾಗಿ ಒಂದು ಮನವಿಯೊಂದಿಗೆ ತಮ್ಮ ಪ್ರಚಾರವನ್ನು ಉಲ್ಲೇಖಿಸಿದ್ದರು.
- 2019ರ ಲೋಕಸಭೆ ಚುನಾವಣೆಯಲ್ಲೂ ಹಲವು ಬಾರಿ ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ.
- ಈ ವರ್ಷ, ಕೋವಿಡ್ 19 ತೀವ್ರ ಸಾಂಕ್ರಾಮಿಕದ ಮಧ್ಯೆ ಚುನಾವಣಾ ಪ್ರಚಾರಗಳನ್ನು ನಿಷೇಧಿಸುವ ಕುರಿತ ಆಯೋಗದ ವಿಳಂಬ ನಿರ್ಧಾರದ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಲಾಗಿದೆ.
ವಿಷಯಗಳು:ಭಾರತದ ಸಂವಿಧಾನ- ಐತಿಹಾಸಿಕ ಆಧಾರಗಳು, ವಿಕಸನ, ವೈಶಿಷ್ಟ್ಯಗಳು, ತಿದ್ದುಪಡಿಗಳು, ಮಹತ್ವದ ನಿಬಂಧನೆಗಳು ಮತ್ತು ಮೂಲ ರಚನೆ.
ಜಮ್ಮು ಮತ್ತು ಕಾಶ್ಮೀರ ಕ್ಷೇತ್ರ ಪುನರ್ವಿಂಗಡಣೆ / ಡಿಲಿಮಿಟೇಶನ್:
(Jammu and Kashmir Delimitation Commission)
ಸಂದರ್ಭ:
ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ಅವರ ಅಧ್ಯಕ್ಷತೆಯಲ್ಲಿ ರಚಿಸಲಾದ ‘ಜಮ್ಮು ಮತ್ತು ಕಾಶ್ಮೀರ ಕ್ಷೇತ್ರ ಪುನರ್ವಿಂಗಡಣೆ ಆಯೋಗ’ (Jammu and Kashmir Delimitation Commission) ವು ಈ ಕೆಳಗಿನ ಶಿಫಾರಸ್ಸುಗಳನ್ನು ಮಾಡಿದೆ.
- ಜಮ್ಮು ವಿಭಾಗಕ್ಕೆ ಆರು ಮತ್ತು ಕಾಶ್ಮೀರ ವಿಭಾಗಕ್ಕೆ ಒಂದು ಸ್ಥಾನವನ್ನು ಹೆಚ್ಚಿಸಬೇಕು.
- 16 ಸ್ಥಾನಗಳನ್ನು ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್‌ಟಿ) ಸಮುದಾಯಗಳಿಗೆ ಮೀಸಲಿಡಬೇಕು.
ಪರಿಣಾಮಗಳು:
ಇನ್ನು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಸದಸ್ಯರ ಸಂಖ್ಯೆ 90 ಆಗಲಿದೆ. ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸಾಂವಿಧಾನಿಕ ಸ್ಥಾನಮಾನವನ್ನು ರದ್ದುಗೊಳಿಸುವ ಮೊದಲು, ರಾಜ್ಯ ವಿಧಾನಸಭೆಯು 87 ಸದಸ್ಯರನ್ನು ಹೊಂದಿತ್ತು.
ಈ ಶಿಫಾರಸುಗಳಿಗೆ ಆಧಾರ:
‘ಜಮ್ಮು ಮತ್ತು ಕಾಶ್ಮೀರ ಕ್ಷೇತ್ರ ಪುನರ್ ವಿಂಗಡಣೆ ಆಯೋಗ’ದ ಪ್ರಕಾರ, ಇದರ ಅಂತಿಮ ವರದಿಯನ್ನು 2011 ರ ಜನಗಣತಿಯ ಆಧಾರದ ಮೇಲೆ ಸಿದ್ಧಪಡಿಸಲಾಗುವುದು ಮತ್ತು ವರದಿಯು ಭೌಗೋಳಿಕ ಸ್ಥಳ, ದುರ್ಗಮ ಪ್ರದೇಶಗಳು ಮತ್ತು ಸಂವಹನ ವಿಧಾನಗಳು ಮತ್ತು ಪ್ರಸ್ತುತ ನಡೆಯುತ್ತಿರುವ ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆ(Delimitation Exercise)ಗೆ ಲಭ್ಯವಿರುವ ಸೌಲಭ್ಯಗಳನ್ನು ಸಹ ಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದೆ.
ಜಮ್ಮು ಮತ್ತು ಕಾಶ್ಮೀರ ಕ್ಷೇತ್ರ ಪುನರ್ ವಿಂಗಡಣೆ ಘಟನಾ ಕ್ರಮಗಳು:
- ಜಮ್ಮು ಮತ್ತು ಕಾಶ್ಮೀರದಲ್ಲಿ ಮೊದಲ ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆಯನ್ನು 1951 ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಸಮಿತಿಯು ಕಾರ್ಯಗತಗೊಳಿಸಿತು,ಮತ್ತು ಇದರ ಅಡಿಯಲ್ಲಿ, ಅಂದಿನ ರಾಜ್ಯವನ್ನು 25 ವಿಧಾನಸಭಾ ಕ್ಷೇತ್ರಗಳಾಗಿ ವಿಂಗಡಿಸಲಾಗಿತ್ತು.
- ಅದರ ನಂತರ, 1981 ರಲ್ಲಿ ಮೊದಲ ಬಾರಿಗೆ ಪೂರ್ಣ ಡಿಲಿಮಿಟೇಶನ್ ಆಯೋಗವನ್ನು (Delimitation Commission) ರಚಿಸಲಾಯಿತು ಮತ್ತು ಈ ಆಯೋಗವು 1981 ರ ಜನಗಣತಿಯ ಆಧಾರದ ಮೇಲೆ 1995 ರಲ್ಲಿ ತನ್ನ ಶಿಫಾರಸುಗಳನ್ನು ಸಲ್ಲಿಸಿತು. ಅಂದಿನಿಂದ, ರಾಜ್ಯದಲ್ಲಿ ಯಾವುದೇ ಡಿಲಿಮಿಟೇಶನ್ ಪ್ರಕ್ರಿಯೆಯನ್ನು ನಡೆಸಲಾಗಿಲ್ಲ.
- 2011 ರ ಜನಗಣತಿಯ ಆಧಾರದ ಮೇಲೆ ಕ್ಷೇತ್ರ ಪುನರ್ವಿಂಗಡಣೆ ಮಾಡಲು 2020 ರಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ‘ಕ್ಷೇತ್ರ ಪುನರ್ ವಿಂಗಡಣೆ ಆಯೋಗ’ವನ್ನು ರಚಿಸಲಾಯಿತು. ಈ ಆಯೋಗಕ್ಕೆ ಕೇಂದ್ರಾಡಳಿತ ಪ್ರದೇಶದಲ್ಲಿ ಇನ್ನೂ ಏಳು ಸ್ಥಾನಗಳನ್ನು ಸೇರಿಸಲು ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳಿಗೆ ಮೀಸಲಾತಿ ನೀಡಲು ಆದೇಶಿಸಲಾಯಿತು.
- ಹೊಸ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯ ನಂತರ, ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟು ಸೀಟುಗಳ ಸಂಖ್ಯೆಯನ್ನು 83 ರಿಂದ 90 ಕ್ಕೆ ಹೆಚ್ಚಿಸಲಾಗುವುದು. ಈ ಸ್ಥಾನಗಳು ‘ಪಾಕಿಸ್ತಾನ ಆಕ್ರಮಿತ ಕಾಶ್ಮೀರ’ (PoK) ಕ್ಕಾಗಿ ಕಾಯ್ದಿರಿಸಲಾದ 24 ಸ್ಥಾನಗಳಿಗೆ ಹೆಚ್ಚುವರಿಯಾಗಿರುತ್ತವೆ ಮತ್ತು ಈ ಸ್ಥಾನಗಳನ್ನು ವಿಧಾನಸಭೆಯಲ್ಲಿ ಖಾಲಿ ಇಡಲಾಗುತ್ತದೆ.
‘ಡಿಲಿಮಿಟೇಶನ್’/ ಕ್ಷೇತ್ರ ಪುನರ್ವಿಂಗಡಣೆ ಎಂದರೇನು? ಅದು ಏಕೆ ಅಗತ್ಯವಾಗಿದೆ?
‘ಡಿಲಿಮಿಟೇಶನ್’ (Delimitation) ಎಂದರೆ, ‘ಶಾಸಕಾಂಗವನ್ನು ಹೊಂದಿರುವ ರಾಜ್ಯದಲ್ಲಿ ಪ್ರಾದೇಶಿಕ ಕ್ಷೇತ್ರಗಳ ಮಿತಿಗಳನ್ನು (boundaries of territorial constituencies) ಅಥವಾ ಗಡಿಗಳನ್ನು ನಿಗದಿಪಡಿಸುವ ಪ್ರಕ್ರಿಯೆಯಾಗಿದೆ.
- ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯ್ದೆ 2019 ರ ನಿಬಂಧನೆಗಳ ಪ್ರಕಾರ, ಕೇಂದ್ರಾಡಳಿತ ಪ್ರದೇಶದ ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರಗಳನ್ನು ಮರು ರೂಪಿಸಲು ಜಮ್ಮು ಮತ್ತು ಕಾಶ್ಮೀರ ಡಿಲಿಮಿಟೇಶನ್ / ಕ್ಷೇತ್ರ ಪುನರ್ವಿಂಗಡಣೆ ಆಯೋಗವನ್ನು ಕೇಂದ್ರ ಸರ್ಕಾರ ಕಳೆದ ವರ್ಷ ಮಾರ್ಚ್ 6 ರಂದು ರಚಿಸಿತು.
- ‘ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯ್ದೆ’, 2019 ರ ಮೂಲಕ ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಲಾಗಿದೆ.
ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯನ್ನು ಯಾರು ನಿರ್ವಹಿಸುತ್ತಾರೆ?
ಡಿಲಿಮಿಟೇಶನ್ ಪ್ರಕ್ರಿಯೆಯನ್ನು ಹೆಚ್ಚು ಅಧಿಕಾರ ಹೊಂದಿರುವ ಆಯೋಗವು ಕೈಗೊಳ್ಳುತ್ತದೆ.
ಈ ಆಯೋಗವನ್ನು ಔಪಚಾರಿಕವಾಗಿ ಕ್ಷೇತ್ರ ಪುನರ್ವಿಂಗಡಣೆ ಆಯೋಗ (Delimitation Commission) ಅಥವಾ ಬೌಂಡರಿ ಕಮಿಷನ್ (Boundary Commission) ಎಂದು ಕರೆಯಲಾಗುತ್ತದೆ.
ಡಿಲಿಮಿಟೇಶನ್ ಆಯೋಗದ ಆದೇಶಗಳು ಕಾನೂನಿನಂತೆಯೇ ಅಧಿಕಾರವನ್ನು ಹೊಂದಿವೆ, ಮತ್ತು ಅದನ್ನು ಯಾವುದೇ ನ್ಯಾಯಾಲಯದ ಮುಂದೆ ಪ್ರಶ್ನಿಸಲಾಗುವುದಿಲ್ಲ.
ಈ ಆಯೋಗದ ಸಂರಚನೆ:
‘ಡಿಲಿಮಿಟೇಶನ್ ಕಮಿಷನ್ ಆಕ್ಟ್’, 2002 ರ ಪ್ರಕಾರ, ಕೇಂದ್ರವು ನೇಮಿಸಿದ ಕ್ಷೇತ್ರ ಪುನರ್ವಿಂಗಡಣೆ ಆಯೋಗವು ಮೂವರು ಸದಸ್ಯರನ್ನು ಒಳಗೊಂಡಿದೆ: ಇದರಲ್ಲಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸುತ್ತಿರುವ ಅಥವಾ ನಿವೃತ್ತರಾದ ನ್ಯಾಯಾಧೀಶರು ಮತ್ತು ಮುಖ್ಯ ಚುನಾವಣಾ ಆಯುಕ್ತರು,* ಅಥವಾ ಮುಖ್ಯ ಚುನಾವಣಾ ಆಯುಕ್ತರು ನಾಮನಿರ್ದೇಶನ ಮಾಡಿದ ಚುನಾವಣಾ ಆಯುಕ್ತರು ಮತ್ತು* ಎಕ್ಸ್ ಆಫೀಸಿಯೊ ಸದಸ್ಯರಾಗಿ ನಾಮನಿರ್ದೇಶನ ಗೊಂಡಿರುವ ರಾಜ್ಯ ಚುನಾವಣಾ ಆಯುಕ್ತರು.
ಸಾಂವಿಧಾನಿಕ ನಿಬಂಧನೆಗಳು:
- ಸಂವಿಧಾನದ 82 ನೇ ವಿಧಿಯ ಪ್ರಕಾರ, ಪ್ರತಿ ಜನಗಣತಿಯ ನಂತರ ಭಾರತದ ಸಂಸತ್ತು ‘ಕ್ಷೇತ್ರ ಪುನರ್ ವಿಂಗಡನಾ ಕಾಯ್ದೆ’ಯನ್ನು ಜಾರಿಗೊಳಿಸುತ್ತದೆ.
- ಆರ್ಟಿಕಲ್ 170 ರ ಅಡಿಯಲ್ಲಿ, ಪ್ರತಿ ಜನಗಣತಿಯ ನಂತರ, ಕ್ಷೇತ್ರ ಪುನರ್ ವಿಂಗಡನಾ ಕಾಯ್ದೆ ಪ್ರಕಾರ ರಾಜ್ಯಗಳನ್ನು ಪ್ರಾದೇಶಿಕ ಕ್ಷೇತ್ರಗಳಾಗಿ ವಿಂಗಡಿಸಲಾಗುತ್ತದೆ.
ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.
NDPS ಮಸೂದೆ, 2021:
(NDPS Bill, 2021)
ಸಂದರ್ಭ:
ಇತ್ತೀಚೆಗೆ,‘ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟಾನ್ಸ್ (ತಿದ್ದುಪಡಿ) ಮಸೂದೆ’ 2021 / (Narcotic Drugs and Psychotropic Substances (Amendment) Bill, 2021) ಅನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಯಿತು.
- ಈ ತಿದ್ದುಪಡಿ ಮಸೂದೆಯು ಈ ವರ್ಷ ಸೆಪ್ಟೆಂಬರ್ 30 ರಂದು ಘೋಷಿಸಲಾದ ಸುಗ್ರೀವಾಜ್ಞೆಯನ್ನು ಬದಲಿಸಲು ಪ್ರಯತ್ನಿಸುತ್ತದೆ.
ಮಸೂದೆಯ ಉದ್ದೇಶ:
ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟನ್ಸ್ ಆಕ್ಟ್ (ಎನ್‌ಡಿಪಿಎಸ್) ಸೆಕ್ಷನ್ 27 ರ ನಿಬಂಧನೆಯಲ್ಲಿ ಕಂಡುಬಂದ ದೋಷವನ್ನು ಸರಿಪಡಿಸಲು ಸರ್ಕಾರವು ಮಸೂದೆಯನ್ನು ಪರಿಚಯಿಸಿದೆ. ಈ ದೋಷದಿಂದಾಗಿ, ಅಕ್ರಮ ಕಳ್ಳಸಾಗಣೆಗೆ ಹಣಕಾಸು ಒದಗಿಸಿದವರಿಗೆ ದಂಡ ವಿಧಿಸಲು ಕಾಯಿದೆಯ ಸೆಕ್ಷನ್ 27 ರ ನಿಬಂಧನೆಯು ನಿಷ್ಪರಿಣಾಮಕಾರಿಯಾಗುತ್ತಿತ್ತು.
- 2014 ರಲ್ಲಿ, ವೈದ್ಯಕೀಯ ಅಗತ್ಯಗಳಿಗಾಗಿ ‘ನಾರ್ಕೋಟಿಕ್ ಡ್ರಗ್ಸ್’/ ‘ನಾರ್ಕೋಟಿಕ್ಸ್’ ಬಳಕೆಯನ್ನು ಸುಲಭಗೊಳಿಸುವ ಸಂಬಂಧ ‘ಕಾಯ್ದೆ’ಗೆ ತಿದ್ದುಪಡಿ ಮಾಡಲಾಗಿತ್ತು, ಆದರೆ ಅದಕ್ಕೆ ಅನುಗುಣವಾಗಿ ದಂಡದ ನಿಬಂಧನೆಯನ್ನು ತಿದ್ದುಪಡಿ ಮಾಡದ ಕಾರಣ ಈ ‘ದೋಷ’ ಉದ್ಭವಿಸಿದೆ.
- ಜೂನ್ 2021 ರಲ್ಲಿ, ತ್ರಿಪುರಾ ಹೈಕೋರ್ಟ್, ಕಾನೂನಿನ ಪರಿಶೀಲನೆಯ ನಂತರ, ಈ ದೋಷವನ್ನು ಪತ್ತೆ ಮಾಡಿತು ಮತ್ತು ಕಾಯಿದೆಯ ಸೆಕ್ಷನ್ 27 ರ ನಿಬಂಧನೆಗಳನ್ನು ತಿದ್ದುಪಡಿ ಮಾಡಲು ಕೇಂದ್ರ ಗೃಹ ಸಚಿವಾಲಯಕ್ಕೆ ನಿರ್ದೇಶನ ನೀಡಿತು.
ಈ ತಿದ್ದುಪಡಿಯ ಅವಶ್ಯಕತೆ:
‘ಸೆಕ್ಷನ್ 27ಎ’ ‘ಖಾಲಿ ಪಟ್ಟಿ’ (blank list) ಸಂಬಂಧಿಸಿರುವುದರಿಂದ, ತನ್ನ ವಿರುದ್ಧ ಅಪರಾಧದ ಆರೋಪ ಹೊರಿಸಲಾಗದು ಎಂದು ಆರೋಪಿಯೊಬ್ಬರು ತ್ರಿಪುರಾದ ವಿಶೇಷ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದಾಗ ಕಾಯ್ದೆಯ ಕರಡಿನಲ್ಲಿರುವ ಈ ದೋಷ ಬೆಳಕಿಗೆ ಬಂದಿದೆ. ನಂತರ ತ್ರಿಪುರಾ ಹೈಕೋರ್ಟ್, ಕಾನೂನನ್ನು ತಿದ್ದುಪಡಿ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು.
NDPS ಕಾಯಿದೆಯ ಸೆಕ್ಷನ್ 27 ರಲ್ಲಿ ದೋಷ:
2014 ರಲ್ಲಿ ನಾರ್ಕೋಟಿಕ್ ಡ್ರಗ್ಸ್ (Narcotic Drugs) ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ (NDPS) ಕಾಯಿದೆಗೆ ತಿದ್ದುಪಡಿಯನ್ನು ಮಾಡಲಾಗಿದ್ದು, ‘ನಾರ್ಕೋಟಿಕ್ ಡ್ರಗ್ಸ್’ಗೆ ಉತ್ತಮ ವೈದ್ಯಕೀಯ ಪ್ರವೇಶವನ್ನು ಅನುಮತಿಸಲಾಗಿದೆ, ಇದರ ಅಡಿಯಲ್ಲಿ “ಅಗತ್ಯ ಮಾದಕ ದ್ರವ್ಯಗಳ” ಸಾಗಣೆ ಮತ್ತು ಪರವಾನಗಿಯಲ್ಲಿ ರಾಜ್ಯ ವಿಧಿಸಿದ ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ. ಈ ತಿದ್ದುಪಡಿಯ ಕರಡಿನಲ್ಲಿ ಅಸಂಗತತೆಯನ್ನು ಸಹ ಸೇರಿಕೊಂಡಿತು.
- 2014 ರ ತಿದ್ದುಪಡಿಯ ಮೊದಲು, ಕಾಯಿದೆಯ ವಿಭಾಗ 2 ರ ಷರತ್ತುಗಳು (viiia) ಉಪ-ವಿಭಾಗಗಳು (i) ನಿಂದ (v) ರ ವರೆಗೆ ಒಳಗೊಂಡಿತ್ತು, ಇದರಲ್ಲಿ ‘ಅಕ್ರಮ ಸಂಚಾರ’ ಎಂಬ ಪದವನ್ನು ವ್ಯಾಖ್ಯಾನಿಸಲಾಗಿದೆ.
- ಈ ಷರತ್ತನ್ನು ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟಾನ್ಸ್ (ತಿದ್ದುಪಡಿ) ಕಾಯಿದೆ, 2014 ಮೂಲಕ ಷರತ್ತು (viiib) ಆಗಿ ಬದಲಿಸಲಾಗಿದೆ.ಏಕೆಂದರೆ “ಅಗತ್ಯ ಮಾದಕ ದ್ರವ್ಯಗಳನ್ನು” ವ್ಯಾಖ್ಯಾನಿಸುವ ಕಾಯಿದೆಯ ವಿಭಾಗ 2 ರಲ್ಲಿ ಹೊಸ ಷರತ್ತು (viiia) ಅನ್ನು ಸೇರಿಸಲಾಗಿದೆ. ಆದಾಗ್ಯೂ, ಅಜಾಗರೂಕತೆಯಿಂದಾಗಿ, NDPS ಕಾಯಿದೆಯ ಸೆಕ್ಷನ್ 27A ಅನ್ನು ಈ ಪರಿಣಾಮದ ಬದಲಾವಣೆಗೆ ಸರಿಹೊಂದುವಂತೆ ತಿದ್ದುಪಡಿ ಮಾಡಲಾಗಿಲ್ಲ.
ಮಸೂದೆಯ ಬಗ್ಗೆ ಟೀಕೆಗಳು:
ಮಸೂದೆಯಲ್ಲಿ, 2014 ರಿಂದ ಮಾಡಿದ ಅಪರಾಧಗಳ ಮೇಲೆ ‘ಹಿಂದಿನ ಪರಿಣಾಮ’ದೊಂದಿಗೆ ಸಂಬಂಧಿತ ನಿಬಂಧನೆಯನ್ನು ಅನ್ವಯಿಸಲು ಪ್ರಸ್ತಾಪಿಸಲಾಗಿದೆ, ಆದ್ದರಿಂದ ಇದು ನಾಗರಿಕರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಕೆಲವು ತಜ್ಞರು ಹೇಳುತ್ತಾರೆ.
ಈ ಕಾನೂನು ಅನುಚ್ಛೇದ 21 ರಲ್ಲಿ ಒದಗಿಸಲಾದ ಮೂಲಭೂತ ಹಕ್ಕುಗಳನ್ನು ಸಹ ಉಲ್ಲಂಘಿಸುತ್ತದೆ, ಏಕೆಂದರೆ ಅಪರಾಧವು ಘಟಿಸಿದ ಸಮಯದಲ್ಲಿ ಅಸ್ತಿತ್ವದಲ್ಲಿದ್ದ ಕಾನೂನಿಗೆ ಅನುಗುಣವಾಗಿ ಮಾತ್ರ ಒಬ್ಬ ವ್ಯಕ್ತಿಯನ್ನು ಶಿಕ್ಷಿಸಬಹುದು.
ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ ಆಕ್ಟ್ / NDPS ಕಾಯ್ದೆ:
- ‘NDPS ಕಾಯಿದೆ’ಯ(NDPS Act) ಅಡಿಯಲ್ಲಿ, ಒಬ್ಬ ವ್ಯಕ್ತಿಯು, ಯಾವುದೇ ‘ನಾರ್ಕೋಟಿಕ್ ಡ್ರಗ್’ (narcotic Drug) ಅಥವಾ ‘ಸೈಕೋಟ್ರೋಪಿಕ್ ಸಬ್ಸ್ಟೆನ್ಸ್’(Psychotropic Substance) ಅನ್ನು ಉತ್ಪಾದಿಸುವುದು, ಹೊಂದುವುದು, ಮಾರಾಟ ಮಾಡುವುದು, ಖರೀದಿಸುವುದು, ಸಾಗಿಸುವುದು, ಸಂಗ್ರಹಿಸುವುದು ಮತ್ತು/ಅಥವಾ ಸೇವಿಸುವುದನ್ನು ನಿಷೇಧಿಸಲಾಗಿದೆ.
- NDPS ಕಾಯಿದೆ, 1985 ಅನ್ನು 1988, 2001 ಮತ್ತು 2014 ರಲ್ಲಿ ಇಲ್ಲಿಯವರೆಗೆ ಮೂರು ಬಾರಿ ತಿದ್ದುಪಡಿ ಮಾಡಲಾಗಿದೆ.
- ಈ ಕಾಯಿದೆಯು ಭಾರತದಾದ್ಯಂತ ಅನ್ವಯಿಸುತ್ತದೆ ಮತ್ತು ಭಾರತದ ಹೊರಗಿನ ಎಲ್ಲಾ ಭಾರತೀಯ ನಾಗರಿಕರಿಗೆ ಮತ್ತು ಭಾರತದಲ್ಲಿ ನೋಂದಾಯಿಸಲಾದ ಹಡಗುಗಳು ಮತ್ತು ವಿಮಾನದಲ್ಲಿರುವ ಎಲ್ಲ ವ್ಯಕ್ತಿಗಳಿಗೂ ಅನ್ವಯಿಸುತ್ತದೆ.
ಮಾದಕವಸ್ತು ಕಳ್ಳಸಾಗಣೆ ಸಮಸ್ಯೆಯನ್ನು ನಿಭಾಯಿಸಲು ಭಾರತ ಸರ್ಕಾರದ ನೀತಿಗಳು ಮತ್ತು ಉಪಕ್ರಮಗಳು:
- ವಿವಿಧ ಮೂಲಗಳಿಂದ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ, ‘ನಶಾ ಮುಕ್ತ ಭಾರತ್ ಅಭಿಯಾನ್’ ಅಥವಾ ‘ಡ್ರಗ್ಸ್-ಫ್ರೀ ಇಂಡಿಯಾ ಕ್ಯಾಂಪೇನ್’ ಅನ್ನು ಆಗಸ್ಟ್ 15, 2020 ರಂದು ದೇಶದ 272 ಜಿಲ್ಲೆಗಳಲ್ಲಿ ಆರಂಭ ಮಾಡಲಾಗಿದೆ.
- ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು 2018-2025ರ ಅವಧಿಗೆ ಔಷಧ ಬೇಡಿಕೆ ಕಡಿತಕ್ಕಾಗಿ ರಾಷ್ಟ್ರೀಯ ಕ್ರಿಯಾ ಯೋಜನೆ (National Action Plan for Drug Demand Reduction- NAPDDR)ಯ ಅನುಷ್ಠಾನವನ್ನು ಪ್ರಾರಂಭಿಸಿದೆ.
- 2016 ರ ನವೆಂಬರ್‌ನಲ್ಲಿ ಸರ್ಕಾರವು, ನಾರ್ಕೊ-ಸಮನ್ವಯ ಕೇಂದ್ರವನ್ನು (NCORD) ರಚಿಸಿದೆ.
- ಮಾದಕ ದ್ರವ್ಯಗಳ ಕಳ್ಳಸಾಗಣೆ, ವ್ಯಸನಿಗಳ ಪುನರ್ವಸತಿ, ಮತ್ತು ಮಾದಕ ದ್ರವ್ಯ ಸೇವನೆಯ ವಿರುದ್ಧ ಸಾರ್ವಜನಿಕರಿಗೆ ಶಿಕ್ಷಣ ನೀಡುವುದಕ್ಕಾಗಿ ಸರ್ಕಾರವು ಮಾಡಿದ ಖರ್ಚನ್ನು ಪೂರೈಸಲು “ಮಾದಕ ವಸ್ತುಗಳ ದುರುಪಯೋಗ ನಿಯಂತ್ರಣಕ್ಕಾಗಿ ರಾಷ್ಟ್ರೀಯ ನಿಧಿ” (National Fund for Control of Drug Abuse) ಎಂಬ ನಿಧಿಯನ್ನು ರಚಿಸಲಾಗಿದೆ.
ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.
4 ಕಾರ್ಮಿಕ ಸಂಹಿತೆಗಳು:
(4 labour codes)
ಸಂದರ್ಭ:
ಭಾರತದಲ್ಲಿ, 2022 ರಿಂದ ಪ್ರಾರಂಭವಾಗುವ ಮುಂಬರುವ ಆರ್ಥಿಕ ವರ್ಷದಲ್ಲಿ ‘ವೇತನ, ಸಾಮಾಜಿಕ ಭದ್ರತೆ, ಔದ್ಯೋಗಿಕ ಸುರಕ್ಷತೆ ಮತ್ತು ಕೈಗಾರಿಕಾ ಸಂಬಂಧಗಳು’(labour codes on wages, social security, occupational safety and industrial relations) ಕುರಿತ “ನಾಲ್ಕು ಕಾರ್ಮಿಕ ಸಂಹಿತೆಗಳು ಜಾರಿಗೆ ಬರುವ ಸಾಧ್ಯತೆಯಿದೆ.
- ಈ ಹೊಸ ಕೋಡ್‌ಗಳ ಅಡಿಯಲ್ಲಿ, ಸಾಮಾನ್ಯವಾಗಿ, ಉದ್ಯೋಗ ಮತ್ತು ಕೆಲಸದ ಸಂಸ್ಕೃತಿಗೆ ಸಂಬಂಧಿಸಿದ ಹಲವಾರು ಅಂಶಗಳು ಅಂದರೆ ನೌಕರರು ಪಡೆವ ವೇತನ (ಟೇಕ್ ಹೋಮ್ ಸಂಬಳ), ಕೆಲಸದ ಸಮಯ ಮತ್ತು ವಾರದಲ್ಲಿ ಕೆಲಸದ ದಿನಗಳ ಸಂಖ್ಯೆಯಲ್ಲಿ ಬದಲಾಗಬಹುದು.
ವಿರೋಧ:
ಆದಾಗ್ಯೂ, ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಸರ್ಕಾರದ ನಿರ್ಧಾರದ ಹಿನ್ನೆಲೆಯಲ್ಲಿ, ಕಾರ್ಮಿಕ ಸಂಘಗಳು ಈ ವಾರ ಈ ಕಾರ್ಮಿಕ ಸಂಹಿತೆಗಳ ವಿರುದ್ಧ ತಮ್ಮ ಆಂದೋಲನವನ್ನು ತೀವ್ರಗೊಳಿಸಲು ಯೋಜಿಸಿವೆ.
ಕಾರ್ಮಿಕ ಸಂಘಟನೆಗಳ ಬೇಡಿಕೆಗಳು:
ವೇತನ ಮತ್ತು ಸಾಮಾಜಿಕ ಭದ್ರತೆಗೆ ಸಂಬಂಧಿಸಿದ ಸಂಹಿತೆ (Codes) ಗಳನ್ನು ನಾವು ಒಪ್ಪುತ್ತೇವೆ ಮತ್ತು ಅವುಗಳನ್ನು ತಕ್ಷಣವೇ ಜಾರಿಗೆ ತರಬೇಕು ಎಂದು ಕಾರ್ಮಿಕ ಸಂಘಟನೆಗಳು ಹೇಳುತ್ತವೆ.
ಕಾರ್ಮಿಕ ಸಂಘಗಳಿಂದ ‘ಕೈಗಾರಿಕಾ ಸಂಬಂಧಗಳು’ (Industrial Relations) ಮತ್ತು ‘ಔದ್ಯೋಗಿಕ ಸುರಕ್ಷತೆ’ (Occupational Safety) ಕುರಿತು ಮಾಡಲಾದ ಕೋಡ್‌ಗಳ ಕುರಿತು ಆಕ್ಷೇಪಣೆ ವ್ಯಕ್ತಪಡಿಸಲಾಗಿತ್ತು, ಅವುಗಳನ್ನು ಪುನರ್ ಪರಿಶೀಲಿಸಬೇಕೆಂಬ ಬೇಡಿಕೆಯಿದೆ.
ಕಾರ್ಮಿಕ ಸಂಹಿತೆ (labour codes) ಗಳ ಕುರಿತು:
ಈ ಹೊಸ ಕಾನೂನುಗಳಲ್ಲಿ 44 ಕಾರ್ಮಿಕ ಕಾನೂನುಗಳನ್ನು ‘ನಾಲ್ಕು ಕೋಡ್‌ಗಳಾಗಿ’ ಏಕೀಕರಿಸಲಾಗಿದೆ:ವೇತನ ಸಂಹಿತೆ (Wage Code, ಸಾಮಾಜಿಕ ಭದ್ರತಾ ಕೋಡ್ (Social Security Code), ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಕೋಡ್(Occupational Safety, Health & Working Conditions Code) ಮತ್ತು ಕೈಗಾರಿಕಾ ಸಂಬಂಧಗಳ ಕೋಡ್ (Industrial Relations Code).
- ಈ ಎಲ್ಲಾ ನಾಲ್ಕು ಕೋಡ್‌ಗಳನ್ನು ಈಗಾಗಲೇ ಸಂಸತ್ತು ಅಂಗೀಕರಿಸಿದೆ ಮತ್ತು ಅವುಗಳಿಗೆ ರಾಷ್ಟ್ರಪತಿಗಳ ಒಪ್ಪಿಗೆಯನ್ನೂ ಪಡೆಯಲಾಗಿದೆ.
ಈ ನಾಲ್ಕು ಸಂಹಿತೆ/ಕೋಡ್‌ಗಳು:
- ವೇತನ ಸಂಹಿತೆ, 2019 (The Code on Wages, 2019): ಈ ಕೋಡ್ ಸಂಘಟಿತ ಮತ್ತು ಅಸಂಘಟಿತ ವಲಯದ ಎಲ್ಲಾ ಉದ್ಯೋಗಿಗಳಿಗೆ ಅನ್ವಯಿಸುತ್ತದೆ. ಎಲ್ಲಾ ಉದ್ಯೋಗಗಳಲ್ಲಿ ‘ಸಂಬಳ’/‘ವೇತನ’ ಮತ್ತು ಬೋನಸ್ ಪಾವತಿಗಳನ್ನು ನಿಯಂತ್ರಿಸುವುದು ಮತ್ತು ಪ್ರತಿಯೊಂದು ಉದ್ಯಮ, ವೃತ್ತಿ, ಉದ್ಯೋಗ ಅಥವಾ ಉತ್ಪಾದನೆಯಲ್ಲಿ ಒಂದೇ ರೀತಿಯ ಕೆಲಸ ಮಾಡುವ ಉದ್ಯೋಗಿಗಳಿಗೆ ಸಮಾನ ಸಂಭಾವನೆಯನ್ನು ಒದಗಿಸುವುದು ಇದರ ಉದ್ದೇಶವಾಗಿದೆ.
- ‘ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಕೋಡ್’ 2020 (Occupational Safety, Health & Working Conditions Code, 2020): ಇದು 10 ಅಥವಾ ಅದಕ್ಕಿಂತ ಹೆಚ್ಚು ಕೆಲಸಗಾರರನ್ನು ಹೊಂದಿರುವ ಸಂಸ್ಥೆಗಳಲ್ಲಿನ ಕಾರ್ಮಿಕರ ಆರೋಗ್ಯ ಮತ್ತು ಸುರಕ್ಷತೆಯ ಪರಿಸ್ಥಿತಿಗಳನ್ನು ನಿಯಂತ್ರಿಸುವ ಗುರಿಯನ್ನು ಹೊಂದಿದೆ ಮತ್ತು ಎಲ್ಲಾ ಗಣಿಗಳು ಮತ್ತು ಬಂದರುಗಳು / ಹಡಗುಕಟ್ಟೆಗಳಲ್ಲಿ ಕೆಲಸ ಮಾಡುವ ಎಲ್ಲಾ ಕಾರ್ಮಿಕರ ಆರೋಗ್ಯ ಮತ್ತು ಸುರಕ್ಷತೆಯ ಪರಿಸ್ಥಿತಿಗಳನ್ನು ನಿಯಂತ್ರಿಸಲು ಪ್ರಯತ್ನಿಸುತ್ತದೆ.
- ಸಾಮಾಜಿಕ ಭದ್ರತಾ ಸಂಹಿತೆ, 2020(Social Security Code, 2020): ಇದರ ಅಡಿಯಲ್ಲಿ, ಸಾಮಾಜಿಕ ಭದ್ರತೆ ಮತ್ತು ಹೆರಿಗೆ ಪ್ರಯೋಜನಗಳಿಗೆ ಸಂಬಂಧಿಸಿದ ಒಂಬತ್ತು ಕಾನೂನುಗಳನ್ನು ಏಕೀಕರಿಸಲಾಗುತ್ತದೆ.
- ಕೈಗಾರಿಕಾ ಸಂಬಂಧಗಳ ಸಂಹಿತೆ, 2020 (Industrial Relations Code, 2020): ಇದರ ಅಡಿಯಲ್ಲಿ, ಮೂರು ಕಾರ್ಮಿಕ ಕಾನೂನುಗಳು; ಟ್ರೇಡ್ ಯೂನಿಯನ್ಸ್ ಆಕ್ಟ್, 1926, ಇಂಡಸ್ಟ್ರಿಯಲ್ ಎಂಪ್ಲಾಯ್ಮೆಂಟ್ (ಸ್ಥಾಯಿ ಆದೇಶಗಳು) ಕಾಯಿದೆ, 1946 ಮತ್ತು ಕೈಗಾರಿಕಾ ವಿವಾದಗಳ ಕಾಯಿದೆ, 1947 ಅನ್ನು ಕ್ರೋಡೀಕರಿಸಲು ಪ್ರಯತ್ನಿಸುತ್ತದೆ. ಇದು ಕೈಗಾರಿಕೆಗಳ ಮೇಲಿನ ಕಾರ್ಮಿಕ ಕಾನೂನುಗಳ ಅನುಸರಣೆ ಹೊರೆಯನ್ನು ಗಣನೀಯವಾಗಿ ಕಡಿಮೆ ಮಾಡುವ ಮೂಲಕ ದೇಶದಲ್ಲಿ ವ್ಯಾಪಾರ ವಾತಾವರಣವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.
ಈ ಕೋಡ್‌ಗಳೊಂದಿಗಿನ ಸಮಸ್ಯೆಗಳು:
- ನಿಯಮಿತ ಕಾರ್ಮಿಕರಿಗೆ ಕೆಲಸದ ಸಮಯದ ನಿಬಂಧನೆಗಳಲ್ಲಿ ‘ದಿನದಲ್ಲಿ ಎಂಟು ಗಂಟೆಗಳಿಗಿಂತ ಹೆಚ್ಚಿನ ಕೆಲಸದ ಸಮಯವನ್ನು ನಿಗದಿಪಡಿಸುವುದು’ ಇದರ ಕುರಿತಂತೆ ಯಾವುದೇ ನಿಬಂಧನೆಯನ್ನು ಮಾಡಲಾಗಿಲ್ಲ.
- ಈ ಕೋಡ್‌ಗಳಲ್ಲಿ ಅರೆಕಾಲಿಕ ಉದ್ಯೋಗಿಗಳಿಗೆ ಇದೇ ರೀತಿಯ ನಿಬಂಧನೆಗಳನ್ನು ಹಾಕಲಾಗಿಲ್ಲ.
- ನೌಕರರ ವೇತನದ ಮೇಲೆ ಪರಿಣಾಮ ಬೀರುವ ನಿಬಂಧನೆಗಳನ್ನು ಸಹ ಸೇರಿಸಲಾಗಿದೆ.
- ಕಾರ್ಮಿಕ ಸಂಹಿತೆಗಳಲ್ಲಿ, ನಿಬಂಧನೆಗಳ ಅನುಸರಣೆಗಾಗಿ ಮತ್ತು ಎರಡನೇ ಅಪರಾಧಕ್ಕಾಗಿ ವ್ಯವಹಾರಗಳ ಮೇಲೆ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಪ್ರಸ್ತುತ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ, ಹೆಚ್ಚಿನ ಸಣ್ಣ ವ್ಯಾಪಾರಗಳು ಕಾರ್ಮಿಕ ಸಂಹಿತೆಗಳಲ್ಲಿ ಮಾಡಿದ ಬದಲಾವಣೆಗಳನ್ನು ಅಳವಡಿಸಿಕೊಳ್ಳುವ ಮತ್ತು ಕಾರ್ಯಗತಗೊಳಿಸುವ ಯಾವುದೇ ಸ್ಥಿತಿಯಲ್ಲಿಲ್ಲ.
ವಿಷಯಗಳು: ಭಾರತ ಮತ್ತು ಅದರ ನೆರೆಹೊರೆಯ ದೇಶಗಳೊಂದಿಗೆ ಸಂಬಂಧಗಳು.
ಭಾರತ ಮತ್ತು ತೈವಾನ್ ಸಂಬಂಧಗಳು:
(India-Taiwan relations)
ಸಂದರ್ಭ:
ಇತ್ತೀಚೆಗೆ, ಭಾರತ ಮತ್ತು ತೈವಾನ್ ಗಳು ‘ಮುಕ್ತ ವ್ಯಾಪಾರ ಒಪ್ಪಂದ’ ಮತ್ತು ತೈವಾನ್‌ನ ಸಂಸ್ಥೆಯು ಭಾರತದಲ್ಲಿ ‘ಸೆಮಿಕಂಡಕ್ಟರ್ ಉತ್ಪಾದನಾ ಸೌಲಭ್ಯ’ವನ್ನು ಸ್ಥಾಪಿಸುವ ಕುರಿತು ‘ಮಾತುಕತೆ’ಗಳನ್ನು ಪ್ರಾರಂಭಿಸಿವೆ. ಇದು ಒಂದು ಪ್ರಮುಖ ಹೆಜ್ಜೆಯಾಗಿದೆ ಮತ್ತು ಎರಡೂ ದೇಶಗಳು ತಮ್ಮ ಒಟ್ಟಾರೆ ದ್ವಿಪಕ್ಷೀಯ ಆರ್ಥಿಕ ಸಹಭಾಗಿತ್ವವನ್ನು ವಿಶಾಲ ತಳಹದಿಯ ಮೇಲೆ ವಿಸ್ತರಿಸುವ ಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ.
- ಒಂದುವೇಳೆ ‘ಸೆಮಿಕಂಡಕ್ಟರ್ ಉತ್ಪಾದನಾ ಘಟಕ’ವನ್ನು ಸ್ಥಾಪಿಸುವ ಕ್ರಮವು ಯಶಸ್ವಿಯಾದರೆ, ತೈವಾನ್ ಕಂಪನಿಯು ಬೇರೆ ಯಾವುದೇ ದೇಶದಲ್ಲಿ ಸ್ಥಾಪಿಸಿದ ಇಂತಹ ಎರಡನೇ ಸೌಲಭ್ಯವಾಗಲಿದೆ.ಈ ಹಿಂದೆ ತೈವಾನೀಸ್ ಕಂಪನಿಯು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಇದೇ ರೀತಿಯ ಉತ್ಪಾದನಾ ಸೌಲಭ್ಯವನ್ನು ಸ್ಥಾಪಿಸಿದೆ.
ತೈವಾನ್ ಕುರಿತ ಭಾರತದ ನಿಲುವು:
- ತೈವಾನ್‌ಗೆ ಸಂಬಂಧಿಸಿದಂತೆ ಭಾರತದ ನೀತಿಯು ಸ್ಪಷ್ಟ ಮತ್ತು ಸ್ಥಿರವಾಗಿದೆ ಮತ್ತು ಇದು ವ್ಯಾಪಾರ, ಹೂಡಿಕೆ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಪರಸ್ಪರ ಸಂವಾದವನ್ನು ಉತ್ತೇಜಿಸುವತ್ತ ಗಮನಹರಿಸುತ್ತದೆ.
- ವ್ಯಾಪಾರ, ಹೂಡಿಕೆ, ಪ್ರವಾಸೋದ್ಯಮ, ಸಂಸ್ಕೃತಿ, ಶಿಕ್ಷಣ ಮತ್ತು ಮುಂತಾದ ಕ್ಷೇತ್ರಗಳಲ್ಲಿ ಜನರು-ಜನರ ಸಂಪರ್ಕ ಮತ್ತು ಸಂವಹನವನ್ನು ಸರ್ಕಾರವು ಸುಗಮಗೊಳಿಸುತ್ತದೆ ಮತ್ತು ಉತ್ತೇಜಿಸುತ್ತದೆ.
- ಆದಾಗ್ಯೂ, ಭಾರತವು ತೈವಾನ್ ನೊಂದಿಗೆ ಯಾವುದೇ ಔಪಚಾರಿಕ ಸಂಬಂಧಗಳನ್ನು ಹೊಂದಿಲ್ಲ, ಆದರೆ ಎರಡು ದೇಶಗಳು ವ್ಯಾಪಾರ-ವಹಿವಾಟು ಹಾಗೂ ಜನರ ಮಧ್ಯೆ ಸಂಬಂಧಗಳನ್ನು ಹೊಂದಿವೆ.
ಇಂಡೋ- ತೈವಾನ್ ಸಂಬಂಧಗಳು:
- ಎರಡೂ ದೇಶಗಳ ಮಧ್ಯೆ ಔಪಚಾರಿಕ ರಾಜತಾಂತ್ರಿಕ ಸಂಬಂಧಗಳಿಲ್ಲದಿದ್ದರೂ, ತೈವಾನ್ ಮತ್ತು ಭಾರತ ವಿವಿಧ ಕ್ಷೇತ್ರಗಳಲ್ಲಿ ಸಹಕರಿಸುತ್ತಿವೆ.
- 2010 ರಿಂದ “ಒಂದು-ಚೀನಾ” ನೀತಿಯನ್ನು ಅನುಮೋದಿಸಲು ಭಾರತ ನಿರಾಕರಿಸಿದೆ.
ತೈವಾನ್ ಗೆ ಭಾರತದ ಮಹತ್ವ:
ತೈವಾನ್ ವಿವಿಧ ದೇಶಗಳೊಂದಿಗೆ ತನ್ನ ಸಂಬಂಧವನ್ನು ಗಾಢವಾಗಿಸಲು ಪ್ರಯತ್ನಿಸುತ್ತಿದೆ.
- ಇದರ ಜೊತೆಗೆ, ಚೀನಾ ತೈವಾನ್ ಮೇಲೆ ಮಿಲಿಟರಿ ಒತ್ತಡವನ್ನು ಹೆಚ್ಚಿಸುವುದನ್ನು ಮುಂದುವರೆಸಿದೆ, ಅದರ ಅಡಿಯಲ್ಲಿ ಚೀನಾ ಈ ಪ್ರಜಾಪ್ರಭುತ್ವ ತೈವಾನ್ ಬಳಿ ಚೀನಾದ ಯುದ್ಧವಿಮಾನಗಳು ಸಮರಾಭ್ಯಾಸವನ್ನು ನಡೆಸುತ್ತಿವೆ. ಚೀನಾ ತನ್ನ “ಒಂದು ಚೀನಾ” (One China) ನೀತಿಯ ಮೂಲಕ ತೈವಾನ್ ಮೇಲೆ ಹಕ್ಕು ಸಾಧಿಸುತ್ತಿದ್ದು, ಅಗತ್ಯವೆನಿಸಿದರೆ ಅದನ್ನು ಬಲಪ್ರಯೋಗದ ಮೂಲಕ ಬೀಜಿಂಗ್ ನ ಆಳ್ವಿಕೆಯ ಅಡಿಯಲ್ಲಿ ತರುವುದಾಗಿ ಶಪಥ ಮಾಡಿದೆ.
ಮುಂದಿನ ನಡೆ:
ಭಾರತ ಮತ್ತು ತೈವಾನ್ ತಮ್ಮ ಪಾಲುದಾರಿಕೆಯ 25 ವರ್ಷಗಳ ಸಂಭ್ರಮವನ್ನು ಆಚರಿಸುತ್ತಿವೆ.
ದೆಹಲಿ ಮತ್ತು ತೈಪೆ ನಡುವೆ,ಸಾಮೂಹಿಕ ಮತ್ತು ಪರಸ್ಪರ ಪ್ರಯತ್ನಗಳ ಅಡಿಯಲ್ಲಿ, ಕೃಷಿ, ಹೂಡಿಕೆ, ಕಸ್ಟಮ್ಸ್ ಸಹಕಾರ, ನಾಗರಿಕ ವಿಮಾನಯಾನ, ಕೈಗಾರಿಕಾ ಸಹಕಾರ ಮತ್ತು ಇತರ ಕ್ಷೇತ್ರಗಳು ಸೇರಿದಂತೆ ಹಲವಾರು ದ್ವಿಪಕ್ಷೀಯ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಉಭಯ ದೇಶಗಳ ನಡುವೆ ಬೆಳೆಯುತ್ತಿರುವ ಸಂಬಂಧಗಳು ಭಾರತ-ತೈವಾನ್ ಸಂಬಂಧಗಳನ್ನು ಮರುರೂಪಿಸುವ ಸಮಯ ಬಂದಿದೆ ಎಂದು ಸೂಚಿಸುತ್ತದೆ.
ಈಗ ಮಾಡಬೇಕಿರುವುದೇನು?
- ಎರಡೂ ಪಕ್ಷಗಳು ನಿಗದಿತ ಸಮಯದ ಚೌಕಟ್ಟಿನೊಳಗೆ, ರೋಡ್ ಮ್ಯಾಪ್ ಅನ್ನು ರಚಿಸಲು ‘ಸಶಕ್ತ ವ್ಯಕ್ತಿಗಳ’ ಗುಂಪನ್ನು ಅಥವಾ ‘ಟಾಸ್ಕ್ ಫೋರ್ಸ್’ಗಳನ್ನು ರಚಿಸಬಹುದು.
- ಉಭಯ ದೇಶಗಳ ನಡುವೆ ‘ಆರೋಗ್ಯ ಕ್ಷೇತ್ರ’ದಲ್ಲಿ ಸಹಕಾರವನ್ನು ಹೆಚ್ಚಿಸಲು ಇದು ಸೂಕ್ತ ಸಮಯವಾಗಿದೆ.
- ತೈವಾನ್, ತನ್ನ ಜೈವಿಕ ಸ್ನೇಹಿ ತಂತ್ರಜ್ಞಾನಗಳ ಮೂಲಕ, ಈ ಸವಾಲನ್ನು ನಿಭಾಯಿಸುವಲ್ಲಿ ಮೌಲ್ಯಯುತ ಪಾಲುದಾರನಾಗಬಹುದು.
ಚೀನಾ- ತೈವಾನ್ ಸಂಬಂಧಗಳು-
ಹಿನ್ನೆಲೆ:
ಚೀನಾದ ಅಂತರ್ಯುದ್ಧದಲ್ಲಿ ಸೋಲಿಸಲ್ಪಟ್ಟ ರಾಷ್ಟ್ರೀಯವಾದಿಗಳನ್ನು 1949 ರಲ್ಲಿ ತೈವಾನ್ ದ್ವೀಪಕ್ಕೆ ಒತ್ತಾಯಪೂರ್ವಕವಾಗಿ ಪಲಾಯನ ಮಾಡಿಸಿದಂದಿನಿಂದ ಚೀನಾ ತನ್ನ “ಒಂದು ಚೀನಾ” (One China) ನೀತಿಯ ಮೂಲಕ ತೈವಾನ್ ಮೇಲೆ ಹಕ್ಕು ಸಾಧಿಸುತ್ತಿದ್ದು, ಅಗತ್ಯವೆನಿಸಿದರೆ ಅದನ್ನು ಬಲಪ್ರಯೋಗದ ಮೂಲಕ ಬೀಜಿಂಗ್ ನ ಆಳ್ವಿಕೆಯ ಅಡಿಯಲ್ಲಿ ತರುವುದಾಗಿ ಶಪಥ ಮಾಡಿದೆ.
- ಚೀನಾ ತೈವಾನ್‌ನ ಉನ್ನತ ವ್ಯಾಪಾರ ಪಾಲುದಾರನಾಗಿದ್ದು, 2018 ರಲ್ಲಿ ವ್ಯಾಪಾರವು $ 226 ಬಿಲಿಯನ್ ಆಗಿದೆ. ತೈವಾನ್ ಚೀನಾದೊಂದಿಗೆ ದೊಡ್ಡ ವ್ಯಾಪಾರ ಕೊರತೆಯನ್ನು ಹೊ೦ದಿದೆ.
- ತೈವಾನ್ ಸ್ವಯಂ ಆಡಳಿತ ಹೊಂದಿದೆ (Taiwan is self-governed) ಮತ್ತು ವಾಸ್ತವಿಕವಾಗಿ ಸ್ವತಂತ್ರವಾಗಿದ್ದರೂ, ಅದು ಎಂದಿಗೂ ಔಪಚಾರಿಕವಾಗಿ ಚೀನಾ -ಮುಖ್ಯ ಭೂಭಾಗದಿಂದ ಸ್ವಾತಂತ್ರ್ಯವನ್ನು ಘೋಷಿಸಿಕೊಂಡಿಲ್ಲ.
- “ಒಂದು ದೇಶ, ಎರಡು ಆಡಳಿತ ವ್ಯವಸ್ಥೆಗಳು” ಸೂತ್ರದಡಿಯಲ್ಲಿ, (one country, two systems) ತೈವಾನ್‌ಗೆ ತನ್ನದೇ ಆದ ಆಡಳಿತ ವ್ಯವಹಾರಗಳನ್ನು ನಡೆಸುವ ಹಕ್ಕಿದೆ; ಇದೇ ರೀತಿಯ ವ್ಯವಸ್ಥೆಯನ್ನು ಹಾಂಗ್ ಕಾಂಗ್‌ನಲ್ಲಿಯೂ ಬಳಸಲಾಗುತ್ತದೆ.
- ತೈವಾನ್ ವಿವಿಧ ಹೆಸರುಗಳಲ್ಲಿ ವಿಶ್ವ ವ್ಯಾಪಾರ ಸಂಘಟನೆ, ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ ಮತ್ತು ಏಷ್ಯನ್ ಅಭಿವೃದ್ಧಿ ಬ್ಯಾಂಕ್ ಗಳ ಸದಸ್ಯತ್ವ ವನ್ನು ಹೊಂದಿದೆ.
ಪ್ರಸ್ತುತ, ತೈವಾನ್ ಮೇಲೆ ಚೀನಾ ಹಕ್ಕು ಸಾಧಿಸುತ್ತಿದೆ, ಅಲ್ಲದೆ ಈ ಪ್ರಜಾಪ್ರಭುತ್ವವಾದಿ ತೈವಾನ್ ಅನ್ನು ಗುರುತಿಸುವ ದೇಶಗಳೊಂದಿಗೆ ರಾಜತಾಂತ್ರಿಕ ಸಂಬಂಧವನ್ನು ಚೀನಾ ನಿರಾಕರಿಸುತ್ತದೆ.
ಸಾಮಾನ್ಯ ಅಧ್ಯಯನ ಪತ್ರಿಕೆ : 3
ವಿಷಯಗಳು: ಸಂರಕ್ಷಣೆ ಮತ್ತು ಜೀವವೈವಿಧ್ಯತೆಗೆ ಸಂಬಂಧಿತ ಸಮಸ್ಯೆಗಳು.
ಹಸಿರು ಜಲಜನಕ / ಗ್ರೀನ್ ಹೈಡ್ರೋಜನ್:
(Green Hydrogen)
ಸಂದರ್ಭ:
ಕೇಂದ್ರ ಸರ್ಕಾರವು, ಸೌರಶಕ್ತಿಯನ್ನು ಬಳಸಿಕೊಂಡು ತ್ಯಾಜ್ಯ ನೀರಿನಿಂದ ‘ಗ್ರೀನ್ ಹೈಡ್ರೋಜನ್ ಇಂಧನ’ (Green Hydrogen Fuel) ಬಳಸಲು ಯೋಜನೆ ರೂಪಿಸುತ್ತಿದೆ. ‘ಎಲೆಕ್ಟ್ರೋಲೈಸರ್’ (Electrolysers) ಗಳನ್ನು ಬಳಸಿಕೊಂಡು ಇದನ್ನು ಸಾಧ್ಯವಾಗಿಸಬಹುದು.
ಸಾಧಿಸುವ ವಿಧಾನ:
‘ಮೇಲ್ಛಾವಣಿ ಸೌರ’ ಶಕ್ತಿಯನ್ನು ಬಳಸಿಕೊಂಡು ‘ಘನ ತ್ಯಾಜ್ಯ ನಿರ್ವಹಣೆ’ಯನ್ನು ಪ್ರತ್ಯೇಕಿಸುವ ಮೂಲಕ, ಎಲೆಕ್ಟ್ರೋಲೈಸರ್‌ಗಳ ಸಹಾಯದಿಂದ ನಾವು ‘ಹಸಿರು ಜಲಜನಕ’ / ಗ್ರೀನ್ ಹೈಡ್ರೋಜನ್ ಅನ್ನು ತಯಾರಿಸಬಹುದು. ಅದರ ಉತ್ಪಾದನೆಯಲ್ಲಿ ಆಗುವ ವಿದ್ಯುತ್ ಮತ್ತು ನೀರಿನ ವೆಚ್ಚವು ಅತ್ಯಲ್ಪವಾಗಿರುತ್ತದೆ. ರೈಲ್ವೆ ಇಂಜಿನ್‌ಗಳು, ಸಿಮೆಂಟ್ ಮತ್ತು ರಾಸಾಯನಿಕ ಕಂಪನಿಗಳಲ್ಲಿ ಕಲ್ಲಿದ್ದಲಿನ ಬದಲಿಗೆ ನಾವು ಈ ಇಂಧನವನ್ನು ಬಳಸಬಹುದು.
ಸವಾಲುಗಳು:
ದೇಶದಲ್ಲಿ ‘ಗ್ರೀನ್ ಹೈಡ್ರೋಜನ್’ ಬಳಕೆಯ ಹಾದಿ ಇನ್ನೂ ಸ್ಪಷ್ಟವಾಗಿಲ್ಲ ಮತ್ತು ಪ್ರಸ್ತುತ ‘ಗ್ರೀನ್ ಹೈಡ್ರೋಜನ್’ ಉತ್ಪಾದನೆಯು ‘ಗ್ರೇ ಹೈಡ್ರೋಜನ್’ (Grey Hydrogen) ಗಿಂತ ಸ್ವಲ್ಪ ದುಬಾರಿಯಾಗಿದೆ.
ಗ್ರೀನ್ ಹೈಡ್ರೋಜನ್ / ಹಸಿರು ಜಲಜನಕ ಎಂದರೇನು?
ನವೀಕರಿಸಬಹುದಾದ ಶಕ್ತಿಯನ್ನು ಬಳಸಿಕೊಂಡು ‘ವಿದ್ಯುದ್ವಿಭಜನೆ’ (Electrolysis)ಯಿಂದ ಉತ್ಪತ್ತಿಯಾಗುವ ಹೈಡ್ರೋಜನ್ ಅನ್ನು ‘ಗ್ರೀನ್ ಹೈಡ್ರೋಜನ್’ (Green Hydrogen) ಎಂದು ಕರೆಯಲಾಗುತ್ತದೆ. ಇದು ಇಂಗಾಲದ ಯಾವುದೇ ಕುರುಹುಗಳನ್ನು(Carbon–Footprint) ಹೊಂದಿರುವುದಿಲ್ಲ.
ಹಸಿರು ಹೈಡ್ರೋಜನ್ ಪ್ರಾಮುಖ್ಯತೆ:
- ಭಾರತವು ತನ್ನ ರಾಷ್ಟ್ರೀಯವಾಗಿ ನಿರ್ಧರಿಸಿದ ಕೊಡುಗೆ (Nationally Determined Contribution- INDC) ಗುರಿಗಳನ್ನು ಪೂರೈಸಲು ಮತ್ತು ಪ್ರಾದೇಶಿಕ ಮತ್ತು ರಾಷ್ಟ್ರೀಯ ಇಂಧನ ಸುರಕ್ಷತೆ, ಪ್ರವೇಶ ಮತ್ತು ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಹಸಿರು ಹೈಡ್ರೋಜನ್ ಶಕ್ತಿಯು ನಿರ್ಣಾಯಕವಾಗಿದೆ.
- ಹಸಿರು ಹೈಡ್ರೋಜನ್ “ಶಕ್ತಿ ಶೇಖರಣಾ ಆಯ್ಕೆ” ಯಾಗಿ ಕಾರ್ಯನಿರ್ವಹಿಸುತ್ತದೆ, ಇದು ಭವಿಷ್ಯದಲ್ಲಿ ನವೀಕರಿಸಬಹುದಾದ ಶಕ್ತಿಯ ಅಂತರವನ್ನು ನಿವಾರಿಸಲು ನಿರ್ಣಾಯಕವಾಗಿರುತ್ತದೆ.
- ಚಲನಶೀಲತೆಗೆ ಸಂಬಂಧಿಸಿದಂತೆ, ನಗರಗಳಲ್ಲಿ ಅಥವಾ ರಾಜ್ಯಗಳ ಒಳಗೆ ದೂರದ ಪ್ರಯಾಣಕ್ಕಾಗಿ, ಸರಕು ಸಾಗಣೆಗೆ, ರೈಲ್ವೆಗಳು, ದೊಡ್ಡ ಹಡಗುಗಳು, ಬಸ್ಸುಗಳು ಅಥವಾ ಟ್ರಕ್‌ಗಳು ಇತ್ಯಾದಿಗಳಲ್ಲಿ ಹಸಿರು ಹೈಡ್ರೋಜನ್ ಅನ್ನು ಬಳಸಬಹುದು.
ಹಸಿರು ಹೈಡ್ರೋಜನ್ ನ ಅನ್ವಯಗಳು:
- ಅಮೋನಿಯಾ ಮತ್ತು ಮೆಥನಾಲ್ ನಂತಹ ಹಸಿರು ರಾಸಾಯನಿಕಗಳನ್ನು ಅಸ್ತಿತ್ವದಲ್ಲಿರುವ ಅಗತ್ಯಗಳಾದ ರಸಗೊಬ್ಬರಗಳು, ಚಲನಶೀಲತೆ, ವಿದ್ಯುತ್, ರಾಸಾಯನಿಕಗಳು, ಸಾಗಾಟ ಇತ್ಯಾದಿಗಳಲ್ಲಿ ನೇರವಾಗಿ ಬಳಸಬಹುದು.
- ವ್ಯಾಪಕವಾದ ಸ್ವೀಕಾರವನ್ನು ಪಡೆಯಲು ಸಿಜಿಡಿ ನೆಟ್‌ವರ್ಕ್‌ನಲ್ಲಿ ಶೇಕಡಾ 10 ರಷ್ಟು ಹಸಿರು ಹೈಡ್ರೋಜನ್ ಮಿಶ್ರಣವನ್ನು ಅಳವಡಿಸಿಕೊಳ್ಳಬಹುದು.
ಪ್ರಯೋಜನಗಳು:
- ಇದು ಶುದ್ಧ ದಹನಕಾರಿ ಅಣುವಾಗಿದ್ದು, ಕಬ್ಬಿಣ ಮತ್ತು ಉಕ್ಕು, ರಾಸಾಯನಿಕಗಳು ಮತ್ತು ಸಾರಿಗೆಯಂತಹ ಕ್ಷೇತ್ರಗಳನ್ನು ಡಿಕಾರ್ಬೊನೈಸ್ ಮಾಡುವ ಸಾಮರ್ಥ್ಯ ಹೊಂದಿದೆ.
- ಹಸಿರು ಹೈಡ್ರೋಜನ್ ಶಕ್ತಿಯ ಶೇಖರಣೆಗಾಗಿ ಖನಿಜಗಳು ಮತ್ತು ಅಪರೂಪದ-ಭೂಮಿಯ ಅಂಶ ಆಧಾರಿತ ಬ್ಯಾಟರಿಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
- ಗ್ರಿಡ್‌ನಿಂದ ಸಂಗ್ರಹಿಸಲಾಗದ ಅಥವಾ ಬಳಸಲಾಗದ ನವೀಕರಿಸಬಹುದಾದ ಶಕ್ತಿಯನ್ನು ಹೈಡ್ರೋಜನ್ ಉತ್ಪಾದಿಸಲು ಬಳಸಿಕೊಳ್ಳಬಹುದು.
ಹಸಿರು ಹೈಡ್ರೋಜನ್ ಉತ್ಪಾದನೆಯಲ್ಲಿ ಭಾರತ ಸರ್ಕಾರ ಕೈಗೊಂಡ ಕ್ರಮಗಳು ಯಾವುವು?
- ಫೆಬ್ರವರಿ 2021 ರಲ್ಲಿ ನಡೆದ ಬಜೆಟ್ ಭಾಷಣದಲ್ಲಿ, ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ನವೀಕರಿಸಬಹುದಾದ ಮೂಲಗಳಿಂದ ಹೈಡ್ರೋಜನ್ ಉತ್ಪಾದಿಸಲು ಹೈಡ್ರೋಜನ್ ಎನರ್ಜಿ ಮಿಷನ್ ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದರು.
- ಅದೇ ತಿಂಗಳಲ್ಲಿ, ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಗ್ರೀನ್‌ಸ್ಟಾಟ್ ನಾರ್ವೆ (Greenstat Norway)ಯೊಂದಿಗೆ ಹೈಡ್ರೋಜನ್ ಆನ್ ಎಕ್ಸಲೆನ್ಸ್ ಸೆಂಟರ್ (Centre of Excellence on Hydrogen -CoE-H) ಸ್ಥಾಪಿಸಲು ಒಪ್ಪಂದಕ್ಕೆ ಸಹಿ ಹಾಕಿತು. ಇದು ನಾರ್ವೇಜಿಯನ್ ಮತ್ತು ಭಾರತೀಯ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳು / ವಿಶ್ವವಿದ್ಯಾಲಯಗಳ ನಡುವೆ ಹಸಿರು ಮತ್ತು ನೀಲಿ ಹೈಡ್ರೋಜನ್ ಉತ್ಪಾದನೆಗೆ ಸಂಶೋಧನೆ ಮತ್ತು ಅಭಿವೃದ್ಧಿ (R & D) ಯೋಜನೆಗಳನ್ನು ಉತ್ತೇಜಿಸುತ್ತದೆ.
- ಇತ್ತೀಚೆಗೆ, ಭಾರತ ಮತ್ತು ಅಮೆರಿಕ ಹಣಕಾಸು ಸಂಗ್ರಹಿಸಲು ಮತ್ತು ಹಸಿರು ಇಂಧನ ಅಭಿವೃದ್ಧಿಯನ್ನು ವೇಗಗೊಳಿಸಲು ಸ್ಟ್ರಾಟೆಜಿಕ್ ಕ್ಲೀನ್ ಎನರ್ಜಿ ಪಾರ್ಟ್‌ನರ್‌ಶಿಪ್ (Strategic Clean Energy Partnership -SCEP) ಆಶ್ರಯದಲ್ಲಿ ಕಾರ್ಯಪಡೆ ಸ್ಥಾಪಿಸಿವೆ.
ವಿಷಯಗಳು: ಸಂರಕ್ಷಣೆ ಮತ್ತು ಜೀವವೈವಿಧ್ಯತೆಗೆ ಸಂಬಂಧಿತ ಸಮಸ್ಯೆಗಳು.
2002 ರ ಜೈವಿಕ ವೈವಿಧ್ಯ ಕಾಯಿದೆಗೆ ಬದಲಾವಣೆಗಳು:
(Changes to Biological Diversity Act, 2002)
ಸಂದರ್ಭ:
ಸರ್ಕಾರವು ಇತ್ತೀಚೆಗೆ ‘ಜೈವಿಕ ವೈವಿಧ್ಯ (ತಿದ್ದುಪಡಿ) ಮಸೂದೆ, 2021’ (Biological Diversity (Amendment) Bill, 2021) ಅನ್ನು ಲೋಕಸಭೆಯಲ್ಲಿ ಮಂಡಿಸಿದೆ.
ಮಸೂದೆಯ ಪ್ರಮುಖ ಅಂಶಗಳು:
- ಔಷಧೀಯ ಸಸ್ಯಗಳ ಕೃಷಿಯನ್ನು ಉತ್ತೇಜಿಸುವ ಮೂಲಕ ‘ಕಾಡು ಔಷಧೀಯ ಸಸ್ಯಗಳ’ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಮಸೂದೆ ಪ್ರಯತ್ನಿಸುತ್ತದೆ.
- ‘ಆಯುಷ್ ವೈದ್ಯರಿಗೆ’ ಜೈವಿಕ ಸಂಪನ್ಮೂಲಗಳು ಅಥವಾ ಜ್ಞಾನದ ಪ್ರವೇಶಕ್ಕಾಗಿ ‘ಜೀವವೈವಿಧ್ಯ ಮಂಡಳಿಗಳಿಗೆ’ ತಿಳಿಸುವುದರಿಂದ ವಿನಾಯಿತಿ ನೀಡಲು ಮಸೂದೆ ಪ್ರಸ್ತಾಪಿಸುತ್ತದೆ.
- ಮಸೂದೆಯಲ್ಲಿ, ಸಂಶೋಧನೆಯನ್ನು ತ್ವರಿತಗೊಳಿಸಲು, ಪೇಟೆಂಟ್ ಅರ್ಜಿಯ ಪ್ರಕ್ರಿಯೆಯನ್ನು ಸರಳಗೊಳಿಸಲು, ಕೆಲವು ಚಟುವಟಿಕೆಗಳನ್ನು ಅಪರಾಧವಲ್ಲ ಎಂದು ಘೋಷಿಸಲು ಅನುಕೂಲ ಕಲ್ಪಿಸಲಾಗಿದೆ.
- ಇದು ರಾಷ್ಟ್ರೀಯ ಹಿತಾಸಕ್ತಿಗಳಲ್ಲಿ ರಾಜಿ ಮಾಡಿಕೊಳ್ಳದೆ ಜೈವಿಕ ಸಂಪನ್ಮೂಲಗಳು, ಸಂಶೋಧನೆ, ಪೇಟೆಂಟ್‌ಗಳು ಮತ್ತು ವಾಣಿಜ್ಯ ಬಳಕೆಗಳ ವ್ಯಾಪ್ತಿಯಲ್ಲಿ ಹೆಚ್ಚಿನ ವಿದೇಶಿ ಹೂಡಿಕೆಯನ್ನು ತರಲು ಪ್ರಯತ್ನಿಸುತ್ತದೆ.
- ಜೈವಿಕ ಸಂಪನ್ಮೂಲಗಳು ಮತ್ತು ಜ್ಞಾನವನ್ನು ಯಾರು ಬಳಸಬಹುದು ಮತ್ತು ಬಳಕೆಯನ್ನು ಹೇಗೆ ಮೇಲ್ವಿಚಾರಣೆ ಮಾಡಲಾಗುತ್ತದೆ ಎಂಬುದರ ನಿಯಂತ್ರಿಸುವ ಕುರಿತು ಮಸೂದೆಯು ಗಮನ ಕೇಂದ್ರೀಕರಿಸುತ್ತದೆ.
- ಮಸೂದೆಯಲ್ಲಿ ‘ರಾಜ್ಯ ಜೀವ ವೈವಿಧ್ಯ ಮಂಡಳಿಗಳ’ ಪಾತ್ರವನ್ನು ಕೂಡ ಸ್ಪಷ್ಟಪಡಿಸಲಾಗಿದೆ ಮತ್ತು ಬಲಪಡಿಸಲಾಗಿದೆ.
ಜೀವವೈವಿಧ್ಯ ಕಾಯಿದೆ 2002 ರ ತಿದ್ದುಪಡಿಗೆ ಕಾರಣ:
- ಆಯುಷ್ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ವ್ಯಕ್ತಿಗಳಿಂದ ಸಹಕಾರಿ ಸಂಶೋಧನೆ ಮತ್ತು ಹೂಡಿಕೆಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸಲು ‘ಅನುಸರಣೆ-ಪ್ರಕ್ರಿಯೆ ಹೊರೆ’ಯನ್ನು ಸರಳೀಕರಿಸಲು, ಸರಳೀಕರಿಸಲು ಮತ್ತು ಕಡಿಮೆ ಮಾಡಲು ಸರ್ಕಾರವನ್ನು ಒತ್ತಾಯಿಸಲಾಗುತ್ತಿದೆ.
- ಅವರು ಪೇಟೆಂಟ್ ಅರ್ಜಿ ಪ್ರಕ್ರಿಯೆಯನ್ನು ಸರಳೀಕರಿಸಲು, ಸ್ಥಳೀಯ ಸಮುದಾಯಗಳೊಂದಿಗೆ ವ್ಯಾಪ್ತಿಯನ್ನು ಮತ್ತು ಲಾಭ-ಹಂಚಿಕೆಯನ್ನು ವಿಸ್ತರಿಸಲು ಪ್ರಯತ್ನಿಸಿದರು.
ಸಂಬಂಧಿತ ಕಾಳಜಿಗಳು:
- ಮಸೂದೆಯ ಮುಖ್ಯ ಗುರಿಯು ಸ್ಥಳೀಯ ಸಮುದಾಯಗಳ ರಕ್ಷಣೆ, ಜೀವವೈವಿಧ್ಯದ ಸಂರಕ್ಷಣೆ ಮತ್ತು ಜ್ಞಾನದ ಸಂರಕ್ಷಣೆಗಿಂತ ಹೆಚ್ಚಾಗಿ ‘ಜೀವವೈವಿಧ್ಯದಲ್ಲಿ ವ್ಯಾಪಾರ’ವನ್ನು ಸುಗಮಗೊಳಿಸುವುದಾಗಿದೆ.
- ‘ಶಾಸಕಾಂಗಪೂರ್ವ ಸಮಾಲೋಚನಾ ನೀತಿ’ (Pre-Legislative Consultative Policy) ಅಡಿಯಲ್ಲಿ ಕಡ್ಡಾಯವಾಗಿರುವಂತೆ ಸಾರ್ವಜನಿಕ ಅಭಿಪ್ರಾಯವನ್ನು ಪಡೆಯದೆ ಈ ಮಸೂದೆಯನ್ನು ಮಂಡಿಸಲಾಗಿದೆ.
- ‘ಜೀವವೈವಿಧ್ಯದ ಸುಸ್ಥಿರ ಬಳಕೆ ಮತ್ತು ಸಂರಕ್ಷಣೆ’ಯಲ್ಲಿ ಸ್ಥಳೀಯ ಸಮುದಾಯಗಳ ಪಾಲನ್ನು ರಕ್ಷಿಸುವ, ಸಂರಕ್ಷಿಸುವ ಅಥವಾ ಹೆಚ್ಚಿಸುವ ವಿಷಯದಲ್ಲಿ ‘ಪ್ರಸ್ತಾಪಿತ ತಿದ್ದುಪಡಿ’ ಯಲ್ಲಿನ ನಿಬಂಧನೆಗಳು ಅಸ್ಪಷ್ಟವಾಗಿವೆ.
- ಆಯುಷ್ ಸಚಿವಾಲಯಕ್ಕೆ “ಲಾಭ” ಮಾಡಿಕೊಡಲು ಮಾತ್ರ ಈ ತಿದ್ದುಪಡಿಗಳನ್ನು ಮಾಡಲಾಗಿದೆ ಎಂದು ಕಾರ್ಯಕರ್ತರು ಹೇಳುತ್ತಾರೆ.
- ಮಸೂದೆಯಲ್ಲಿ ಕಾಯಿದೆಯ ಪ್ರಮುಖ ಅಂಶವಾಗಿರುವ ‘ಜೈವಿಕ ಬಳಕೆ’ (Bio-utilization) ಎಂಬ ಪದವನ್ನು ಕೈಬಿಡಲಾಗಿದೆ. ‘ಜೈವಿಕ-ಬಳಕೆ’ ಪದವನ್ನು ಬಳಸದಿರುವುದು, ವಾಣಿಜ್ಯ ಉದ್ದೇಶಕ್ಕಾಗಿ ಪ್ರಮುಖ ಚಟುವಟಿಕೆಗಳು – ವರ್ಗೀಕರಣ, ಪ್ರಚಾರ ಮತ್ತು ಜೈವಿಕ ವಿಶ್ಲೇಷಣೆಯಂತಹ ಚಟುವಟಿಕೆಗಳ ಒಂದು ಶ್ರೇಣಿಯನ್ನು ಬಿಟ್ಟುಬಿಡಲಾಗುತ್ತದೆ.
- ಮಸೂದೆಯಲ್ಲಿ,ಬೆಳೆಸಿದ ಔಷಧೀಯ ಸಸ್ಯಗಳನ್ನು ಕಾಯಿದೆಯ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಆದರೆ ಯಾವ ಸಸ್ಯಗಳನ್ನು ಬೆಳೆಸಲಾಗುತ್ತದೆ ಮತ್ತು ಕಾಡು ಸಸ್ಯಗಳು ಯಾವುವು ಎಂಬುದನ್ನು ಕಂಡುಹಿಡಿಯುವುದು ಪ್ರಾಯೋಗಿಕವಾಗಿ ಅಸಾಧ್ಯವಾಗಿದೆ.
ಜೈವಿಕ ವೈವಿಧ್ಯ ಕಾಯಿದೆ, 2002:
- ‘ಜೈವಿಕ ವೈವಿಧ್ಯ ಕಾಯಿದೆ, 2002’ ಅನ್ನು ಜೈವಿಕ ವೈವಿಧ್ಯತೆಯ ಸಂರಕ್ಷಣೆ, ಅದರ ಘಟಕಗಳ ಸುಸ್ಥಿರ ಬಳಕೆ ಮತ್ತು ಜೈವಿಕ ಸಂಪನ್ಮೂಲಗಳ ಅಂತರ್ಗತ ಪ್ರಯೋಜನಗಳ ನ್ಯಾಯೋಚಿತ ಮತ್ತು ಸಮಾನ ವಿತ್ತೀಯ ವಿತರಣೆ ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳಿಗಾಗಿ ಜಾರಿಗೊಳಿಸಲಾಗಿದೆ.
- ಈ ಕಾನೂನಿನ ಮುಖ್ಯ ಉದ್ದೇಶವು ಭಾರತದ ಶ್ರೀಮಂತ ಜೀವವೈವಿಧ್ಯತೆ ಮತ್ತು ಸಂಬಂಧಿತ ಜ್ಞಾನವನ್ನು ವಿದೇಶಿ ವ್ಯಕ್ತಿಗಳು ಬಳಸದಂತೆ ರಕ್ಷಿಸುವುದಾಗಿದೆ.
- ಇದರಲ್ಲಿ, ಕೇಂದ್ರ ಮತ್ತು ರಾಜ್ಯ ಮಂಡಳಿಗಳು ಮತ್ತು ಸ್ಥಳೀಯ ಸಮಿತಿಗಳ ಮೂರು ಹಂತದ ರಚನೆಯ ಮೂಲಕ ಜೈವಿಕ ಕಳ್ಳತನ (biopiracy)ವನ್ನು ಪರಿಶೀಲಿಸಲು, ಜೈವಿಕ ವೈವಿಧ್ಯತೆ ಮತ್ತು ಸ್ಥಳೀಯ ಉತ್ಪಾದಕರನ್ನು ರಕ್ಷಿಸಲು ನಿಬಂಧನೆಗಳನ್ನು ಮಾಡಲಾಗಿದೆ.
- ಕಾಯಿದೆಯು ‘ಸ್ಥಳೀಯ ಸಂಸ್ಥೆಗಳಲ್ಲಿ’ ರಾಷ್ಟ್ರೀಯ ಜೀವವೈವಿಧ್ಯ ಪ್ರಾಧಿಕಾರ (National Biodiversity Authority), ರಾಜ್ಯ ಜೀವವೈವಿಧ್ಯ ಮಂಡಳಿಗಳು (State Biodiversity Boards) ಮತ್ತು ಜೀವವೈವಿಧ್ಯ ನಿರ್ವಹಣಾ ಸಮಿತಿ (Biodiversity Management Committees) ಗಳನ್ನು ಸ್ಥಾಪಿಸಲು ಅವಕಾಶ ನೀಡುತ್ತದೆ.
- ರಾಷ್ಟ್ರೀಯ ಜೀವವೈವಿಧ್ಯ ಪ್ರಾಧಿಕಾರಕ್ಕೆ (NBA) ಸಿವಿಲ್ ನ್ಯಾಯಾಲಯದ ಅಧಿಕಾರವನ್ನು ನೀಡಲಾಗಿದೆ.
ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:
ಓಪನ್ ಆಕ್ರಿಯೇಜ್ ಪರವಾನಗಿ ನೀತಿ:
(Open Acreage Licensing Policy)
ಅಂತಾರಾಷ್ಟ್ರೀಯ ಸ್ಪರ್ಧಾತ್ಮಕ ಟೆಂಡರ್‌ಗಳಿಗಾಗಿ ‘ಓಪನ್ ಆಕ್ರಿಯೇಜ್ ಪರವಾನಗಿ ನೀತಿ’(Open Acreage Licensing Policy – OALP)ಅಡಿಯಲ್ಲಿ ಏಳನೇ ಬಿಡ್ ಸುತ್ತಿನಲ್ಲಿ ತೈಲ ಮತ್ತು ಅನಿಲದ ಎಂಟು ಬ್ಲಾಕ್‌ಗಳನ್ನು ಸರ್ಕಾರ ನೀಡಿದೆ.
ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಆಮದುಗಳನ್ನು ಕಡಿಮೆ ಮಾಡಲು ಹೆಚ್ಚಿನ ಪ್ರದೇಶವನ್ನು ‘ಪರಿಶೋಧನೆ’ ಅಡಿಯಲ್ಲಿ ತರುವುದು ಇದರ ಉದ್ದೇಶವಾಗಿದೆ.
‘ಓಪನ್ ಆಕ್ರಿಯೇಜ್ ಪರವಾನಗಿ ನೀತಿ’ ಯ ಕುರಿತು:
‘ತೆರೆದ ಪ್ರದೇಶ ಪರವಾನಗಿ ನೀತಿ (OALP) ಯನ್ನು 2017 ರಲ್ಲಿ ‘ಹೈಡ್ರೋಕಾರ್ಬನ್ ಎಕ್ಸ್‌ಪ್ಲೋರೇಶನ್ ಮತ್ತು ಲೈಸೆನ್ಸಿಂಗ್ ಪಾಲಿಸಿ’ (HELP) ಅಡಿಯಲ್ಲಿ ಪ್ರಾರಂಭಿಸಲಾಯಿತು.
- OALP ಅಡಿಯಲ್ಲಿ, ಕಂಪನಿಗಳಿಗೆ ತೈಲ ಮತ್ತು ಅನಿಲವನ್ನು ಅನ್ವೇಷಿಸಲು ಬಯಸುವ ಪ್ರದೇಶಗಳನ್ನು ಗುರುತಿಸಲು ಮತ್ತು ಹೊರತೆಗೆಯಲು ಅನುಮತಿಸಲಾಗಿದೆ.
- ಕಂಪನಿಗಳು ಯಾವುದೇ ವಲಯಕ್ಕೆ ವರ್ಷಕ್ಕೆ ಮೂರು ಬಾರಿ ‘ಆಸಕ್ತಿಯ ಅಭಿವ್ಯಕ್ತಿಗೆ (expression of interest – EOI)’ ಗೆ ಅರ್ಜಿ ಸಲ್ಲಿಸಬಹುದು. ನಂತರ ‘ಕೇಳಿದ ಪ್ರದೇಶಗಳನ್ನು’ ಟೆಂಡರ್‌ಗಾಗಿ ಬಿಡ್ಡಿಂಗ್‌ಗೆ ಅಥವಾ ಹರಾಜಿಗೆ ಹಾಕಲಾಗುತ್ತದೆ.
- ಈ ನೀತಿಯ ಅಡಿಯಲ್ಲಿ, ಎಲ್ಲಾ ರೀತಿಯ ಹೈಡ್ರೋಕಾರ್ಬನ್‌ಗಳ ಅನ್ವೇಷಣೆ ಮತ್ತು ಉತ್ಪಾದನೆಗೆ ಏಕರೂಪದ ಪರವಾನಗಿಯನ್ನು ಒದಗಿಸಲಾಗಿದೆ, ಆ ಮೂಲಕ ಗುತ್ತಿಗೆದಾರರಿಗೆ ಸಾಂಪ್ರದಾಯಿಕ ಮತ್ತು ಅಸಾಂಪ್ರದಾಯಿಕ ತೈಲ ಮತ್ತು ಅನಿಲ ಸಂಪನ್ಮೂಲಗಳನ್ನು ಪತ್ತೆಹಚ್ಚಲು ಅನುವು ಮಾಡಿಕೊಡಲಾಗುತ್ತದೆ.
- ಈ ಕ್ಷೇತ್ರಗಳನ್ನು ‘ಆದಾಯ-ಹಂಚಿಕೆ ಮಾದರಿ’ ಅಡಿಯಲ್ಲಿ ನೀಡಲಾಗುತ್ತದೆ ಮತ್ತು ಉತ್ಪಾದಿಸಲಾಗುವ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲಕ್ಕೆ ಮಾರುಕಟ್ಟೆ ಮತ್ತು ಬೆಲೆ ನಿಗದಿಗೆ ಸ್ವಾತಂತ್ರ್ಯವನ್ನು ಒದಗಿಸಲಾಗುತ್ತದೆ.
[ad_2]