[Mission 2022] ದೈನಂದಿನ ಪ್ರಚಲಿತ ಘಟನೆಗಳು ದಿನಾಂಕ – 29 ನೇ ಸೆಪ್ಟೆಂಬರ್ 2021 – INSIGHTSIAS

[ad_1]

 

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ 1:

1. ಭಗತ್ ಸಿಂಗ್.

 

ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ಪಕ್ಷೇತರ ಶಾಸಕರಿಗೆ ಪಕ್ಷಾಂತರ ವಿರೋಧಿ ಕಾನೂನು.

2. ನಾಯಿಯ ಮೂಲಕ ಹರಡುವ ರೇಬೀಸ್ ರೋಗದ ನಿರ್ಮೂಲನೆಗಾಗಿ ರಾಷ್ಟ್ರೀಯ ಕ್ರಿಯಾ ಯೋಜನೆ.

3. ಜಾತಿ ಗಣತಿ.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ಇಂದು ಜನಿಸಿದ ಶಿಶುಗಳ ಮೇಲೆ ಹವಾಮಾನ ಬದಲಾವಣೆಯ ಹೊರೆ.

2. 25 ವರ್ಷಗಳಲ್ಲಿ ಪಂಜಾಬ್ ನ ಮರುಭೂಮಿಕರಣ.

3. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ವಿಶ್ವ ಸಾಗರ ದಿನ.

2. ಜೊಜಿಲಾ ಸುರಂಗ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 1


 

ವಿಷಯಗಳು: ಸ್ವಾತಂತ್ರ್ಯ ಹೋರಾಟ –  ಅದರ ವಿವಿಧ ಹಂತಗಳು ಮತ್ತು ದೇಶದ ವಿವಿಧ ಭಾಗಗಳಿಂದ ಪ್ರಮುಖ ಕೊಡುಗೆದಾರರು ಮತ್ತು ಅವರ ಕೊಡುಗೆಗಳು.

ಭಗತ್ ಸಿಂಗ್:


ಸಂದರ್ಭ:

28 ಸೆಪ್ಟೆಂಬರ್ 2021 ರಂದು, ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ 114 ನೇ ಜನ್ಮ ಜಯಂತಿಯನ್ನು ಆಚರಿಸಲಾಯಿತು.

current affairs

 

ಭಗತ್ ಸಿಂಗ್ ರ ಬಗೆಗಿನ ಪ್ರಮುಖ ಸಂಗತಿಗಳು:

  1. ಭಗತ್ ಸಿಂಗ್ 1907 ರಲ್ಲಿ ಲಾಯಲ್ ಪುರ್ ಜಿಲ್ಲೆಯಲ್ಲಿ (ಈಗ ಪಾಕಿಸ್ತಾನದಲ್ಲಿದೆ) ಜನಿಸಿದರು ಮತ್ತು ರಾಜಕೀಯ ಚಟುವಟಿಕೆಗಳಲ್ಲಿ ಆಳವಾಗಿ ತೊಡಗಿಸಿಕೊಂಡಿದ್ದ ಸಿಖ್ ಕುಟುಂಬದಲ್ಲಿ ಬೆಳೆದರು.
  2. 1923 ರಲ್ಲಿ ಭಗತ್ ಸಿಂಗ್ ಲಾಲಾ ಲಜಪತ್ ರಾಯ್ ಮತ್ತು ಭಾಯಿ ಪರಮಾನಂದ್ ಅವರು ಸ್ಥಾಪಿಸಿದ ಲಾಹೋರ್‌ನ ನ್ಯಾಷನಲ್ ಕಾಲೇಜನ್ನು ಸೇರಿದರು.
  3. 1924 ರಲ್ಲಿ, ಭಗತ್ ಸಿಂಗ್ ಹಿಂದುಸ್ತಾನ್ ರಿಪಬ್ಲಿಕನ್ ಅಸೋಸಿಯೇಶನ್ (HRA) ಸದಸ್ಯರಾದರು, ಇದನ್ನು ಒಂದು ವರ್ಷದ ಹಿಂದೆ ಕಾನ್ಪುರದಲ್ಲಿ ಸಚೀಂದ್ರನಾಥ ಸನ್ಯಾಲ್ ಆರಂಭಿಸಿದ್ದರು.
  4. 1928 ರಲ್ಲಿ, HRA ಯ ಹೆಸರನ್ನು ‘ಹಿಂದುಸ್ತಾನ್ ರಿಪಬ್ಲಿಕನ್ ಅಸೋಸಿಯೇಶನ್’ ನಿಂದ ‘ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಶನ್’ (HSRA) ಎಂದು ಮರುನಾಮಕರಣ ಮಾಡಲಾಯಿತು.
  5. 1925-26ರ ವರ್ಷದಲ್ಲಿ, ಭಗತ್ ಸಿಂಗ್ ಮತ್ತು ಆತನ ಸಹಚರರು ‘ನೌಜವಾನ್ ಭಾರತ್ ಸಭಾ’ ಎಂಬ ಉಗ್ರಗಾಮಿ ಯುವ ಸಂಘಟನೆಯನ್ನು ಆರಂಭಿಸಿದರು.
  6. 1927 ರಲ್ಲಿ, ವಿದ್ರೋಹಿ (‘ರೆಬೆಲ್’) ಎಂಬ ಗುಪ್ತನಾಮದಲ್ಲಿ ಲೇಖನ ಬರೆದಿದ್ದಕ್ಕಾಗಿ ‘ಕಾಕೋರಿ ಪ್ರಕರಣ’ದೊಂದಿಗೆ ಸಂಪರ್ಕ ಹೊಂದಿದ ಆರೋಪದ ಮೇಲೆ ಅವರನ್ನು ಮೊದಲ ಬಾರಿಗೆ ಬಂಧಿಸಲಾಯಿತು.
  7. 1928 ರಲ್ಲಿ ಲಾಲಾ ಲಜಪತ್ ರಾಯ್ ಸೈಮನ್ ಆಯೋಗದ ಆಗಮನವನ್ನು ಪ್ರತಿಭಟಿಸಲು ಮೆರವಣಿಗೆ ನಡೆಸಿದರು. ಈ ಮೆರವಣಿಗೆಯ ಮೇಲೆ ಪೊಲೀಸರು ಅಮಾನುಷವಾಗಿ ಲಾಠಿ ಚಾರ್ಜ್ ಮಾಡಿದರು.ಇದರಲ್ಲಿ ಲಾಲಾ ಲಜಪತ್ ರಾಯ್ ಗಂಭೀರವಾಗಿ ಗಾಯಗೊಂಡರು ಮತ್ತು ನಂತರ ನಿಧನರಾದರು.
  8. ಲಾಲಾ ಲಜಪತ್ ರಾಯ್ ಸಾವಿಗೆ ಸೇಡು ತೀರಿಸಿಕೊಳ್ಳಲು, ಭಗತ್ ಸಿಂಗ್ ಮತ್ತು ಆತನ ಸಹಚರರು ಪೊಲೀಸ್ ವರಿಷ್ಠಾಧಿಕಾರಿ ಜೇಮ್ಸ್ ಎ. ಸ್ಕಾಟ್ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದರು.
  9. ಆದಾಗ್ಯೂ, ಈ ಕ್ರಾಂತಿಕಾರಿಗಳು ಆಕಸ್ಮಿಕವಾಗಿ ಜೆಪಿ ಸಾಂಡರ್ಸ್ ಅವರನ್ನು ಕೊಂದರು. ಈ ಘಟನೆಯನ್ನು ಲಾಹೋರ್ ಪಿತೂರಿ ಪ್ರಕರಣ (1929) ಎಂದು ಕರೆಯಲಾಗುತ್ತದೆ.
  10. ಏಪ್ರಿಲ್ 8, 1929 ರಂದು, ಭಗತ್ ಸಿಂಗ್ ಮತ್ತು ಬಿ.ಕೆ. ದತ್,‘ಸಾರ್ವಜನಿಕ ಸುರಕ್ಷತಾ ಮಸೂದೆ’ (Public Safety Bill) ಮತ್ತು ‘ವ್ಯಾಪಾರ ವಿವಾದ ಮಸೂದೆ’(Trade Dispute Bill) ಎಂಬ ಎರಡು ದಮನಕಾರಿ ಕಾನೂನುಗಳ ಅಂಗೀಕಾರವನ್ನು ವಿರೋಧಿಸಿ ‘ಕೇಂದ್ರ ಶಾಸಕಾಂಗ ಸಭೆಯಲ್ಲಿ’ ಬಾಂಬ್ ಎಸೆದರು.
  11. ಅದರ ಉದ್ದೇಶ ಯಾರನ್ನೂ ಕೊಲ್ಲುವುದಾಗಿರಲಿಲ್ಲ, ಬದಲಾಗಿ ಕಿವುಡರಿಗೆ ತಮ್ಮ ಧ್ವನಿಯನ್ನು ಕೇಳುವಂತೆ ಮಾಡುವುದು ಮತ್ತು ವಿದೇಶಿ ಸರ್ಕಾರಕ್ಕೆ ತಾವು ಅನುಭವಿಸುತ್ತಿರುವ ಕ್ರೂರ ಶೋಷಣೆಯನ್ನು ನೆನಪಿಸುವುದಾಗಿತ್ತು.

ಭಗತ್ ಸಿಂಗ್ ಅವರ ಮೇಲನ ಪ್ರಕರಣ:

ಭಗತ್ ಸಿಂಗ್ ಅವರ ಜೀವನದ ಬಹುಮುಖ್ಯ ಭಾಗವೆಂದರೆ 1929 ರ ಏಪ್ರಿಲ್ 8 ರಂದು ದೆಹಲಿಯ ಕೇಂದ್ರೀಯ ಅಸೆಂಬ್ಲಿಯಲ್ಲಿ ಬಂಧನಕ್ಕೊಳಗಾದ ನಂತರ ಜೈಲಿನಲ್ಲಿ ಕಳೆದದ್ದು, ಅಲ್ಲಿ ಅವರು ಮತ್ತು ಬಿ.ಕೆ.ದತ್ ‘ಕಿವುಡರನ್ನು ಕೇಳುವಂತೆ ಮಾಡಲು’ ಅಸೆಂಬ್ಲಿಯಲ್ಲಿ ಹಾನಿಯಾಗದ ಬಾಂಬ್‌ಗಳನ್ನು ಎಸೆದ ನಂತರ ತಮ್ಮನ್ನು ಬಂಧಿಸುವಂತೆ ತಿಳಿಸಿದರು.ಈ ಘಟನೆಗಾಗಿ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು.

  1. ಆದಾಗ್ಯೂ,ಸೌಂಡರ್ಸ್ ಹತ್ಯೆಗೆ ಸಂಬಂಧಿಸಿದ ಲಾಹೋರ್ ಪಿತೂರಿ ಪ್ರಕರಣದಲ್ಲಿ ಭಗತ್ ಸಿಂಗ್ ಅವರನ್ನು ಮತ್ತೆ ಬಂಧಿಸಿ ವಿಚಾರಣೆಗೆ ಒಳಪಡಿಸಲಾಯಿತು.
  2. ಈ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾದ ನಂತರ ಭಗತ್ ಸಿಂಗ್ ಅವರನ್ನು ಮಾರ್ಚ್ 23, 1931 ರಂದು ರಾಜ್ ಗುರು, ಮತ್ತು ಸುಖದೇವ್ ಅವರೊಂದಿಗೆ ಲಾಹೋರ್ ಕೇಂದ್ರ ಕಾರಾಗೃಹದಲ್ಲಿ ಗಲ್ಲಿಗೇರಿಸಲಾಯಿತು.
  3. ಪ್ರತಿವರ್ಷ ಮಾರ್ಚ್ 23 ಅನ್ನು ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ರವರುಗಳ ಗೌರವಾರ್ಥವಾಗಿ ಹುತಾತ್ಮರ ದಿನವನ್ನಾಗಿ ಆಚರಿಸಲಾಗುತ್ತದೆ.
  4. ಕೈದಿಗಳಿಗೆ ರಾಜಕೀಯ ಖೈದಿಗಳ ಸ್ಥಾನಮಾನವನ್ನು ಕೋರಿ ಭಗತ್ ಸಿಂಗ್ ಅವರು ಉಪವಾಸ ಸತ್ಯಾಗ್ರಹದಲ್ಲಿ ಭಾಗಿಯಾಗಿದ್ದರು.
  5. ಗಾಂಧೀಜಿಯವರ ಪ್ರಭಾವ: ಆರಂಭದಲ್ಲಿ ಅವರು ಮಹಾತ್ಮ ಗಾಂಧಿ ಮತ್ತು ಅಸಹಕಾರ ಚಳವಳಿಯನ್ನು ಬೆಂಬಲಿಸಿದರು. ಆದರೆ ಚೌರಿ ಚೌರಾ ಘಟನೆಯ ಹಿನ್ನೆಲೆಯಲ್ಲಿ ಗಾಂಧೀಜಿಯವರು ಚಳುವಳಿಯನ್ನು ಹಿಂತೆಗೆದುಕೊಂಡ ನಂತರ ಭಗತ್ ಸಿಂಗ್ ಕ್ರಾಂತಿಕಾರಿ ರಾಷ್ಟ್ರೀಯತೆಯ ಕಡೆಗೆ ತಿರುಗಿದರು.
  6. ರಾಜಕೀಯ ವಿಚಾರಧಾರೆ: ಅವರಿಗೆ ಸ್ವಾತಂತ್ರ್ಯದ ಅರ್ಥವು ಬ್ರಿಟಿಷರನ್ನು ದೇಶದಿಂದ ಓಡಿಸಲು ಮಾತ್ರ ಸೀಮಿತವಾಗಿರಲಿಲ್ಲ; ಬದಲಾಗಿ ಅವರು ಬಡತನ, ಅಸ್ಪೃಶ್ಯತೆ, ಕೋಮು ಕಲಹ ಮತ್ತು ಎಲ್ಲಾ ರೀತಿಯ ತಾರತಮ್ಯ ಮತ್ತು ಶೋಷಣೆಯಿಂದ ಸ್ವಾತಂತ್ರ್ಯವನ್ನು ಬಯಸಿದ್ದರು.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಸಂವಿಧಾನ- ಐತಿಹಾಸಿಕ ಆಧಾರಗಳು, ವಿಕಸನ, ವೈಶಿಷ್ಟ್ಯಗಳು, ತಿದ್ದುಪಡಿಗಳು, ಮಹತ್ವದ ನಿಬಂಧನೆಗಳು ಮತ್ತು ಮೂಲ ರಚನೆ.

ಸ್ವತಂತ್ರ ಶಾಸಕರಿಗೆ ಪಕ್ಷಾಂತರ ವಿರೋಧಿ ಕಾನೂನು:


(Anti-defection law, for independent legislators)

ಸಂದರ್ಭ:

ಗುಜರಾತಿನ ವಡ್ಗಮ್ ಕ್ಷೇತ್ರದಿಂದ ಸ್ವತಂತ್ರ ಶಾಸಕರಾಗಿ ಆಯ್ಕೆಯಾದ ಜಿಗ್ನೇಶ್ ಮೇವಾನಿ ಅವರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಭರವಸೆ ನೀಡಿದ್ದಾರೆ, ಅವರು ಔಪಚಾರಿಕವಾಗಿ ಕಾಂಗ್ರೆಸ್ ಸೇರದಿದ್ದರೂ, ಅವರು ಪಕ್ಷದ ಸಿದ್ಧಾಂತಕ್ಕೆ ಸೇರಿಕೊಂಡಿರುವುದಾಗಿ ಹೇಳಿದ್ದಾರೆ. ಆದ್ದರಿಂದ, ಈ ಸಂದರ್ಭದಲ್ಲಿ ಸಂವಿಧಾನದ ಹತ್ತನೇ ಅನುಸೂಚಿಯ ನಿಬಂಧನೆಗಳು ಅವರಿಗೆ ಅನ್ವಯಿಸುವುದಿಲ್ಲ.

ಪ್ರಸ್ತುತತೆ: ಭಾರತೀಯ ಸಂವಿಧಾನದ ಹತ್ತನೇ ಅನುಸೂಚಿ:

  1. ಭಾರತೀಯ ಸಂವಿಧಾನದ ‘ಹತ್ತನೇ ಅನುಸೂಚಿ ಯನ್ನು’ (Tenth Schedule) ಜನಪ್ರಿಯವಾಗಿ ‘ಪಕ್ಷಾಂತರ ನಿಷೇಧ ಕಾನೂನು’ಎಂದು ಕರೆಯಲಾಗುತ್ತದೆ.
  2. ಶಾಸಕರ ರಾಜಕೀಯ ಪಕ್ಷಗಳ ಬದಲಾವಣೆಗೆ ಸಂಬಂಧಿಸಿದಂತೆ ಕಾನೂನಿನ ಅಡಿಯಲ್ಲಿ ಯಾವ ಸಂದರ್ಭಗಳಲ್ಲಿ ಕ್ರಮ ಕೈಗೊಳ್ಳಬಹುದು ಎಂಬುದನ್ನು ಇದು ನಿರ್ದಿಷ್ಟಪಡಿಸುತ್ತದೆ.
  3. 52 ನೇ ತಿದ್ದುಪಡಿ ಕಾಯ್ದೆಯ ಮೂಲಕ ‘ಹತ್ತನೇ ವೇಳಾಪಟ್ಟಿ’ಯನ್ನು ಸಂವಿಧಾನಕ್ಕೆ ಸೇರಿಸಲಾಗಿದೆ.
  4. ಇದರಲ್ಲಿ, ಚುನಾವಣೆಯ ನಂತರ ಸ್ವತಂತ್ರ ಶಾಸಕರು ಯಾವುದೇ ಪಕ್ಷಕ್ಕೆ ಸೇರುವ ಸ್ಥಿತಿಗತಿಗಳ ಬಗ್ಗೆಯೂ ಇದರಲ್ಲಿ ನಿಬಂಧನೆಗಳನ್ನು ಮಾಡಲಾಗಿದೆ.

 

ಪಕ್ಷಾಂತರ ನಿಷೇಧ ಕಾನೂನು ಎಂದರೇನು?

(What is Anti-defection law?)

  1. 1985 ರಲ್ಲಿ, ಸಂವಿಧಾನ 52 ನೆಯ ತಿದ್ದುಪಡಿ ಕಾಯ್ದೆಯ ಮೂಲಕ 10 ನೇ ಅನುಸೂಚಿಯನ್ನು ಸಂವಿಧಾನದಲ್ಲಿ ಸೇರಿಸಲಾಯಿತು.
  2. ಇದರಲ್ಲಿ, ಸದನದ ಸದಸ್ಯರು ಒಂದು ರಾಜಕೀಯ ಪಕ್ಷದಿಂದ ಇನ್ನೊಂದಕ್ಕೆ ಸೇರಿದಾಗ ‘ಪಕ್ಷಾಂತರದ’ ಆಧಾರದ ಮೇಲೆ ಶಾಸಕರ / ಸಂಸದರ ಅನರ್ಹತೆಯ ಬಗ್ಗೆ ನಿರ್ಧರಿಸಲು ಅವಕಾಶ ಕಲ್ಪಿಸಲಾಗಿದೆ.
  3. ಸಂಸದರು ಮತ್ತು ಶಾಸಕರು ತಮ್ಮ ಮೂಲ ರಾಜಕೀಯ ಪಕ್ಷವನ್ನು ಅಂದರೆ ಯಾವ ಪಕ್ಷದ ಟಿಕೆಟ್ ಆಧರಿಸಿ ಆಯ್ಕೆಯಾಗಿರುತ್ತಾರೋ ಅದನ್ನು ಹೊರತುಪಡಿಸಿ ಬೇರೆ ಪಕ್ಷಗಳಿಗೆ ಸೇರುವುದನ್ನು ನಿಷೇಧಿಸುವ ಮೂಲಕ ಸರ್ಕಾರಗಳಲ್ಲಿ ಸ್ಥಿರತೆಯನ್ನು ತರುವುದು ಈ ತಿದ್ದುಪಡಿಯ ಉದ್ದೇಶವಾಗಿತ್ತು.
  4. ಇದರ ಅಡಿಯಲ್ಲಿ ರಾಜಕೀಯ ನಿಷ್ಠೆಯನ್ನು ಬದಲಿಸುವ ಸಂಸದರಿಗೆ ವಿಧಿಸುವ ದಂಡವೆಂದರೆ ಅವರನ್ನು ಸಂಸದೀಯ ಸದಸ್ಯತ್ವದಿಂದ ಅನರ್ಹಗೊಳಿಸುವುದು ಮತ್ತು ಮಂತ್ರಿಗಳಾಗದಂತೆ ನಿಷೇಧಿಸುವುದಾಗಿದೆ.
  5. ಸದನದ ಮತ್ತೊಬ್ಬ ಸದಸ್ಯರು ಸದನದ ಅಧ್ಯಕ್ಷರಿಗೆ ಪಕ್ಷಾಂತರದ ಕುರಿತು ಸಲ್ಲಿಸಿದ ಅರ್ಜಿಯ ಆಧಾರದ ಮೇಲೆ ಶಾಸಕರು ಮತ್ತು ಸಂಸದರನ್ನು ಅನರ್ಹಗೊಳಿಸುವ ಪ್ರಕ್ರಿಯೆಯನ್ನು ಇದು ತಿಳಿಸುತ್ತದೆ.
  6. ಪಕ್ಷಾಂತರ ವಿರೋಧಿ ಕಾನೂನನ್ನು ಜಾರಿಗೆ ತರುವ ಎಲ್ಲ ಅಧಿಕಾರಗಳನ್ನು ಸ್ಪೀಕರ್ ಅಥವಾ ಸದನದ ಅಧ್ಯಕ್ಷರಿಗೆ ನೀಡಲಾಗಿದೆ ಮತ್ತು ಅವರ ನಿರ್ಧಾರ ಅಂತಿಮವಾಗಿರುತ್ತದೆ.

ಸದಸ್ಯರನ್ನು ಯಾವಾಗ ಅನರ್ಹಗೊಳಿಸಬಹುದು?

ರಾಜಕೀಯ ಪಕ್ಷವನ್ನು ಬದಲಾಯಿಸಿದರೆ ಶಾಸಕರು / ಸಂಸದರು ಕಾನೂನಿನಡಿಯಲ್ಲಿ ಯಾವ ಕ್ರಮಗಳನ್ನು ಎದುರಿಸಬೇಕಾಗಬಹುದು ಎಂಬುದನ್ನು ಈ ಕಾನೂನು ನಿರ್ದಿಷ್ಟಪಡಿಸುತ್ತದೆ. ಪಕ್ಷಾಂತರ ಮಾಡುವ ಸಂಸದರ ಸಂದರ್ಭದಲ್ಲಿ ಈ ಕಾನೂನು ಮೂರು ರೀತಿಯ ಸನ್ನಿವೇಶಗಳನ್ನು ರೂಪಿಸುತ್ತದೆ:

  1. ಸದನದ ಸದಸ್ಯನೊಬ್ಬ ರಾಜಕೀಯ ಪಕ್ಷವೊಂದಕ್ಕೆ ಸೇರಿದವನಾಗಿದ್ದರೆ,
  2. ಸ್ವಯಂಪ್ರೇರಣೆಯಿಂದ ತನ್ನ ರಾಜಕೀಯ ಪಕ್ಷದ ಸದಸ್ಯತ್ವವನ್ನು ತ್ಯಜಿಸಿದರೆ, ಅಥವಾ
  3. ಅವರು ತಮ್ಮ ರಾಜಕೀಯ ಪಕ್ಷದ ಸೂಚನೆಗಳಿಗೆ ವಿರುದ್ಧವಾಗಿ ಸದನದಲ್ಲಿ ಮತ ಚಲಾಯಿಸಿದರೆ.
  4. ಸ್ವತಂತ್ರ ಅಭ್ಯರ್ಥಿಯು ಚುನಾವಣೆಯ 6 ತಿಂಗಳ ನಂತರ ರಾಜಕೀಯ ಪಕ್ಷವೊಂದಕ್ಕೆ ಸೇರಿದರೆ.
  5. ನಾಮನಿರ್ದೇಶಿತ ಸದಸ್ಯರೊಬ್ಬರು (Nominated Member) ಶಾಸಕಾಂಗದ ಸದಸ್ಯರಾದ ಆರು ತಿಂಗಳ ಒಳಗೆ ಅವರು ರಾಜಕೀಯ ಪಕ್ಷವೊಂದನ್ನು ಸೇರಬಹುದು ಎಂದು ಕಾನೂನು ತಿಳಿಸುತ್ತದೆ ಅದರ ನಂತರ ಪಕ್ಷವೊಂದಕ್ಕೆ ಸೇರಿದರೆ ವಿಧಾನಮಂಡಲ ಅಥವಾ ಸಂಸತ್ತಿನಲ್ಲಿ ಆ ನಾಮನಿರ್ದೇಶಿತ ಸದಸ್ಯರು ತಮ್ಮ ಸ್ಥಾನವನ್ನು ಕಳೆದುಕೊಳ್ಳುತ್ತಾರೆ.

ಕಾನೂನಿನ ಅಡಿಯಲ್ಲಿ ಇರುವ ವಿನಾಯಿತಿಗಳು:

ಸದನದ ಸದಸ್ಯರು (ಸಂಸದರು/ಶಾಸಕರು) ಕೆಲವು ಸಂದರ್ಭಗಳಲ್ಲಿ ಅನರ್ಹತೆಯ ಅಪಾಯವಿಲ್ಲದೆ ತಮ್ಮ ಪಕ್ಷವನ್ನು ಬದಲಾಯಿಸಬಹುದು.

  1. ಒಂದು ರಾಜಕೀಯ ಪಕ್ಷದ ಕನಿಷ್ಠ ಮೂರನೇ ಎರಡರಷ್ಟು ಶಾಸಕರು ವಿಲೀನದ ಪರವಾಗಿದ್ದರೆ ಮತ್ತೊಂದು ಪಕ್ಷದೊಂದಿಗೆ ವಿಲೀನಗೊಳ್ಳಲು ಅವಕಾಶವಿದೆ ಮತ್ತು ಇದನ್ನು ಕಾನೂನು ಅನುಮತಿಸುತ್ತದೆ.
  2. ಅಂತಹ ಸನ್ನಿವೇಶದಲ್ಲಿ, ಇತರ ಪಕ್ಷದೊಂದಿಗೆ ವಿಲೀನಗೊಳ್ಳಲು ನಿರ್ಧರಿಸುವ ಸದಸ್ಯರು ಮತ್ತು ಮೂಲ ಪಕ್ಷದಲ್ಲಿ ಉಳಿಯುವ ಸದಸ್ಯರನ್ನು ಅನರ್ಹಗೊಳಿಸಲಾಗುವುದಿಲ್ಲ.
  3. ಲೋಕಸಭೆ ಅಥವಾ ವಿಧಾನಸಭೆಯ ಸದಸ್ಯನು ಲೋಕಸಭೆ ಅಥವಾ ವಿಧಾನಸಭೆಯ ಸಭಾಪತಿಯಾಗಿ ಆಯ್ಕೆಯಾದ ನಂತರ ಸ್ವಯಂಪ್ರೇರಣೆಯಿಂದ ತನ್ನ ಪಕ್ಷದ ಸದಸ್ಯತ್ವವನ್ನು ಬಿಟ್ಟುಕೊಟ್ಟರೆ ಅಥವಾ ಸಭಾಪತಿಯ ಹುದ್ದೆಯನ್ನು ತ್ಯಜಿಸಿದ ನಂತರ ಮರಳಿ ತನ್ನ ಮಾತೃ ಪಕ್ಷವನ್ನು ಸೇರಿಕೊಂಡರೆ ಆ ವ್ಯಕ್ತಿಯು ಪಕ್ಷಾಂತರ ನಿಷೇಧ ಕಾಯ್ದೆಯಡಿಯಲ್ಲಿ ಅನರ್ಹಗೊಳ್ಳುವುದಿಲ್ಲ.

ಪ್ರಿಸೈಡಿಂಗ್ ಅಧಿಕಾರಿಯ (ಸಭಾಧ್ಯಕ್ಷರು) ನಿರ್ಧಾರವು ನ್ಯಾಯಾಂಗದ ಪರಿಶೀಲನೆಗೆ ಒಳಪಟ್ಟಿರುತ್ತದೆ:

ಈ ಶಾಸನವು, ಆರಂಭದಲ್ಲಿ ಪ್ರಿಸೈಡಿಂಗ್ ಅಧಿಕಾರಿಯ ನಿರ್ಧಾರವು ನ್ಯಾಯಾಂಗ ಪರಿಶೀಲನೆಗೆ ಒಳಪಡುವುದಿಲ್ಲ ಎಂದು ಹೇಳಿತ್ತು. ಆದರೆ 1992 ರಲ್ಲಿ, ಸುಪ್ರೀಂ ಕೋರ್ಟ್ ಈ ನಿಬಂಧನೆಯನ್ನು ತಿರಸ್ಕರಿಸಿತು ಮತ್ತು ಈ ಸಂದರ್ಭದಲ್ಲಿ ಪ್ರಿಸೈಡಿಂಗ್ ಅಧಿಕಾರಿಯ ತೀರ್ಪಿನ ವಿರುದ್ಧ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿತು.

ಅಲ್ಲದೆ, ಪ್ರಿಸೈಡಿಂಗ್ ಅಧಿಕಾರಿಯು ತನ್ನ ಆದೇಶವನ್ನು ನೀಡುವವರೆಗೆ ನ್ಯಾಯಾಂಗದ ಹಸ್ತಕ್ಷೇಪ ಸಲ್ಲದು ಎಂದು ತೀರ್ಪು ನೀಡಿತು.

ಪಕ್ಷಾಂತರ ನಿಷೇಧ ಕುರಿತು ನಿರ್ಧಾರ ಕೈಗೊಳ್ಳಲು ಪ್ರಿಸೈಡಿಂಗ್ ಅಧಿಕಾರಿಗೆ ಯಾವುದೇ ಸಮಯದ ಮಿತಿ ನಿಗದಿ ಪಡಿಸಲಾಗಿದೆಯೇ?

ಕಾನೂನಿನ ಪ್ರಕಾರ, ಅನರ್ಹತೆ ಅರ್ಜಿಯನ್ನು ನಿರ್ಧರಿಸಲು ಪ್ರಿಸೈಡಿಂಗ್ ಅಧಿಕಾರಿಗಳಿಗೆ ಯಾವುದೇ ಸಮಯ ಮಿತಿಯನ್ನು ನಿಗದಿಪಡಿಸಿಲ್ಲ. ‘ಪಕ್ಷಾಂತರ’ ಪ್ರಕರಣಗಳಲ್ಲಿ, ಯಾವುದೇ ನ್ಯಾಯಾಲಯವು ಅಧ್ಯಕ್ಷೀಯ ಅಧಿಕಾರಿಯು ನಿರ್ಧಾರ ತೆಗೆದುಕೊಂಡ ನಂತರವೇ ಮಧ್ಯಪ್ರವೇಶಿಸಬಹುದು, ಆದ್ದರಿಂದ ಅರ್ಜಿದಾರರ ಬಳಿ ಉಳಿದಿರುವ ಏಕೈಕ ಆಯ್ಕೆಯು ಈ ವಿಷಯವನ್ನು ನಿರ್ಧರಿಸುವವರೆಗೆ ಕಾಯುವುದು ಆಗಿದೆ.

 

ವಿಷಯಗಳು: ಆರೋಗ್ಯ, ಶಿಕ್ಷಣ, ಸಾಮಾಜಿಕ ವಲಯ / ಸೇವೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ಮಾನವ ಸಂಪನ್ಮೂಲ ಸಂಬಂಧಿತ ವಿಷಯಗಳು.

ನಾಯಿಯ ಮೂಲಕ ಹರಡುವ ರೇಬೀಸ್ ರೋಗದ ನಿರ್ಮೂಲನೆಗಾಗಿ ರಾಷ್ಟ್ರೀಯ ಕ್ರಿಯಾ ಯೋಜನೆ:


(National Action Plan for dog Mediated Rabies Elimination)

ಸಂದರ್ಭ:

‘ವಿಶ್ವ ರೇಬೀಸ್ ದಿನ’ ದ ಸಂದರ್ಭದಲ್ಲಿ, 2030 ರ ವೇಳೆಗೆ ‘ನಾಯಿಯ ಮೂಲಕ ಹರಡುವ ರೇಬೀಸ್ ರೋಗದ ನಿರ್ಮೂಲನೆಗಾಗಿ ರಾಷ್ಟ್ರೀಯ ಕ್ರಿಯಾ ಯೋಜನೆ’ (National Action Plan for dog Mediated Rabies Elimination – NAPRE) ಯನ್ನು ಕೇಂದ್ರ ಸರ್ಕಾರವು ಅನಾವರಣಗೊಳಿಸಿದೆ.

ಕರಡು ಕ್ರಿಯಾ ಯೋಜನೆಯನ್ನು ‘ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್’ (NCDC) ಮೀನುಗಾರಿಕೆ, ಪಶು ಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದೊಂದಿಗೆ ಸಮಾಲೋಚಿಸಿ ಸಿದ್ಧಪಡಿಸಿದೆ.

ರೇಬೀಸ್ ರೋಗದ ಬಗ್ಗೆ:

  1. ರೇಬೀಸ್ ಮಾರಕ ಆದರೆ ತಡೆಯಬಹುದಾದ ವೈರಲ್ ರೋಗವಾಗಿದೆ. ಯಾವುದೇ ಹುಚ್ಚು ಪ್ರಾಣಿಯು ಕಚ್ಚಿದಾಗ ಅಥವಾ ಪರಚಿದಾಗ ರೋಗವು ಜನರಿಗೆ ಮತ್ತು ಸಾಕುಪ್ರಾಣಿಗಳಿಗೆ ಹರಡಬಹುದು.
  2. ರೇಬೀಸ್ ಹೆಚ್ಚಾಗಿ ಕಾಡು ಪ್ರಾಣಿಗಳಾದ ಬಾವಲಿಗಳು, ರಕೂನ್ಗಳು, ಸ್ಕಂಕ್ಸ್ ಮತ್ತು ನರಿಗಳು ಮತ್ತು ನಾಯಿಗಳಲ್ಲಿ ಕಂಡುಬರುತ್ತದೆ. ಮತ್ತು ವಿಶ್ವಾದ್ಯಂತ ರೇಬೀಸ್ ಸಾವುಗಳಲ್ಲಿ ಹೆಚ್ಚಿನವು ನಾಯಿ ಕಡಿತದಿಂದ ಸಂಭವಿಸುತ್ತವೆ.
  3. ರೇಬೀಸ್ ವೈರಸ್ ವ್ಯಕ್ತಿಯ ಕೇಂದ್ರ ನರಮಂಡಲ ವ್ಯವಸ್ಥೆಗೆ ಸೋಂಕು ತರುತ್ತದೆ.
  4. ರೇಬೀಸ್‌ಗೆ ಒಳಗಾದ ನಂತರ ಒಬ್ಬ ವ್ಯಕ್ತಿಯು ಸರಿಯಾದ ವೈದ್ಯಕೀಯ ಆರೈಕೆಯನ್ನು ಪಡೆಯದಿದ್ದರೆ,ವೈರಸ್ ಮೆದುಳಿನಲ್ಲಿ ರೋಗವನ್ನು ಉಂಟುಮಾಡಬಹುದು,ಅಂತಿಮವಾಗಿ ಸಾವಿಗೆ ಕಾರಣವಾಗುತ್ತದೆ.
  5. ಸಾಕುಪ್ರಾಣಿಗಳಿಗೆ ಲಸಿಕೆ ಹಾಕುವುದು, ವನ್ಯಜೀವಿಗಳಿಂದ ದೂರವಿರುವುದು ಮತ್ತು ರೋಗಲಕ್ಷಣಗಳು ಪ್ರಾರಂಭವಾಗುವ ಮೊದಲು ಸಂಭವನೀಯ ಸಂಪರ್ಕ ಹೊಂದಿದ ನಂತರ ವೈದ್ಯಕೀಯ ಆರೈಕೆಯಿಂದ ರೇಬೀಸ್ ಅನ್ನು ತಡೆಗಟ್ಟಬಹುದು.

current affairs

 

ರೇಬೀಸ್ ಹೇಗೆ ಹರಡುತ್ತದೆ?

ರೇಬೀಸ್ ವೈರಸ್ ಸೋಂಕಿತ ಪ್ರಾಣಿಗಳ ಜೊಲ್ಲು ಅಥವಾ ಮೆದುಳು/ನರಮಂಡಲದ ಅಂಗಾಂಶದೊಂದಿಗೆ ನೇರ ಸಂಪರ್ಕದಿಂದ ಹರಡುತ್ತದೆ (ಸಿಪ್ಪೆ ಸುಲಿದ ಚರ್ಮದ ಮೂಲಕ ಅಥವಾ ಕಣ್ಣು, ಮೂಗು ಅಥವಾ ಬಾಯಿಯ ಲೋಳೆಯ ಪೊರೆಗಳ ಮೂಲಕ).

ರೋಗ ಪ್ರಸಾರ:

  1. ರೇಬೀಸ್ ವೈರಸ್ ಸಸ್ತನಿಗಳ ಮೇಲೆ ಮಾತ್ರ ಪರಿಣಾಮ ಬೀರುತ್ತದೆ.

ಭಾರತದಲ್ಲಿ ರೇಬಿಸ್ ಪ್ರಕರಣಗಳು:

ರೇಬೀಸ್ ಪ್ರಕರಣದಲ್ಲಿ ಭಾರತದಲ್ಲಿ ಪ್ರತಿವರ್ಷ ಸುಮಾರು 20,000 ಸಾವುಗಳಿಗೆ ಕಾರಣವಾಗುತ್ತದೆ. ವಿಶ್ವಾದ್ಯಂತ, ಪ್ರತಿವರ್ಷ 59,000 ಕ್ಕೂ ಹೆಚ್ಚು ಜನರು ರೇಬೀಸ್‌ನಿಂದ ಸಾಯುತ್ತಾರೆ, ಅವರಲ್ಲಿ 40 ಪ್ರತಿಶತದಷ್ಟು ಜನರು 15 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ.

  1. ರೇಬೀಸ್ ಭಾರತದಲ್ಲಿ ವ್ಯಾಪಕವಾದ ಅನಾರೋಗ್ಯ ಮತ್ತು ಮರಣಕ್ಕೆ ಕಾರಣವಾಗಿದೆ.
  2. ಈ ರೋಗವು ದೇಶಾದ್ಯಂತ ಸ್ಥಳೀಯವಾಗಿರಬಹುದು.
  3. ಅಂಡಮಾನ್ ಮತ್ತು ನಿಕೋಬಾರ್ ಮತ್ತು ಲಕ್ಷದ್ವೀಪ ದ್ವೀಪಗಳನ್ನು ಹೊರತುಪಡಿಸಿ, ದೇಶಾದ್ಯಂತ ಮಾನವ ರೇಬೀಸ್ ಸೋಂಕಿನ ಪ್ರಕರಣಗಳು ವರದಿಯಾಗಿವೆ.
  4. ರೇಬೀಸ್ ಗೆ ಸಂಬಂಧಿಸಿದಂತೆ, ಸರಿಸುಮಾರು 96% ಸಾವುಗಳು ಮತ್ತು ರೋಗಗಳು ನಾಯಿ ಕಡಿತಕ್ಕೆ ಸಂಬಂಧಿಸಿವೆ.

 

ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ಜಾತಿ ಗಣತಿ:


(Caste census)

ಸಂದರ್ಭ:

2011 ರ ಸಾಮಾಜಿಕ-ಆರ್ಥಿಕ ಜಾತಿ ಗಣತಿಯಲ್ಲಿ (Socio-Economic Caste Census – SECC) ಸಂಗ್ರಹಿಸಿದ ಜಾತಿ ಆಧಾರಿತ ದತ್ತಾಂಶವು “ನಿರುಪಯುಕ್ತ” ಎಂದು ಕೇಂದ್ರ ಸರ್ಕಾರ ಕಳೆದ ವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಆದರೆ 2016 ರಲ್ಲಿ, ಭಾರತದ ರಿಜಿಸ್ಟ್ರಾರ್-ಜನರಲ್ ಮತ್ತು ಸೆನ್ಸಸ್ ಆಯುಕ್ತರು’  (Registrar-General and Census Commissioner of India) ರಚಿಸಿದ ಗ್ರಾಮೀಣ ಅಭಿವೃದ್ಧಿಯ ಸಂಸದೀಯ ಸ್ಥಾಯಿ ಸಮಿತಿಗೆ ಮಾಹಿತಿ ನೀಡುವಾಗ, 98.87 ಪ್ರತಿಶತದಷ್ಟು ವೈಯಕ್ತಿಕ ಜಾತಿ ಮತ್ತು ಧರ್ಮದ ಕುರಿತ ಡೇಟಾವನ್ನು ದೋಷ ರಹಿತವಾಗಿ ಸಂಗ್ರಹಿಸಲಾಗಿದೆ ಎಂದು ಹೇಳಿದ್ದಾರೆ.

 

ಸರ್ಕಾರದ ಪ್ರಕಾರ ಈ ದತ್ತಾಂಶವು ಏಕೆ ನಿರುಪಯುಕ್ತ ವಾಗಿದೆ?

  1. ಸರ್ಕಾರದ ಪ್ರಕಾರ, 1931 ರಲ್ಲಿ ಸಮೀಕ್ಷೆ ಮಾಡಲಾದ ಒಟ್ಟು ಜಾತಿಗಳ ಸಂಖ್ಯೆ 4,147 ಆಗಿದ್ದು, ಸಾಮಾಜಿಕ-ಆರ್ಥಿಕ ಜಾತಿ ಗಣತಿಯ (ಎಸ್‌ಇಸಿಸಿ) ಮಾಹಿತಿಯ ಪ್ರಕಾರ ದೇಶದಲ್ಲಿ 46 ಲಕ್ಷಕ್ಕೂ ಹೆಚ್ಚು ವಿವಿಧ ಜಾತಿಗಳಿವೆ. ಕೆಲವು ಜಾತಿಗಳು ಉಪ-ಜಾತಿಗಳಾಗಿ ವಿಭಜನೆ ಗೊಂಡಿರಬಹುದು, ಆದರೆ ಅವುಗಳ ಒಟ್ಟು ಸಂಖ್ಯೆಯು ಇಷ್ಟರ ಮಟ್ಟಿಗೆ ಇರಲಾರದು ಎಂದು ಉಹಿಸಬಹುದಾಗಿದೆ.
  2. ಒಂದೇ ಜಾತಿಗೆ ವಿವಿಧ ಕಾಗುಣಿತಗಳನ್ನು ಗಣತಿದಾರರು ಬಳಸಿದ್ದರಿಂದ ಸಾಮಾಜಿಕ-ಆರ್ಥಿಕ ಜಾತಿ ಗಣತಿಯ ಸಂಪೂರ್ಣ ಕಾರ್ಯವು ನಿಷ್ಪ್ರಯೋಜಕವಾಗಿದೆ. ಅನೇಕ ಸಂದರ್ಭಗಳಲ್ಲಿ ಪ್ರತಿವಾದಿಗಳು ತಮ್ಮ ಜಾತಿಗಳನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ ಎಂದು ಸರ್ಕಾರ ಹೇಳಿದೆ.

ಇಲ್ಲಿಯವರೆಗೆ ‘ಜಾತಿ-ಸಂಬಂಧಿತ’ ವಿವರಗಳನ್ನು ಸಂಗ್ರಹಿಸಿದ ವಿಧಾನ:

  1. ‘ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ’ ವಿವರಗಳನ್ನು ಗಣತಿದಾರರು ಜನಗಣತಿಯ ಭಾಗವಾಗಿ ಸಂಗ್ರಹಿಸುತ್ತಾರೆ, ಆದರೆ ಇದರ ಅಡಿಯಲ್ಲಿ, ಇತರ ಜಾತಿಗಳ ವಿವರಗಳನ್ನು ಅವರು ಸಂಗ್ರಹಿಸುವುದಿಲ್ಲ.
  2. ಜನಗಣತಿಯ ಮೂಲ ವಿಧಾನದ ಪ್ರಕಾರ, ಎಲ್ಲಾ ನಾಗರಿಕರು ಗಣತಿದಾರರಿಗೆ ‘ಸ್ವಯಂ ಘೋಷಿತ’ ಮಾಹಿತಿಯನ್ನು ಒದಗಿಸುತ್ತಾರೆ.

ಇಲ್ಲಿಯವರೆಗೆ, ಹಿಂದುಳಿದ ವರ್ಗಗಳ ಜನಸಂಖ್ಯೆಯನ್ನು ಕಂಡುಹಿಡಿಯಲು ವಿವಿಧ ರಾಜ್ಯಗಳಲ್ಲಿನ ‘ಹಿಂದುಳಿದ ವರ್ಗಗಳ ಆಯೋಗಗಳು’ ತಮ್ಮದೇ ಆದ ಲೆಕ್ಕಾಚಾರಗಳನ್ನು ಮಾಡುತ್ತಿದ್ದವು.

ಜನಗಣತಿಯಲ್ಲಿ ಯಾವ ರೀತಿಯ ಜಾತಿ ದತ್ತಾಂಶವನ್ನು ಪ್ರಕಟಿಸಲಾಗಿದೆ?

  1. ಸ್ವತಂತ್ರ ಭಾರತದಲ್ಲಿ, 1951 ಮತ್ತು 2011 ರ ನಡುವೆ ನಡೆಸಿದ ಪ್ರತಿ ಜನಗಣತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಡೇಟಾವನ್ನು ಮಾತ್ರ ಪ್ರಕಟಿಸಲಾಗಿದೆ. ಇತರೆ ಜಾತಿಗಳ ವಿವರಗಳನ್ನು ಗಣತಿಯಲ್ಲಿ ಪ್ರಕಟಿಸಲಾಗಿಲ್ಲ.
  2. ಆದಾಗ್ಯೂ, ಇದಕ್ಕೂ ಮೊದಲು, 1931 ರವರೆಗೂ ನಡೆಸಲಾದ ಪ್ರತಿ ಜನಗಣತಿಯಲ್ಲಿ ಜಾತಿ ಡೇಟಾವನ್ನು ಪ್ರಕಟಿಸಲಾಗಿದೆ.

ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿ (SECC) 2011 ಕುರಿತು:

2011 ರಲ್ಲಿ ನಡೆಸಿದ ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಯು (Socio-Economic and Caste Census- SECC) ವಿವಿಧ ಸಮುದಾಯಗಳ ಸಾಮಾಜಿಕ-ಆರ್ಥಿಕ ಸ್ಥಿತಿಯ ಬಗ್ಗೆ ಮಾಹಿತಿ ಪಡೆಯಲು ಒಂದು ಪ್ರಮುಖ ಕಾರ್ಯಕ್ರಮವಾಗಿತ್ತು.

  1. ಇದು ಎರಡು ಘಟಕಗಳನ್ನು ಹೊಂದಿತ್ತು: ಮೊದಲನೆಯದಾಗಿ, ಗ್ರಾಮೀಣ ಮತ್ತು ನಗರ ಮನೆಗಳ ಸಮೀಕ್ಷೆ ಮತ್ತು ಪೂರ್ವನಿರ್ಧರಿತ ನಿಯತಾಂಕಗಳ ಆಧಾರದ ಮೇಲೆ ಈ ಮನೆಗಳ ಶ್ರೇಯಾಂಕ, ಮತ್ತು ಎರಡನೆಯದಾಗಿ, ‘ಜಾತಿ ಗಣತಿ’.
  2. ಆದಾಗ್ಯೂ, ಗ್ರಾಮೀಣ ಮತ್ತು ನಗರ ಮನೆಗಳಲ್ಲಿನ ಜನರ ಆರ್ಥಿಕ ಸ್ಥಿತಿಯ ವಿವರಗಳನ್ನು ಮಾತ್ರ ಸರ್ಕಾರ ಬಿಡುಗಡೆ ಮಾಡಿದೆ. ಜಾತಿ ಡೇಟಾವನ್ನು ಇಲ್ಲಿಯವರೆಗೆ ಬಿಡುಗಡೆ ಮಾಡಿಲ್ಲ.

ಸಾರ್ವತ್ರಿಕ ಜನಗಣತಿ ಮತ್ತು ಸಾಮಾಜಿಕ ಆರ್ಥಿಕ ಜಾತಿ ಗಣತಿ  (SECC) ನಡುವಿನ ವ್ಯತ್ಯಾಸ:

  1. ಜನಗಣತಿಯು ಭಾರತದ ಜನಸಂಖ್ಯೆಯ ಚಿತ್ರಣವನ್ನು ಒದಗಿಸುತ್ತದೆ, ಆದರೆ ‘ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿ’ (SECC)ಯು ರಾಜ್ಯ-ಅನುದಾನಿತ ಫಲಾನುಭವಿಗಳನ್ನು ಗುರುತಿಸುವ ಸಾಧನವಾಗಿದೆ.
  2. ‘ಜನಗಣತಿ’ಯು’ 1948 ರ ಜನಗಣತಿ ಕಾಯ್ದೆ ‘ಅಡಿಯಲ್ಲಿ ಬರುತ್ತದೆ ಮತ್ತು ಅದರ ಎಲ್ಲಾ ಡೇಟಾವನ್ನು ಗೌಪ್ಯವೆಂದು ಪರಿಗಣಿಸಲಾಗುತ್ತದೆ, ಆದರೆ SECC ಅಡಿಯಲ್ಲಿ ಒದಗಿಸಲಾದ ಎಲ್ಲಾ ವೈಯಕ್ತಿಕ ಮಾಹಿತಿಯು ಸರ್ಕಾರಿ ಇಲಾಖೆಗಳಿಂದ ಕುಟುಂಬಗಳಿಗೆ ಪ್ರಯೋಜನಗಳನ್ನು ಒದಗಿಸಲು ಮತ್ತು/ಅಥವಾ ನಿರ್ಬಂಧಿಸಲು ಮುಖವಾಗಿರುತ್ತದೆ.

ಜಾತಿ ಗಣತಿಯ ಪ್ರಯೋಜನಗಳು:

ಎಲ್ಲರಿಗೂ ಸಮಾನವಾದ ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳಲು ಪ್ರತಿ ಜಾತಿಯ ನಿಖರವಾದ ಜನಸಂಖ್ಯೆಯು ಮೀಸಲಾತಿ ನೀತಿಯನ್ನು ರೂಪಿಸುವಲ್ಲಿ ಸಹಾಯ ಮಾಡುತ್ತದೆ.

ಸಂಬಂಧಿತ ಕಾಳಜಿಗಳು:

  1. ಜಾತಿ ಗಣತಿಯು ಕೆಲವು ಸಮುದಾಯಗಳಲ್ಲಿ ಅಸಮಾಧಾನವನ್ನು ಸೃಷ್ಟಿಸುವ ಸಾಧ್ಯತೆಯಿದೆ ಮತ್ತು ಕೆಲವು ಸಮುದಾಯಗಳು ತಮಗಾಗಿ ಹೆಚ್ಚಿನ ಅಥವಾ ಪ್ರತ್ಯೇಕ ಕೋಟಾವನ್ನು ಕೋರುವ ಸಾಧ್ಯತೆ ಇರುತ್ತದೆ.
  2. ವ್ಯಕ್ತಿಗಳನ್ನು ನಿರ್ದಿಷ್ಟವಾಗಿ ಒಂದು ಜಾತಿಗೆ ಸೇರಿದವರು ಎಂದು ಹಣೆಪಟ್ಟಿ ಕಟ್ಟುವುದರಿಂದ, ಜಾತಿ ವ್ಯವಸ್ಥೆಯನ್ನು ಸಮಾಜದಲ್ಲಿ ಶಾಶ್ವತವಾಗಿ ಉಳಿಯುವಂತೆ ಮಾಡಬಲ್ಲದು ಎಂದು ನಂಬಲಾಗಿದೆ.

 

ವಿಷಯಗಳು: ಸಂರಕ್ಷಣೆ, ಪರಿಸರ ಮಾಲಿನ್ಯ ಮತ್ತು ಅವನತಿ, ಪರಿಸರ ಪ್ರಭಾವದ ಮೌಲ್ಯಮಾಪನ.

ಇಂದು ಜನಿಸಿದ ಶಿಶುಗಳ ಮೇಲೆ ಹವಾಮಾನ ಬದಲಾವಣೆಯ ಹೊರೆ:


(The burden of climate change on children born today)

ಸಂದರ್ಭ:

ಇತ್ತೀಚೆಗೆ ಸಂಶೋಧಕರು ‘ಇಂದು ಜನಿಸಿದ ಮಕ್ಕಳ ಮೇಲೆ ಹವಾಮಾನ ಬದಲಾವಣೆಯ ಪ್ರಭಾವ’ ಕುರಿತು ಅಧ್ಯಯನವೊಂದನ್ನು ಪ್ರಕಟಿಸಿದ್ದಾರೆ.

ಅಧ್ಯಯನವು ಇಂಟರ್-ಸೆಕ್ಟರಲ್ ಇಂಪ್ಯಾಕ್ಟ್ ಮಾಡೆಲ್ ಇಂಟರ್ ಕಾಂಪರಿಸನ್ ಪ್ರಾಜೆಕ್ಟ್ (ISIMIP) ದ ಡೇಟಾವನ್ನು ಆಧರಿಸಿದೆ.

ಅಧ್ಯಯನದ ವಿಧಾನ:

ಹವಾಮಾನ ಬದಲಾವಣೆಯ ಅಂತರ್ ಸರ್ಕಾರಿ ಸಮಿತಿ (Intergovernmental Panel on Climate Change- IPCC) ಯು, ದೇಶಮಟ್ಟದ ಜೀವಿತಾವಧಿ ಡೇಟಾ, ಜನಸಂಖ್ಯೆಯ ದತ್ತಾಂಶ ಮತ್ತು ತಾಪಮಾನದ ಪಥಗಳು (Temperature Trajectories) ಹಾಗೂ ISIMIP ನ  ಡೇಟಾವನ್ನು ಬಳಸಲಾಗಿದೆ.

ಪ್ರಮುಖ ಸಂಶೋಧನೆಗಳು:

ಇಂದು ಜನಿಸಿದ ಮಕ್ಕಳು ಇಂದಿನ ವಯಸ್ಕರಿಗಿಂತ ತೀವ್ರ ಹವಾಮಾನದ ವೈಪರೀತ್ಯಗಳಿಂದ ಹೆಚ್ಚು ತೊಂದರೆಗೊಳಗಾಗುತ್ತಾರೆ.

2021 ರಲ್ಲಿ ಜನಿಸಿದ ಮಕ್ಕಳು ತಮ್ಮ ಜೀವಿತಾವಧಿಯಲ್ಲಿ ಪ್ರಸ್ತುತ 60 ವರ್ಷ ವಯಸ್ಸಿನ ವ್ಯಕ್ತಿಗಳಿಗೆ ಹೋಲಿಸಿದರೆ, ಸುಮಾರು ಎರಡು ಬಾರಿ ಕಾಡ್ಗಿಚ್ಚು, ಎರಡರಿಂದ ಮೂರು ಪಟ್ಟು ಹೆಚ್ಚು ಬರಗಾಲ, ಸುಮಾರು ಮೂರು ಪಟ್ಟು ಹೆಚ್ಚು ನದಿ ಪ್ರವಾಹ ಮತ್ತು ಬೆಳೆ ವೈಫಲ್ಯಗಳನ್ನು,ಸುಮಾರು ಏಳು ಪಟ್ಟು ಹೆಚ್ಚು ಶಾಖದ ಅಲೆಗಳನ್ನು (heat waves ) ಎದುರಿಸುವ ಸಾಧ್ಯತೆಯಿದೆ.

ಈಗ ಮಾಡಬೇಕಿರುವುದೇನು?

ಪ್ರಸ್ತುತ “ಅಸಮರ್ಪಕ” ಹವಾಮಾನ ನೀತಿಗಳ ಸನ್ನಿವೇಶದಲ್ಲಿ, ಇಂದು ಜಾಗತಿಕ ಭೂಪ್ರದೇಶದ ಸುಮಾರು 15% ನಷ್ಟು ಪರಿಣಾಮ ಬೀರುವ ಅಪಾಯಕಾರಿ ವಿಪರೀತ ಶಾಖದ ಅಲೆಗಳ ಘಟನೆಗಳು ಈ ಶತಮಾನದ ಅಂತ್ಯದ ವೇಳೆಗೆ 46% ಕ್ಕೆ ಮೂರು ಪಟ್ಟು ಹೆಚ್ಚಾಗಬಹುದು.

ಆದಾಗ್ಯೂ, ಒಂದುವೇಳೆ:

  1. ಪ್ಯಾರಿಸ್ ಹವಾಮಾನ ಒಪ್ಪಂದದ ಪ್ರಕಾರ, ಎಲ್ಲಾ ದೇಶಗಳು ತಮ್ಮದೇ ಆದ ಹವಾಮಾನ ನೀತಿಗಳನ್ನು ಅನುಸರಿಸಿದರೆ ಈ ಪರಿಣಾಮವನ್ನು 22% ಗೆ ಸೀಮಿತಗೊಳಿಸಬಹುದು. ಇದು ಪ್ರಸ್ತುತ ತೀವ್ರ ಹವಾಮಾನದಿಂದ ಪ್ರಭಾವಿತವಾಗಿರುವ ಜಾಗತಿಕ ಭೂ ಪ್ರದೇಶಕ್ಕಿಂತ ಕೇವಲ ಏಳು ಶೇಕಡಾ ಹೆಚ್ಚು.
  2. ಪ್ರಸ್ತುತ ಹೊರಸೂಸುವಿಕೆ ಕಡಿತದ ಭರವಸೆಗಳನ್ನು ನೀಡುವಾಗ ನಾವು ಹವಾಮಾನ ರಕ್ಷಣೆಯನ್ನು ಹೆಚ್ಚಿಸಿದರೆ ಮತ್ತು 1.5 ಡಿಗ್ರಿ ಗುರಿಗೆ ಅನುಗುಣವಾಗಿ ಕ್ರಮ ಕೈಗೊಂಡರೆ, ನಾವು ಜಾಗತಿಕವಾಗಿ, ಯುವಜನರ ತೀವ್ರ ಹವಾಮಾನದ ಘಟನೆಗಳಿಗೆ ಒಳಗಾಗುವ ಸಂಭಾವ್ಯತೆಯನ್ನು ಸರಾಸರಿ 24%ರಷ್ಟು ಕಡಿಮೆ ಮಾಡಬಹುದು.

 

ಇಂಟರ್-ಸೆಕ್ಟರಲ್ ಇಂಪ್ಯಾಕ್ಟ್ ಮಾಡೆಲ್ ಇಂಟರ್ ಕಾಂಪರಿಸನ್ ಪ್ರಾಜೆಕ್ಟ್ (ISIMIP) ಎಂದರೇನು?

ಇದು ಸಮುದಾಯ-ಚಾಲಿತ ಹವಾಮಾನ-ಪ್ರಭಾವದ ಮಾದರಿ ಉಪಕ್ರಮವಾಗಿದೆ,ಇದರ ಅಡಿಯಲ್ಲಿ ಹವಾಮಾನ ಬದಲಾವಣೆಯ ವಿವಿಧ ಪರಿಣಾಮಗಳನ್ನು ಮೌಲ್ಯಮಾಪನ ಮಾಡಲಾಗುತ್ತದೆ.

ಪಾಟ್ಸ್‌ಡ್ಯಾಮ್ ಇನ್‌ಸ್ಟಿಟ್ಯೂಟ್ ಫಾರ್ ಕ್ಲೈಮೇಟ್ ಇಂಪ್ಯಾಕ್ಟ್ ರಿಸರ್ಚ್ (Potsdam Institute for Climate Impact Research – PIK) ಮತ್ತು ‘ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಅಪ್ಲೈಡ್ ಸಿಸ್ಟಮ್ಸ್ ಅನಾಲಿಸಿಸ್’ (International Institute for Applied Systems Analysis -IIASA) ಆರಂಭಿಸಿದ ಈ ಉಪಕ್ರಮವು ಪ್ರಪಂಚದಾದ್ಯಂತ 100 ಕ್ಕೂ ಹೆಚ್ಚು ಮಾಡೆಲಿಂಗ್ ಗುಂಪುಗಳನ್ನು ಒಳಗೊಂಡಿದೆ.

ಪಾಲುದಾರರು:

NGO ಗಳು, ಖಾಸಗಿ ವಲಯ, ನೀತಿ-/ನಿರ್ಧಾರ ತೆಗೆದುಕೊಳ್ಳುವವರು.

current affairs

 

ಕಾರ್ಯ ವಿಧಾನ:

ಇಂಟರ್-ಸೆಕ್ಟರಲ್ ಇಂಪ್ಯಾಕ್ಟ್ ಮಾಡೆಲ್ ಇಂಟರ್ ಕಾಂಪರಿಸನ್ ಪ್ರಾಜೆಕ್ಟ್ (ISIMIP) ಅನ್ನು ಒಂದು ಸಿಮ್ಯುಲೇಶನ್ ಸುತ್ತಿನಲ್ಲಿ ಆಯೋಜಿಸಲಾಗಿದೆ,ಇದು ಏಕೈಕ ಕೇಂದ್ರೀಕೃತ ವಿಷಯಕ್ಕೆ ನಿರ್ದೇಶಿಸಲ್ಪಡುತ್ತದೆ. ಪ್ರತಿ ಸುತ್ತಿನಲ್ಲಿ, ಒಂದು ಸಿಮ್ಯುಲೇಶನ್ ಪ್ರೋಟೋಕಾಲ್ ಕೇಂದ್ರೀಕೃತ ವಿಷಯದ ಆಧಾರದ ಮೇಲೆ ಸಾಮಾನ್ಯ ಸಿಮ್ಯುಲೇಶನ್ ಸನ್ನಿವೇಶಗಳ ಗುಂಪನ್ನು ವ್ಯಾಖ್ಯಾನಿಸುತ್ತದೆ. ಭಾಗವಹಿಸುವ ಮಾಡೆಲಿಂಗ್ ಗುಂಪುಗಳಿಗೆ ಸಾಮಾನ್ಯ ‘ಕ್ಲೈಮೇಟ್ ಇನ್ಪುಟ್ ಡೇಟಾ’ ಒದಗಿಸಲಾಗುತ್ತದೆ. ಪ್ರದೇಶಗಳಾದ್ಯಂತ ಸ್ಥಿರವಾದ ಪರಿಣಾಮ ಸಿಮ್ಯುಲೇಶನ್ ಅನ್ನು ಖಚಿತಪಡಿಸಿಕೊಳ್ಳಲು ಇತರ ಡೇಟಾದ ಅಗತ್ಯವಿದೆ.

current affairs

 

ವಿಷಯಗಳು: ಸಂರಕ್ಷಣೆ ಮತ್ತು ವಿಪತ್ತು ನಿರ್ವಹಣೆಗೆ ಸಂಬಂಧಿಸಿದ ಸಮಸ್ಯೆಗಳು.

25 ವರ್ಷಗಳಲ್ಲಿ ಪಂಜಾಬ್ ನ ಮರುಭೂಮಿಕರಣ:


(Punjab’s desertification in 25 years)

ಸಂದರ್ಭ:

ಜಲಮೂಲಗಳ ಸವಕಳಿಯನ್ನು ಅಧ್ಯಯನ ಮಾಡಲು ರಚಿಸಿರುವ ಪಂಜಾಬ್ ವಿಧಾನ ಸಭಾ ಸಮಿತಿಯ ಇತ್ತೀಚಿನ ಹೇಳಿಕೆಯು ಪ್ರಸ್ತುತ ಭೂಗತ ಜಲಮೂಲಗಳಿಂದ ನೀರನ್ನು ಸೆಳೆಯುವ ಪ್ರವೃತ್ತಿಯು ಹೀಗೆ ಮುಂದುವರಿದರೆ, ಮುಂದಿನ 25 ವರ್ಷಗಳಲ್ಲಿ ರಾಜ್ಯವು ಮರುಭೂಮಿಯಾಗಿ ಬದಲಾಗುತ್ತದೆ ಎಂದು ಹೇಳಿದೆ.

ಸುಮಾರು ಎರಡು ದಶಕಗಳ ಹಿಂದೆ,ಅಂತಹ ಮುನ್ಸೂಚನೆಯನ್ನು ಈಗಾಗಲೇ ನೀಡಲಾಗಿದೆ. ಪಂಜಾಬ್‌ನ ಜಲಮಟ್ಟದ ಸವಕಳಿ ಕುರಿತ ಅಧ್ಯಯನ (ದಿ ಸ್ಟೇಟ್ ಆಫ್ ದಿ ವರ್ಲ್ಡ್ ರಿಪೋರ್ಟ್, 1998), ಸುಮಾರು 25 ವರ್ಷಗಳ ಕಾಲಮಿತಿಯನ್ನು ಅಂದಾಜು ಮಾಡಿ, ಪಂಜಾಬಿನ ಎಲ್ಲಾ ಜಲಚರಗಳು ಸುಮಾರು 2025 ರ ವೇಳೆಗೆ ಖಾಲಿಯಾಗಬಹುದು ಎಂದು ಹೇಳಿದೆ.

ಪಂಜಾಬ್‌ನಲ್ಲಿ ನೀರಿನ ಪರಿಸ್ಥಿತಿ ನಿಜಕ್ಕೂ ಎಷ್ಟು ಚಿಂತಾಜನಕವಾಗಿದೆ?

  1. ಪಂಜಾಬಿನ 138 ಬ್ಲಾಕ್‌ಗಳಲ್ಲಿ, 109 ಬ್ಲಾಕ್‌ಗಳು ಈಗಾಗಲೇ ‘ಆಳವಾದ’ ಅಥವಾ ಅತಿ ಹೆಚ್ಚು ಶೋಷಿತ ವಲಯವನ್ನು ತಲುಪಿವೆ, ಅಂದರೆ ಈ ಪ್ರದೇಶಗಳಲ್ಲಿ ಅಂತರ್ಜಲದ ಹೊರತೆಗೆಯುವಿಕೆ ಶೇಕಡಾ 100 ಕ್ಕಿಂತ ಹೆಚ್ಚಾಗಿದೆ.
  2. ಎರಡು ಬ್ಲಾಕ್‌ಗಳು ‘ಡಾರ್ಕ್/ಕ್ರಿಟಿಕಲ್’ ವಲಯದ ಅಡಿಯಲ್ಲಿ (90 ರಿಂದ 100 ಪ್ರತಿಶತ ಅಂತರ್ಜಲ ಹೊರತೆಗೆಯುವಿಕೆ), ಐದು ಬ್ಲಾಕ್‌ಗಳು ಅರೆ-ನಿರ್ಣಾಯಕ (70 ರಿಂದ 90 ರಷ್ಟು ಅಂತರ್ಜಲ ಹೊರತೆಗೆಯುವಿಕೆ) ವಲಯದ ಅಡಿಯಲ್ಲಿ ಬರುತ್ತವೆ.
  3. ಅಂದರೆ ರಾಜ್ಯದಲ್ಲಿ ಶೇ .80 ರಷ್ಟು ಬ್ಲಾಕ್ ಗಳು ಈಗಾಗಲೇ ಬತ್ತಿಹೋಗಿವೆ ಮತ್ತು ಶೇ. ನಾಲ್ಕು ಬ್ಲಾಕ್ ಗಳು ಬತ್ತುವ ಹಂತದಲ್ಲಿವೆ.
  4. 3 ರಿಂದ 10 ಮೀಟರ್ ಆಳದಲ್ಲಿ ನೀರಿನ ಲಭ್ಯತೆ, ನೀರನ್ನು ತೆಗೆಯಲು ಕೇಂದ್ರಾಪಗಾಮಿ ಪಂಪ್ ಅಗತ್ಯವಿರುತ್ತದೆ, ಇದು ಅತ್ಯಂತ ಅಪೇಕ್ಷಣೀಯವಾಗಿದೆ. ಆದರೆ ಪ್ರಸ್ತುತ, ಪಂಜಾಬ್‌ನ ಸುಮಾರು 84 ಪ್ರತಿಶತದಷ್ಟು ಭೂಪ್ರದೇಶದಲ್ಲಿ 20 ರಿಂದ 30 ಮೀಟರ್ ಅಥವಾ 30 ಮೀಟರ್‌ಗಿಂತ ಹಚ್ಚು ಕೆಳಗೆ ಅಂತರ್ಜಲವಿದೆ.

ಈ ಕೊರತೆಗೆ ಕಾರಣ:

  1. ಭೂಗರ್ಭದಲ್ಲಿ ತುಂಬಿರುವ ನೀರಿನ ಪ್ರಮಾಣಕ್ಕಿಂತ, ಹೆಚ್ಚಿನ ನೀರನ್ನು ಹೊರತೆಗೆಯಲಾಗುತ್ತಿದೆ.ಪಂಜಾಬ್‌ನಲ್ಲಿ ನೀರಿನ ಹೊರತೆಗೆಯುವಿಕೆಯ ದರವು ಮರುಪೂರಣ ದರಕ್ಕಿಂತ 1.66 ಪಟ್ಟು ಹೆಚ್ಚಾಗಿದೆ.
  2. ದೋಷಯುಕ್ತ ಬೆಳೆ ಪದ್ಧತಿಯನ್ನು ಅಳವಡಿಸಿ ಕೊಳ್ಳುತ್ತಿರುವುದರಿಂದ ಅಂತರ್ಜಲದ ಬಳಕೆಯ ದರ ಹೆಚ್ಚುತ್ತಿದೆ. ಭತ್ತದ ನಾಟಿ ಮಾಡಲು ಹೊಲಗಳನ್ನು ಸಿದ್ಧಗೊಳಿಸಲು ‘ಪುಡ್ಲಿಂಗ್ ವಿಧಾನ’ವನ್ನು ಬಳಸಲಾಗುತ್ತದೆ, ಇದರಿಂದಾಗಿ ನೀರಿನ ಮರುಪೂರಣಕ್ಕೆ ಅಡ್ಡಿಯಾಗುತ್ತದೆ.

ಅವಶ್ಯಕತೆ:

ಕಡಿಮೆ ನೀರಿನ ಅಗತ್ಯತೆ ಹೊಂದಿರುವ ‘ಬೆಳೆ ಮಾದರಿ’ ಆಯ್ಕೆ ಮಾಡಲು ರೈತರನ್ನು ಪ್ರೋತ್ಸಾಹಿಸಬೇಕು ಮತ್ತು ಆಳವಾದ ಭೂಗರ್ಭದ ಜಲವನ್ನು ಉಳಿಸಲು ಇಲ್ಲಿ ಲಭ್ಯವಿರುವ ಏಕೈಕ ಪರಿಹಾರವೆಂದರೆ ‘ಹನಿ ನೀರಾವರಿ’ ಅಥವಾ ಇತರ ‘ನೀರು ನಿರ್ವಹಣಾ ವ್ಯವಸ್ಥೆಯನ್ನು’ ಅಳವಡಿಸಿಕೊಳ್ಳುವುದಾಗಿದೆ.

 

ವಿಷಯಗಳು: ಶಾಸನಬದ್ಧ, ನಿಯಂತ್ರಕ ಮತ್ತು ವಿವಿಧ ಅರೆ-ನ್ಯಾಯಾಂಗ ಸಂಸ್ಥೆಗಳು.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ:


(National Disaster Management Authority)

ಸಂದರ್ಭ:

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (National Disaster Management Authority NDMA) 17 ನೇ ಸಂಸ್ಥಾಪನಾ ದಿನವನ್ನು ಸೆಪ್ಟೆಂಬರ್ 28 ರಂದು ಆಚರಿಸಲಾಯಿತು.

NDMA ಬಗ್ಗೆ:

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು (NDMA) ಭಾರತದಲ್ಲಿ ವಿಪತ್ತು ನಿರ್ವಹಣೆಯ ಅತ್ಯುನ್ನತ ಶಾಸನಬದ್ಧ ಸಂಸ್ಥೆಯಾಗಿದೆ.

  1. ಇದನ್ನು ವಿಪತ್ತು ನಿರ್ವಹಣಾ ಕಾಯ್ದೆ 2005 ರ ಅಡಿಯಲ್ಲಿ 27 ಸೆಪ್ಟೆಂಬರ್ 2006 ರಂದು ರಚಿಸಲಾಯಿತು.
  2. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ವಿಪತ್ತು ನಿರ್ವಹಣೆಗೆ ನೀತಿಗಳು, ಯೋಜನೆಗಳು ಮತ್ತು ಮಾರ್ಗಸೂಚಿಗಳನ್ನು ರೂಪಿಸುವ ಜವಾಬ್ದಾರಿಯನ್ನು ಹೊಂದಿದೆ.
  3. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಐದು ಪ್ರಮುಖ ವಿಭಾಗಗಳೆಂದರೆ ನೀತಿ ಮತ್ತು ಯೋಜನಾ ವಿಭಾಗ, ತಗ್ಗಿಸುವಿಕೆ ವಿಭಾಗ, ಕಾರ್ಯಾಚರಣೆಗಳ ವಿಭಾಗ, ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗ, ಆಡಳಿತ ಮತ್ತು ಹಣಕಾಸು ವಿಭಾಗ.

ದಯವಿಟ್ಟು ಗಮನಿಸಿ:‘ವಿಪತ್ತು ನಿರ್ವಹಣಾ ಕಾಯ್ದೆ’ ಅಡಿಯಲ್ಲಿ,ಭಾರತದಲ್ಲಿ ವಿಪತ್ತು ನಿರ್ವಹಣೆಗೆ ಸಮಗ್ರ ಮತ್ತು ಏಕೀಕೃತ ವಿಧಾನವನ್ನು ಜಾರಿಗೆ ತರಲು, ಪ್ರಧಾನ ಮಂತ್ರಿಗಳ ನೇತೃತ್ವದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ’ (NDMA) ಮತ್ತು ರಾಜ್ಯಗಳ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ‘ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ’ (SDMAs) ಗಳನ್ನು ಪರಿ ಕಲ್ಪಿಸಲಾಗಿದೆ.

ಕಾರ್ಯಗಳು ಮತ್ತು ಉತ್ತರದಾಯಿತ್ವ:

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ವಿಪತ್ತು ನಿರ್ವಹಣೆಗೆ ನೀತಿಗಳು, ಯೋಜನೆಗಳು ಮತ್ತು ಮಾರ್ಗಸೂಚಿಗಳನ್ನು ರೂಪಿಸುತ್ತದೆ, ಇದರಿಂದ ವಿಪತ್ತುಗಳಿಗೆ ಸಕಾಲಿಕ ಮತ್ತು ಪರಿಣಾಮಕಾರಿ ಪ್ರತಿಕ್ರಿಯೆಯನ್ನು ಖಚಿತಪಡಿಸುತ್ತದೆ. ಈ ದಿಕ್ಕಿನಲ್ಲಿ, ಇದು ಈ ಕೆಳಗಿನ ಜವಾಬ್ದಾರಿಗಳನ್ನು ಹೊಂದಿದೆ:

ವಿಪತ್ತು ನಿರ್ವಹಣೆಗೆ ಸಂಬಂಧಿಸಿದ ನೀತಿಗಳನ್ನು ರೂಪಿಸಲು.

  1. ರಾಷ್ಟ್ರೀಯ ಯೋಜನೆಯನ್ನು ಅನುಮೋದಿಸಲು.
  2. ರಾಷ್ಟ್ರೀಯ ಯೋಜನೆಗೆ ಅನುಗುಣವಾಗಿ ಭಾರತ ಸರ್ಕಾರದ ಸಚಿವಾಲಯಗಳು ಅಥವಾ ಇಲಾಖೆಗಳು ಸಿದ್ಧಪಡಿಸಿದ ಯೋಜನೆಗಳನ್ನು ಅನುಮೋದಿಸಲು.
  3. ರಾಜ್ಯ ಯೋಜನೆಯನ್ನು ಸಿದ್ಧಪಡಿಸುವಲ್ಲಿ ರಾಜ್ಯ ಅಧಿಕಾರಿಗಳು ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ರೂಪಿಸುವುದು.
  4. ಭಾರತ ಸರ್ಕಾರದ ವಿವಿಧ ಸಚಿವಾಲಯಗಳು ಅಥವಾ ಇಲಾಖೆಗಳು ತಮ್ಮ ಅಭಿವೃದ್ಧಿ ಯೋಜನೆಗಳು ಮತ್ತು ಯೋಜನೆಗಳಲ್ಲಿ ವಿಪತ್ತು ತಡೆಗಟ್ಟುವ ಕ್ರಮಗಳ ಏಕೀಕರಣ ಅಥವಾ ಅದರ ಪರಿಣಾಮಗಳನ್ನು ತಗ್ಗಿಸುವ ಮಾರ್ಗಸೂಚಿಗಳನ್ನು ರೂಪಿಸುವುದು.
  5. ನೀತಿ ಜಾರಿ ಮತ್ತು ಅನುಷ್ಠಾನವನ್ನು ಸಮನ್ವಯಗೊಳಿಸಲು ಮತ್ತು ವಿಪತ್ತು ನಿರ್ವಹಣೆಗೆ ಯೋಜನೆ.
  6. ತಗ್ಗಿಸುವ ಉದ್ದೇಶದಿಂದ ನಿಧಿಯನ್ನು ಒದಗಿಸುವುದನ್ನು ಶಿಫಾರಸು ಮಾಡುವುದು.
  7. ಕೇಂದ್ರ ಸರ್ಕಾರವು ನಿರ್ಧರಿಸಿದಂತೆ ದೊಡ್ಡ ವಿಪತ್ತುಗಳಿಂದ ಹಾನಿಗೊಳಗಾದ ಇತರ ದೇಶಗಳಿಗೆ ನೆರವು ನೀಡಲು.
  8. ವಿಪತ್ತು ತಡೆಗಟ್ಟುವಿಕೆ ಅಥವಾ ತಗ್ಗಿಸುವಿಕೆ ಅಥವಾ ಸನ್ನದ್ಧತೆ ಮತ್ತು ವಿಪತ್ತು ಸನ್ನಿವೇಶಗಳು ಅಥವಾ ವಿಪತ್ತುಗಳನ್ನು ಎದುರಿಸಲು ಸಾಮರ್ಥ್ಯ ವೃದ್ಧಿಗೆ ಅಗತ್ಯವಿರುವ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುವುದು.
  9. ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ (NIDM) ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಮಗ್ರ ನೀತಿಗಳು ಮತ್ತು ಮಾರ್ಗಸೂಚಿಗಳನ್ನು ರೂಪಿಸಲು.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ವಿಶ್ವ ಸಾಗರ ದಿನ:

(World Maritime Day)

ಪ್ರತಿ ವರ್ಷ ‘ವಿಶ್ವ ಸಾಗರ ದಿನ’ವನ್ನು ಸೆಪ್ಟೆಂಬರ್ 30 ರಂದು ಆಚರಿಸಲಾಗುತ್ತದೆ.

  1. ಈ ದಿನದ ಮಹತ್ವವೆಂದರೆ ಸಮುದ್ರ ವಲಯಕ್ಕೆ ಅಂತರಾಷ್ಟ್ರೀಯ ಕಡಲ ಸಂಸ್ಥೆ (IMO) ಮತ್ತು ಸಮುದ್ರ ಭದ್ರತೆ, ಕಡಲ ರಕ್ಷಣೆ ಮತ್ತು ಕಡಲ ಪರಿಸರಕ್ಕೆ ಅದರ ಕೊಡುಗೆಯನ್ನು ಒತ್ತಿ ಹೇಳುವುದು.
  2. 1958 ರಲ್ಲಿ IMO ನ ಮೊದಲ ಸಮಾವೇಶದ ಅನುಷ್ಠಾನದ ಸಂದರ್ಭವನ್ನು ಗುರುತಿಸಲು ವಿಶ್ವ ಸಾಗರ ದಿನವನ್ನು ಮೊದಲು ಮಾರ್ಚ್ 17, 1978 ರಂದು ಆಚರಿಸಲಾಯಿತು.
  3. ಅಂದಿನಿಂದ ವಿಶ್ವ ಸಾಗರ ದಿನವನ್ನು ಪ್ರತಿ ವರ್ಷ ಸೆಪ್ಟೆಂಬರ್ ಕೊನೆಯ ವಾರದಲ್ಲಿ ಜಾಗತಿಕವಾಗಿ ಆಚರಿಸಲಾಗುತ್ತದೆ.
  4. 2021 ರ ಥೀಮ್ “ನಾವಿಕರು: ಹಡಗಿನ ಭವಿಷ್ಯದ ಆಧಾರ” (Seafarers: at the core of shipping’s future) ಎಂಬುದಾಗಿದೆ.

 

ಜೊಜಿಲಾ ಸುರಂಗ: ಜೊಜಿಲಾ: ಏಷ್ಯಾದ ಅತಿ ಎತ್ತರದ ಸುರಂಗ ಮಾರ್ಗ:

(Zojila tunnel)

ಲಡಾಖ್‌ನ ಜೊಜಿಲಾ ಪ್ರಾಂತದಲ್ಲಿನ ಏಷ್ಯಾದಲ್ಲೇ ಅತಿ ಎತ್ತರದ ರಸ್ತೆ ಮಾರ್ಗದಲ್ಲಿ ಏಷ್ಯಾದ ಅತಿ ಉದ್ದದ ದ್ವಿಮುಖ ಸಂಚಾರ ವ್ಯವಸ್ಥೆಯ ಸುರಂಗ ಮಾರ್ಗವನ್ನು ನಿರ್ಮಿಸಲಾಗುತ್ತಿದೆ. 2020ರಲ್ಲಿ ಆರಂಭವಾಗಿರುವ ಕಾಮಗಾರಿಯು 2026ರ ಆರಂಭದ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ರಾಷ್ಟ್ರೀಯ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮಾಹಿತಿ ನೀಡಿದೆ. ಈ ಸುರಂಗವನ್ನು ಆಧುನಿಕ ಎಂಜಿನಿಯರಿಂಗ್‌ನ ಅದ್ಭುತ ಎನ್ನಲಾಗಿದೆ.

ಅನುಕೂಲಗಳು

  1. ಶ್ರೀನಗರ-ದ್ರಾಸ್-ಲಡಾಖ್ ಮಧ್ಯ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 1ರಲ್ಲಿ ಜೊಜಿಲಾ ಪಾಸ್ ಬರುತ್ತದೆ. ಹಿಮಪಾತದ ಕಾರಣ ವರ್ಷದ ಆರು ತಿಂಗಳು ಈ ಪಾಸ್‌ ಅನ್ನು ಮುಚ್ಚಲಾಗುತ್ತದೆ. ಆ ಅವಧಿಯಲ್ಲಿ ಇಲ್ಲಿ ಸಂಚಾರ ಸಂಪೂರ್ಣವಾಗಿ ಸ್ಥಗಿತವಾಗುತ್ತದೆ. ಈ ಸುರಂಗ ಕಾರ್ಯಾರಂಭವಾದರೆ, ಈ ಮಾರ್ಗದಲ್ಲಿ ವರ್ಷದ ಎಲ್ಲಾ ಋತುವಿನಲ್ಲೂ ಸಂಚಾರ ಸಾಧ್ಯವಾಗುತ್ತದೆ
  2. ಇದು ಕಾಶ್ಮೀರ-ಕಾರ್ಗಿಲ್-ಲಡಾಖ್ ಪ್ರಾಂತಗಳಿಗೆ ಮತ್ತು ಗಿಲ್ಗಿಟ್ ಬಲ್ಟಿಸ್ತಾನದ ಗಡಿಗೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆಯಾಗಿದೆ. ಚೀನಾದ ಜತೆಗಿನ ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿನ ಸಂಘರ್ಷ ಮತ್ತು ಸೇನಾ ಕಾರ್ಯಾಚರಣೆ ವೇಳೆ ಸೇನೆ ರವಾನೆ ಕಷ್ಟಕರವಾಗಿತ್ತು. ಈ ಸುರಂಗ ಮಾರ್ಗ ಕಾರ್ಯಾರಂಭ ಮಾಡಿದರೆ ತುರ್ತು ಸಂದರ್ಭದಲ್ಲಿ ಸೇನೆ ರವಾನೆ ಸುಲಭವಾಗುತ್ತದೆ.
  3. ಲಡಾಖ್‌ ಮತ್ತು ಜಮ್ಮು-ಕಾಶ್ಮೀರದ ನಡುವೆ ವಾಣಿಜ್ಯ ಮತ್ತು ಸಾಂಸ್ಕೃತಿಕ ಸಂಬಂಧ ವೃದ್ಧಿಗೆ ಈ ಸುರಂಗ ನೆರವಾಗಲಿದೆ.
  4. ಜೊಜಿಲಾ ಪಾಸ್‌ ಹಾದುಹೋಗಲು ಈಗ 3 ತಾಸು ಬೇಕು. ಸುರಂಗ ಮಾರ್ಗ ಕಾರ್ಯಾರಂಭ ಮಾಡಿದರೆ 15 ನಿಮಿಷದಲ್ಲಿ ಜೊಜಿಲಾ ಪಾಸ್ ದಾಟಿ ಹೋಗಬಹುದು.

2013ರ ಯೋಜನೆ

ಮನಮೋಹನ್ ಸಿಂಗ್ ನೇತೃತ್ವದ ಯುಪಿಎ-2 ಸರ್ಕಾರ ಅಧಿಕಾರದಲ್ಲಿ ಇದ್ದಾಗ ಈ ಯೋಜನೆಯ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲಾಗಿತ್ತು. ಖಾಸಗಿ ಸರ್ಕಾರಿ ಸಹಭಾಗಿತ್ವದಲ್ಲಿ ಯೋಜನೆ ಅನುಷ್ಠಾನ ಮಾಡಲು ಟೆಂಡರ್ ಕರೆಯಲಾಗಿತ್ತು. ಆದರೆ ಯಾವುದೇ ಕಂಪನಿಗಳು ಆಸಕ್ತಿ ತೋರಿಸದೇ ಇದ್ದ ಕಾರಣಕ್ಕೆ ಯೋಜನೆ ಕಾಮಗಾರಿ ಆರಂಭವಾಗಿರಲಿಲ್ಲ.

2016ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಯೋಜನೆ ಅನುಷ್ಠಾನಕ್ಕೆ ಮತ್ತೆ ಚಾಲನೆ ನೀಡಿತು. ಆಗ ಸರ್ಕಾರವೇ ಸಂಪೂರ್ಣ ವೆಚ್ಚ ಭರಿಸುವ, ಖಾಸಗಿ ಕಂಪನಿ ನಿರ್ಮಾಣ ಮಾಡುವ ರೀತಿಯಲ್ಲಿ ಯೋಜನೆ ರೂಪಿಸಲಾಗಿತ್ತು. ಐಎಫ್‌ಅಂಡ್ಐಎಸ್‌ ಎಂಬ ಕಂಪನಿ ಗುತ್ತಿಗೆ ಪಡೆದಿತ್ತು. 2018ರಲ್ಲಿ ಗುತ್ತಿಗೆ ರದ್ದುಪಡಿಸಲಾಗಿತ್ತು. 2019ರಲ್ಲಿ ಮೇಘ ಎಂಜಿನಿಯರಿಂಗ್ ಅಂಡ್ ಇನ್‌ಫ್ರಾಸ್ಟ್ರಕ್ಚರ್ಸ್‌ ಲಿಮಿಟೆಡ್ ಕಂಪನಿ ಯೋಜನೆಯ ಗುತ್ತಿಗೆ ಪಡೆದಿದೆ. 2020ರಲ್ಲಿ ಕಾಮಗಾರಿ ಆರಂಭಿಸಲಾಗಿದೆ.

ಕಾಮಗಾರಿ ಪರಿಶೀಲನೆ:

ಸೋನಾಮಾರ್ಗ್: ಶ್ರೀನಗರ-ಲೇಹ್ ಹೆದ್ದಾರಿಯಲ್ಲಿ ನಿರ್ಮಿಸಲಾಗುತ್ತಿರುವ ಜೊಜಿಲಾ ಸುರಂಗ ಮಾರ್ಗ ಮತ್ತು ಝಡ್‌-ಮೋರ್ ಸುರಂಗ ಮಾರ್ಗಗಳ ನಿರ್ಮಾಣ ಕಾಮಗಾರಿಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಮಂಗಳವಾರ ಪರಿಶೀಲಿಸಿದರು.

‘2023ರ ಡಿಸೆಂಬರ್ ವೇಳೆಗೆ ಈ ಕಾಮಗಾರಿಗಳು ಪೂರ್ಣಗೊಳ್ಳಬೇಕು. 2024ರಲ್ಲಿ  ಕೇಂದ್ರ ಸರ್ಕಾರವು ಇವುಗಳನ್ನು ಉದ್ಘಾಟಿಸಬೇಕು. ಏಕೆಂದರೆ ನಾವು 2024ರಲ್ಲಿ ಚುನಾವಣೆ ಎದುರಿಸಬೇಕಿದೆ’ ಎಂದು ಗಡ್ಕರಿ ಹೇಳಿದ್ದಾರೆ. ಆದರೆ ಜೊಜಿಲಾ ಪಾಸ್ ಸುರಂಗಮಾರ್ಗದ ಕಾಮಗಾರಿ 2026ರ ಆರಂಭದ ವೇಳೆಗೆ ಮುಗಿಯುತ್ತದೆ ಎಂದು ರಾಷ್ಟ್ರೀಯ ಹೆದ್ದಾರಿ ಮೂಲಸೌಕರ್ಯ ಅಭಿವೃದ್ಧಿ ನಿಗಮವು ಸೋಮವಾರವಷ್ಟೇ ಹೇಳಿತ್ತು.

ಇದು ಏಷ್ಯಾದ ಅತಿ ಉದ್ದದ ದ್ವಿ-ಮುಖ  ಸುರಂಗವಾಗಲಿದೆ.

ಸರ್ವಋತು ಕಾರ್ಯಾಚರಣೆಯ ‘ಜೊಜಿಲಾ ಟನಲ್’ ಸಮುದ್ರ ಮಟ್ಟದಿಂದ 11,500 ಅಡಿಗಳಿಗಿಂತ ಹೆಚ್ಚು ಎತ್ತರದಲ್ಲಿದೆ, 15 ಕಿಮೀ ಉದ್ದವನ್ನು ಹೊಂದಿರುತ್ತದೆ.

ಸಂದರ್ಭ:

2024 ರ ಗಣರಾಜ್ಯೋತ್ಸವದ ಮೊದಲು ಕಾಶ್ಮೀರ ಮತ್ತು ಲಡಾಖ್‌ನಲ್ಲಿ ತನ್ನ ಸುಂದರವಾದ ಮೂಲಸೌಕರ್ಯ ಯೋಜನೆಯಾದ ಬೃಹತ್ ‘ಜೊಜಿಲಾ ಸುರಂಗ’ ವನ್ನು ಪೂರ್ಣಗೊಳಿಸಲು ಸರ್ಕಾರ ಒತ್ತು ನೀಡುತ್ತಿದೆ.

 


Join our Official Telegram Channel HERE for Motivation and Fast Updates

Subscribe to our YouTube Channel HERE to watch Motivational and New analysis videos

[ad_2]

Leave a Comment